ಗತಕಾಲದ ಸಂಸ್ಕೃತಿ, ಪರಂಪರೆಯ ಮೆಲುಕು
ಕೊಪ್ಪಳ,: ಐತಿಹಾಸಿಕ ವಿಶ್ವ ವಿಖ್ಯಾತ ವಿಜಯನಗರ ಸಾಮ್ರಾಜ್ಯದ ತೊಟ್ಟಿಲು ಆನೆಗೊಂದಿ ಉತ್ಸವ ಅಂಗವಾಗಿ ಶ್ರೀ ಆದಿಶಕ್ತಿ ದುರ್ಗಾದೇವಿ ದೇವಸ್ಥಾನದಿಂದ ಗಗನ್ ಮಹಲ್ವರೆಗೆ ಮಾ.ಅ11 ಭವ್ಯ ಮೆರವಣಿಗೆ ನಡೆಯಿತು.
ಗಂಗಾವತಿ ಶಾಸಕರಾದ ಜಿ.ಜನಾರ್ಧನ ರೆಡ್ಡಿ ಅವರು ಅಂಬಾರಿಯಲ್ಲಿನ ಶ್ರೀ ಆದಿಶಕ್ತಿ ದುರ್ಗಾದೇವಿ ಮೂರ್ತಿಗೆ ಪುಷ್ಪಾರ್ಪಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯು ಆನೆಗೊಂದಿಯ ಗತಕಾಲದ ಸಂಸ್ಕೃತಿ, ಪರಂಪರೆಯ ಮೆಲುಕು ಹಾಕುವ ರೀತಿಯಲ್ಲಿ ವಿಜೃಂಭಣೆಯಿಂದ ನಡೆಯಿತು.
ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ, ಕೊಪ್ಪಳ ಉಪವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಉತ್ಸವದ ಮೆರವಣಿಗೆ ಸಮಿತಿ ಅಧ್ಯಕ್ಷರು ಆಗಿರುವ ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಹಳ್ಳಿ ಗಂಗಾವತಿ ತಹಶೀಲ್ದಾರ ಯು.ನಾಗರಾಜ, ತಾಲ್ಲೂಕು ಪಂಚಾಯತ್ ಇಓ ಲಕ್ಷ್ಮೀದೇವಿ ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಗಮನ ಸೆಳೆದ ಕೋಲಾಟ ಪ್ರದರ್ಶನ : ಆನೆಗೊಂದಿ ಉತ್ಸವದ ಮೆರವಣಿಗೆಯಲ್ಲಿ ಆಕರ್ಷಕ ಕೋಲಾಟ ಪ್ರದರ್ಶನ ನಡೆಯಿತು. ಶಾಸಕರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಓ ಹಾಗೂ ಇತರ ಅಧಿಕಾರಿಗಳು ಕೋಲಾಟ ಆಡುವುದರ ಮೂಲಕ ಸಾರ್ವಜನಿಕರ ಗಮನ ಸೆಳೆದರು.
ಮೆರವಣಿಗೆಯ ಮೆರಗು ಹೆಚ್ಚಿಸಿದ ಆನೆ ಅಂಬಾರಿ : ಆನೆಗೊಂದಿ ಉತ್ಸವದ ಮೆರವಣಿಗೆಯಲ್ಲಿ ಶ್ರೀ ಆದಿಶಕ್ತಿ ದುರ್ಗಾದೇವಿ ಮೂರ್ತಿಯನ್ನು ಹೊತ್ತ ಅಂಬಾರಿಯು ಮೆರವಣಿಗೆಯ ಮೆರಗನ್ನು ಹೆಚ್ಚಿಸಿತು. ಅಂಬಾರಿಯನ್ನು ಹೊತ್ತ ಆನೆಯ ಹೆಸರು ಲಕ್ಷ್ಮೀ. ಈ ಆನೆಯು ಪಕ್ಕದ ವಿಜಯನಗರ ಜಿಲ್ಲೆಯ ಹಂಪಿ ವಿರೂಪಾಕ್ಷೇಶ್ವರ ಸನ್ನಿಧಿಗೆ ಸೇರಿದ್ದು, ಇತ್ತೀಚೆಗೆ ನಡೆದ ಕನಕಗಿರಿ ಉತ್ಸವವದಲ್ಲಿಯೂ ಪಾಲ್ಗೊಂಡು ಗಮನ ಸೆಳೆದಿತ್ತು. ಈಗ ಮತ್ತೆ ಆನೆಗೊಂದಿ ಉತ್ಸವಕ್ಕಾಗಿ ನಮ್ಮ ಕೊಪ್ಪಳ ಜಿಲ್ಲೆಗೆ ಆಗಮಿಸಿದ್ದು ವಿಶೇಷವಾಗಿದೆ.
