December 23, 2024

AKSHARA KRAANTI

AKSHARA KRAANTI




ಮಕ್ಕಳು ಪಠ್ಯದ ಜೊತೆಗೆ ಇತರ ಚಟುವಟಿಕೆಗಳಲ್ಲಿ ಭಾಗವಹಿಸಿ : ರೊ. ಚಂದ್ರಶೇಖರಯ್ಯ ಎಂ

 

ಶಿವಮೊಗ್ಗ,: ಶಾಲೆಯಲ್ಲಿ ಜರುಗುವ ಎಲ್ಲಾ ಪಠ್ಯ ಹಾಗೂ ಸಹಪಠ್ಯ ಚಟುವಟಿಕೆಗಳಲ್ಲಿ ಪಾಲ್ಗೊಂಡು, ತಮ್ಮ ಸಾಮರ್ಥ್ಯಕ್ಕೆ ಎಟಕುವ ಪ್ರತಿಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು, ಆ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳಲು ವಿದ್ಯಾರ್ಥಿಗಳು ಪ್ರಯತ್ನಿಸಬೇಕು ಹಾಗೂ ಈ ನಿಟ್ಟಿನಲ್ಲಿ ಶಾಲೆಗಳು ಸೂಕ್ತ ಅವಕಾಶ ಮತ್ತು ಪ್ರೋತ್ಸಾಹ ನೀಡಬೇಕು ಎಂದು ರೋಟರಿ ಎಜುಕೇಷನ್ ಮತ್ತು ಛಾರಿಟಬಲ್ ಟ್ರಸ್ಟ್‌ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ನಿವೃತ್ತ ಡಿ.ಪಿ.ಐ. ರೊ. ಚಂದ್ರಶೇಖರಯ್ಯ .ಎಂ ಅಭಿಪ್ರಾಯ ಪಟ್ಟರು.

