December 23, 2024

AKSHARA KRAANTI

AKSHARA KRAANTI




ಕರ್ನಾಟಕ ನೆಲದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಿ : ಬಸನಗೌಡ ಪಾಟೀಲ

ಮಹಿಷಿ ವರದಿ ಯಥಾವತ್ತಾಗಿ ಜಾರಿಯಾಗಲಿ

ಕೊಪ್ಪಳ,: ಕರ್ನಾಟಕ ನೆಲದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಿ ಎಂಬ ಘೋಷಣೆಯೊಂದಿಗೆ ಡಾ|| ಸರೋಜಿನಿ ಮಹಿಷಿ ವರದಿ ಯಥಾವತ್ತಾಗಿ ಜಾರಿಯಾಗಬೇಕು ಎಂದು ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸನಗೌಡ ಪೋ.ಪಾಟೀಲ ಹೇಳಿದರು.

ಕರ್ನಾಟಕ ರಕ್ಷಣಾ ವೇದಿಕೆ ಕೊಪ್ಪಳ ಜಿಲ್ಲಾ ಘಟಕದಿಂದ ಸೋಮವಾರ ದಂದು ಕನಕದಾಸ ವೃತ್ತದಲ್ಲಿ ಬೃಹತ್ ಧರಣಿ ಹಾಗೂ ರಾ.ಹೆ 63 ತಡೆ ನಡೆಸಿದ ಪ್ರತಿಭಟನಾ ಸ್ಥಳಕ್ಕಾಗಮಿಸಿದ ಕೊಪ್ಪಳ ತಹಶೀಲ್ದಾರ ವಿಠಲ ಚೌಗಲಾ ಅವರು ಮನವಿ ಪತ್ರ ಸ್ವೀಕರಿಸಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಪತ್ರ ತಲುಪಿಸುವುದಾಗಿ ತಿಳಿಸಿದರು.

ಕರ್ನಾಟಕದ ಎಲ್ಲ ಬಗೆಯ ಉದ್ಯೋಗದಲ್ಲಿ ಕನ್ನಡಿಗರಿಗೆ ಸಿಂಹಪಾಲು ಇರಬೇಕೆಂಬುದು ನ್ಯಾಯಯುತವಾದ ಬೇಡಿಕೆ. ಆದರೆ ಖಾಸಗಿ ವಲಯ ದೊಡ್ಡದಾಗಿ ಬೆಳೆದ ಹಿನ್ನಲೆಯಲ್ಲಿ ಈ ವರದಿ ಸಮರ್ಪಕವಾಗಿ ಜಾರಿಯಾಗದ ಹಿನ್ನಲೆಯಲ್ಲಿ ಕನ್ನಡದ ಯುವ ಸಮುದಾಯ ಉದ್ಯೋಗವಿಲ್ಲದೇ ಬಳಲುವಂತಾಗಿದೆ. ಆದ ಕಾರಣ ಈ ಸಮಸ್ಯೆಯನ್ನು ಸರಿಪಡಿಸಿ ಸರ್ಕಾರಿ/ಅರೆಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಉದ್ಯೋಗ ಒದಗಿಸಿಕೊಡಬೇಕು ಎಂದರು.

