December 22, 2024

AKSHARA KRAANTI

AKSHARA KRAANTI




ತುಂಗಾಭದ್ರ ಅಣೆಕಟ್ಟು ಹಾಗೂ ರೇಲ್ವೆ ನಿಲ್ದಾಣಗಳ ಸ್ಥಾಪನೆಯ ರೋಚಕ ಸಂಗತಿಗಳು

ಹುಲಿಗಿ, ಮುನಿರಾಬಾದ, ಮಲ್ಲಾಪುರ, ಹೊಳೆನಿಂಗಾಪುರ ಚಾರಿತ್ರಿಕ ಸಂಗತಿಗಳು

ತುಂಗಾಭದ್ರೆ’ ಕರ್ನಾಟಕದ ನಾಲ್ಕು ಜಿಲ್ಲೆ ಮತ್ತು ಆಂಧ್ರದ ಕೆಲ ಜಿಲ್ಲೆಗಳ ಜೀವನಾಡಿಯಾಗಿದೆ. ‘ತುಂಗಾ’ ಮತ್ತು ‘ಭದ್ರೆ’ ಎರಡೂ ನದಿಗಳು ಸಮ್ಮಿಲನವಾಗಿ ಹರಿದು ಬರುತ್ತಿರುವ ಜೀವನದಿಗೆ ಅಡ್ಡಲಾಗಿ ಕಟ್ಟಿರುವ ಈ ಅಣೆಕಟ್ಟಿನಿಂದ ಎಷ್ಟೋ ರೈತರ ಬದುಕಿಗೆ ಉಸಿರಾಗಿದೆ. ಅದರ ಜೊತೆಗೆ ಸುತ್ತಮುತ್ತಲಿನ ಅನೇಕ ಕಾರ್ಖಾನೆಗಳಿಗೆ ನೀರಿನ ಪೂರೈಕೆಯಾಗುತ್ತಾ ಸಾವಿರಾರು ಕಾರ್ಮಿಕರಿಗೆ ಬದುಕಾಗಿದೆ. ಇಂತಹ ಮಹತ್ವ ಹೊಂದಿರುವ ಅಣೆಕಟ್ಟಿನ ಸುತ್ತಮುತ್ತಲಿನ ಗ್ರಾಮಗಳು, ರೈಲ್ವೆ ನಿಲ್ದಾಣದ ನಿರ್ಮಾಣದ ಕುರಿತು ಕೆಲವು ರೋಚಕ ಸಂಗತಿಗಳನ್ನು ತಿಳಿದುಕೊಳ್ಳುವುದು ಅತ್ಯಂತ ಮಹತ್ವದ ಸಂಗತಿಯಾಗಿದೆ.

ಹುಲಿಗಿ :
ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮವು ಶಕ್ತಿಕೇಂದ್ರ. ಪ್ರಾಚೀನ ಕಾಲದಲ್ಲಿ ಇದೊಂದು ಬಹುದೊಡ್ಡ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿತ್ತು. 10-11ನೇ ಶತಮಾನಕ್ಕೆ ಮೊದಲೇ ಇದೊಂದು ಬಹುದೊಡ್ಡ ಐತಿಹಾಸಿಕ ಕೇಂದ್ರವಾಗಿತ್ತೆಂದು ಇಲ್ಲಿನ ಶಾಸನಗಳಿಂದ ತಿಳಿದುಬರುತ್ತದೆ. ಇದು ನಾಡಿನ ತುಂಬೆಲ್ಲಾ ಹೆಸರುವಾಸಿಯಾದ ಗ್ರಾಮ ಎಂದರೂ ನಡಿಯುತ್ತೆ. ಏಕೆಂದರೆ ಇಲ್ಲಿ ನಡೆಯುವ ಹುಲಿಗೆಮ್ಮ ದೇವಿಯ ಜಾತ್ರೆ ಬಹು ಪ್ರಸಿದ್ಧಿಯಾಗಿದೆ. ಈ ಜಾತ್ರೆಗೆ ನಾಡಿನ ಜನತೆಯಷ್ಟೇ ಅಲ್ಲ ಅಕ್ಕ-ಪಕ್ಕದ ರಾಜ್ಯಗಳಾದ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಗೋವಾ ಮುಂತಾದ ರಾಜ್ಯಗಳಿಂದಲೂ ಭಕ್ತರು ಬಂದು ಹೋಗುವ ಪುಣ್ಯಕ್ಷೇತ್ರವಿದು. ಈ ಗ್ರಾಮಕ್ಕೆ ಎಷ್ಟು ಇತಿಹಾಸವಿದೆಯೋ; ಇಲ್ಲಿ ನಡೆಯುವ ಹುಲಿಗಿ ಜಾತ್ರೆಗೂ ಸಹ ಅಷ್ಟೇ ಬಹುದೊಡ್ಡ ಚರಿತ್ರಯಿದೆ. ಜನಪದರು ಹುಲಗಿ, ಹುಲಿಗಿ, ಹುಲಿಗೆಮ್ಮ, ಹುಲಿಗೆರಮ್ಮ ಎಂಬ ಮುಂತಾದ ಹೆಸರುಗಳಿಂದ ಈ ಗ್ರಾಮವನ್ನು ಮತ್ತು ಈ ಗ್ರಾಮದ ದೇವತೆಯನ್ನು ಕರೆಯುತ್ತಾರೆ. ಈ ಗ್ರಾಮದ ಹೆಸರಿನ ಮೇಲೆ ಇಲ್ಲಿ ನೆಲೆಸಿರುವ ದೇವತೆಗೆ ‘ಹುಲಿಗೆಮ್ಮ’ ಎಂಬ ಹೆಸರಿನಿಂದ ಕರೆಯಲಾಯಿತೋ ಅಥವಾ ಇಲ್ಲಿ ನೆಲೆಸಿರು ದೇವತೆಯ ಹೆಸರಿನ ಮೇಲೆ ಈ ಗ್ರಾಮಕ್ಕೆ ‘ಹುಲಗಿ’ ಎಂಬ ಗ್ರಾಮನಾಮ ಬಂತೋ ಎಂಬ ಮಾಹಿತಿ ಲಭ್ಯವಾಗುವುದಿಲ್ಲಾ. ಆದರೂ 10ನೇ ಶತಮಾನದ ಶಾಸನಗಳಲ್ಲಿ ಈ ಗ್ರಾಮವನ್ನು ‘ಪುಲಗಿ’(ಹುಲಗಿ) ಎಂತಲೂ ಉಲ್ಲೇಖಿಸಲಾಗಿದೆ. ಅಂದರೆ ಈ ಕಾಲಕ್ಕಿಂತಲೂ ಮೊದಲೇ ಈ ಗ್ರಾಮ ಇತ್ತೆಂಬುದು ತಿಳಿದುಬರುತ್ತದೆ. ಅದಕ್ಕಿಂತ ಮುಖ್ಯವಾಗಿ ರಾಮಾಯಣ ಕಾಲದಲ್ಲಿ ಉಲ್ಲೇಖಿತ ವಾನರ ರಾಜ್ಯ ‘ಕಿಷ್ಕಿಂದೆ’ ಪ್ರದೇಶದಲ್ಲಿ ಈ ಹುಲಗಿ ಗ್ರಾಮ ಇತ್ತೆಂದು ಇದೇ ಗ್ರಾಮದಲ್ಲಿ ದೊರೆತ ಶಾಸನದಿಂದ ತಿಳಿದುಬರುತ್ತದೆ. ಆ ಮಾತಿನಲ್ಲಿ ಗಮನಿಸಿದರೆ ಈ ಗ್ರಾಮದ ಚರಿತ್ರೆ ಕ್ರಿ.ಪೂ ಸುಮಾರು ನಾಲ್ಕೈದು ಸಾವಿರ ವರ್ಷಗಳ ಹಿಂದೆ ಹೋಗುತ್ತದೆ. ಇದರ ಜೊತೆಗೆ ಇಲ್ಲಿ ದೊರೆತ ಶಾಸನಗಳು, ಪ್ರಾಚೀನ ದೇವಸ್ಥಾನಗಳು ಮತ್ತು ಮೂರ್ತಿ-ಶಿಲ್ಪಗಳು ಈ ಗ್ರಾಮದ ಚರಿತ್ರೆಯ ಮೇಲೆ ಇನ್ನಷ್ಟು ಬೆಳಕು ಚೆಲ್ಲುತ್ತವೆ.
