December 23, 2024

AKSHARA KRAANTI

AKSHARA KRAANTI




ಪ್ರಪಂಚಕ್ಕೆ ರಾಮಾಯಣ ಪರಿಚಯಿಸಿದ ಮಹಾಕವಿ ಮಹರ್ಷಿ ವಾಲ್ಮೀಕಿ : ಸಚಿವ ಶಿವರಾಜ ತಂಗಡಗಿ

ಕೊಪ್ಪಳದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಅಕ್ಷರಕ್ರಾಂತಿ ನ್ಯೂಸ್
ಕೊಪ್ಪಳ,: ಮಹರ್ಷಿ ವಾಲ್ಮೀಕಿ ಯವರು ರಾಮಾಯಣವನ್ನು ಇಡಿ ಪ್ರಪಂಚಕ್ಕೆ ಪರಿಚಯಿಸಿದ ಮಹಾ ಕವಿಗಳಾಗಿದ್ದಾರೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಹೇಳಿದರು.

ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ವಾಲ್ಮೀಕಿಯವರು ಪ್ರತಿಯೊಬ್ಬ ಪ್ರಜೆಗೂ ಕೂಡಾ ಮಾರ್ಗದರ್ಶನವನ್ನು ಕಾವ್ಯದ ಮೂಲಕ ನೀಡಿದ್ದಾರೆ. ಸಮಾಜದಲ್ಲಿ ಯಾವ ರೀತಿಯಾಗಿ ಬದುಕಬೇಕು ಎಂಬುದನ್ನು ರಾಮಾಯಣದ ಮೂಲಕ ತಿಳಿಸಿದ್ದಾರೆ. ಮಹನೀಯರ ವಿಚಾರಗಳನ್ನು ಹಾಗೂ ಅವರ ಇತಿಹಾಸವನ್ನು ಯುವ ಪೀಳಿಗೆಗೆ ತಿಳಿಸಲು ಜಯಂತಿಗಳನ್ನು ಸರ್ಕಾರದಿಂದ ಹಮ್ಮಿಕೊಳ್ಳಲಾಗುತ್ತದೆ. ಸಮಾಜವನ್ನು ಒಂದುಕಡೆ ಸೇರಿಸುವ, ಅದರ ಚಿಂತನೆಗಳನ್ನು ಮಾಡುವ ಹಾಗೂ ಸಮಾಜವು ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಯಾವರೀತಿಯಲ್ಲಿದೆ ಎಂಬುವುದರ ಬಗ್ಗೆ ಚರ್ಚೆಗಳನ್ನು ಇಂತಹ ವೇದಿಕೆಗಳ ಮೂಲಕ ಮಾಡುವಂತಹ ಅವಶ್ಯಕತೆಯಿದೆ. ಎಸ್ಸಿ, ಎಸ್ಟಿ ಜನಾಂದವರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿದೆ. ವಾಲ್ಮೀಕಿ ಜನಾಂಗದವರು ರಾಷ್ಟ್ರಕ್ಕಾಗಿ ಅಪಾರ ಕೊಡುಗೆ ನೀಡಿದ್ದಾರೆ. ರಾಜ್ಯ ಸರ್ಕಾರವು ಎಲ್ಲಾ ವರ್ಗದ ಜನರಿಗಾಗಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ತಲುಪಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ಮಹರ್ಷಿ ವಾಲ್ಮೀಕಿ ಯವರ ಜಗತ್ತಿಗೆ ರಾಮಾಯಣವನ್ನು ಕೊಡುಗೆಯಾಗಿ ನೀಡಿದ್ದಾರೆ. ರಾಮಾಯಣ ದರ್ಶನದ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವಂತಹ ಕೆಲಸವನ್ನು ಮಾಡಿದ್ದಾರೆ. ಮನುಕುಲದ ಏಕತೆಯನ್ನು ಸೃಷ್ಟಿಸಿದ್ದಾರೆ. ಬಸವಣ್ಣನವರು, ಕನಕದಾಸರು, ಅಂಬೇಡ್ಕರ್, ಮಹರ್ಷಿ ವಾಲ್ಮೀಕಿಯವರಂತಹ ಅನೇಕ ಮಹನೀಯರು ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದು, ಇಂತಹ ಮಹನೀಯರನ್ನು ಒಂದೇ ಸಮುದಾಯಕ್ಕೆ ಸೀಮಿತಗೊಳಿಸಬಾರದು. ಇವರೆಲ್ಲರೂ ಮನುಕುಲದ ಆಸ್ತಿಗಳಾಗಿದ್ದಾರೆ. ಮಹನಿಯರ ಜಯಂತಿ ಆಚರಣೆಯಲ್ಲಿ ಎಲ್ಲಾ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಅತ್ಯವಶ್ಯಕವಾಗಿದೆ. ವಾಲ್ಮೀಕಿ ಸಮಾಜವು ಶ್ರಮ ಜೀವಿಗಳ ಸಮುದಾಯವಾಗಿದ್ದು, ಇನ್ನೂ ಹಲವು ರೀತಿಯಲ್ಲಿ ಅಭಿವೃದ್ಧಿ ಹೊಂದುವಲ್ಲಿ ಕಾರ್ಯೋನ್ಮುಖವಾಗಬೇಕು ಎಂದರು.ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಮಾತನಾಡಿ, ಭಾರತೀಯರ ಜೀವನ ಚರಿತ್ರೆ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ಮಹಾಕಾವ್ಯ ರಾಮಾಯಣ. ಪ್ರಪಂಚದಲ್ಲಿ ರಾಮಾಣವು ಮಹಾ ಕಾವ್ಯವಾಗಿದೆ. ವಾಲ್ಮೀಕಿ ಅವರು ರಚಿಸಿದ ರಾಮಾಯಣ ಕಾವ್ಯ ಹಾಗೂ ವಾಲ್ಮೀಕಿಯವರ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸಬೇಕು. ಸಮುದಾಯದ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯಗಳು ಮತ್ತು ಅರ್ಹ ವ್ಯಕ್ತಿಗಳಿಗೆ ಸರ್ಕಾರದ ಸೌಲಭ್ಯಗಳು ಸರಿಯಾಗಿ ಸಿಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಮಂಗಳೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ ಪ್ರಭುರಾಜ್ ನಾಯಕ ಅವರು ಶ್ರೀ ಮಹರ್ಷಿ ವಾಲ್ಮೀಕಿ ಯವರು ಕುರಿತು ವಿಶೇಷ ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೇಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ರಾಮ್ ಎಲ್ ಅರಸಿದ್ದಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕಾವ್ಯ ಚತುರ್ವೇದಿ, ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ, ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಕೊಪ್ಪಳ ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಅಕ್ಬರಪಾಶಾ, ಸದಸ್ಯರಾದ ವಿರೂಪಾಕ್ಷಪ್ಪ ಮೊರನಾಳ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ರಾಜು ತಳವಾರ, ಸಮಾಜದ ಜಿಲ್ಲಾಧ್ಯಕ್ಷರಾದ ಕೆ.ಎನ್.ಪಾಟೀಲ, ಮುಖಂಡರಾದ ಶರಣಪ್ಪ ನಾಯಕ, ರಾಮಣ್ಣ ಕಲ್ಲನ್ನವರ, ಸುರೇಶ್ ದೊಣ್ಣಿ ಸೇರಿದಂತೆ ಹಲವು ಗಣ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ., ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ಮತ್ತು ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಗಣ್ಯರಿಗೆ ಸನ್ಮಾನಿಸಲಾಯಿತು.ಮೆರವಣಿಗೆ: ಜಯಂತಿ ಅಂಗವಾಗಿ ಶ್ರೀ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದ ಮೆರವಣಿಗೆಯು ನಗರದ ಸಿರಸಪ್ಪಯ್ಯನಮಠದಿಂದ ಆರಂಭಗೊಂಡು ಗಡಿಯಾರ ಕಂಬದ ಮಾರ್ಗವಾಗಿ ಅಶೋಕ ವೃತ್ತದ ಮೂಲಕ ಸಾಹಿತ್ಯ ಭವನದವರೆಗೆ ಅದ್ದೂರಿಯಾಗಿ ಜರುಗಿತು.

 

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!