December 23, 2024

AKSHARA KRAANTI

AKSHARA KRAANTI




ಭಾರತ ಭರತ ಹುಣ್ಣಿಮೆ ; ತರಳಬಾಳು ಹುಣ್ಣಿಮೆ

 

ಸಕಲ ಜೀವಾತ್ಮರಿಗೆ
ಲೇಸನೆ ಬಯಸುವ
ನಮ್ಮ ಕೂಡಲಸಂಗನ ಶರಣರೇ
ಕುಲಜರು.

 

ಈ ವಚನ ತಾತ್ಪರ್ಯ ಸಕಲ ಜೀವಾತ್ಮರಿಗೆ ಲೇಸನೆ ಬಯಸುವವರ ಜನಸಮುದಾಯದಲ್ಲಿರುವ ಎಲ್ಲಾ ವ್ಯಕ್ತಿಗಳಿಗೂ ಒಳ್ಳೆಯದನ್ನೇ ಬಯಸುವವರು. ಅಂದರೆ ಜಾತಿಗಳ ಹೆಸರಿನಲ್ಲಿ ಜನಸಮುದಾಯವನ್ನು ಮೇಲು ಕೀಳು ಎಂದು ವಿಂಗಡಿಸದೇ, ಎಲ್ಲರನ್ನು ಸಮಾನವಾಗಿ ಕಾಣುತ್ತ, ಪ್ರತಿಯೊಬ್ಬರಿಗೂ ಅನ್ನ,ಬಟ್ಟೆ,ವಸತಿ,ವಿದ್ಯೆ,ಕೆಲಸ,ಆರೋಗ್ಯ ದೊರೆಯುವಂತಾಗಿ ಎಲ್ಲರೂ ಜತೆಗೂಡಿ ನೆಮ್ಮದಿಯಿಂದ ಬಾಳುವಂತಾಗಬೇಕು ಎಂಬ ನಿಲುವನ್ನು ಉಳ್ಳವರು; ಕೂಡಲಸಂಗ ಮೆಚ್ಚುವನು. ನಮ್ಮ ಕೂಡಲಸಂಗನ ಶರಣರೆ ಕುಲಜರು ಕುಲದ ಹೆಸರಿನಲ್ಲಿ ಮೇಲು ಕೀಳು ಎಂಬ ತಾರತಮ್ಯದಿಂದ ರಚನೆಗೊಂಡಿದ್ದ ಸಮಾಜದ ಕಟ್ಟಲೆಯನ್ನು ನಿರಾಕರಿಸಿ, ಒಳ್ಳೆಯ ನಡೆನುಡಿಯುಳ್ಳ ವ್ಯಕ್ತಿಗಳೆಲ್ಲರೂ ಮಾನವಸಮುದಾಯವೆಂಬ ಒಂದೇ ಕುಲಕ್ಕೆ ಸೇರಿದವರೆಂಬ ಶಿವಶರಣಶರಣೆಯರ ನಿಲುವನ್ನು ಈ ನುಡಿಗಳು ಅರ್ಥೈಸುತ್ತವೆೆ.

ವಚನದಂತೆ ಕಷ್ಟದಲ್ಲಿರುವವರ ಕಣ್ಣೀರು ಒರೆಸುವ ಹುಣ್ಣಿಮೆ ‘ತರಳಬಾಳು ಹುಣ್ಣಿಮೆ’ ಈ ಮಹೋತ್ಸವವು ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆಯ ಪಾರಂಪರಿಕ ಉತ್ಸವ ಮಾತ್ರವಾಗಿರದೆ ನಾಡಿನ ಜನರ ನೋವು ನಲಿವುಗಳಿಗೆ ಸದಾ ಸ್ಪಂದಿಸುತ್ತಾ ಬಂದಿರುವ ಮಾನವೀಯ ವೇದಿಕೆಯಾಗಿದೆ.