ಈ ಗ್ರಾಮದಲ್ಲಿ ಬಹುಪ್ರಾಚೀನ ಮತ್ತು ಪ್ರಸಿದ್ಧಿಯಾದ ಹುಲಿಗೆಮ್ಮ ಎಂಬ ಹೆಣ್ಣು ದೇವರ ದೇವಾಲಯವಿದೆ. ಅದರ ಹತ್ತಿರದಲ್ಲೆ ಸೋಮೇಶ್ವರ ದೇವಸ್ಥಾನವಿದೆ. ಅದರ ಸುತ್ತ-ಮುತ್ತಲಿನಲ್ಲಿ ನಾಲ್ಕು ಈಶ್ವರ ದೇವಾಲಯಗಳಿವೆ. ಹೀಗೆ ಒಟ್ಟು ಐದು ಶೈವ ದೇವಾಲಯಗಳಿರುವ ಈ ದೇವಾಲಯ ಸಮುಖ್ಯವನ್ನು ಪಂಚಲಿಂಗ ದೇವಾಲಯಗಳು ಎಂದು ಕರೆಯುತ್ತಾರೆ. ಸೋಮೇಶ್ವರ ದೇವಸ್ಥಾನ ಮಾತ್ರ ಉತ್ತಮ ಸ್ಥಿತಿಯಲ್ಲಿದ್ದು ದೊಡ್ಡ ಪ್ರಮಾಣದಲ್ಲಿದೆ. ಅವುಗಳಲ್ಲಿ ಮೂರು ದೇವಸ್ಥಾನಗಳ ಹೆಸರುಗಳು ಇಂದು ಬದಲಾವಣೆಯಾಗಿವೆ. ಒಂದಕ್ಕೆ ಗಣಪತಿ, ಮತ್ತೊಂದಕ್ಕೆ ಪಾರ್ವತಿ, ಇನ್ನೊಂದಕ್ಕೆ ಸುಬ್ರಮಣ್ಯ ದೇವಸ್ಥಾನ ಎಂದು ಕರೆಯುತ್ತಾರೆ. ಸ್ವಲ್ಪ ದೂರದಲ್ಲೇ ಇರುವ ಇನ್ನೊಂದು ದೇವಾಲಯ ಪೂರ್ಣ ಪ್ರಮಾಣದಲ್ಲಿ ನಾಶವಾಗಿದೆ. ದೇವಾಲಯದ ಒಳ ಪ್ರವೇಶಿಸಲೂ ಆಗದಿರುವುದರಿಂದ ಅದಕ್ಕೆ ಪ್ರವೇಶ ನಿಷೇಧವಿದೆ. ಹೀಗೆ ಒಟ್ಟು ಐದು ಶೈವ ದೇವಾಲಯಗಳ ಸಮೂಹವಿದು. ಹಾಗೆಯೇ ಈ ಗ್ರಾಮದಲ್ಲಿ ಮಾರುತಿ ಎಂಬ ಪ್ರಾಚೀನ ದೇವಸ್ಥಾನವಿದೆ. ಅದರ ಬಗ್ಗೆ ಹೆಚ್ಚಿನ ಇತಿಹಾಸ ತಿಳಿದುಬರುವುದಿಲ್ಲ. ಉಳಿದಂತೆ ಬಿದ್ದು ಹೋಗಿರುವ ಒಂದು ಬ್ರಹ್ಮಗುಡಿ ಮತ್ತು ಕ್ರಿ.ಶ. ಸುಮಾರು 1807ರಲ್ಲಿ ನಿರ್ಮಾಣವಾಯಿತೆಂದು ಹೇಳಲಾಗುವ ಪಾರ್ಶ್ವನಾಥ ಬಸದಿ ಇದೆ. ಈ ಬಸದಿ ಸುಸ್ಥಿತಿಯಲ್ಲಿದ್ದು ಇಂದು ಪೂಜಿಸಲ್ಪಡುತ್ತಿದೆ. ಉಳಿದಂತೆ ಯಾವುದೇ ಪ್ರಾಚೀನ ಕುರುಹುಗಳು ಈ ಗ್ರಾಮದಲ್ಲಿ ಲಭ್ಯವಿಲ್ಲ. ಈ ಗ್ರಾಮದಲ್ಲಿ ಇದುವರೆಗೆ ಮೂರು ಶಾಸನಗಳು ಪತ್ತೆಯಾಗಿವೆ. ಅವುಗಳಲ್ಲಿ ಒಂದು ಸೋಮೇಶ್ವರ ದೇವಸ್ಥಾನದಲ್ಲಿರುವ ಕ್ರಿ.ಶ 1088ರ ಶಾಸನ ಸ್ಪಷ್ಟವಾಗಿದ್ದು ಓದಲು ಬರುತ್ತಿದೆ. ಉಳಿದೆರಡು ಶಾಸನಗಳು ಒಂದೆರಡು ಸಾಲಿನವುಗಳಾಗಿದ್ದು ಅಸ್ಪಷ್ಟವಾಗಿರುವ ಕಾರಣಕ್ಕಾಗಿ ಅವುಗಳಿಂದ ಯಾವುದೇ ಮಾಹಿತಿ ದೊರೆಯುವುದಿಲ್ಲ.
