ಚೋಪ್ರಾ ಮನೆತನದ ಜೈನ ಭಾಗ್ಯವಂತಿದೇವಿಯವರ ಸಲ್ಲೇಖನ ಸಂಥಾರ ವ್ರತ
ಅಕ್ಷರಕ್ರಾಂತಿ ನ್ಯೂಸ್
ಕೊಪ್ಪಳ,: ಸಾಮಾನ್ಯವಾಗಿ ಸಾಧು ಸಂತರು, ಮಠಾಧೀಶರು ತಮ್ಮ ಜೀವನದುದ್ದಕ್ಕೂ ಮಠಮಾನ್ಯಗಳಲ್ಲಿ ಜೀವನಗೈದು ತಮ್ಮ ಜೀವಿತಾವಧಿಯ ಕೊನೆಯಲ್ಲಿ ಲಿಂಗೈಕ್ಯ ಹೊಂದುವುದು ಸಾಮಾನ್ಯ. ಆದರೆ, ಜೈನ ಸಮುದಾಯದ ಜೈನಮುನಿಗಳು ತಮ್ಮದೇ ಒಂದು ಸಂಪ್ರದಾಯ ಆಚಾರ ಬದ್ದವಾಗಿ ಕಠಿಣ ವ್ರತದ ಮೂಲಕ ತಮ್ಮ ಜೀವಿತಾವಧಿಯನ್ನ ಪೂರ್ಣಗೊಳಿಸುತ್ತಾರೆ. ಇಂತಹ ಕಠಿಣ ವ್ರತದ ಮೂಲಕ ಕೊಪ್ಪಳ ನಗರದ ಭಾಗ್ಯವಂತಿದೇವಿ ವಯಸ್ಸು 82, ತಮ್ಮ ದೇಹ ತ್ಯಾಗಕ್ಕಾಗಿ ಮುಂದಾಗಿದ್ದಾರೆ.
ಕಠಿಣ ವ್ರತ : ಕಳೆದ 15 ದಿನಗಳಿಂದ ಸಲ್ಲೇಖನ ವ್ರತ ಕೈಗೊಂಡಿರುವ ಭಾಗ್ಯವಂತಿ ದೇವಿ ಅವರು ಕಠಿಣ ರೀತಿಯ ವ್ರತಕ್ಕೆ ಮುಂದಾಗಿದ್ದಾರೆ. ಅಂದರೆ, ಪ್ರತಿ ನಿತ್ಯ ಯಾವುದೇ ಆಹಾರ ಸೇವಿಸದೇ, ಕೇವಲ ಹದಿನೈದನೆ ದಿನವಾದ ಇಂದಿನಿಂದ ನೀರು ಸಹ ತ್ಯಜಿಸಿದ್ದಾರೆ. ಯಾವುದೇ ಸುಖಭೋಗಗಳನ್ನು ಬಯಸದೇ ಅತ್ಯಂತ ಕಠಿಣ ಪರಿಶ್ರಮ ಹಾಗೂ ಜೈನ ತೀರ್ಥಂಕರನ ಆರಾಧನೆ ಮಾಡುವ ಮೂಲಕ ತಮ್ಮ ಜೀವನದುದ್ದಕ್ಕೂ ಅತ್ಯಂತ ಕಠಿಣ ರೀತಿಯ ಸಂಪ್ರದಾಯಗಳನ್ನು ಪಾಲಿಸುವ ಮೂಲಕ ದೈವಿ ಭಕ್ತರಾಗಿ ಜೈನ ಸಮುದಾಯದವರಲ್ಲಿ ದೈವಿ ಸಂಭೂತರಾಗಿದ್ದಾರೆ. ಇನ್ನು ಕೊಪ್ಪಳದಲ್ಲಿ ಈ ರೀತಿಯ ಕಠಿಣ ವ್ರತದ ಮೂಲಕ ತಮ್ಮ ಜೀವನ ತ್ಯಾಗಕ್ಕೆ ಮುಂದಾಗಿರುವುದು ವಿಶೇಷ.