ಅವರು ರೋಟರಿ ಪೂರ್ವ ಆಂಗ್ಲ ಶಾಲೆಯಲ್ಲಿ ಆಯೋಜಿಸಿದ, ಶಾರದಾ ಪೂಜೆ, 10ನೇ ತರಗತಿ ಮಕ್ಕಳಿಗೆ ಬೀಳ್ಕೊಡುಗೆ ಹಾಗೂ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಶಾಲೆಯಲ್ಲಿ ಶಿಕ್ಷಕರ ಮತ್ತು ಮಕ್ಕಳ ಅನುಪಾತ 1:25 ಇರುವುದರ ಜೊತೆಗೆ ಉನ್ನತ ಶೈಕ್ಷಣಿಕ ಅರ್ಹತೆ ಹಾಗೂ ಅನುಭವವಿರುವ ಶಿಕ್ಷಕರನ್ನು ಹೊಂದಿದ ಈ ಶಾಲೆಯಲ್ಲಿ ಪ್ರತಿ ವಿದ್ಯಾರ್ಥಿಯ ಕಲಿಕೆಯ ಬಗ್ಗೆ ವೈಯಕ್ತಿಕ ಗಮನವಹಿಸಿ, ಗುಣಮಟ್ಟದ ಕಲಿಕೆಯನ್ನುಂಟು ಮಾಡುವುದರ ಜೊತೆಗೆ ವ್ಯಕ್ತಿತ್ವದ ವಿಕಸನಕ್ಕಾಗಿ ಹಲವಾರು ಕ್ರೀಡಾ, ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ವೈಜ್ಞಾನಿಕ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದ್ದು, ಇದರ ಪರಿಣಾಮವಾಗಿ ಕಳೆದ ಎರಡು ವರ್ಷಗಳಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದೊರೆಯುತ್ತಿದೆ ಎಂದರು.
ಈ ಸಮಾರಂಭದಲ್ಲಿ ಪೋಷಕರನ್ನುದ್ದೇಶೀಸಿ ಮಾತನಾಡಿದ ಟ್ರಸ್ಟ್ ಉಪಾಧ್ಯಕ್ಷ ಡಾ|| ಪರಮೇಶ್ವರ್ ಶಿಗ್ಗಾಂವ್ ಇವರು ಮಕ್ಕಳ ಭವಿಷ್ಯವು ಶಾಲಾ ಹಂತದಲ್ಲಿ ದೊರೆಯುವ ಶಿಕ್ಷಣದ ಮೇಲೆ ಅವಲಂಬಿತವಾಗಿದ್ದು, ಅದಕ್ಕಾಗಿ ಆಡಳಿತ ಮಂಡಳಿಯು ಉತ್ತಮ ಶಿಕ್ಷಕರನ್ನು ನೇಮಕ ಮಾಡಿರುವುದರ ಜೊತೆಗೆ, ಮಕ್ಕಳಿಗೆ ವಿಶೇಷ ತರಗತಿಗಳನ್ನು ವ್ಯವಸ್ಥೆ ಮಾಡಿ, ಕೈಗೆಟಕುವ ದರದಲ್ಲಿ ಶುಲ್ಕವನ್ನು ನಿಗಧಿ ಮಾಡಲಾಗಿದೆ ಎನ್ನುತ್ತಾ, ಆರ್ಥಿಕವಾಗಿ ಹಿಂದುಳಿದ ಅರ್ಹ ಮಕ್ಕಳಿಗೆ ರೋಟರಿಯ ‘ಫಂಡ್ ಫಾರ್ ನೀಡಿ’ ನಿಧಿಯ ಮೂಲಕ ಧನ ಸಹಾಯ ಮತ್ತು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಮಕ್ಕಳಿಗೆ ರೋಟರಿ ಸದಸ್ಯರ ಮೂಲಕ ಪ್ರೋತ್ಸಾಹಕ ಧನವನ್ನು ನೀಡಲಾಗುತ್ತಿದೆ ಎಂದರು.
ಟ್ರಸ್ಟ್ನ ಕಾರ್ಯದರ್ಶಿ ರೊ. ರಾಮಚಂದ್ರ ಎಸ್.ಸಿ., ಇವರು ವಿದ್ಯಾರ್ಥಿಗಳ ಕಲಿಕಾ ಪ್ರಗತಿಯಲ್ಲಿ ಪೋಷಕರ ಹೊಣೆಗಾರಿಕೆಯ ಬಗ್ಗೆ ಮಾತನಾಡಿ, ಈ ಶಾಲೆಯಲ್ಲಿ ಕಂಪ್ಯೂಟರ್ ಕಲಿಕೆ, ಸ್ಪೋಕನ್ ಇಂಗ್ಲೀಷ್, ಸ್ಮಾರ್ಟ್ಕ್ಲಾಸ್ ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸಿದ್ದು, ಈ ಶಾಲೆ ಇನ್ನು ಬೆಳೆದು ಈ ಬಡಾವಣೆಯ ಹೆಮ್ಮೆಯ ಶಾಲೆಯಾಗಲು, ಹೆಚ್ಚು ಹೆಚ್ಚು ಮಕ್ಕಳನ್ನು ದಾಖಲಾತಿ ಮಾಡಲು ಇತರರಿಗೆ ತಿಳಿಸಬೇಕೆಂದು ತಿಳಿಸಿದರು.
ಈ ಸಮಾರಂಭದಲ್ಲಿ ಟ್ರಸ್ಟ್ನ ಉಪಾಧ್ಯಕ್ಷ ರೊ. ಸುರೇಶ್ ಕುಮಾರ್ ಬಿ., ರೋಟರಿ ಮಾಜಿ ಸಹಾಯಕ ಗರ‍್ನರ್ ಹಾಗೂ ಟ್ರಸ್ಟ್ ಖಜಾಂಚಿ ರೊ. ವಿಜಯ್ ಕುಮಾರ್, ಜಂಟಿ ಕಾರ್ಯದರ್ಶಿ ರೊ. ನಾಗವೇಣಿ ಎಸ್.ಆರ್., ಪ್ರಾಂಶುಪಾಲರಾದ ಸೂರ್ಯನಾರಾಯಣ್ ಆರ್., ಮುಖ್ಯಶಿಕ್ಷಕಿ ಶ್ರೀಮತಿ ಜಯಶೀಲಾ ಬಾಯಿ ಇವರು ಮಕ್ಕಳನ್ನುದ್ದೇಶಿಸಿ ಮಾತನಾಡಿ, ಮಾರ್ಚ್ 2024ರ ಎಸ್ಎಸ್ಎಲ್ ಸಿ ಯಲ್ಲಿ ಉತ್ತಮ ಫಲಿತಾಂಶ ತರಬೇಕೆಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು. 10ನೇ ತರಗತಿಯ ವಿದ್ಯಾರ್ಥಿಗಳು ಶಾಲೆಯಿಂದ ಬೀಳ್ಕೊಡುಗೆ ಪಡೆದ ನಂತರ ಶಾಲಾ ಶಿಕ್ಷಕರಿಗೆ ನೆನಪಿನ ಕಾಣಿಕೆ ಕೊಟ್ಟು ಗೌರವಿಸುವುದರ ಜೊತೆಗೆ, ಎಲ್.ಕೆ.ಜಿ ಮತ್ತು ಯು.ಕೆ.ಜಿ ಮಕ್ಕಳಿಗೆ ಕುಳಿತುಕೊಳ್ಳುವ ಖುರ್ಚಿಗಳನ್ನು ಕೊಡುಗೆಯಾಗಿ ನೀಡಿದರು.
ಸಮಾರಂಭದ ಅಂತ್ಯದಲ್ಲಿ ವಿದ್ಯಾರ್ಥಿಗಳಿಂದ ಮೂಡಿಬಂದ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು ಅತ್ಯಾಕರ್ಷಕವಾಗಿದ್ದವು. ಈ ಕಾರ್ಯಕ್ರಮವನ್ನು ಆಯೋಜಿಸಲು ಮಾರ್ಗದರ್ಶನ ನೀಡಿ ಸಂಬಂಧಪಟ್ಟ ಶಿಕ್ಷಕರು ಅಭಿನಂದನಾರ್ಹರು. ಕಾರ್ಯಕ್ರಮದ ಅಂತ್ಯದಲ್ಲಿ ಮಕ್ಕಳಿಗೆ ಮತ್ತು ಪೋಷಕರಿಗೆ ಊಟದ ಆತಿಥ್ಯವನ್ನು ಪೋಷಕರಾದ ಶ್ರೀಮತಿ ಲಕ್ಷ್ಮಿದೇವಿ, ರವೀಂದ್ರ ಹಾಗೂ ಐಸ್‌ಕ್ರೀಮ್‌ನ್ನು ಬೋರ್ಡ್ ಆಫ್ ಟ್ರಸ್ಟಿ ರೊ. ರವಿಶಂಕರ್ ಕೆ.ಬಿ. ಇವರುಗಳು ನೀಡಿದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!