ಕರವೇ ಜಿಲ್ಲಾಧ್ಯಕ್ಷ ಬಿ.ಗಿರೀಶಾನಂದ ಜ್ಞಾನಸುಂದರ ಮಾತನಾಡಿ, ಕರ್ನಾಟಕ ದೇಶದಲ್ಲಿ ಅತಿ ಹೆಚ್ಚುಹೆಚ್ಚು ಭೌಗೋಳಿಕವಾಗಿ ಸಂಪನ್ಮೂಲಗಳನ್ನು ಹೊಂದಿರುವ ರಾಜ್ಯ ಪ್ರಕೃತಿ ಸೌಂದರ್ಯಕ್ಕೆ ಅತ್ಯುತ್ತಮ ಹವಾಗುಣದ ರಾಜ್ಯ. ಕನ್ನಡಿಗರು ಶಾಂತಿಪ್ರಿಯರು ಹೃದಯ ಶ್ರೀಮಂತರು. ಕನ್ನಡಿಗರು ದೇಶದಲ್ಲಿ ಮೊದಲು ಜನಸಂಖ್ಯಾ ನಿಯಂತ್ರಣಕ್ಕೆ ಕಡಿವಾಣ ಹಾಕಿದವರು. ಕನ್ನಡನಾಡು ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ, ಚಾರಿತ್ರಿಕವಾಗಿ ವೈಭವದ ಹಿತಿಹಾಸವನ್ನು ಹೊಂದಿದ ನಾಡು. ಸ್ವಾತಂತ್ರೋತ್ತರ ಭಾರತದಲ್ಲಿ ಇಂಥ ಸಕಲ ಸಮೃದ್ಧಿಯ ನಾಡಿಗೆ ಇತರ ರಾಜ್ಯಗಳಿಂದ ದೊಡ್ಡ ಪ್ರಮಾಣದ ವಲಸೆ ಅವ್ಯಾಹತವಾಗಿ ನಡೆದುಕೊಂಡು ಬಂದಿದೆ. ಇತ್ತಿಚೀನ ಎರಡು-ಮೂರು ದಶಕಗಳಲ್ಲಿ ಇದು ತಾರಕಕ್ಕೆ ಏರಿದೆ. ಮೊದಲು ದಕ್ಷೀಣ ಭಾರತದ ಇತರ ರಾಜ್ಯಗಳಿಂದ ಜನರು ವಲಸೆ ಬಂದು ಇಲ್ಲಿ ನೆಲೆ ನಿಂತರು. ಈಗ ಉತ್ತರದ ರಾಜ್ಯಗಳು, ಈಶಾನ್ಯ ರಾಜ್ಯಗಳಿಂದ ಜನರ ಪ್ರವಾಹವೇ ಹರಿದು ಬರುತ್ತಿದೆ. ವಿಶೇಷವಾಗಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಹಾಗೂ ಮಂಗಳೂರಿನಂತಹ ಮಹಾನಗರಗಳಲ್ಲಿ ವಲಸೆ ಪ್ರಮಾಣ ಮಿತಿ ಮೀರಿದೆ. ವಲಸೆಯ ದುಷ್ಪರಿಣಾಮದಿಂದಾಗಿ ಕನ್ನಡ ನಾಡಿನ ಭೌಗೋಳಿಕ, ಸಾಮಾಜಿಕ, ರಾಜಕೀಯ ಚಹರೆಯೇ ಬದಲಾಗುತ್ತಿದೆ. ವಿಶೇಷವಾಗಿ ರಾಜ್ಯದ ರಾಜಧಾನಿ ಬೆಂಗಳೂರು ಈ ದೊಡ್ಡ ಪ್ರಮಾಣದ ವಲಸೆಯಿಂದ ಬಸವಳಿದು ಹೋಗುತ್ತಿದೆ. ಈ ಮಹಾವಲಸೆಯ ಬಹುಮುಖ್ಯ ದುಷ್ಪರಿಣಾಮ ಕನ್ನಡದ ಯುವ ಸಮುದಾಯದ ಮೇಲೆ ಆಗುತ್ತಿದೆ. ಕನ್ನಡಿಗರಿಗೆ ಈಗ ಉದ್ಯೋಗವಿಲ್ಲದಂತಾಗಿದೆ. ಈ ನೆಲದಲ್ಲಿ ಸ್ಥಾಪಿತವಾಗಿರುವಂತಹ ಖಾಸಗಿ ಸಂಸ್ಥೆಗಳು ಹೊರರಾಜ್ಯಗಳ ಮಾನವ ಸಂಪನ್ಮೂಲ ಅಧಿಕಾರಿಗಳನ್ನೆ ನೇಮಿಸಿಕೊಳ್ಳುತ್ತಿದ್ದು, ಅವರು ತಮ್ಮ ತಮ್ಮ ರಾಜ್ಯದ ಯುವಕ-ಯುವತಿಯರನ್ನು ಕರೆ ತಂದು ಕೆಲಸ ಕೊಡುತ್ತಿದ್ದಾರೆ. ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರ ಪ್ರಮಾಣ ದಿನೇದಿನೇ ಕುಸಿಯುತ್ತಲೇ ಬರುತ್ತಿದೆ. ಹೀಗೆ ಮುಂದುವರೆದರೆ ಕನ್ನಡಿಗರು ಮುಂಬರುವ ದಿನಗಳಲ್ಲಿ ತಮ್ಮ ನೆಲದಲ್ಲಿ ತಾವೇ ಅತಂತ್ರರಾಗಿ ನರಕಯಾತನೆ ಅನುಭವಿಸುವ ಸ್ಥಿತಿ ಬಂದೊದಗಲಿದೆ.