ಕೊಪ್ಪಳ ಜೈನರ ಪವಿತ್ರ ಕ್ಷೇತ್ರ : ಹೌದು, ಕೊಪ್ಪಳ 12ನೇ ಶತಮಾನಕ್ಕಿಂತ ಪೂರ್ವದಲ್ಲಿ ಜೈನರ ಅತ್ಯಂತ ಪವಿತ್ರ ಕ್ಷೇತ್ರವಾಗಿ 770 ಜೈನ ಬಸದಿಗಳನ್ನು ಹೊಂದಿತ್ತು ಎಂಬುದಕ್ಕೆ ಐತಿಹಾಸಿಕ ಆಧಾರಗಳಿವೆ. ಮೌರ್ಯ ಸಾಮ್ರಾಟ ಚಂದ್ರಗುಪ್ತ ಮೌರ್ಯ ಕೊಪ್ಪಳದ ಜೈನ ಬಸದಿಗಳ ದರ್ಶನ ಮಾಡಿಕೊಂಡು ಶ್ರವಣಬೆಳಗೊಳಕ್ಕೆ ಹೋಗಿ ಸಲ್ಲೇಖನ ವೃತ್ತದ ಮೂಲಕ ದೇಹ ತ್ಯಾಗ ಮಾಡಿದರೆಂದು ಇತಿಹಾಸವಿದೆ. ಶ್ರವಣಬೆಳಗೊಳ ಹಾಗೂ ಕೊಪ್ಪಳದಲ್ಲಿ ಇಹಲೋಕ ತ್ಯಜಿಸಿದರೆ ಮೋಕ್ಷ ಪ್ರಾಪ್ತಿಯಾಗುವದು ಎಂಬ ನಂಬಿಕೆ ಜೈನಮತಿಯರಲ್ಲಿ ಇಂದಿಗೂ ಇದೆ. ಹೀಗಾಗಿ ಸಲ್ಲೇಖನ ವೃತ್ತದ ಮೂಲಕ ಕೊಪ್ಪಳದಲ್ಲಿ ದೇಹ ತ್ಯಾಗ ಮಾಡಿದವರ ಬಗ್ಗೆ ಇಂದಿಗೂ ಸ್ಮಾರಕಗಳು ಹಾಗೂ ಲಿಖಿತ ಶಾಸನಗಳು ದೊರಕುತ್ತವೆ.
ಈಗ ಚೋಪ್ರಾ ಮನೆತನ ಆ ಶ್ರೇಷ್ಠ ಪರಂಪರೆ ಇಂದಿಗೂ ಮುಂದುವರೆದುಕೊಂಡು ಬಂದಿದೆ. ಎನ್ನುವುದಕ್ಕೆ ಸಾಕ್ಷಿಯಾಗಿ ಕೊಪ್ಪಳ ನಗರದ ಪ್ರತಿಷ್ಠಿತ ಜೈನ ಮನೆತನವಾದ ಚೋಪ್ರಾ ಕುಟಂಬದ ಹಿರಿಯ ಉದ್ಯಮಿ ದಿವಂಗತ ಮೀಠಾಲಾಲ್ ಚೋಪ್ರಾರವರ ಕಿರಿಯ ಸಹೋದರರಾದ ಮಾಂಗಿಲಾಲ ಚೋಪ್ರಾರವರ ಧರ್ಮಪತ್ನಿ ಶ್ರೀಮತಿ ಭಾಗ್ಯವಂತಿದೇವಿ ಚೋಪ್ರಾರವರು ಸೆ. 11 ರಂದು ಬುಧವಾರ ಮಧ್ಯಾಹ್ನ 3.41 ಗಂಟೆಗೆ ಜೈನ ಧರ್ಮದ ಅತ್ಯಂತ ಕಠೋರ ವ್ರತವಾದ “ಸಲ್ಲೇಖನ ಸಂಥಾರ” ವನ್ನು ಸ್ವೀಕರಿಸಿದ್ದಾರೆ. ಈ ವ್ರತದಲ್ಲಿ “ತಿವಿಹಾರ”ದ ಮೂಲಕ ಅಂದರೆ ನೀರನ್ನು ಹೊರತುಪಡಿಸಿ ಎಲ್ಲ ತರಹದ ಆಹಾರ, ಔಷಧಿ ಮತ್ತು ಲೌಕಿಕ ಆಸೆಗಳನ್ನು ಸ್ವಇಚ್ಚೆಯಿಂದ ತ್ಯಾಗ ಮಾಡಿ ಜಿನೇಂದ್ರನನ್ನು ಸೇರುವ ಮಾರ್ಗದಲ್ಲಿ ಕಠಿಣ ಪರಿಕ್ರಮವನ್ನು ಪ್ರಾರಂಭಿಸಿದ್ದಾರೆ.