ಈ ತರಳಬಾಳು ಹುಣ್ಣಿಮೆ ಹಿನ್ನೆಲೆ ಅತ್ಯಂತ ರೋಚಕವಾಗಿದ್ದು ಐತಿಹಾಸಿಕ ಹಿನ್ನೆಲೆ ಹೊಂದಿದೆ. ವಿಶ್ವಬಂಧು ಮರುಳಸಿದ್ದರು 12ನೇ ಶತಮಾನದ ಕ್ರಾಂತಿಯೋಗಿ ಬಸವಣ್ಣನವರ ಹಿರಿಯ ಸಮಕಾಲೀನರು. ಜಗದ್ಗುರು ಶ್ರೀ ರೇವಣಸಿದ್ದರ ಕೃಪಾಶೀರ್ವಾದದಿಂದ ಸಿದ್ಧಿಪಡೆದು ಕಂದಾಚಾರ, ಶೋಷಣೆ, ಅಸಮಾನತೆಯ ವಿರುದ್ಧ ಜನಜಾಗೃತಿ ಮೂಡಿಸಲು ಲೋಕ ಸಂಚಾರ ಹೊರಡುತ್ತಾರೆ. ಈ ತೆಲುಗುಬಾಳ ಸಿದ್ದರನ್ನು ಸದ್ಧರ್ಮ ಪೀಠದಲ್ಲಿ ಕೂರಿಸಿ ಅವರನ್ನು ಹರಸಿದ ಮಂತ್ರವೇ ‘ತರಳ, ನೀ ಬಾಳು’ ತರಳ ಬಾಳು’ ಎಂಬುದಾಗಿದೆ.

ವಚನ ಚಳವಳಿ ತಾತ್ವಿಕ ಸ್ವರೂಪ ಪಡೆದು ಸಾಮಾಜಿಕ ಸಂಘರ್ಷ ಆರಂಭಿಸುವ ಮುನ್ನವೇ ಇಂತಹ ಚಳವಳಿಯಲ್ಲಿ ತೊಡಗಿಸಿಕೊಂಡ ಮಹಾನ್ ಸಾಧಕರು. ಸಮಾಜದಲ್ಲಿ ಮೂಢನಂಬಿಕೆ, ಮೌಢ್ಯ ಬಿತ್ತಿದ್ದ ಪುರೋಹಿತಶಾಹಿ ವ್ಯವಸ್ಥೆ ವಿರುದ್ಧ ಸಾಮಾಜಿಕ ಆಂದೋಲನವನ್ನೇ ರೂಪಿಸಿದ ಮಹಾನ್‌ ಶರಣರು. ಮೂಲತಃ ಆದಿ ಕರ್ನಾಟಕ ಅಂದರೆ ದಲಿತ ಸಮುದಾಯದ ಮಾದಿಗ ಜನಾಂಗದಲ್ಲಿ ಜನಿಸಿದ ಮರುಳಸಿದ್ದರು, ಬಾಲ್ಯದಲ್ಲೇ ತಾಯಿ–ತಂದೆ ಕಳೆದುಕೊಂಡು ಕಗ್ಗಲುಪುರದ ಬಾಚಣ್ಣನ ಮನೆಯಲ್ಲಿ ಸಾಕು ಮಗನಂತೆ ಬೆಳೆಯುತ್ತಾರೆ. ದನಕರು ಕಾಯುವ ಕಾಯಕ ಮಾಡಿಕೊಂಡಿದ್ದರು. ಪ್ರಾಣಿಗಳ ಜತೆ ಒಡನಾಟ ಇದ್ದ ಅವರಿಗೆ ಒಮ್ಮೆ ಅವರ ಊರಿನಲ್ಲಿ ನಡೆದ ಮಾರಿ ಜಾತ್ರೆಗೆ ಕೋಣ ಬಲಿ ಕೊಡುವ ಪ್ರಸಂಗ ಬಂದಾಗ ನೊಂದುಕೊಂಡರು. ಮೂಢನಂಬಿಕೆಯ ನಡುವೆ ಮುಗ್ಧ ಪ್ರಾಣಿಗಳ ಜೀವ ತೆಗೆಯುವ ಇಂತಹ ಆಚರಣೆ ವಿರುದ್ಧ ಧ್ವನಿ ಎತ್ತಿದರು. ಪಟ್ಟಭದ್ರರ ಬಲದ ಮುಂದೆ ಅವರ ದನಿ ಚಿಕ್ಕದೆನಿಸಿತು. ಅದರಿಂದ ಬೇಸರಗೊಂಡ ಅವರು ಊರು ತೊರೆದು ಕಾಡು–ಮೇಡು ಅಲೆಯುತ್ತಾರೆ. ಸಾಧಕರ ಬೀಡು ಎಂದೇ ಪ್ರಸಿದ್ಧಿ ಪಡೆದಿದ್ದ ಚಿನ್ಮೂಲಾದ್ರಿ ಬೆಟ್ಟ ತಲುಪುತ್ತಾರೆ. ಅಲ್ಲಿ ಗುರು ರೇವಣಸಿದ್ದರ ಸಂಗ ದೊರೆಯುತ್ತದೆ. ಅಲ್ಲಿ ಅವರು ಸಿದ್ಧಿಪಡೆದು ಕಂದಾಚಾರ, ಶೋಷಣೆ, ಅಸಮಾನತೆಯ ವಿರುದ್ಧ ಜನಜಾಗೃತಿ ಮೂಡಿಸಲು ಲೋಕ ಸಂಚಾರ ಹೊರಡುತ್ತಾರೆ.