ಕ್ರಿ.ಶ. 1088ರ ಕಾಲದ ಈ ಶಾಸನವು ಆರನೇ ವಿಕ್ರಮಾದಿತ್ಯನ ಆಳ್ವಿಕೆಯ ಕಾಲದ್ದಾಗಿದೆ. ಕಾಮಕಾಯನ ಗೋತ್ರದ ನಾರಾಯಣ ಭಟ್ಟೋಪಾಧ್ಯಯನ ಮಗ ಚೌವೇದಿಭಟ್ಟನು ಪುಲಗಿ(ಹುಲಗಿ) ಎಂಬ ಪುರವನ್ನು ವಿಕ್ರಮಾದಿತ್ಯನಿಂದ ಪಡೆದು ತುಂಗಾಭದ್ರ ನದಿಯಿಂದ ಸೀಳುನಾಲೆಯೊಂದನ್ನು ತಂದಂತೆ ಹೇಳಿದೆ. ಇವನ ಪತ್ನಿ ಅಚ್ಚಿಕಬ್ಬೆ ಇದ್ದಳು. ಇವರಿಗೆ ನಾರಣಭಟ್ಟ, ದ್ರೋಣಭಟ್ಟ, ಸೋಮನಾಥ, ಮಾರಯ್ಯಭಟ್ಟ ಮತ್ತು ರುದ್ರಾದಿತ್ಯ ಎಂಬ ಐವರು ಮಕ್ಕಳಿದ್ದರು. ಅವರಲ್ಲಿ ಸೋಮನಾಥನು ರುದ್ರಸದ್ಮವನ್ನು(ಶಿವದೇವಾಲಯ) ಮಾಡಿಸಿದನೆಂದು ತಿಳಿಸುತ್ತದೆ. ಈ ಊರಿನ ಪೂರ್ವಕ್ಕೆ ರಿಷ್ಯಮೂಕಾಚಲ, ದಕ್ಷಿಣಕ್ಕೆ ಗಂಧಮಾಧವ, ಪಶ್ಚಿಮಕ್ಕೆ ತ್ರಿಕೂಟ, ಉತ್ತರಕ್ಕೆ ಕಿಷ್ಕಿಂದೆ ಪರ್ವತಗಳಿದ್ದವು. ಇವುಗಳ ಮಧ್ಯೆ ಇರುವ ಸುಂದರ ಪ್ರದೇಶದಲ್ಲಿ ಪುಲಿಗೆಯೂರಿನ ಒಡೆಯನಾದ ಸೋಮನಾಥನ ದೇವಾಲಯವನ್ನು ಮಾಡಿಸಿದನೆಂದಿದೆ. ಈ ಸೋಮನಾಥನ ಪತ್ನಿಯಾಗಿ ಮಂಚಿಕಬ್ಬೆ ಇದ್ದಳು. ಈ ದಂಪತಿಗಳಿಬ್ಬರೂ ಕೂಡಿ ತಾವು ಪ್ರತಿಷ್ಠಾಪನೆ ಮಾಡಿಸಿದ ಸೋಮೇಶ್ವರ ದೇವರಿಗೆ ಊರಿನ ಪೂರ್ವಕ್ಕೆ ಗುಯ್ಯಲ ತೋಟ, ಪರಿವೀರ ತೋಟವನ್ನು ಚತುಸ್ಸೀಮಾ ಸಮೇತವಾಗಿ ನೀಡುತ್ತಾರೆ. ಇದಲ್ಲದೆ ಮನೆಗಳನ್ನು ಭೃತ್ಯ ದಾಸಿವರ್ಗ ಸಹಿತವಾಗಿ ಧಾರಾಪೂರ್ವಕವಾಗಿ ನೀಡುತ್ತಾನೆಂದು ಈ ಶಾಸನದಲ್ಲಿ ವಿವರಿಸಿದೆ.ಈ ಮೇಲಿನ ಚಾರಿತ್ರಿಕ ಕುರುಹುಗಳನ್ನು ಗಮನಿಸಿದಾಗ ಕ್ರಿ.ಶ 10ನೇ ಶತಮಾನದಲ್ಲೇ ಈ ಗ್ರಾಮಕ್ಕೆ ಪುಲಗಿ(ಹುಲಗಿ) ಎಂದು ಕರೆಯಲಾಗುತ್ತಿತ್ತೆಂದು ಸ್ಪಷ್ಟವಾಗಿ ತಿಳಿದುಬರುತ್ತಿದೆ. ಇಲ್ಲಿ ಮತೊಂದು ಗಮನಿಸಬೇಕಾದ ಅಂಶವೆಂದರೆ ಈ ಗ್ರಾಮವನ್ನು ‘ಪುರ’ ಎಂದು ಉಲ್ಲೇಖಿಸಿರುವುದು. ಬಹುಶಃ ಆ ಕಾಲದಲ್ಲೇ ಇದು ಬಹುದೊಡ್ಡ ನಗರವಾಗಿರಬೇಕು. ಯಾಕೆಂದರೆ ನಗರಗಳಿಗೆ ಮಾತ್ರ ‘ಪುರ’ ಎಂದು ಕರೆಯಲಾಗುತ್ತಿತ್ತು ಎನ್ನುವುದು ಚರಿತ್ರೆಯಿಂದ ತಿಳಿದುಬರುತ್ತದೆ. ಹೀಗಾಗಿ ಪ್ರಾಚೀನ ಕಾಲದಲ್ಲಿ ಈ ಹುಲಿಗಿ ಗ್ರಾಮವು ಬಹುದೊಡ್ಡ ಪಟ್ಟಣವಾಗಿತ್ತೆಂದು ತಿಳಿದುಬರುತ್ತದೆ. ಹಿಂದೆ ಇದು ಜೈನ, ವೈಷ್ಣವ, ಶೈವ-ವೀರಶೈವ ಧರ್ಮಗಳ ಆಡಂಬೋಲವಾಗಿತ್ತು ಎನ್ನುವುದು ಇಲ್ಲಿನ ಕುರುಹುಗಳಿಂದ ಮಾಹಿತಿ ದೊರೆಯುತ್ತದೆ.