ವಿವಿಧ ಕಲಾ ಪ್ರಕಾರಗಳ ಪ್ರದರ್ಶನ ಆಕರ್ಷಣೀಯ : ಆನೆಗೊಂದಿಯ ಉತ್ಸವದ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ನಂದಿ ಧ್ವಜ ಸಮಾಳ ವಾದನ, ಕಹಳೆ ವಾದನ, ಕರಡಿ ಮಜಲು, ಹಲಗೆ ವಾದನ, ಮಹಿಳಾ ವೀರಗಾಸೆ, ಗೊರವರ ಕುಣಿತ, ಪೂಜಾ ಕುಣಿತ, ಜಗ್ಗಲಿಗೆ, ಮಹಿಳಾ ಡೊಳ್ಳು ಕುಣಿತ, ಹಗಲುವೇಷ, ಮೋಜಿನಗೊಂಬೆ, ಮಹಿಳಾ ತಮಟೆ ವಾದನ, ಕೀಲುಕುದುರೆ, ನಾಸಿಕ್ ಡೊಲ್, ನಗಾರಿ, ಗಾರುಡಿ ಗೊಂಬೆ, ಸೋಮನ ಕುಣಿತ, ಕಂಸಾಳೆ, ಲಂಬಾಣಿ ನೃತ್ಯ, ಹುಲಿವೇಷ, ಕೋಳಿ ನೃತ್ಯ, ಬೇಡರ ಪಡೆ, ಡ್ರಮ್ ವಾದನ, ಮಹಿಳಾ ಡೊಳ್ಳು, ಮಹಿಳಾ ಕೋಲಾಟ, ಮರಗಾಲು, ಹಗಲುವೇಷ, ಚಿಲಿಪಿಲಿಗೊಂಬೆ, ಪಟ ಕುಣಿತ, ವೀರಗಾಸೆ, ಚಂಡೆ ವಾದನ, ಕರಡಿ ಮಜಲು, ಯಕ್ಷಗಾನ ಕುಣಿತ, ಮೋಜಿನ ಗೊಂಬೆ, ಲೇಜಿಮ್ ನೃತ್ಯ ಹಾಗೂ ಇತರ ಕಲೆಗಳ ಪ್ರದರ್ಶನವು ಆಕರ್ಷಣೀಯವಾಗಿತ್ತು.
More Stories
ಸಾರಿಗೆ ಸಂಸ್ಥೆಯ ಸಿಬ್ಬಂದಿಗಳ ನಿವೃತ್ತಿ : ಬಿಳ್ಕೊಡುಗೆ ಸಮಾರಂಭ
371(ಜೆ) ಅನುಷ್ಠಾನಕ್ಕೆ ಹಿನ್ನಡೆ : ಶಾಸಕ ಜನಾರ್ದನ್ ರೆಡ್ಡಿ
ಮನಸಾಕ್ಷಿ ಅನುಗುಣವಾಗಿ ಸುದ್ದಿ ಬಿತ್ತರಿಸಿ