ತರಳ… ಬಾಳು… ತಾವು ಮಾಡಿದ ವೈಚಾರಿಕ ಕ್ರಾಂತಿ ಜ್ಯೋತಿಯನ್ನು ನಿರಂತರ ಉರಿಸುವ ಉದ್ದೇಶದಿಂದ ಮಾಘ ಶುದ್ಧ ಭಾರತ ಹುಣ್ಣಿಮೆಯ ದಿನ ತಮ್ಮ ಶಿಷ್ಯ ತೆಲುಗುಬಾಳ ಸಿದ್ದರನ್ನು ಸದ್ಧರ್ಮ ಪೀಠದಲ್ಲಿ ಕೂರಿಸಿ ಅವರನ್ನು ಹರಸಿದ ಮಂತ್ರವೇ ‘ತರಳ, ನೀ ಬಾಳು’ ತರಳ ಬಾಳು… ತರಳಬಾಳು ಎಂದರೆ ‘ದೀರ್ಘ ಕಾಲ ನೀ ಚಿರಂಜೀವಿಯಾಗಿ ಬಾಳು ಮಗು’ ಎಂದು ಹಾರೈಸುತ್ತಾರೆ. ಅಂದರೆ, ಸದ್ಧರ್ಮ ಪೀಠ ಸೂರ್ಯ ಚಂದ್ರರು ಇರುವವರೆಗೂ ಬಾಳಲಿ. ಜಗತ್ತಿನ ಎಲ್ಲ ಜನರ ಬಾಳು ಹಸನಾಗಲಿ ಎನ್ನುವ ತತ್ವಾರ್ಥ.

ತರಳಬಾಳು ಪೀಠ ಸ್ಥಾಪನೆಯ ಉದ್ದೇಶವೇ ನೈತಿಕ, ಸಮಾನತೆ, ಕಾಯಕ ತತ್ವದ ಆಧಾರದ ಮೇಲೆ ಧರ್ಮದ ಆಚರಣೆ ಸಾಗಬೇಕು ಎಂಬುದು. ಹೀಗೆ ಜಗದ್ಗುರು ಶ್ರೀ ರೇವಣಸಿದ್ದರ ಕೃಪಾಶೀರ್ವಾದದಿಂದ ಸಿದ್ಧಿಪಡೆದು ವಿಶ್ವ ಬಂಧು ಮರುಳಸಿದ್ದರು ತಮ್ಮ ಶಿಷ್ಯ ತೆಲುಗುಬಾಳು (ಬಳ್ಳಾರಿ ಜಿಲ್ಲೆ) ಸಿದ್ದರನ್ನು ಸಿಂಹಾಸನದಲ್ಲಿ ಪೀಠಾರೋಹಣ ಮಾಡಿದ ನೆನಪಿಗಾಗಿ ಪ್ರತಿ ವರ್ಷ ಭಾರತ ಹುಣ್ಣಿಮೆಯ ದಿನ ತರಳಬಾಳು ಮಹೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಈ ಮಹೋತ್ಸವವನ್ನು ಚಾಚು ತಪ್ಪದೆ ತರಳಬಾಳು ಜಗದ್ಗುರು ಬೃಹನ್ಮಠ ಸರ್ವ ಧರ್ಮಗಳ ಸಮನ್ವಯತೆಯ ತತ್ವದಡಿಯಲ್ಲಿ 75 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ.

 

‌‌ತರಳಬಾಳು ಹುಣ್ಣಿಮೆ ಎಂಬುದು ಕೇವಲ ತರಳಬಾಳು ಜಗದ್ಗುರು ಬೃಹನ್ಮಠಕ್ಕೆ, ತರಳಬಾಳು ಮಠದ ಭಕ್ತರಿಗೆ ಸಂಬಂಧಿಸಿದ್ದಲ್ಲ. ನಾಡಿನ ಕಷ್ಟಗಳಲ್ಲಿ ಸ್ಪಂದಿಸಿ ಜನರಿಗೆ ನೆರವು ನೀಡುತ್ತದೆ. ಅದ್ದೂರಿಯಾಗಿ ಮಾಡದೇ ಹುತಾತ್ಮ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಮತ್ತು ಕುಟುಂಬಗಳಿಗೆ ನೆರವು, ಹುತಾತ್ಮ ಯೋಧರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದೆ. ಇದು ಕೇವಲ ಧಾರ್ಮಿಕ ಆಚರಣೆಯಲ್ಲ. ಸಂಕಷ್ಟದಲ್ಲಿರುವವರ ಜನರಿಗೆ ನೆರವು ನೀಡುವ ಕಾರ್ಯ. ಜನರು ಕಷ್ಟದಲ್ಲಿದ್ದಾಗಲೆಲ್ಲಾ ಮಹೋತ್ಸವವನ್ನು ವೈಭವಯುತವಾಗಿ ಮಾಡದೆ ಸರಳವಾಗಿ ಮಾಡಲಾಗಿದೆ. 1986ರಲ್ಲಿ ಹಾಗೂ ಪ್ರತಿ ಬರಗಾಲ ಭೀಕರ ಬರಗಾಲ ಬಂದಾಗ ಹುಣ್ಣಿಮೆ ಬರ ಪರಿಹಾರದ ಕಾರ್ಯಕ್ರಮವಾಯಿತು. ಜಾನುವಾರುಗಳ ಮೇವಿನ ಸಂಗ್ರಹ ನಡೆಯುತ್ತದೆ. ನೀರಾವರಿ ಪ್ರದೇಶದ ಭಕ್ತರು ಟ್ರಾಕ್ಟರ್‌ಗಳಲ್ಲಿ ಹುಲ್ಲು ಹೇರಿಕೊಂಡು ಬಂದು ನಮ್ಮ ಅನುಭವ ಮಂಟಪದ ಆವರಣದಲ್ಲಿ ರಾಶಿ ಹಾಕುತ್ತಾರೆ. ಬರಗಾಲ ಸಂದರ್ಭದಲ್ಲಿ ಜಾನುವಾರುಗಳಿಗೆ ಮೇವು ಸಂಗ್ರಹಣೆ, ಗೋಶಾಲೆ ನಿರ್ವಹಣೆ ಮಾಡುತ್ತಾ ಬಂದಿದೆ. ಪ್ರವಾಹ ಸಂದರ್ಭದಲ್ಲಿ ಹುಣ್ಣಿಮೆ ನಡೆಸದೇ, ಪ್ರವಾಸ ಸಂತ್ರಸ್ಥರಿಗೆ ನೆರವು, ಅವರ ಮಕ್ಕಳಿಗೆ ಮಠದಲ್ಲಿ ಉಚಿತ ಶಿಕ್ಷಣ ನೀಡುತ್ತಿದೆ. ‘ಮನುಜಮತ ವಿಶ್ವಪಥ ; ತಾನೊಂದೇ ವೊಲಂ’ ಎಂಬುದನ್ನು ಸಾಬೀತು ಮಾಡಿದೆ. ಪೂಜ್ಯ ಲಿಂಗೈಕ್ಯ ದಿಟ್ಟ ಹೆಜ್ಜೆಯ ಧೀರಪ್ರಭು ‘ಶಿವಕುಮಾರ ಪ್ರಭುಗಳು’ ನಮ್ಮ ರಾಜ್ಯದಲ್ಲಿ ಅಲ್ಲದೇ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ತರಳಬಾಳು ಹುಣ್ಣಿಮೆ ಮಾಡಿದ ಇತಿಹಾಸ ಹೊಂದಿದೆ. ಪ್ರತಿ ವರ್ಷ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ತಾಲ್ಲೂಕಿನಲ್ಲಿ ನಡೆಸುತ್ತಿದ್ದಾರೆ. ಈ ವರ್ಷ ಬರಗಾಲ ಪ್ರಯುಕ್ತ ಸರಳವಾಗಿ ತರಳಬಾಳು ಜಗದ್ಗುರು ಬೃಹನ್ಮಠವಿರುವ ಚಿತ್ರದುರ್ಗ ಸಿರಿಗೆರಯಲ್ಲಿ ನಡೆಸುತ್ತಿದ್ದಾರೆ.