ಮುನಿರಾಬಾದ :
‘ಮುನಿರಾಬಾದ’ ಇದೊಂದು ಮುಸ್ಲಿಂ ಸಂಪ್ರದಾಯದ ಹೆಸರು. ದೇಶದಲ್ಲಿ ಹೈದರಾಬಾದ್, ಸಿಕಂದರಾಬಾದ್, ಮುಜಾಫರ್‌ಬಾದ್, ಅಹ್ಮದಾಬಾದ, ನಿಜಾಮಾಬಾದ್ ಮುಂತಾದ ಹೆಸರುಗಳು ಮುಸ್ಲಿಂ ಸಂಪ್ರದಾಯವಾಗಿ ಕರೆಸಿಕೊಳ್ಳುತ್ತಿರುವ ಊರುಗಳನ್ನು ಗುರುತಿಸಬಹುದಾಗಿದೆ. ಅವುಗಳಲ್ಲಿ ಕೆಲ ಹೆಸರುಗಳು ಬದಲಾವಣೆಯಾಗಿದ್ದರೆ ಇನ್ನು ಕೆಲವು ಹಾಗೆಯೇ ಉಳಿದುಕೊಂಡು ಬಂದಿವೆ. ಅರೇಬಿಕ್ ಭಾಷೆಯಲ್ಲಿ ಮುನಿಬ್, ಮುನಿಮ್ ಎಂದರೆ ವ್ಯವಸ್ಥಾಪಕ, ಗುಮಾಸ್ತ, ನಿರ್ವಾಹಕ ಎಂಬ ಅರ್ಥಗಳು ಬರುತ್ತವೆ. ಮುಸ್ಲಿಂ ಸಂಪ್ರದಾಯದಲ್ಲಿ ಹೆಂಗಸರಿಗೆ ‘ಮುನೀರಾ’ ಎಂದು ಮತ್ತು ಗಂಡಸರಿಗೆ ‘ಮುನಿರ್’ ಎಂದು ಹೆಸರು ಇಡಲಾಗುತ್ತದೆ. ಹುಲಗಿ ಮತ್ತು ಮುನಿರಾಬಾದ್ ಪ್ರದೇಶದಲ್ಲಿ ‘ಮುನೀರಾ’ ಎಂಬ ಮುಸ್ಲಿಂ ಸಮುದಾಯ ವಾಸವಾಗಿತ್ತೆಂದು ಹೇಳಲಾಗುತ್ತಿದೆ. ಅದಕ್ಕಾಗಿ ಈ ಗ್ರಾಮಾಕ್ಕೆ ‘ಮುನಿರಾಬಾದ’ ಎಂಬ ಗ್ರಾಮನಾಮ ಬಂದಿರಬಹುದೆಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಈ ‘ಮುನಿರಾಬಾದ’ ಗ್ರಾಮ ಮುಸ್ಲಿಂರ ತೆಕ್ಕೆಯಲ್ಲಿತ್ತೆಂಬುದು ತಿಳಿದುಬರುತ್ತದೆ. ಕ್ರಿ.ಶ 17-18ನೇ ಶತಮಾನದಲ್ಲಿ ಈ ಪ್ರದೇಶ ಹೈದ್ರಾಬಾದಿನ ನಿಜಾಮರ ಆಡಳಿತದಲ್ಲಿತ್ತು. ಹೀಗಾಗಿ ಈ ಗ್ರಾಮಕ್ಕೆ ತಮ್ಮ ಸಂಪ್ರದಾಯದ ಹೆಸರು ಇಟ್ಟಿರಬಹುದು. ಅದರ ಜೊತೆಗೆ ನಿಜಾಮರು ಈ ಗ್ರಾಮವನ್ನು ಆಡಳಿತ ಕೇಂದ್ರವನ್ನಾಗಿ ಮಾಡಿಕೊಂಡಿದ್ದರು. ಇಲ್ಲಿ ಮದ್ದು-ಗುಂಡುಗಳನ್ನು ಸಂಗ್ರಹಿಸಿಡುತ್ತಿದ್ದರು. ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧದ ಹೋರಾಟದಲ್ಲಿ ಆ ಮದ್ದುಗಳನ್ನು ಬಳಸಲಾಗುತ್ತಿತ್ತು. ಈ ಗ್ರಾಮದ ಸುತ್ತಲೂ ಬೆಟ್ಟ-ಗುಡ್ಡಗಳಿಂದ ಮತ್ತು ಅತ್ತ ತುಂಗಾಭದ್ರ ನದಿ ಇರುವುದರಿಂದ ಇಲ್ಲಿ ಬಂದೂಕು, ಮದ್ದು-ಗುಂಡುಗಳನ್ನು ಸಂಗ್ರಹಿಸುವುದು ಬಹಳ ಯೋಗ್ಯವಾದ ಸ್ಥಳವಾಗಿತ್ತು. ಕಳ್ಳಕಾಕರಿಂದ ಮುಖ್ಯವಾಗಿ ಸ್ವಾತಂತ್ರ್ಯ ಹೋರಾಟಗಾರರಿಂದಲೂ ಸಹ ಆ ಮದ್ದು-ಗುಂಡುಗಳನ್ನು ರಕ್ಷಿಸಬೇಕಾಗಿತ್ತು. ಯಾಕೆಂದರೆ ಸ್ವಾತಂತ್ರ್ಯ ಹೋರಾಟಗಾರರೂ ಸಹ ಇಂತಹ ಶಿಬಿರಗಳ ಮೇಲೆ ದಾಳಿಮಾಡಿ ಅವುಗಳನ್ನು ಕದ್ದೊಯ್ದು ತಮ್ಮ ಯುದ್ಧದಲ್ಲಿ ಬ್ರಿಟಿಷ್ ಮತ್ತು ನಿಜಾಮ ಸೈನ್ಯದ ವಿರುದ್ಧ ಬಳಸುತ್ತಿದ್ದರು. ಹೀಗಾಗಿಯೇ ಬೆಟ್ಟ-ಗುಡ್ಡಗಳ ಸಾಲಿನಲ್ಲಿ ಅವುಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಟ್ಟಿಕೊಂಡಿರುತ್ತಿದ್ದರು. ಅದರಂತೆ ಕುಷ್ಟಗಿ ತಾಲ್ಲೂಕಿನ ಮಾಲಗಿತ್ತಿ ಹತ್ತಿರವಿರುವ ವಾರಂಗಲ್ ಹತ್ತಿರದ ಬೆಟ್ಟದ ಸಾಲಿನಲ್ಲಿ ನಿಜಾಮರು ಮದ್ದು-ಗುಂಡುಗಳನ್ನು ತಯಾರಿಸುವುದು ಮತ್ತು ಅವುಗಳ ಸಂಗ್ರಹಣ ಕೇಂದ್ರವನ್ನಾಗಿ ಮಾಡಿಕೊಂಡಿದ್ದರೆಂದು ಮಾಹಿತಿ ಲಭ್ಯವಾಗಿತ್ತದೆ. ಹೀಗಾಗಿ ಈ ‘ಮುನಿರಾಬಾದ’ ಗ್ರಾಮವು ಚರಿತ್ರೆಯಲ್ಲಿ ಮುಸ್ಲಿಂ ಸಂಪ್ರದಾಯ ಹೆಸರಿನಲ್ಲಿ ಮತ್ತು ನಿಜಾಮರ ಆಡಳಿತ ಕೇಂದ್ರವಾಗಿ ಹಾಗೂ ಮದ್ದು-ಗುಂಡುಗಳ ಸಂಗ್ರಹಣ ಕೇಂದ್ರವಾಗಿ ಚರಿತ್ರೆಯಲ್ಲಿ ಬಹಳ ಮಹತ್ವ ಪಡೆದ ಗ್ರಾಮವಾಗಿತ್ತು.

