December 23, 2024

AKSHARA KRAANTI

AKSHARA KRAANTI




ಮುನಿರಾಬಾದ್ ರೈಲ್ವೆ ನಿಲ್ದಾಣಕ್ಕೆ ಹುಲಿಗೆಮ್ಮ ದೇವಿ ಹೆಸರಿಡಿ

ಕೇಂದ್ರ ರಾಜ್ಯ ರೈಲ್ವೆ ಸಚಿವರಲ್ಲಿ ಬಸವರಾಜ್ ಕ್ಯಾವಟರ್ ಮನವಿ

ಅಕ್ಷರಕ್ರಾಂತಿ ನ್ಯೂಸ್
ಕೊಪ್ಪಳ,: ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಡ್ರ, ತಮಿಳುನಾಡು ರಾಜ್ಯದ ಭಕ್ತರ ಆರಾಧ್ಯ ದೇವತೆ ಶ್ರೀ ಹುಲಿಗೆಮ್ಮ ದೇವಿ ನೆಲೆಸಿರುವ ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದ ಮುನಿರಾಬಾದ್ ರೈಲ್ವೆ ನಿಲ್ದಾಣದ ಹೆಸರನ್ನು ಶ್ರೀ ಹುಲಿಗೆಮ್ಮ ದೇವಿ ರೈಲು ನಿಲ್ದಾಣವೆಂದು ಮರುನಾಮಕರಣ ಮಾಡಬೇಕು ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್ ಅವರು ಹುಲಿಗಿ ಗ್ರಾಮಸ್ಥರೊಂದಿಗೆ ಜತೆಗೂಡಿ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣನವರಿಗೆ ಮನವಿ ಸಲ್ಲಿಸಿದ್ದಾರೆ.

ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಸಿರಿಗೇರಿ ಗ್ರಾಮಕ್ಕೆ ಆಗಮಿಸಿದ ಸಚಿವರನ್ನು ಭಾನುವಾರ ಭೇಟಿಯಾದ ಕ್ಯಾಟವರ್ ಹಾಗೂ ಗ್ರಾಮಸ್ಥರು,
ಹುಲಿಗೆಮ್ಮ ದೇವಸ್ಥಾನಕ್ಕೆ ಪೌರಾಣಿಕವಲ್ಲದೇ ಐತಿಹಾಸಿಕ‌ ಹಿನ್ನಲೆಯಿದೆ. ತುಂಗಭದ್ರೆಯ ದಡದಲ್ಲಿರುವ ಮಹಾತಾಯಿ ಭಕ್ತರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾಳೆ. ಆದರೆ, ತಾಯಿ ನೆಲೆಸಿರುವ ಜಾಗದಲ್ಲಿ ಹಾಯ್ಡು ಹೋಗಿರುವ ರೈಲ್ವೆ ನಿಲ್ದಾಣಕ್ಕೆ ಶ್ರೀ ಹುಲಿಗೆಮ್ಮ ದೇವಿ ನಿಲ್ದಾಣ ಎಂದು ಈವರೆಗೆ ಹೆಸರಿಡದಿರುವುದು ಭಕ್ತರಿಗೆ ನಿರಾಸೆ ತಂದಿದೆ. ಕೂಡಲೇ, ಸಚಿವರು ಈ ನಿಟ್ಟಿನಲ್ಲಿ ಕ್ರಮ ವಹಿಸಿ, ಹೈದ್ರಾಬಾದ್ ನಿಜಾಮ ಕಾಲದಲ್ಲಿ ಹೆಸರಿಸಲಾದ ಮುನಿರಾಬಾದ್ ಪದವನ್ನು ತೆಗೆದು ಹುಲಿಗಿ ಗ್ರಾಮದಲ್ಲಿರುವ ರೈಲ್ವೆ ನಿಲ್ದಾಣಕ್ಕೆ ಶ್ರೀ ಹುಲಿಗೆಮ್ಮ ದೇವಿ ನಿಲ್ದಾಣವೆಂದು ಮರುನಾಮಕರಣ ಮಾಡಬೇಕು ಎಂದರು.ಇದರ ಜತೆಗೆ ಕೊಪ್ಪಳ ಜಿಲ್ಲೆಯು ಹಲವಾರು ಪ್ರಮುಖ ಧಾರ್ಮಿಕ ಮತ್ತು ಐತಿಹಾಸಿಕ ಹೆಗ್ಗುರುತುಗಳನ್ನು ಹೊಂದಿದೆ. ಇದು ಇತರ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇವುಗಳಲ್ಲಿ ಅಂಜನಾದ್ರಿ ಬೆಟ್ಟ (ಹನುಮಂತನ ಜನ್ಮಸ್ಥಳ), ಆನೆಗೊಂದಿ, ವಿಜಯಲಕ್ಷ್ಮಿ ದೇವಿ ದೇವಸ್ಥಾನ, ಪಂಪಾ ಸರೋವರ, ಪುರಾತನ ದುರ್ಗಾಮಠ ದೇವಸ್ಥಾನ, ವಾಲಿಕಿಲ್ಲ ಮತ್ತು ಸಾಂಪ್ರದಾಯಿಕ ತುಂಗಭದ್ರಾ ಅಣೆಕಟ್ಟು ಸೇರಿವೆ. ಹೀಗಾಗಿ ಮುನಿರಾಬಾದ್ ರೈಲ್ವೆ ನಿಲ್ದಾಣವನ್ನು ಶ್ರೀ ಹುಲಿಗೆಮ್ಮ ರೈಲ್ವೆ ನಿಲ್ದಾಣವೆಂದು ಬದಲಾವಣೆ ಮಾಡಿದರೆ, ಈ ಎಲ್ಲ ಪ್ರಮುಖ ಹೆಗ್ಗುರುತುಗಳಿಗೆ ಭೇಟಿ ನೀಡುವವರ ಅನುಕೂಲ ಹೆಚ್ಚಿಸುತ್ತದೆ. ಮತ್ತು ಕೊಪ್ಪಳ ಜಿಲ್ಲೆಯ ಪರಂಪರೆಯನ್ನು ಮತ್ತಷ್ಟು ಉತ್ತೇಜಿಸುತ್ತದೆ ಎಂದರು.