ಇಷ್ಟೆಲ್ಲಾ ಕಾರ್ಯಗಳನ್ನು ತನಗಾಗಿ ಅಲ್ಲ ನಮ್ಮವರಿಗಾಗಿ ಎಂಬ ಧ್ಯೇಯದಲ್ಲಿ ಈಗಿನ 21 ಜಗದ್ಗುರುಗಳಾದ ಗಣಕ ಯಂತ್ರ ಯೋಗಿ, ಎಂದೇ ಖ್ಯಾತಿ ಪಡೆದ, ಬಹುಭಾಷಾ ಪಂಡಿತರಾದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಸಾಮಾಜಿಕ ಜವಾಬ್ದಾರಿ ಹೊತ್ತು ನಿರ್ವಹಿಸುತ್ತಿದ್ದಾರೆ. ಇಂತಹ ಮಾನವೀಯತೆ ದಿಬ್ಬಣ ನೋಡಲು ಎರಡು ಕಣ್ಣು ಸಾಲದು. ಪ್ರತಿ ವರ್ಷ ಲೇಖನ ಬರೆಯುತ್ತಿದ್ದೇನೆ ಆದರೆ ಪದಗಳು ಮಾತ್ರ ಸಾಲುತ್ತಿಲ್ಲ ಎಂಬ ಭಾವ ಎದೆಯಲ್ಲಿ ಭಾಸವಾಗುತ್ತದೆ. ಎಷ್ಟೇ ಆಗಲಿ ನಾನು ಈ ಮಠದ ಭಕ್ತಳಲ್ಲವೇ ಸಮಸ್ಯೆ ನೂರಾರು ಇರಬಹುದು ಆದರೆ ಮಠದ ಪರ ನಿಲ್ಲುವ ಕೊಟ್ಯಾಂತರ ಮನಸು ಇವೆ. ಐಕ್ಯತೆ, ಶಾಂತಿ ಕದಡುವ ಜನರಿಗೆ ಮಾರಿಯಾಗಿಮುನಿದ ದಿನಗಳು ಇವೆ.

ಈಗೆ ನಮ್ಮ ತರಳಬಾಳು ಸಂತಾನ ಚಿರಂಜೀವಿಯಾಗಿರಲಿ. ದಕ್ಷಿಣ ಕರ್ನಾಟಕದ ನೊಂದವರ ಧ್ವನಿಯಾಗಿದ್ದು, ಜಗದ ಧರೆಯ ಬೆಳಕಾಗಲೆಂದು ಪ್ರಾರ್ಥಿಸುತ್ತೇನೆ.

ಕು. ಬಿಂದು ಆರ್ ಡಿ ರಾಂಪುರ.

ಉಪನ್ಯಾಸಕಿ, ಲೇಖಕಿ,

ಶ್ರೀ ಬಾಪೂಜಿ ಇಂಡಿಪೆಂಡೆಂಟ್ ಪಿಯು ಕಾಲೇಜು, ಹುಕ್ಕೇರಿ ,

ಕಾರ್ಯದರ್ಶಿ ಶರಣ ಸಾಹಿತ್ಯ ಪರಿಷತ್ತು

ದಾವಣಗೆರೆ

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!