ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್
ಕೊಪ್ಪಳ,: ಕ್ಷೇತ್ರದ ಸಾಮಾನ್ಯ ಮನುಷ್ಯನಿಗೂ ಆರೋಗ್ಯ ಕ್ಷೇತ್ರದಲ್ಲಿ ಗುಣಮಟ್ಟದ ಚಿಕಿತ್ಸಾ ಸೌಲಭ್ಯಗಳು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಹೇಳಿದರು.
ತಾಲೂಕಿನ ಗಿಣಿಗೇರಾ ಜಿಪಂ ಕ್ಷೇತ್ರ ವ್ಯಾಪ್ತಿಯ ಗಬ್ಬೂರು, ಗುಳದಳ್ಳಿ ಮತ್ತು ಕೆರೆಹಳ್ಳಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡ ವಿವಿಧ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಬೆಳವಣಿಗೆ ದೃಷ್ಟಿಯಿಂದ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ನಮ್ಮ ಭಾಗದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವ ಉದ್ದೇಶದಿಂದ ಸರ್ಕಾರಕ್ಕೆ ಈಗಾಗಲೇ ಅನೇಕ ಬಾರಿ ಮನವಿ ಮಾಡಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೂ ತಂದಿದ್ದು,. ಬರುವ ಬಜೆಟ್ ನಲ್ಲಿ ಕೊಪ್ಪಳ ಕ್ಷೇತ್ರಕ್ಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆಯ ಭರವಸೆ ನೀಡಿದ್ದಾರೆ ಎಂದರು.ಕಳೆದ ಎರಡು ಅವಧಿಯ ಆಡಳಿತದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ್ದೇನೆ. ಮತ್ತೊಮ್ಮೆ ನನ್ನ ಮೇಲೆ ಭರವಸೆಯನ್ನಿಟ್ಟು ಮೂರನೇ ಬಾರಿಗೆ ಆಯ್ಕೆ ಮಾಡಿದಕ್ಕೆ ನಾನೆಂದಿಗೂ ಕ್ಷೇತ್ರದ ಜನತೆಗೆ ಋಣಿಯಾಗಿರುವೆ ಎಂದ ಅವರು, ಕ್ಷೇತ್ರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ 135 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣ, 192 ಕೋಟಿ ರೂಪಾಯಿ ವೆಚ್ಚದಲ್ಲಿ 450 ಬೆಡ್ ಆಸ್ಪತ್ರೆ, 295 ಕೋಟಿ ಅನುದಾನದಡಿ ಕೊಪ್ಪಳ ಮತ್ತು ಯಲಬುರ್ಗಾ ತಾಲೂಕಿನ ಕೆರೆ ತುಂಬಿಸುವ ಯೋಜನೆ, 245 ಕೋಟಿ ರೂಪಾಯಿ ವೆಚ್ಚದಲ್ಲಿ 104 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆಗೆ ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಕೆಕೆಆರ್ ಡಿಬಿ ಯೋಜನೆಯಡಿ ಕ್ಷೇತ್ರಕ್ಕೆ 65 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು, ಕ್ಷೇತ್ರದ 104 ಗ್ರಾಮಗಳಲ್ಲಿ ಸಿಸಿ ರಸ್ತೆ, ಚರಂಡಿ, ಶಾಲಾ ಕೊಠಡಿ ನಿರ್ಮಾಣ ಸೇರಿದಂತೆ ಇತರೆ ಕಾಮಗಾರಿಗಳಿಗೆ ಚಾಲನೆ ನೀಡಿರುವೆ. ಬರುವ ದಿನಗಳಲ್ಲಿ ಕ್ಷೇತ್ರಕ್ಕೆ ಮತ್ತಷ್ಟು ಅನುದಾನ ತಂದು ಅಭಿವೃದ್ಧಿ ಮಾಡುವೆ. ಕಾಂಗ್ರೆಸ್ ಸರ್ಕಾರ ಪಂಚ ಕಲ್ಯಾಣಗಳ ಜತೆಗೆ ರಾಜ್ಯದ ಪ್ರತಿಯೊಂದು ಗ್ರಾಮಕ್ಕೂ ಅನುದಾನ ಒದಗಿಸಿ, ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವುದಿಲ್ಲ ಎಂದರು.
ಪ್ರತಿಯೊಬ್ಬರಿಗೂ ಸೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಒಂದೇ ಒಂದು ಮನೆ ಕೊಡಲಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಜ್ಯಾದ್ಯಂತ ಲಕ್ಷಾಂತರ ಬಡಜನರಿಗೆ ಸೂರು ಒದಗಿಸುವ ಕೆಲಸ ಮಾಡಿದೆ. ಕೊಪ್ಪಳ ಕ್ಷೇತ್ರದಲ್ಲಿ ಶೈಕ್ಷಣಿಕ ವರ್ಷದಲ್ಲಿ 45 ಮನೆಗಳನ್ನು ನೀಡಿದ್ದು, ಬರುವ ದಿನದಲ್ಲಿ ಸೂರು ಇಲ್ಲದ ಪ್ರತಿಯೊಬ್ಬ ವ್ಯಕ್ತಿಗೂ ಸೂರು ಒದಗಿಸುವ ಕೆಲಸ ಮಾಡುವೆ ಎಂದರು.ಕ್ಷೇತ್ರದ ಬಹುತೇಕ ಗ್ರಾಮಗಳಲ್ಲಿ ರಾಷ್ಟ್ರೀಯ ಜಲಜೀವನ ಮಿಷನ್ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ, ಹೀಗಾಗಿ ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರರನ್ನು ಕೈಬಿಟ್ಟು, ಹೊಸಬರಿಗೆ ಗುತ್ತಿಗೆ ಕಾಮಗಾರಿ ನೀಡಿ, ಯೋಜನೆ ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಿ ಎಂದು ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಗೂಳಪ್ಪ ಹಲಿಗೇರಿ, ಗ್ಯಾರಂಟಿ ಸಮಿತಿ ತಾಲೂಕ ಅಧ್ಯಕ್ಷ ಬಾಲಚಂದ್ರನ್, ಗುಳದಳ್ಳಿ ಗ್ರಾ ಪಂ. ಅಧ್ಯಕ್ಷೆ ಈರಮ್ಮ ಲಕ್ಷ್ಮಣ್ ಕಿಡದಾಳ, ಅಲಿಸಾಬ್, ಅಣ್ಣಪ್ಪ ಗಬ್ಬೂರು, ಗುಡದಪ್ಪ ಗುಡದಳ್ಳಿ, ಲಕ್ಷ್ಮಣ್ ಗುಡದಳ್ಳಿ, ರಮೇಶ ಹೊಳೆಯಾಚಿ, ಪರಸಪ್ಪ ಕೆರೆಹಳ್ಳಿ, ಸುರೇಶ್ ಕೆರೆಹಳ್ಳಿ, ಸೋಮಲಿಂಗಪ್ಪ ಹುಡೇದ್, ಕರಿಯಪ್ಪ ಕಂಬಳಿ, ತಾಪಂ ಇಓ ದುಂಡೇಶ್ ತುರಾದಿ ಸೇರಿದಂತೆ ಇತರರು ಇದ್ದರು.
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