ಮಲ್ಲಾಪುರ ಮತ್ತು ಹೊಳೆನಿಂಗಾಪುರ :
ವಾಸ್ತವದಲ್ಲಿ ‘ತುಂಗಾಭದ್ರ’ ಅಣೆಕಟ್ಟನ್ನು ಮದ್ರಾಸ್ ಪ್ರಾಂತ್ಯದ ಬಳ್ಳಾರಿ ಜಿಲ್ಲೆಯ ಮಲ್ಲಾಪುರ ಮತ್ತು ಹೈದ್ರಾಬಾದ್ ಪ್ರಾಂತ್ಯದ ರಾಯಚೂರು ಜಿಲ್ಲೆಯ ಹೊಳೆನಿಂಗಾಪುರ ಎಂಬ ಗ್ರಾಮಗಳ ಎರಡು ಗುಡ್ಡಗಳ ಸಾಲಿನಲ್ಲಿ ಕಟ್ಟಲಾಗಿದೆ. ಇಂದು ಆ ಎರಡೂ ಗ್ರಾಮಗಳು ಮುಳುಗಡೆಯಾಗಿದ್ದು, ಅಲ್ಲಿನ ಜನರನ್ನು ಸ್ಥಳಾಂತರಿಸಿ ಬೇರೆ-ಬೇರೆ ಗ್ರಾಮಗಳಿಗೆ ಕಳುಹಿಸಿ ವಸತಿ ಕಲ್ಪಿಸಲಾಗಿದೆ. ಮಲ್ಲಾಪುರವನ್ನು ಗಂಗಾವತಿ ತಾಲ್ಲೂಕಿನ ಆನೆಗುಂದಿ ಹತ್ತಿರದಲ್ಲಿ ಸ್ಥಳಾಂತರಿಸಲಾಗಿದ್ದರೆ, ಹೊಳೆನಿಂಗಾಪುರ ಗ್ರಾಮವನ್ನು ಇಂದಿನ ಅಣೆಕಟ್ಟಿನ ಮುಂಭಾಗದಲ್ಲಿನ ನದಿಯ ದಡದಲ್ಲಿ ಸ್ಥಳಾಂತರಿಸಲಾಗಿದೆ. ಈ ಹೊಳೆನಿಂಗಾಪುರದಿಂದಲೂ ಕೆಲ ಜನರು ಸ್ಥಳಾಂತರಗೊಂಡು ರಾಷ್ಟ್ರೀಯ ಹೆದ್ದಾರಿ ಮುಖ್ಯರಸ್ತೆಯಲ್ಲಿ ವಾಸಿಸುತ್ತಿದ್ದು ಅದಕ್ಕೆ ಹೊಸನಿಂಗಾಪುರ ಎಂದು ಕರೆಯಲಾಗುತ್ತಿದೆ. ಪ್ರಾಚೀನ ಕಾಲದಲ್ಲಿ ಮಲ್ಲಾಪುರ ಮತ್ತು ಹೊಳೆನಿಂಗಾಪುರ ಗ್ರಾಮಗಳು ಐತಿಹಾಸಿಕ ಗ್ರಾಮಗಳಾಗಿದ್ದವು. ಹೊಳೆನಿಂಗಾಪುರ ಜೈನ ಸಂಪ್ರಾದಾಯದ ಕೇಂದ್ರವಾಗಿತ್ತು. ಆದರೆ ಇಂದು ಎರಡೂ ಗ್ರಾಮಗಳು ಸಂಪೂರ್ಣ ಮುಳುಗಡೆಯಾಗಿದ್ದರಿಂದ ಅಲ್ಲಿ ಯಾವುದೇ ಸ್ಮಾರಕಗಳು ಅಥವಾ ಅವಶೇಷಗಳು ಕಂಡುಬರುವುದಿಲ್ಲ.ತುಂಗಾಭದ್ರ ಅಣೆಕಟ್ಟು ನಿರ್ಮಾಣ :
ಕ್ರಿ.ಶ 18 ಮತ್ತು 19ನೇ ಶತಮಾನದಲ್ಲಿ ಈ ಪ್ರದೇಶವನ್ನು ನಿಜಾಮರು ಮತ್ತು ಬ್ರಿಟಿಷ್ ಇಬ್ಬರೂ ಪರಸ್ಪರ ಹಂಚಿಕೆಯ ಆಧಾರದ ಮೇಲೆ ಆಡಳಿತ ಮಾಡುತ್ತಿದ್ದರು. ಒಂದರ್ಥದಲ್ಲಿ ದ್ವಿ-ಸರಕಾರ ಪದ್ಧತಿಯಂತಿದ್ದರೂ ಇಲ್ಲಿ ಹೇಳಿಕೊಳ್ಳುವಷ್ಟು ಅಭಿವೃದ್ಧಿ ಕಂಡುಬರುವುದಿಲ್ಲ. ಈ ಮೊದಲೇ ಹೆಚ್ಚಿನ ಪ್ರಮಾಣದಲ್ಲಿದ್ದ ಮಳೆಯು ಕಡಿಮೆಯಾಯಿತು. ನಂತರ ಮಳೆಯ ಪ್ರಮಾಣ ಕಡಿಮೆಯಾಗುತ್ತಾ ಅಲ್ಲಲ್ಲಿ ಬರಗಾಲ ಉಂಟಾಗುತ್ತದೆ. ನೀರಿನ ಮೂಲಗಳು ಕಡಿಮೆಯಾಯಿತು. ಬ್ರಿಟಿಷ್ ಇಸ್ಟ್ಇಂಡಿಯಾ ಕಂಪನಿಯ ಥಾಮಸ್ ಮನ್ರೋ ಅನಂತಪುರ ಜಿಲ್ಲೆಯನ್ನು ಒಡೆದು ಅದರ ಭಾಗವಾದ ಬಳ್ಳಾರಿ ಜಿಲ್ಲೆಯನ್ನು ಹೈದ್ರಾಬಾದ ನಿಜಾಮನಿಂದ ಕಿತ್ತುಕೊಂಡು ತಮ್ಮ ಅಧೀನದಲ್ಲಿದ್ದ ಮದ್ರಾಸ್ ಪ್ರಾಂತ್ಯಕ್ಕೆ ಸೇರಿಸಿಕೊಂಡನು. ಕ್ರಿ.ಶ 1882ರಲ್ಲಿ ಹಂಡೆ ಪಾಳೆಗಾರರ ಆಡಳಿತ ಕೊನೆಗೊಂಡಿತು. ರೈತವಾರಿ ಭೂಕಂದಾಯ ಪದ್ಧತಿ ಜಾರಿಗೆ ತಂದನು. 