ಅಲ್ಲದೆ, ಶ್ರೀ ಹುಲಿಗೆಮ್ಮ ರೈಲು ನಿಲ್ದಾಣ (ಮುನಿರಾಬಾದ್) ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಅಂದರೆ, ಪ್ರಮುಖವಾಗಿ ವಿಜಯಪುರ- ಯಶವಂತಪುರ ರೈಲು ಸಂಖ್ಯೆ-06546 – 06545, ಮೈಸೂರಿನಿಂದ ಶಿರಾಡಿ ರೈಲು ಸಂಖ್ಯೆ-16217 ಮತ್ತು 16218 ರೈಲು ನಿಲುಗಡೆಗೆ ಕ್ರಮ ವಹಿಸಬೇಕು ಎಂದರು.ಈ ವೇಳೆ ಹುಲಿಗಿ ಗ್ರಾಮದ ಹಿರಿಯರಾದ ಪ್ರಭುರಾಜ್ ಪಾಟೀಲ್, ಬಾಬುಗೌಡ, ಮಲ್ಲಯ್ಯ, ಅಮರೇಶ, ಲಿಂಗರಾಜ್, ಖಾಜಸಾಬ್ ಹೊಸಳ್ಳಿ , ಮಹೇಶಗೌಡ ಸೇರಿದಂತೆ ಬಿಜೆಪಿಯ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

ಸಚಿವರ ಭರವಸೆ : ಡಾ. ಬಸವರಾಜ್ ಕ್ಯಾವಟರ್ ಹಾಗೂ ಹುಲಿಗಿ ಗ್ರಾಮಸ್ಥರು ಸಲ್ಲಿಸಿದ ಮನವಿ ನೋಡಿದ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ಅವರು, ಸ್ಥಳದಲ್ಲಿದ್ದ ರೈಲ್ವೆ ಅಧಿಕಾರಿಗಳನ್ನು ಕರೆದು ಕೂಡಲೇ ಈ ಬೇಡಿಕೆಗಳನ್ನು ಈಡೇರಿಸಲು ಅಗತ್ಯ ಕ್ರಮ ಜರುಗಿಸಿ ಎಂದು ಸೂಚನೆ ನೀಡಿದರು. ಆದಷ್ಟು ಬೇಗ ಶ್ರೀ ಹುಲಿಗೆಮ್ಮ ದೇವಿ ರೈಲ್ವೆ ನಿಲ್ದಾಣ ಎಂದು ಹೆಸರು ಬದಲಿಸಲಾಗುವುದು ಹಾಗೂ ಅವಶ್ಯವಿರುವ ರೈಲುಗಳನ್ನು ಹುಲಿಗಿ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಲಾಗುವುದು ಎಂದು ಭರವಸೆ ನೀಡಿದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!