December 23, 2024

AKSHARA KRAANTI

AKSHARA KRAANTI




ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ: ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ,: ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡುವ ಉದ್ದೇಶದಿಂದ ಗ್ರಾಮೀಣ ಭಾಗದ ಪ್ರತಿ ಸರ್ಕಾರಿ ಶಾಲೆಗೂ ಸ್ಮಾರ್ಟ್ ಬೋರ್ಡ್ ಅಳವಡಿಕೆಗೆ ಒತ್ತು ನೀಡುವ ಮೂಲಕ ಮಕ್ಕಳ ಅಭ್ಯಾಸಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.
ತಾಲೂಕಿನ ದದೇಗಲ್, ಹಲಗೇರಿ, ಕೋಳೂರು, ಕಾಟ್ರಳ್ಳಿ, ಹಿರೇಸಿಂದೋಗಿ, ಚಿಕ್ಕಸಿಂದೋಗಿ, ಹೊರತಟ್ನಾಳ, ಗುನ್ನಳ್ಳಿ ಮತ್ತು ಮಂಗಳಾಪುರ ಗ್ರಾಮಗಳಲ್ಲಿ ಭೂಮಿಪೂಜೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾಜದ ಕಟ್ಟ ಕಡೆಯ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆತಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ, ಸರ್ಕಾರಿ ಶಾಲೆಗಳಿಗೆ ಬಡ ವಿದ್ಯಾರ್ಥಿಗಳೇ ದಾಖಲಾಗುತ್ತಾರೆ, ಇದರಿಂದಾಗಿ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವತ್ತ ಗಮನಹರಿಸಬೇಕು. ವಿದ್ಯಾರ್ಥಿಗಳೂ ಸಹ ಸ್ಮಾರ್ಟ್ ಬೋರ್ಡ್ ಸೇರಿದಂತೆ ಸರ್ಕಾರದ ಶೈಕ್ಷಣಿಕ ಸೌಲಭ್ಯಗಳನ್ನು ಬಳಸಿಕೊಂಡು ಒಳ್ಳೆಯ ವಿದ್ಯಾಭ್ಯಾಸ ಪಡೆದು ಸಮಾಜದಲ್ಲಿ ಮುಂದೆಬನ್ನಿ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದಂತಹ ವಿದ್ಯಾರ್ಥಿಗಳೇ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಮೊಬೈಲ್, ಟಿವಿ ಕಡೆ ಹೆಚ್ಚು ಗಮನ ಕೊಡದೆ, ಅಭ್ಯಾಸದ ಕಡೆ ಒತ್ತು ನೀಡಿ, ಆಧುನಿಕ ತಂತ್ರಜ್ಞಾನ ಸದ್ಬಳಕೆಪಡಿಸಿಕೊಳ್ಳಿ ಎಂದರು.

