December 23, 2024

AKSHARA KRAANTI

AKSHARA KRAANTI




ಬದುಕಿನ ಬಂಡಿಗೆ ಸಂಗೀತವೇ ಉಸಿರು

ವೃತ್ತಿಯಿಂದ ತಳ್ಳುಗಾಡಿಯಂತಹ, ತಟ್ಟಿ ಹೋಟೆಲ್ ನಡೆಸುವ ಕಾಯಕಜೀವಿಗಳು ಆದರೆ ಪ್ರವೃತ್ತಿ ಮಾತ್ರ ವಿಭಿನ್ನ..!!

“ಸಂಗೀತಕ್ಕೆ ಮಾರುಹೋಗದ ಮನಸ್ಸುಗಳೇ ಇಲ್ಲ” ಎನ್ನುವ ಮಾತು ನಿಜ. ಮೊಹಮ್ಮದ್ ಯುನೂಸ್ ಮುಲ್ಲಾ ರವರು ಜನಪದ ಹಾಗೂ ಸುಗಮ ಸಂಗೀತ ಕ್ಷೇತ್ರಕ್ಕೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ.

ತಬಲಾ, ಡೋಲಕ್ ವಾದ್ಯಗಳನ್ನು ಜಾನಪದ ನೃತ್ಯಗಳಿಗೆ ನುಡಿಸುವುದು ಎಂದರೆ ಅವರಿಗೆ ಮೈ ಮನಸ್ಸು ಹುರುಪುಗೊಳ್ಳುತ್ತದೆ. ಇವರು ಮೂಲತಃ ಕೊಪ್ಪಳ ಜಿಲ್ಲೆಯ ಕಾರಟಗಿಯವರು. ತಂದೆ ಮಿಯಾಸಾಬ್, ತಾಯಿ ಗುಲ್ಶಶನ್ ಬೀ ಅತ್ಯಂತ ಕಡುಬಡತನದಲ್ಲಿ 22ನೇ ಮೇ 1966 ರಂದು ಜನಿಸಿದ ಇವರು ಕೇವಲ ಪ್ರಾಥಮಿಕ ಹಂತದ ಶಿಕ್ಷಣವನ್ನು ಪಡೆದು, ಬದುಕಿನ ಬಂಡಿಯನ್ನು ತಳ್ಳಲು ಇವರು ಕಂಡುಕೊಂಡ ವೃತ್ತಿಯೆಂದರೇ ಹೋಟೆಲ್ ನಡೆಸುವುದು. ಇವರು ಕಾಯಕದಲ್ಲಿ ಹೋಟೆಲ್ ನಡೆಸಿದರೂ ಪ್ರವೃತ್ತಿಯಿಂದ ಕಲಾ ದೇವತೆಯ ಆರಾಧಕರು. ಸಣ್ಣ-ಸಣ್ಣ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಹಿಡಿದು ರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಲ್ಲಿಯೂ ಇವರು ಭಾಗವಹಿಸಿದ್ದಾರೆ.

ಹಂಪಿ ಉತ್ಸವ, ಆನೆಗುಂದಿ ಉತ್ಸವ, ಕನಕಗಿರಿ ಉತ್ಸವ, ಜನಪರ ಉತ್ಸವ ಹಾಗೂ 78ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿರುವುದಲ್ಲದೇ ಅನೇಕ ಸಂಘ ಸಂಸ್ಥೆಗಳ ಪ್ರಾಯೋಜಿತ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಇವರು ಕಲಾದೇವತೆಗೆ ತಮ್ಮನ್ನು ತಾವೇ ಅರ್ಪಿಸಿಕೊಂಡಿದ್ದಾರೆ.
ಅಲ್ಲದೆ ವಿವಿಧ ರಾಜ್ಯಗಳಿಗೆ ಹೋಗಿ ಡೋಲಕ್ ಮತ್ತು ತಬಲಾ ಬಾರಿಸುವ ಮೂಲಕ ತಮ್ಮ ವಿನೂತನ ಶೈಲಿಯಿಂದ ಗಮನಸೆಳೆದಿದ್ದಾರೆ. ರಾಜಸ್ಥಾನ ರಾಜ್ಯದ ಬಿಕಾನೆರ್, ದೆಹಲಿ ಕನ್ನಡ ಸಂಘದ ದೆಹಲಿಯಲ್ಲಿ, ಮುಂಬೈನ ವಾದ್ರದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಕಾರಟಗಿಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಇವರು ಸ್ವತಃ ಒಬ್ಬ ಕಲಾವಿದರಾಗಿದ್ದರೂ ಅನೇಕ ಹಿರಿಯ ಕಲಾವಿದರಿಗೆ ತಬಲಾ, ಡೋಲಕ್ ಸೇವೆಯನ್ನು ಸಾಥ್ ನೀಡಿದ್ದಾರೆ. ವಾಸುದೇವ ಭಟ್ಟರಿಗೆ ಸುಗಮ ಸಂಗೀತ ಕಲಾ ಸೇವೆಯಲ್ಲಿ ಹಾಗಿಯೇ ವೀಣಾ ಮುದುಗಲ್, ಮಂಜುಳಾ ಬೆಂಗಳೂರು, ಎಸ್ ಸದಾನಂದ, ಅಂತರಾಷ್ಟ್ರೀಯ ಜಾನಪದ ಕಲಾವಿದರಾದ ಮಹೇಬೂಬ್ ಕಿಲ್ಲೆದಾರ್, ಹನುಮಂತ ರಾವ್ ಕುಲಕರ್ಣಿ, ವೆಂಕಟೇಶ್ ದಾಸನಾಳ… ಹೀಗೇ ಇನ್ನೂ ಅನೇಕ ಸಾಂಸ್ಕೃತಿಕ ಪರಂಪರೆಯ ಕಲಾವಿದರೊಡನೆ ತಬಲಾ ಮತ್ತು ಡೋಲಕ್ ಸಾಥ್ ನೀಡಿ ವೀಕ್ಷಕರ ಮನಸ್ಸನ್ನು ಗೆದ್ದಿದ್ದಾರೆ.