ಇಂತಹ ಸಂದರ್ಭದಲ್ಲಿ ಕರ್ನಾಟಕ ನೆಲದಲ್ಲಿ ಕನ್ನಡಿಗರಿಗೆ ಉದ್ಯೋಗ ದಕ್ಕಬೇಕು ಎಂದು ನಾವೆಲ್ಲ ದಶಕಗಳಿಂದ ಹೋರಾಡುತ್ತ ಬಂದಿದ್ದೇವೆ. ರಾಜ್ಯ ಸರ್ಕಾರ 1983ರಲ್ಲಿ ಡಾ.ಸರೋಜಿನಿ ಮಹಿಷಿ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ನೇಮಿಸಿ ರಾಜ್ಯದಲ್ಲಿ ಉದ್ಯೋಗ ಮೀಸಲಾತಿಗಾಗಿ ಸಂಬಂಧಿಸಿದಂತೆ ಮಾನದಂಡಗಳನ್ನು ಶಿಫಾರಸ್ಸು ಮಾಡಲು ಸೂಚಿಸಿದ ನಂತರ ಸಮಿತಿಯು 13/06/1984 ರಂದು ಮಧ್ಯಂತರ ವರದಿಯನ್ನು ಮತ್ತು 30/12/1986 ರಂದು ಅಂತಿಮ ವರದಿಯನ್ನು ಸಲ್ಲಿಸಿತು. ಸಮಿತಿಯು ಒಟ್ಟು 58 ಶಿಪಾರಸ್ಸುಗಳನ್ನು ಮಾಡಿತು. ಈ ಶಿಪಾರಸ್ಸುಗಳಲ್ಲಿ ರಾಜ್ಯ ಸರ್ಕಾರ 45 ಶಿಪಾರಸುಗಳನ್ನು ಅಂಗೀಕರಿಸಿದೆ. ರಾಜ್ಯ ಸರ್ಕಾರಿ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಘಟಕಗಳಲ್ಲಿ ಕನ್ನಡಿಗರಿಗೆ 100 ಪ್ರತಿಶತ ಮೀಸಲಾತಿ ನೀಡಬೇಕು. ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳಲ್ಲಿ (ಪಿ.ಎಸ್.ಯು) ಗ್ರೂಪ್ ಸಿ, ಗ್ರೂಪ್ ಡಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇ.100, ಅನುಕ್ರಮವಾಗಿ ಗ್ರೂಪ್ ಬಿ, ಮತ್ತು ಎ ಉದ್ಯೋಗಗಳಲ್ಲಿ ಕನಿಷ್ಠ 80 ಪ್ರತಿಶತ ಮತ್ತು 65 ಮೀಸಲಾತಿ ನೀಡಬೇಕು ಎಂದು ಸಮಿತಿಯು ಶಿಪಾರಸು ನೀಡಿತ್ತು. ಆದರೆ ಡಾ.ಸರೋಜಿನಿ ಮಹಿಷಿ ವರದಿ ಸಮರ್ಪಕವಾಗಿ ಜಾರಿಯಾಗಲೇ ಇಲ್ಲ.
ಕೇಂದ್ರ ಸರ್ಕಾರದ ಕೈಗಾರಿಕಾ ಉದ್ಯೋಗ ಸ್ಥಾಯಿ ಆದೇಶ ಕಾಯ್ದೆ 1946 ಪ್ರಕಾರ ಆಯಾ ರಾಜ್ಯಗಳಲ್ಲಿ ನಿಯಾಮಾವಳಿ ರೂಪಿಸುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗೆ ಇರುತ್ತದೆ. ರಾಜ್ಯ ಸರ್ಕಾರ ರೂಪಿಸುವ ಕಾನೂನನ್ನು 50ಕ್ಕೂ ಹೆಚ್ಚು ಮಂದಿ ನೌಕರರನ್ನು ಹೊಂದಿರುವ ಕೈಗಾರಿಕೆಗಳು ಪಾಲಿಸಬೇಕಾಗುತ್ತದೆ. ಈ ಕಾಯ್ದೆಯಡಿ ರಾಜ್ಯ ಸರ್ಕಾರ ಪ್ರತ್ಯೇಕ ಕಾನೂನನ್ನು ರೂಪಿಸಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಯನ್ನು ಜಾರಿ ಮಾಡಬಹುದಾಗಿದೆ. ಇದಕ್ಕೆ ರಾಜ್ಯ ಸರ್ಕಾರ ಇಚ್ಛಾಶಕ್ತಿಯನ್ನು ತೋರಬೇಕು ಮತ್ತು ಕಾನೂನು ರೂಪಿಸುವ ವೇಳೆ ಎಚ್ಚರಿಕೆವಹಿಸಿ ನ್ಯಾಯಾಲಯಗಳಲ್ಲಿ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕಾಗಿದೆ ಎಂದರು.