ಈ ವ್ರತವನ್ನು ಸ್ವೀಕರಿಸುವ ಪೂರ್ವದಲ್ಲಿ ತಮ್ಮ ಜೀವಿತಾವಧಿಯಲ್ಲಿ ತಿಳಿದೊ ತಿಳಿಯದೆಯೋ ಯಾರಿಗಾದರೂ ಕಾಯಾ, ವಾಚಾ,ಮನಸಾ ನೋವನ್ನು ಉಂಟು ಮಾಡಿದ್ದರೆ ಕ್ಷಮಿಸಿ ಎಂದು ಅಂತರಾತ್ಮದಿಂದ ಪ್ರಾರ್ಥಿಸಿಕೊಳ್ಳುತ್ತಾ ಸಲ್ಲೇಖನ ವ್ರತದ ಮೂಲಕ ದಿವ್ಯಾತ್ಮನಾದ ಜಿನೇಂದ್ರನತ್ತ ಸಾಗುತ್ತಿದ್ದಾರೆ. ಬಹುಶಃ ನಮಗೆ ತಿಳಿದಿರುವಂತೆ ಕಳೆದ 20ನೆಯ ಶತಮಾನದ ಉತ್ತರಾರ್ಧದಿಂದ ಹಿಡಿದು ಇಲ್ಲಿಯವರೆಗೆ ಕೊಪ್ಪಳದ ಜೈನ ಕುಟುಂಬಗಳಲ್ಲಿ ಚೋಪ್ರಾ ಮನೆತನದ ಭಾಗ್ಯವಂತಿದೇವಿಯವರು ಸಲ್ಲೇಖನ ವ್ರತದ ಮೂಲಕ ದೇಹ ತ್ಯಾಗ ಮಾಡುತ್ತಿರುವವರಲ್ಲಿ ಮೊಟ್ಟ ಮೊದಲಿಗರಾಗಿದ್ದಾರೆ.ಜೈನ ಧರ್ಮೀಯರ ನಂಬಿಕೆಯ ಪ್ರಕಾರ ಅತ್ಯಂತ ಪುಣ್ಯಶಾಲಿಗಳಿಗೆ ಮಾತ್ರ ಇಂತಹ ವ್ರತ ಸ್ವೀಕ್ಷರಿಸುವ ಸಾಮರ್ಥ್ಯವಿರುತ್ತದೆ. ಅಂತಹ ಸಾಮರ್ಥ್ಯವಿರುವ ಪುಣ್ಯಜೀವಿಗಳಲ್ಲಿ ಭಾಗ್ಯವಂತಿದೇವಿಯವರು ಒಬ್ಬರು. ಸಲ್ಲೇಖನ ವ್ರತದ ಮೂಲಕ ದೇಹ ತ್ಯಜಿಸುವ ಮಾರ್ಗವನ್ನು ಜೈನ ಧರ್ಮದ ಶ್ರೇಷ್ಠ ಪರಿಪಾಲಕರು ಹಾಗೂ ಮುನಿಗಳಾದ ಶ್ರೀ ಕನಕಮುನಿ ರವರು ಈ ವ್ರತವನ್ನು ಬೋಧಿಸಿದರು ಎಂಬ ಉಲ್ಲೇಖ ಜೈನ ಧರ್ಮದಲ್ಲಿದೆ. ಜೀವಿ ತನ್ನ ಜೀವಮಾನದಲ್ಲಿ ಈ ನಶ್ವರ ಶರೀರಕ್ಕಾಗಿ ಎಲ್ಲವನ್ನು