December 23, 2024

AKSHARA KRAANTI

AKSHARA KRAANTI




“ಬಿಟಿಎಸ್” ಸಿನಿಮಾಕ್ಕೆ ಐದು ಜನ ನಿರ್ದೇಶಕರ ಐದು ಕಥೆಗಳು

ಬೆಂಗಳೂರು: ಒಂದು ಚಿತ್ರವನ್ನು ಇಬ್ಬರು ನಿರ್ದೇಶಕರು ಸೇರಿ ನಿರ್ದೇಶಿಸಿರುವ ಉದಾಹರಣೆ ಸಾಕಷ್ಟಿದೆ. ಆದರೆ ಐದು ಜನ ನಿರ್ದೇಶಕರು, ಐದು ಕಥೆಗಳನ್ನಿಟ್ಟುಕೊಂಡು “ಬಿಟಿಎಸ್” ಎಂಬ ಸಿನಿಮಾ ಮಾಡಿದ್ದಾರೆ.

ಆಸಕ್ತಿಕರ ವಿಷಯಗಳನ್ನಿಟ್ಟುಕೊಂಡು ಜನರ ಮನಸ್ಸು ಗೆಲ್ಲಲ್ಲು ಮುಂದಾಗಿದ್ದಾರೆ‌. ಯುವ ಪ್ರತಿಭಾನ್ವಿತರ ತಂಡಕ್ಕೆ ನಟ ರಾಜ್ ಬಿ.ಶೆಟ್ಟಿ ಸಾಥ್ ನೀಡಿ, ಪ್ರಯತ್ನ ಯಶಸ್ವಿ ಆಗಲಿ ಎಂದು ಹಾರೈಸಿದ್ದಾರೆ. ಟ್ರೇಲರ್ ಅನ್ನು “ಭೀಮ” ಚಿತ್ರದ ನಿರ್ಮಾಪಕ ಕೃಷ್ಣ ಸಾರ್ಥಕ್ ಬಿಡುಗಡೆ ಮಾಡಿದ್ದಾರೆ.

ಬಿಟಿಎಸ್ ಚಿತ್ರವನ್ನು ಪ್ರಜ್ಚಲ್ ರಾಜು, ಸಾಯಿ ಶ್ರೀನಿಧಿ, ಕುಲದೀಪ್ ಕಾರಿಯಪ್ಪ, ರಾಜೇಶ್ ಎನ್ ಶಂಕದ್, ಅಪೂರ್ವ ಭಾರದ್ವಾಜ್ ನಿರ್ದೇಶನ ಮಾಡಿದ್ದಾರೆ.ಭೀಮ ಚಿತ್ರದ ನಿರ್ಮಾಪಕ ಕೃಷ್ಣ ಸಾರ್ಥಕ್ ಮಾತನಾಡಿ, ತೆರೆಯ ಹಿಂದಿನ ವಿಷಯಗಳನ್ನು ಐವರು ನಿರ್ದೇಶಕರು ತೆರೆಯ ಮೇಲೆ ತರುವ ಮೂಲಕ ಹೊಸ ಪ್ರಯತ್ನ ಮಾಡಿದ್ದಾರೆ. ಚಿತ್ರದ ಟ್ರೇಲರ್ ಬಿಡುಗಡೆ ಚೆನ್ನಾಗಿದೆ. ಚಿತ್ರತಂಡಕ್ಕೆ ಶುಭವಾಗಲಿ ಎಂದರು.

ಈ ವೇಳೆ ನಿರ್ದೇಶಕರಲ್ಲಿ ಒಬ್ಬರಾದ ಕುಲದೀಪ್ ಕಾರಿಯಪ್ಪ ಮಾತನಾಡಿ, ಜೀವನದಲ್ಲಿ ಸಾಧನೆ ಮಾಡಲು ಮುಂದಾದಾಗ ನಮ್ಮನ್ನು ಯಾರು ಬೆಂಬಲಿಸುವುದಿಲ್ಲ ಎಂದು ಸಮಾಜವನ್ನು ಬಯ್ಯುವುದಕ್ಕೆ ಮುಂದಾಗುತ್ತೇವೆ. ಸಾಧನೆ ಮಾಡಲು ಮುಂದಾದಾಗ ಏನೆಲ್ಲಾ ಸಮಸ್ಯೆ ಎದುರಾಗುತ್ತದೆ ಎನ್ನುವುದು ಕಥಯ ತಿರುಳು. ನನ್ನ ಕಥೆಯ ಹೆಸರು “ಹೀರೋ” ಅಪರೂಪದ ವಿಷಯಗಳನ್ನು ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ ಎಂದರು.