1876ರಲ್ಲಿ ಬೀಕರ ಬರಗಾಲ ಉಂಟಾಯಿತು. ಬಳ್ಳಾರಿ, ರಾಯಚೂರು ಪ್ರದೇಶ ಮಳೆಯಾಧಾರಿತವಾಗಿ ನಾಡು ಸಮೃದ್ಧವಾಗಿತ್ತು. ಮಳೆಯ ಪ್ರಮಾಣದಲ್ಲಿ ಏರಿಳಿತ ಉಂಟಾಗಿ ಬರಗಾಲ ಹೆಚ್ಚಾಗುತ್ತಾ ಹೋಯಿತು. ಮನೆಯಲ್ಲಿ ಆಹಾರ ಧಾನ್ಯಗಳ ಕೊರತೆಯುಂಟಾಯಿತು. ಅಂಗಡಿಯಲ್ಲಿಯೂ ಸಹ ಧಾನ್ಯಗಳ ಕೊರತೆಯುಂಟಾಗಿ ದನ-ಕರುಗಳಿಗೂ ನೀರಿಲ್ಲದ ಸ್ಥಿತಿ ನಿರ್ಮಾಣವಾಯಿತು. ಒಂದು ಅಂದಾಜಿನ ಪ್ರಕಾರ ಐವತ್ತು ಲಕ್ಷಕ್ಕೂ ಅಧಿಕ ಜನ ಬಲಿಯಾದರು ಎಂದು ಹೇಳಲಾಗುತ್ತಿದೆ. ಸತ್ತ ಹೆಣಗಳನ್ನು ಶವಸಂಸ್ಕಾರ ಮಾಡಲಾಗದ ಸ್ಥಿತಿ ಉಂಟಾಯಿತು. ಇದರಿಂದಾಗಿ ಕಾಲರ, ಪ್ಲೇಗ್‌ದಂತಹ ಮಾರಕ ರೋಗಗಳು ಉಲ್ಭಣಗೊಂಡವು. ಸತ್ತ ಹೆಣಗಳನ್ನು ನಾಯಿ ನರಿಗಳು ತಿಂದುಹೋದವು. ಬ್ರಿಟಿಷ್ ಸರಕಾರ ಇಲ್ಲಿನ ಜನರ ಬವಣೆ ನೀಗಿಸಿ ಬದುಕನ್ನು ಹಸನಾಗಿಸಬೇಕು, ನೆಲ ಹಸಿರಾಗಿಸಬೇಕು ಎಂಬ ಆಲೋಚನೆಯೊಂದಿಗೆ ಹಲವು ಯೋಜನೆಗಳನ್ನು ರೂಪಿಸಿದರು. ಬರಕ್ಕೆ ಖರ್ಚು ಮಾಡುವ ಹಣದಲ್ಲಿ ಅಣೆಕಟ್ಟುಗಳನ್ನು ಕಟ್ಟಿ ಶಾಶ್ವತ ಕಾಲುವೆ ನಿರ್ಮಿಸಿ ಪರಿಹಾರ ಮಾಡಬೇಕೆಂದು ಆಲೋಚಿಸಿದರು. ಹಾಗಾಗಿ ಬ್ರಿಟಿಷ್ ಸರಕಾರಗಳು ಅಲ್ಲಲ್ಲಿ ಅಣೆಕಟ್ಟುಗಳನ್ನು ಕಟ್ಟಿ ಜನರಿಗೆ ಅನುಕೂಲ ಮಾಡಬೇಕೆಂಬ ಯೋಜನೆಗಳನ್ನು ರೂಪಿಸುವ ಕಾರ್ಯದಲ್ಲಿ ತೊಡಗಿದರು.
ಅದರಂತೆ 1902ರಲ್ಲಿ ಮದ್ರಾಸ್ ಸರಕಾರದ ಮುಖ್ಯ ಎಂಜಿನಿಯರ್ ಆಗಿದ್ದ ಕರ್ನಲ್ ಸ್ಮಾರ್ಟ್ ತುಂಗಾಭದ್ರಾ ಅಣೆಕಟ್ಟಿನ ನಿರ್ಮಾಣಕ್ಕಾಗಿ ವಿವರವಾದ ವರದಿಯನ್ನು ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿದರು. ನಂತರ ಬಂದ ಮೆಕೆಂಜಿಯವರು ಮಲ್ಲಾಪುರ ಮತ್ತು ಹೊಳೆನಿಂಗಾಪುರ ಗ್ರಾಮಗಳ ಎರಡು ಗುಡ್ಡಗಳ ನಡುವೆ ಅಣೆಕಟ್ಟನ್ನು ಕಟ್ಟಬಹುದೆಂದು ಸಲಹೆ ನೀಡಿದರು. ಆಗ ಹೈದರಾಬಾದಿನ ನಿಜಾಮನು ನದಿಯ ಮೇಲೆ ನಮಗೂ ಹಕ್ಕಿದೆ ಎಂದು ಹಕ್ಕೊತ್ತಾಯ ಮಾಡಿದರು. ಇದಲ್ಲದೇ ಮುಂಬೈ ಪ್ರಾಂತ್ಯ, ಮೈಸೂರು ಪ್ರಾಂತ್ಯ ಮತ್ತು ಮದ್ರಾಸ ಪ್ರಾಂತ್ಯಗಳೂ ಸಹ ತಮ್ಮ-ತಮ್ಮ ಹಿತಾಸಕ್ತಿಗನುಗುಣವಾಗಿ ಅಣೆಕಟ್ಟು ನಿರ್ಮಿಸುವ ಪ್ರಸ್ತಾವನೆಯನ್ನು ಸಲ್ಲಿಸಿದ್ದರಿಂದ ಯೋಜನೆ ನೆನಗುದಿಗೆ ಬಿದ್ದಿತು. ಮದ್ರಾಸ್ ಪ್ರಾಂತ್ಯವು ಆಗಿನ ಮುಖ್ಯ ಇಂಜಿನಿಯರ್ ತಿರುಮಲೆ ಅಯ್ಯರ್‌ರವರಿಗೆ ಒಂದು ವಸ್ತುನಿಷ್ಠ ಯೋಜನೆ ತಯಾರಿಸಲು ನೇಮಿಸಲಾಯಿತು. ಹೈದರಾಬಾದಿನ ನಿಜಾಮರೂ ಸಹ ಸಿ.ಸಿ.ದಲಾಲ್ ಎಂಬ ಎಂಜಿನಿಯರ್‌ಗೆ ಒಂದು ಪ್ರತ್ಯೇಕ ವರದಿ ತಯಾರಿಸಲು ನೇಮಿಸಿದರು. ಈ ಎರಡೂ ವರದಿಗಳನ್ನು ಪರಿಶೀಲಿಸಿದ ಮದ್ರಾಸ ಪ್ರಾಂತ್ಯದ ಸರಕಾರ 1942ರಲ್ಲಿ ತಿರುಮಲೆ ಅಯ್ಯರ್ ವರದಿಯನ್ನೇ ಅಂತಿಮಗೊಳಿಸಿ ಅನುಮೋದನೆ ನೀಡಿತು. ಸುಮಾರು ನಲವತೈದು ವರ್ಷಗಳ ಸುದೀರ್ಘ ಚರ್ಚೆ, ವಾದ, ವಿವಾದಗಳ ನಂತರ 1945ರ ಫೆಬ್ರುವರಿ 28ರಂದು ಮದ್ರಾಸ್ ಪ್ರಾಂತೀಯ ಗೌವರ್ನರ್ ಆಗಿದ್ದ ಸರ್ ಅರ್ಥರ್ ಹೋಪ್ ಅಡಿಗಲ್ಲು ಹಾಕಿ ಯೋಜನೆಯನ್ನು ಪ್ರಾರಂಭಿಸಿದರು.
