December 23, 2024

AKSHARA KRAANTI

AKSHARA KRAANTI




ಹಿಟ್ಲರ್ ಮಾದರಿಯ ಆಡಳಿತ ನಿಲ್ಲಿಸಿ: ಸಿವಿ ಚಂದ್ರಶೇಖರ್

ಹಿಟ್ಲರ್ ಮಾದರಿಯ ಆಡಳಿತ ನಿಲ್ಲಿಸಿ: ಸಿವಿ ಚಂದ್ರಶೇಖರ್

ಅಕ್ಷರಕ್ರಾಂತಿ ನ್ಯೂಸ್
ಕೊಪ್ಪಳ,: ರಸ್ತೆ ರಿಪೇರಿ ಆಗ್ರಹಿಸಿ ಪ್ರತಿಭಟನೆ ಆಯೋಜಿಸಿದ್ದ ಕವಲೂರು, ಅಳವಂಡಿ, ಹಂದ್ರಾಳ, ಗುಡಿಗೇರಿ ಹಾಗೂ ಬನ್ನಿಕೊಪ್ಪ ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಿರುವುದು ರಾಜಕೀಯ ಪ್ರೇರಿತ ಹಾಗೂ ಹಿಟ್ಲರ್ ಮಾದರಿ ಆಡಳಿತ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯರಾದ ಸಿವಿ ಚಂದ್ರಶೇಖರ್ ಕಿಡಿ ಕಾರಿದ್ದಾರೆ.

ಮೂಲಭೂತ ಸೌಕರ್ಯ ಬೇಕು ಎಂದು ಬೇಡಿಕೆ ಇಡುವುದು ತಪ್ಪೇ? ಸುಳ್ಳು ಆಶ್ವಾಸನೆ ಕೊಟ್ಟು ಮತ ಪಡೆಯುವಾಗ ಜನರ ಬೇಡಿಕೆಗಳು ತಮ್ಮ ಕಣ್ಣಿಗೆ ಕಾಣಲಿಲ್ಲವೇ? ಹಿಟ್ಲರ್ ಆಡಳಿತವನ್ನು ಕೊಪ್ಪಳದಲ್ಲಿ ಸ್ಥಾಪಿಸಲು ಕಾಂಗ್ರೆಸ್ ಪಕ್ಷ ಹೊರಟಿದೆಯೇ? ಎಂಬುದನ್ನು ಶಾಸಕರು ಹಾಗೂ ಅವರ ಪಕ್ಷದ ನಾಯಕರು ಸ್ಪಷ್ಟ ಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಜನರ ತಾಳ್ಮೆಯ ಕಟ್ಟೆ ಒಡೆದಿದೆ. ಕವಲೂರು ಭಾಗದಲ್ಲಿ ರಸ್ತೆಗಳೇ ಮಾಯವಾಗಿವೆ. ಜನರ ಸಮಸ್ಯೆಗೆ ಸ್ಪಂದಿಸಬೇಕಾದ ಶಾಸಕರು ನಿಷ್ಕ್ರಿಯವಾಗಿದ್ದಾರೆ ತಾಲೂಕು ಆಡಳಿತ ಅದಕ್ಷವಾಗಿದೆ. ಇದರ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕಿದ ಜನರ ಮೇಲೆ ಸುಳ್ಳು ಆರೋಪ ಮಾಡಿ ಪ್ರಕರಣ ದಾಖಲಿಸಿದ ತಹಶೀಲ್ದಾರ್ ವಿಠ್ಠಲ್ ಚೌಗಲಾ ಅವರನ್ನು ಈ ಕೂಡಲೇ ವರ್ಗಾಯಿಸಬೇಕು. ಕಾಂಗ್ರೆಸ್ ಪಕ್ಷದ ನಾಯಕರ ಆದೇಶದಂತೆ ಕೆಲಸ ನಿರ್ವಹಿಸುತ್ತಿರುವ ಅವರಿಗೆ ಕೊಪ್ಪಳದಲ್ಲಿ ಮುಂದುವರೆಯುವ ಯೋಗ್ಯತೆ ಹಾಗೂ ನೈತಿಕತೆ ಇಲ್ಲ ಎಂದು ಕಿಡಿ ಕಾರಿದ್ದಾರೆ.

ಒಂದು ವರ್ಷದ ಅವಧಿಯಲ್ಲಿ ಶಾಸಕರು ಮಾಡಿದ ಅಭಿವೃದ್ಧಿ ಏನು? ಎಷ್ಟು ರಸ್ತೆಗಳನ್ನು ರಿಪೇರಿ ಮಾಡಿಸಿದ್ದಾರೆ? ಎಷ್ಟು ಹೊಸ ರಸ್ತೆ ನಿರ್ಮಿಸಿದ್ದಾರೆ? ಎಷ್ಟು ಪ್ರಮಾಣದ ಮೂಲಭೂತ ಸೌಕರ್ಯವನ್ನು ಒದಗಿಸಿಕೊಟ್ಟಿದ್ದಾರೆ? ಎಂಬುದನ್ನು ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಸ್ಪಷ್ಟಪಡಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಸಂವಿಧಾನ ರಕ್ಷಕರೆಂದು ಬೊಗಳೆ ಬಿಡುವ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದ ಜನರ ಮೇಲೆ ಮೊಕದ್ದಮೆ ದಾಖಲಿಸಿರುವುದು ಸಂವಿಧಾನ ಬಾಹಿರ ಕೆಲಸ. ಈ ಕೂಡಲೇ ಮುಗ್ಧ ಜನರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯಬೇಕು. ಅದಕ್ಷ ಅಧಿಕಾರಿಯನ್ನು ಉಪಯೋಗಿಸಿಕೊಂಡು ರಾಜಕೀಯವಾಗಿ ಜನರನ್ನು ದ್ವೇಷಿಸುವ ಮನಸ್ಥಿತಿಯನ್ನು ಕಾಂಗ್ರೆಸ್ ನಾಯಕರು ಕೈಬಿಡಬೇಕು. ಆ ಭಾಗದ ಜನರ ಕ್ಷಮೆ ಕೇಳಬೇಕು. ರಸ್ತೆ ರಿಪೇರಿಯನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ. ನಿಷ್ಕ್ರಿಯ ಆಡಳಿತ ವ್ಯವಸ್ಥೆ ವಿರುದ್ಧ
ಜೆಡಿಎಸ್ ಪಕ್ಷ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!