ಇವರು 1986 ರಿಂದ ಇಲ್ಲಿಯವರೆಗೂ ನಿರಂತರವಾಗಿ ಕಲಾ ಸೇವೆಯ ಸೇವೆಯನ್ನು ಮಾಡುತ್ತ, ತಮ್ಮ ಕ್ರಿಯಾಶೀಲತೆಯನ್ನು ಮೆರೆದಿದ್ದಾರೆ. ಹಗಲಿನಲ್ಲಿ ಹೋಟೆಲ್ ನಲ್ಲಿ ರುಚಿಕರವಾದ ಪಡ್ಡು, ಇಡ್ಲಿ, ದೋಸೆ… ಮುಂತಾದ ತಿನಿಸುಗಳನ್ನು ತಯಾರಿಸುವ ಕೆಲಸ ಮಾಡುತ್ತಲೇ, ಸಂಜೆ ಅಥವಾ ರಾತ್ರಿ ಸಮಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮ ತಬಲಾ ಮತ್ತು ಡೋಲಕ್ ಸೇವೆ, ಜಾನಪದ, ಸುಗಮ ಸಂಗೀತ ಮುಂತಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ.

ಇಂದು ಆಧುನಿಕ ಕಾಲ ಆದರೆ, ಹಿಂದೆ ಕ್ಯಾಸೆಟ್ ಯುಗದಲ್ಲಿ ಗಾನ ಲಹರಿ, ಜಾನಪದಸಿರಿ, ಭಾವಾಂತಂರಂಗ, ಶ್ರೀಗುರು ರಾಘವೇಂದ್ರ ಭಕ್ತಿಗೀತೆಗಳು ಮುಂತಾದ ಅನೇಕ ಕ್ಯಾಸೆಟ್ ಹಾಡುಗಳಿಗೆ ಡೋಲಕ್ ನುಡಿಸಿದ್ದಾರೆ. ಅಂದಾಜು 60 ರಿಂದ 70 ಕ್ಯಾಸೆಟ್ ಗಳಿಗೂ ಹೆಚ್ಚು ಡೋಲಕ್ ಸಾಥಿಯಾಗಿ ನುಡಿಸಿದ್ದಾರೆ. ಇವರ ಅನುಪಮ ಕಲಾ ಸೇವೆಗೆ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿಯನ್ನು ನೀಡಿ, ಗೌರವ ಪೂರ್ವಕ ಸನ್ಮಾನವನ್ನು ಮಾಡಿದ್ದಾರೆ. “ಕಲಾಮಂತ್ರಿಕ” ಪ್ರಶಸ್ತಿಯನ್ನು 2015ರಲ್ಲಿ ಪಡೆದರೆ, “ಕಲಾಚತುರ” ನೆಂದು 2007ರಲ್ಲಿ, “ಸಂಗೀತ ಸಿರಿ” ಎಂದು 2009 ರಲ್ಲಿ ಬಿರುದನ್ನು ಪಡೆದು, ಕಾರಟಗಿಯ ಸಾಂಸ್ಕೃತಿಕ ಪರಂಪರೆಯ ಜೊತೆ ಜೊತೆಗೆ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಹೆಚ್ಚಿಸುವಲ್ಲಿ ಮೊಹಮ್ಮದ್ ಯುನೂಸ್ ಮುಲ್ಲಾರವರ ಪರಿಶ್ರಮ ದೊಡ್ಡದೆಂದು ಹೇಳಬಹುದು.

