December 23, 2024

AKSHARA KRAANTI

AKSHARA KRAANTI




ಲಿಂ. ಶ್ರೀಮರಿಶಾಂತವೀರ ಮಹಾಸ್ವಾಮಿಗಳ ಅಕ್ಷರ ಕ್ರಾಂತಿ ಇಂದು ಫಲ ನೀಡುತ್ತಿದೆ : ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್

ಕೊಪ್ಪಳ,: ಪರಮಪೂಜ್ಯ ಲಿಂ.ಜ. ಶ್ರೀಮರಿಶಾಂತವೀರ ಮಹಾಸ್ವಾಮಿಗಳು ಅಂದು ನೆಟ್ಟ ಮರ ಇಂದು ಅಕ್ಷರಗಳ ಕ್ರಾಂತಿಯ ರೂಪದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ನೆರಳು ನೀಡುತ್ತಿದೆ. ಲಕ್ಷೋಪ ಲಕ್ಷ ಮಕ್ಕಳ ಭವಿಷ್ಯವನ್ನು ರೂಪಿಸಿದೆ ಎಂದು ಉಪನ್ಯಾಸಕರಾದ ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್ ನುಡಿದರು.

ಸೋಮವಾರ ನಗರದ ಶ್ರೀಗವಿಸಿದ್ಧೇಶ್ವರ ಹಾಗೂ ಪಿ.ಎಸ್.ಎಮ್.ಎಸ್ ಪದವಿ ಪೂರ್ವ ಕಾಲೇಜುಗಳ ಸಂಯಕ್ತಾಶ್ರಯದಲ್ಲಿ ಲಿಂ.ಜ.ಮರಿಶಾಂತವೀರ ಮಹಾಸ್ವಾಮಿಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಂದು ಈ ಭಾಗದಲ್ಲಿ ಶಿಕ್ಷಣ ಎನ್ನುವುದು ಮರಿಚಿಕೆಯಾಗಿತ್ತು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಅಪರೂಪವೆಂಬಂತೆ ಇದ್ದವು. ಕಾಲೇಜು ಶಿಕ್ಷಣಕ್ಕಂತೂ ದೂರದ ಹೈದರಬಾದಗೆ ತೆರಳಬೇಕಾದ ಪರಿಸ್ಥಿತಿ ಇತ್ತು. ಇದನ್ನು ಮನಗಂಡ ಶ್ರೀಗಳು ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಕಾಲೇಜುಗಳನ್ನು ಸ್ಥಾಪಿಸಿ ಈ ಭಾಗದಲ್ಲಿ ಶಿಕ್ಷಣದ ಕ್ರಾಂತಿಯನ್ನು ಮಾಡಿದರು. ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ಧಕ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಅದಕ್ಕೆ ಕಾಯಕಲ್ಪ ಕೊಟ್ಟ ಕೀರ್ತಿ ಪೂಜ್ಯರಿಗೆ ಸಲ್ಲುತ್ತದೆ. ಅಂತಹ ಪೂಜ್ಯರನ್ನು ನಾವು ಸದಾ ಸ್ಮರಣೆ ಮಾಡುತ್ತಿರಬೇಕೆಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಗವಿಸಿದ್ಧೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ.ವಿರೇಶಕುಮಾರ ಎನ್.ಎಸ್ ಮತ್ತು ಪಿ.ಎಸ್.ಎಮ್.ಎಸ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಅಗಸ್ಟಿನ್ ಹಾಗೂ ಸಕಲ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಉಪನ್ಯಾಸಕರಾದ ಡಾ.ಬಾಳಪ್ಪ ತಳವಾರ ಕಾರ್ಯಕ್ರಮ ನಿರೂಪಿಸಿದರೆ, ಶ್ರೀಮತಿ ಕಮಲಾ ಅಳವಂಡಿ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಎರಡೂ ಕಾಲೇಜುಗಳ ಸುಮಾರು ಎರಡೂ ಸಾವಿರ ವಿದ್ಯಾರ್ಥಿಗಳು ಈ ಸ್ಮರಣೆಯಲ್ಲಿ ಭಾಗವಹಿಸಿದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!