ಮಾಡುತ್ತಾನೆ. ಆದರೆ, ಕೊಳೆತು ಹೋಗುವ ಈ ಶರೀರದ ಒಳಗಿರುವ ಪವಿತ್ರ ಜೀವಾತ್ಮಕ್ಕಾಗಿ ಏನನ್ನು ಮಾಡುವುದಿಲ್ಲ ಕಾರಣ ಈ ವ್ರತದ ಮೂಲಕ ಆತ್ಮವನ್ನು ಪವಿತ್ರಗೊಳಿಸಿ ಸಿದ್ಧಿ-ಬುದ್ಧನಾಗಿ ಜಿನೇಂದ್ರನೊಳಗೆ ಐಕ್ಯ ವಾಗುವುದು ಸಲ್ಲೇಖನ ಸಂಥಾರ ವ್ರತದ ಶ್ರೇಷ್ಠತೆಯಾಗಿದೆ.
“ಸಲ್ಲೇಖನ ಸಂಥಾರ” ವ್ರತದ ಮೂಲಕ ದೇಹ ತ್ಯಜಿಸುವುದು ಎಂದರೆ ವೀರಮರಣ, ಪಂಡಿತ ಮರಣ, ಸಮಾಧಿಮರಣ ಹೊಂದುವುದು ಎಂದರ್ಥ. ಅನ್ನ, ಔಷಧಿ, ನೀರು ಬಿಡುವುದು ಮಾತ್ರ ‘ಸಲ್ಲೇಖನ ಸಂಥಾರ’ ಅಲ್ಲ.ಮನುಷ್ಯ ತನ್ನ ಹದಿನೆಂಟು ಪಾಪಸ್ಥಾನಗಳನ್ನು ತ್ಯಜಿಸಿ, ಎಂಬತ್ನಾಲ್ಕು ಲಕ್ಷ ಜೀವಯೋನಿ ಜೀವಿಗಳಿಗೆ ಕ್ಷಮಾಪಣೆ ಕೇಳಿ,ಹೃದಯಪೂರ್ವಕವಾಗಿ ಎಲ್ಲರೊಂದಿಗೆ ಶಾಂತಿ ಹಾಗೂ ಮೈತ್ರಿಭಾವ ಹೊಂದುವುದು ವೀರ (ಪಂಡಿತ ಹಾಗೂ ಸಮಾಧಿ) ಮರಣವಾಗಿದೆ ದರ್ಶನ ಬಯಸುವ ಸಮಾಜದ ಬಂಧುಗಳು ಬಂದು ಕೊಪ್ಪಳ ನಗರದ ಹುಡ್ಕೋ ಕಾಲೋನಿ ಒಂದನೇ ಅಡ್ಡರಸ್ತೆಯಲ್ಲಿರುವ ನಿವಾಸದಲ್ಲಿ ಆಶೀರ್ವಾದ ಪಡೆಯಬಹುದು ಎಂದು ಉದ್ಯಮಿ ಹಾಗೂ ನಗರಸಭೆ ಸದಸ್ಯರಾದ ಮಹೇಂದ್ರ ಚೋಪ್ರಾ ಹಾಗೂ ಕುಟುಂಬದವರು ಸುದ್ದಿಗಾರರೊಂದಿಗೆ ಮಾತನಾಡಿ ತಿಳಿಸಿದ್ದಾರೆ.
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