ಇಂತಹ ಕಲಾವಿದರಿಗೆ ಪ್ರತಿಯೊಬ್ಬರೂ ಪ್ರೋತ್ಸಾಹ ನೀಡಬೇಕಾಗಿದೆ. ಅವರನ್ನು ಮಾತನಾಡಿಸಿದಾಗ, ಅತ್ಯಂತ ಮುಗ್ಧರಾಗಿ, “ಮೊದಲಿನಷ್ಟು ಶಕ್ತಿ ಇಲ್ಲ ಸ್ವಾಮಿ, ಓಡಾಡಿ ಕಾರ್ಯಕ್ರಮ ಕೊಡ್ಲಿಕ್ಕೆ ಆಗವಲ್ತು, ಹೋಟೆಲ್ ಕೆಲಸ ಮಾಡ್ಲಿಕ್ಕೆ ಶಕ್ತಿ ಸಾಲವಲ್ತು, ಏನೋ ಹೇಗೋ ಭಗವಂತ ಮಾಡಿದಂಗ ಆಗಲಿ, ನಾನು ಜೀವಂತ ಇರುವವರೆಗೂ ಕಲಾಸೇವೆಯನ್ನು ಬಿಡುವುದಿಲ್ಲ ಆದರೆ ನಮ್ಮಂತಹ ಬಡ ಕಲಾವಿದರನ್ನು ಸರ್ಕಾರ ಗುರುತಿಸಬೇಕೆಂದು” ವಿನಂತಿಸಿಕೊಳ್ಳುತ್ತಾರೆ.

ಇವರ ಬಗ್ಗೆ ಅಂತರಾಷ್ಟ್ರೀಯ ಜಾನಪದ ಕಲಾವಿದರು ಹಾಗೂ ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾದ ಮೆಹಬೂಬ್ ಕಿಲ್ಲೇದಾರ್ ರವರು ಮಾತನಾಡಿ, “ಗ್ರಾಮೀಣ ಭಾಗದಲ್ಲಿ ಇಂತಹ ಅನೇಕ ಕಲಾವಿದರಿದ್ದಾರೆ. ಅವರನ್ನು ಸರ್ಕಾರ ಗುರುತಿಸುವ ಕೆಲಸ ಮಾಡಬೇಕು. ಅಲ್ಲದೆ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಾರ್ಯಕ್ರಮಗಳನ್ನು ನೀಡುವುದರ ಮೂಲಕ ಪ್ರೋತ್ಸಾಹಿಸಿ, ಮೆಹಬೂಬ್ ಯುನೂಸ್ ಮುಲ್ಲಾರವರಂತಹ ಕಲಾವಿದರಿಗೆ ಸರ್ಕಾರವು ಮಾಶಾಸನ ನೀಡುವುದರ ಮೂಲಕ ಅವರ ಇಳಿ ಸಂಜೆಯ ಬದುಕಿಗೆ ಆಸರಾಗಬೇಕಾಗಿದೆ” ಎಂದು ನುಡಿಯುತ್ತಾರೆ.

ಹೀಗೆ 60ರ ದಶಕದಿಂದ ಇಂದಿನವರೆಗೂ ನಿರಂತರವಾಗಿ ಕಲಾಸೇವೆ ಮಾಡುವ ಮೊಹಮ್ಮದ್ ಯುನೂಸ್ ಮುಲ್ಲಾ ರವರ ನಿರಂತರ ಕಲಾ ಸೇವೆ ಸಂತಸದ ಸಂಗತಿಯಾಗಿದೆ.

ಉಪಜೀವನಕ್ಕಾಗಿ ಹೋಟೆಲ್ ಉದ್ಯೋಗ ಮಾಡಿದರೂ ಸಾಂಸ್ಕೃತಿಕ ಲೋಕಕ್ಕೆ ತಮ್ಮದೇ ಸೇವೆ ಸಲ್ಲಿಸುತ್ತಿರುವ ಮೊಹಮ್ಮದ್ ಯೂನುಸ್ ಮುಲ್ಲಾರವರು ಡೋಲಕ್ , ತಬಲಾ ವಾದಕರಾಗಿಯೂ ಹೆಸರು ಮಾಡಿದ್ದಾರೆ. ಇಂತಹವರಿಗೆ ಸರ್ಕಾರದಿಂದ ಮಾಶಾಸನ ದೊರಕುವಂತಾಗಲಿ.

ರಮೇಶ ಸಿ ಬನ್ನಿಕೊಪ್ಪ, ಹಲಗೇರಿ

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!