ಅದರಂತೆ ಮುನಿರಾಬಾದ ಗ್ರಾಮದ ಹತ್ತಿರವಿರುವ ಬೆಟ್ಟಗಳ ಸಾಲಿನಲ್ಲಿ ಒಂದು ಅಣೆಕಟ್ಟು ಕಟ್ಟಲು ಪ್ರಾರಂಭಿಸಿದರು. ಆಗ ದೇಶಕ್ಕೆ ಸ್ವಾತಂತ್ರ್ಯ ಬಂದ ಕಾರಣ ಮತ್ತು ಹಣದ ಹಂಚಿಕೆ ಹಾಗೂ ಕೊರತೆಯ ಕಾರಣದಿಂದ ಯೋಜನೆ ಕುಂಟುತ್ತಾ ಸಾಗಿತು. ಒಟ್ಟಿನಲ್ಲಿ ಆಂಧ್ರಪ್ರದೇಶ ಮತ್ತು ಕರ್ನಾಟಕ ಎರಡೂ ರಾಜ್ಯಗಳ ಹಣದ ಹಂಚಿಕೆಯ ಮೇಲೆ ಅಣೆಕಟ್ಟಿನ ನಿರ್ಮಾಣದ ಕಾರ್ಯ ಸಾಗಿತು. ಈ ಅಣೆಕಟ್ಟು ಕಟ್ಟಲು ಮದ್ರಾಸ ಪ್ರಾಂತದ ಇಂಜಿನಿಯರಿಗಳೇ ಹೆಚ್ಚಿದ್ದರು. ಮುಖ್ಯವಾಗಿ ಈ ಯೋಜನೆ ಪೂರ್ಣಗೊಳಿಸಲು ತಿರುಮಲೆ ಅಯ್ಯರಗೆ ಜವಾಬ್ಧಾರಿ ನೀಡಲಾಗಿತ್ತು. ಇದರ ಜೊತೆಗೆ ಈ ಅಣೆಕಟ್ಟು ನಿಮಾರ್ಣಕ್ಕೆ ಆಂಧ್ರಪ್ರದೇಶ ಮತ್ತು ಮುಖ್ಯವಾಗಿ ತಮಿಳುನಾಡು ರಾಜ್ಯಗಳಿಂದ ಕಾರ್ಮಿಕರನ್ನು ಕರೆಸಲಾಗಿತ್ತು. ಜೊತೆಗೆ ತಂತ್ರಜ್ಞರು, ಇಂಜಿನೀರ‍್ಸ್ಗಳನ್ನು ಕರೆಸಲಾಗಿತ್ತು. ಒಟ್ಟಾರೆ ಅಡೆ-ತಡೆಗಳು ಮತ್ತು ವಾದ-ವಿವಾದಗಳ ನಡುವೆಯೇ ಅಣೆಕಟ್ಟು ಪೂರ್ಣಗೊಂಡು 1953ರ ಜುಲೈ 1ರಂದು ಪ್ರಪ್ರಥಮವಾಗಿ ಕಾಲುವೆಗೆ ನೀರು ಹರಿಸಲಾಯಿತು.ರೇಲ್ವೆ ನಿಲ್ದಾಣ ಸ್ಥಾಪನೆ : ಬ್ರಿಟಿಷ್ ಅವಧಿಯಲ್ಲಿ ಮುಂಬೈ ಪ್ರಾಂತ್ಯದ ಬಳ್ಳಾರಿ ಮತ್ತು ಮದ್ರಾಸ್ ಪ್ರಾಂತ್ಯದ ಗದಗದವರೆಗೆ ಮಾತ್ರ ರೈಲು ಸಂಪರ್ಕವಿತ್ತು. ಗದಗದಿಂದ ಬಳ್ಳಾರಿಗೆ ಸಂಪರ್ಕಿಸುವ ರೈಲಿನ ಯಾವುದೇ ವ್ಯವಸ್ಥೆ ಇರಲಿಲ್ಲ. ಆಗ ಮುಖ್ಯವಾಗಿ ಸರಕು ಸಾಗಾಣಿಕೆಯು ತುಂಬಾ ತೊಂದರೆಯಾಯಿತು. ಮುಂಬೈ ಪ್ರಾಂತ್ಯದಿಂದ ಮದ್ರಾಸ್ ಪ್ರಾಂತ್ಯಕ್ಕೆ ಮತ್ತು ಮದ್ರಾಸ್ ಪ್ರಾಂತ್ಯದಿಂದ ಮುಂಬೈ ಪ್ರಾಂತ್ಯಕ್ಕೆ ಸರಕು ಸಾಗಾಣಿಕೆಯ ವ್ಯವಸ್ಥೆ ಅಗತ್ಯವಾಗಿತ್ತು. ಹೀಗಾಗಿ ಗದಗ ಮತ್ತು ಬಳ್ಳಾರಿಯ ಮಧ್ಯೆ ರೈಲು ಸಂಪರ್ಕ ಕಲ್ಪಿಸಿ ಮದ್ರಾಸ್ ಮತ್ತು ಮುಂಬೈ ಪ್ರಾಂತ್ಯ ಎರಡನ್ನೂ ಕಲ್ಪಿಸುವ ಅವಶ್ಯಕತೆ ತೀರಾ ಇತ್ತು. ಹೈದರಾಬಾದಿನ ನಿಜಾಮನು ಕೊಪ್ಪಳ ವಿಭಾಗವನ್ನು ‘ಸಾಲರಜಂಗ ಬಹದ್ದೂರ’ ಎಂಬ ಬಿರುದಾಂಕಿತ ಮೀರ ತುರಾಬ ಅಲೀಖಾನ ಬಹದ್ದೂರ(1829-1883) ಇವನಿಗೆ ಕೊಪ್ಪಳದ ಜಾಹಗೀರ್ ಆಗಿ ನೇಮಿಸಿದ್ದನು. ಇವನನ್ನು ಒಂದನೇ ಸಾಲರಜಂಗ್ ಬಹದ್ದೂರು ಎಂತಲೂ ಕರೆಯಲಾಗುತ್ತದೆ. ಇವನ ತರುವಾಯ ಇವನ ಹಿರಿಯ ಮಗ ನವಾಬ ಮೀರಲಾಯಕ ಅಲೀಖಾನನು(1862ರಲ್ಲಿ ಜನನ) ಕೊಪ್ಪಳ ಜಾಹಗೀರ್ ಆಗಿ ನೇಮಕವಾದನು. ಇವನನ್ನು 2ನೇ ಸಾಲರ್‌ಜಂಗ್ ಎಂದು ಕರೆಯಲಾತ್ತಿತ್ತು. ಗದಗ ಮತ್ತು ಬಳ್ಳಾರಿಯ ಮಧ್ಯೆ ರೈಲು ಮಾರ್ಗ ಸಂಪರ್ಕದ ಕೆಲಸದಲ್ಲಿ ಹೈದರಾಬಾದಿನ ನಿಜಾಮರ ಮತ್ತು ಸಾಲರಜಂಗ್‌ನ ಅವಶ್ಯಕತೆ ಬಹಳ ಇತ್ತು. ಹೀಗಾಗಿ ಬ್ರಿಟಿಷ್ ಸರಕಾರ ಕೊಪ್ಪಳ ಜಾಹಗೀರ ಅಧಿಕಾರಿ ಸಾಲರಜಂಗ್‌ನ ಸಹಾಯ ಬೇಡಿದರು. ಸಾಲರ ಜಂಗನಿಗೂ ಸರಕು ಸಾಕಾಣಿಕೆಯ ಅವಶ್ಯಕತೆಗಾಗಿ ರೈಲಿನ ಸಂಪರ್ಕ ಬೇಕಾಗಿತ್ತು. ಜೊತೆಗೆ ಅವರ ಮಿಲ್‌ಗಳಿಗೆ ಸರಕುಗಳು ಮತ್ತು ತಯಾರಿಸಿದ ವಸ್ತುಗಳ ಸಾಕಾಣಿಕೆಗಾಗಿ ಅದು ಅಗತ್ಯವಾಗಿ ಬೇಕಾಗಿತ್ತು. ಮುಖ್ಯವಾಗಿ ಹುಲಗಿ ಸುತ್ತಲಿನಲ್ಲಿದ್ದ ತಮ್ಮ ಕಂಪನಿಗಳಿಗೆ ಸಂಪರ್ಕದ ಅವಶ್ಯಕತೆಗಾಗಿ ಹುಲಗಿಯಲ್ಲಿ ನಿಲ್ದಾಣದ ವ್ಯವಸ್ಥೆ ಮಾಡಿದನು. 2ನೇ ಸಾಲರಜಂಗ್‌ನ ಅವಧಿಯಲ್ಲಿ ಕೊಪ್ಪಳ ತಾಲ್ಲೂಕು ಅಧಿಕಾರಿಯಾಗಿ ನರಸಿಂಗರಾಯರು ಕಾರ್ಯನಿರ್ವಹಿಸುತ್ತಿದ್ದರು. ಈ ನರಸಿಂಗರಾಯರ ಅವಧಿಯಲ್ಲೇ ಕೊಪ್ಪಳದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳಾಗಿವೆ. ಕೊಪ್ಪಳದ ನಕಾಶೆಯನ್ನು ಮೊದಲಿಗೆ ತಯಾರಿಸಿ ಅದಕ್ಕೆ ಒಂದು ರೂಪ ಕೊಟ್ಟು ನಗರವನ್ನಾಗಿಸಿದನು. ಪಾಠಶಾಲೆ, ಧರ್ಮಶಾಲೆಗಳನ್ನು ಕಟ್ಟಿದನು. ಅನೇಕ ಮಸೀದಿ, ಮಂದಿರಗಳನ್ನು ನಿರ್ಮಿಸಿದನು. ಊರಿನ ಸುತ್ತಲೂ ನಾಲ್ಕು ಅಗಸಿಗಳನ್ನು ನಿರ್ಮಿಸಿ ಈ ನಗರಕ್ಕೆ ರಕ್ಷಾಕವಚ ನಿರ್ಮಿಸಿದನು. ಕೊಪ್ಪಳ ಜನತೆಗೆ ಕುಡಿಯುವ ನೀರಿಗಾಗಿ ಹುಲಿಕೆರೆಯನ್ನು ಕಟ್ಟಿ ಮನೆ-ಮನೆಗೆ ನೀರು ಸರಬರಾಜಿನ ವ್ಯವಸ್ಥೆ ಕಲ್ಪಿಸಿದನು. ಇಂತಹ ಕ್ರಿಯಾಶೀಲ ವ್ಯಕ್ತಿಯ ಅವಧಿಯಲ್ಲೇ (ಸುಮಾರು 1860ರಿಂದ 1870) ಗದಗದಿಂದ ಬಳ್ಳಾರಿಗೆ ರೈಲು ಸಂಪರ್ಕ ಕಲ್ಪಿಸುವ ಮಾರ್ಗ ನಿರ್ಮಿಸಿದನು. ಇದೇ ಸಂದರ್ಭದಲ್ಲೇ ಪುರಾತನ ಕಾಲಕ್ಕೆ ಇದ್ದ ‘ಹುಲಿಗಿ’ ಎಂಬ ಗ್ರಾಮ ನಾಮವನ್ನು ಬದಲಿಸಿ ಮುನಿರಾಬಾದ, ಮುನಿರಾಬಾದ್ ಆರ್. ಎಸ್(ಮುನಿರಾಬಾದ ರೇಲ್ವೇ ಸ್ಟೇಷನ್) ಎಂಬ ಹೆಸರಿನಿಂದ ರೇಲ್ವೆ ನಿಲ್ದಾಣವನ್ನು ನಿರ್ಮಿಸಿಲಾಯಿತು. ಅಂದಿನಿಂದ ಮೂಲದಲ್ಲಿದ್ದ ‘ಹುಲಿಗಿ’ ಗ್ರಾಮವು ‘ಮುನಿರಬಾದ್’ ಮತ್ತು ‘ಮುನಿರಾಬಾದ್.ಆರ್.ಎಸ್’ ಆಗಿ ಹೆಸರು ಬದಲಾವಣೆಯಾಯಿತು. ತುಂಗಭದ್ರಾ ಅಣೆಕಟ್ಟು ಕಟ್ಟಿ ಪೂರ್ಣಗೊಂಡು, ಬ್ರಿಟಿಷರು ಮರಳಿ ಹೋಗಿ, ನಿಜಾಮರ ಆಡಳಿತ ಕೊನೆಗೊಂಡು ಸುಮಾರು ಎಂಬತ್ತು ವರ್ಷಗಳೇ ಗತಿಸಿಹೋಗಿವೆ. ಮುನಿರಾಬಾದನಿಂದ ಹುಲಿಗಿ ಪ್ರತ್ಯೇಕವಾಗಿ ಎಷ್ಟೋ ವರ್ಷಗಳು ಕಳೆದುಹೋಗಿವೆ. ಆದರೆ, ಇಂದಿಗೂ ರೇಲ್ವೆ ನಿಲ್ದಾಣ, ಅಂಚೆ ಕಚೇರಿಗಳಲ್ಲಿ ಮುನಿರಾಬಾದ್ ಎಂಬ ಹೆಸರು ರಾರಾಜಿಸುತ್ತಿದೆ. ಇಂದು ಹುಲಿಗೆ ಗ್ರಾಮಕ್ಕೆ ಸ್ವತಂತ್ರ್ಯ ಐಡೆಂಟಿಟಿ ಕೊಡದಿರುವುದು ಒಂದು ಖೇಧದ ಸಂಗತಿಯೇ ಆಗಿದೆ.

–ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್
ಕನ್ನಡ ಉಪನ್ಯಾಸಕರು, ಕೊಪ್ಪಳ
ಮೊ.ಸಂ: 9448570340

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!