ಮತ್ತೊಬ್ಬ ನಿರ್ದೇಶಕ ಸಾಯಿ ಶ್ರೀನಿಧಿ ಮಾತನಾಡಿ, ಸಾಲ ಮಾಡಿಯಾದರೂ ಚಿತ್ರ ಮಾಡಬೇಕು ಎನ್ನುವ ಆಸೆ ನನಗೆ. ನನ್ನ ಆಸೆಗೆ ನಿರ್ಮಾಪಕ ಮುರುಳಿ ಕೃಷ್ಣ ನೆರವಾದರು. ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ‌. ಕಾಫಿ, ಸಿಗರೇಟ್ ಮತ್ತು ಲೈನ್ ಎನ್ನುವುದು ನನ್ನ ಕಥೆಯ ಭಾಗ ಎಂದರು.
ಪ್ರಜ್ವಲ್ ರಾಜ್ ,”ಬಾನಿಗೊಂದು ಎಲ್ಲೆ ಎಲ್ಲಿದೆ” ಎನ್ನುವುದು ನಾನು ನಿರ್ದೇಶನ ಮಾಡಿರುವ ಕಥೆಯ ಭಾಗ ಎಂದು ಹೇಳಿಕೊಂಡರು.
ನಿರ್ದೇಶಕಿ ಅಪೂರ್ವ ಭಾರದ್ವಾಜ್ ಮಾತನಾಡಿ, ಇಷ್ಟು ವರ್ಷ ನಟಿಯಾಗಿ ಕಾಣಿಸಿಕೊಂಡಿದ್ದೆ. ಈಗ ನಿರ್ದೇಶಕಿಯಾಗಿದ್ದೇನೆ ಐದು ನಿರ್ದೇಶಕರು ಐದು ಕಥೆ ಹೇಳುವುದು ಎನ್ನುವ ವಿಷಯ ಆಸಕ್ತಿಕರವಾದದ್ದು ಹೀಗಾಗಿ ಒಂದು ಕಥೆಯನ್ನು ನಿರ್ದೇಶನ ಮಾಡಲು ಒಪ್ಪಿಕೊಂಡೆ. ಮಹದೇವ ಪ್ರಸಾದ್ ಮತ್ತು ಶ್ರೀಪ್ರಿಯಾ ನನ್ನ ಕಥೆಯಲ್ಲಿ ಕಾಣಿಸಿಕೊಂಡಿದ್ದಾರೆ.‌‌ ಮೇಕಪ್ ಕುರಿತ ಕಥೆ. ಮೇಕಪ್ ಮ್ಯಾನ್ ಮತ್ತು ಟಚ್ಚಪ್ ಬಾಯ್ ಗೆ ಚಿತ್ರ ಅರ್ಪಿಸುವೆ ಎಂದರು.

ನಟ ಮೂಗು ಸುರೇಶ್ ಮಾತನಾಡಿ, ಕಥೆ ಹೇಳುವಾಗ ಬಹಳಷ್ಟು ನಿರ್ದೇಶಕರು ನಿರ್ಮಾಪಕರ ಮನಸ್ಸು ಗೆದ್ದು ಬಿಡ್ತಾರೆ ಆದರೆ ಅದು ಸಿನಿಮಾದಲ್ಲಿ ಯಶಸ್ಸು ಗಳಿಸಲು ವಿಫಲರಾಗುತ್ತಾರೆ. ಅದ್ಯಾಕೋ ಗೊತ್ತಿಲ್ಲ. ಕನ್ನಡದಲ್ಲಿ ಬಹಳಷ್ಟು ಕಥೆಗಾರು ಇದ್ದಾರೆ. ಆದರೆ ಯಶಸ್ಸು ಮಾತ್ರ ಕಡಿಮೆ ಎಂದರು.ನಿರ್ಮಾಪಕ ಮುರುಳಿ ಕೃಷ್ಣ ಮಾತನಾಡಿ, ಐದು ಜನ ನಿರ್ದೇಶಕರ ಐದು ಕಥೆಗಳು ಸೇರಿ “ಬಿಟಿಎಸ್” ಚಿತ್ರವಾಗಿದೆ. ಐದು ಮಂದಿ‌ ನಿರ್ದೇಶಕರು ಅವರೇ ಚಿತ್ರದ ಆಧಾರ ಸ್ತಂಭ. ಚಿತ್ರ ಎಲ್ಲರಿಗೂ ಇಷ್ಟವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಚಿತ್ರದಲ್ಲಿ ನಟಿಸಿರುವ ವಿಜಯ್ ಕೃಷ್ಣ, ಮಹದೇವ ಪ್ರಸಾದ್, ಶ್ರೀಪ್ರಿಯ, ಕೌಶಿಕ್, ಚಂದನ, ವಿಜಯ್ ಕೃಷ್ಣ ಸೇರಿದಂತೆ ಮತ್ತಿತರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

“ಬಿಟಿಎಸ್” ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ನಿರ್ದೇಶಕರಾದ ರಾಮೇನಹಳ್ಳಿ ಜಗನ್ನಾಥ್, ವಿನಯ್ ಪ್ರೀತಂ, ಗುರುರಾಜ ಕುಲಕರ್ಣಿ, ಶ್ರೀಧರ್ ಶಿಕಾರಿಪುರ, ಜೈಶಂಕರ್,
ದೇವನೂರು ಚಂದ್ರು, ಚೇತನ್ ಕೇಶವ್ , ಇಸ್ಲಾವುದ್ದೀನ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.

 

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!