ಪ್ರತಿಭಟನೆಯಲ್ಲಿ ಜಿಲ್ಲಾ ಯುವ ಘಟಕ ಅಧ್ಯಕ್ಷ ಹನುಮಂತ ಬೆಸ್ತರ, ಜಿಲ್ಲಾ ಗೌರವಾಧ್ಯಕ್ಷ ಸಂಜಯ ಖಟವಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥಗೌಡ ಆನೆಗುಂದಿ, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಭುವನೇಶ್ವರಿ ಮೊಟಗಿ, ಮಹಿಳಾ ಘಟಕ ತಾಲೂಕಾಧ್ಯಕ್ಷೆ ಸಾವಿತ್ರಮ್ಮ ದಳವಾಯಿ, ಕೊಪ್ಪಳ ತಾಲೂಕಾಧ್ಯಕ್ಷ ವಿನೋದ ಎಸ್ ಗಂಗಾ, ತಾ.ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಮೂಗಿನ್, ಕುಷ್ಟಗಿ ತಾಲೂಕಾಧ್ಯಕ್ಷ ಪ್ರಕಾಶ ಮನ್ನೇರಾಳ, ಜಿಲ್ಲಾ ಸಂಚಾಲಕ ಶರಣಯ್ಯ ಹಳೇಮನಿ, ಕುಷ್ಟಗಿ ತಾ.ಗೌರವಾಧ್ಯಕ್ಷ ಆದಪ್ಪ ಉಳಾಗಡ್ಡಿ, ಕರವೇ ಮುಖಂಡರಾದ ಅಶೋಕ ಮಿಸ್ಕಿನ್, ಪರಸಪ್ಪ ಅಳಳ್ಳಿ, ಆನಂದ ಎಲಿಗಾರ, ದೊಡ್ಡಬಸವರಾಜ ತಿಪ್ಪಣ್ಣವರ, ಶರಣಯ್ಯ ಕೆ, ಶಿವಕುಮಾರ ಡಿ.ಸಿ, ಮಂಜುನಾಥ ಕಿನ್ನಾಳ, ಆನಂದ ಮೇಗಳಮನಿ, ಎಮ್.ರಾಮು ಆನೆಗುಂದಿ, ಮಾರುತಿ ಎಮ್. ಚಿನ್ನು ಟೊಂಟಿ, ಎಚ್. ರಾಮಯ್ಯ ಹಾಗೂ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.

 

 

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!