ಬಡಜನರ ಏಳಿಗೆಗಾಗಿ ನಮ್ಮ ಸರ್ಕಾರ ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಅಧಿಕಾರಕ್ಕೆ ಬಂದ ಎಂಟು ತಿಂಗಳಲ್ಲಿ ಬಡಜನರ ಬವಣೆ ನೀಗಿಸಲು ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿ, ರೈತರ, ಶ್ರಮಿಕರ, ಮಹಿಳೆ ಹಾಗೂ ಯುವಕರ ಬೆನ್ನಿಗೆ ಸರ್ಕಾರ ನಿಂತಿದೆ. ಕಾಂಗ್ರೆಸ್ ಸದಾ ಬಡವರ, ದೀನದಲಿತರ, ಹಿಂದುಳಿದವರ ಏಳಿಗೆ ಬಯಸುತ್ತಿದೆ. ಆದರೆ, ಬಿಜೆಪಿಯವರು ಕೋಮು ಗಲಭೆ, ಪ್ರಚೋದನೆ ಹೇಳಿಕೆ ನೀಡುವ ಮೂಲಕ ಸಮಾಜದಲ್ಲಿ ಜನರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳ ಬಗ್ಗೆಯೂ ಅಪಪ್ರಚಾರ ಮಾಡುತ್ತಿದ್ದಾರೆ. ಇವರಿಗೆ ರಾಜ್ಯದ ಜನರ ಬಗ್ಗೆ ಕರುಣೆ ಇಲ್ಲ ಎಂದು ಟೀಕಿಸಿದರು.
ಗ್ರಾಮೀಣ ಭಾಗದ ಪ್ರತಿಯೊಬ್ಬರು ಗ್ಯಾರಂಟಿ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಿ. ರಾಜ್ಯಾದ್ಯಂತ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ ಹಾಗೂ ಗ್ಯಾರಂಟಿ ಯೋಜನೆಗಳ ಪ್ರಚಾರಕ್ಕಾಗಿ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ರಚನೆ ಮಾಡಲಾಗಿದೆ. ಮುಂಬರುವ ದಿನದಲ್ಲಿ ಪ್ರತಿ ಮನೆಗೂ ಭೇಟಿ ನೀಡಿ, ಸರ್ಕಾರದ ಗ್ಯಾರಂಟಿ ಯೋಜನೆ ಬಗ್ಗೆ ಮನವರಿಕೆ ಮಾಡುವ ಕೆಲಸವನ್ನು ಸಮಿತಿಯವರು ಹಾಗೂ ಕಾರ್ಯಕರ್ತರು ಮಾಡಬೇಕು ಎಂದರು.
ಗ್ರಾಮೀಣ ಭಾಗದಲ್ಲಿ ಹದೆಗೆಟ್ಟಿರುವ ರಸ್ತೆಗಳಿಗೆ ಮುಕ್ತಿ ನೀಡುವ ಉದ್ದೇಶದಿಂದ ಡಾಂಬರೀಕರಣಕ್ಕೆ ಮುಂದಿನ ದಿನಗಳಲ್ಲಿ ಚಾಲನೆ ನೀಡುವೆ. ಗ್ರಾಮದ ಪ್ರತಿ ರಸ್ತೆಗಳನ್ನು ಸಿಸಿ ರಸ್ತೆಯನ್ನಾಗಿ ಮಾಡುವ ಸದುದ್ದೇಶದಿಂದ ಕೋಟ್ಯಾಂತರ ರೂಪಾಯಿ ಅನುದಾನ ಬಿಡುಗಡೆಗೊಳಿಸಿ, ಇಂದು ಭೂಮಿಪೂಜೆ ನೆರವೇರಿಸಿದ್ದೇನೆ. ಮುಂದಿನ ದಿನದಲ್ಲಿ ಹಂತ ಹಂತವಾಗಿ ಎಲ್ಲ ಗ್ರಾಮಕ್ಕೂ ಸಮಾನ ಅನುದಾನ ಹಂಚಿಕೆ ಮಾಡಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಎಸ್. ನಾಗರಳ್ಳಿ, ಪ್ರಸನ್ನ ಗಡಾದ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣರಡ್ಡಿ ಗಲಬಿ, ತಾಪಂ ಮಾಜಿ ಅಧ್ಯಕ್ಷ ಹಾಗೂ ಗ್ಯಾರಂಟಿ ಯೋಜನೆ ಅನುಷ್ಠಾನ ತಾಲೂಕಾಧ್ಯಕ್ಷ ಬಾಲಚಂದ್ರನ್ ,
ಎಪಿಎಂಸಿ ಮಾಜಿ ಅಧ್ಯಕ್ಷ ಹನುಮರಡ್ಡಿ ಹಂಗನಕಟ್ಟಿ, ಮುಖಂಡರಾದ ಗಾಳೆಪ್ಪ ಪೂಜಾರ್, ವಿರೂಪಣ್ಣ ನವೋದಯ, ಗವಿಸಿದ್ದನಗೌಡ ಪಾಟೀಲ್, ಪರಶುರಾಮ ಕೆರೆಳ್ಳಿ, ವರುಣ್ ಕುಮಾರ್ ನಿಟ್ಟಾಲಿ, ಕಾವೇರಿ ರಾಗಿ, ಹನುಮಂತ ಎಚ್., ಅಶೋಕ ಅಬ್ಬಿಗೇರಿ, ಕೇಶವರೆಡ್ಡಿ, ದೌಲತ್ ಸಾಬ, ದೇವೇಂದ್ರಪ್ಪ ಕೋಳೂರು, ವಸಂತ ಕುಟುಗನಹಳ್ಳಿ, ತಹಸೀಲ್ದಾರ್ ವಿಠ್ಠಲ ಚೌಗಲೆ, ತಾಪಂ‌ ಇಓ ದುಂಡಪ್ಪ ತುರಾದಿ, ಸಿಡಿಪಿಓ ಜಯಶ್ರೀ ಸೇರಿದಂತೆ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಇದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!