December 22, 2024

AKSHARA KRAANTI

AKSHARA KRAANTI




ಗಾಂಧೀಜಿ ತತ್ವದಡಿಯಲ್ಲಿ ಕಾಮನೂರು ಗ್ರಾಮ

ಗಾಂಧೀಜಿ ತತ್ವದಡಿಯಲ್ಲಿ ಕಾಮನೂರು ಗ್ರಾಮ

(ದಿ. 02-10-2024 ರಂದು ಗಾಂಧಿ ಜಯಂತಿ ಅಂಗವಾಗಿ ಶಿಕ್ಷಕರ ಬಳಗದಿಂದ ದುಶ್ಚಟ ಮುಕ್ತ ಕಾಮನೂರು ಗ್ರಾಮಕ್ಕೆ ನಡಿಗೆ ನಿಮಿತ್ಯ ವಿಶೇಷ ಲೇಖನ)

ನಮ್ಮ ಭಾರತ ಮಾತ್ರವಲ್ಲದೇ ಪ್ರಪಂಚದ ಬೇರೆ-ಬೇರೆ ದೇಶಗಳಲ್ಲಿಯೂ ಸಹ ಬುದ್ಧ, ಬಸವ, ಅಂಬೇಡ್ಕರ್ ಮಹಾತ್ಮಗಾಂಧೀಜಿ ಯವರ ತತ್ವ-ಸಿದ್ಧಾಂತಗಳ ಮೇಲೆ ಬದುಕುತ್ತಿದ್ದಾರೆ. ಇಡೀ ವಿಶ್ವವೇ ಅನುಸರಿಸುವ ಇಂತಹ ಮಹಾತ್ಮರು ನಮ್ಮ ದೇಶದಲ್ಲಿ ಹುಟ್ಟಿ ಇತರೆ ರಾಷ್ಟ್ರಗಳಿಗೂ ಮಾದರಿಯಾದದ್ದು ಭಾರತೀಯರಾದ ನಮಗೆ ಹೆಮ್ಮೆ ಪಡಲೇಬೇಕಾದ ಸಂಗತಿಯಿದು. ವಿಶೇಷವಾಗಿ ಗಾಂಧೀಜಿಯವರ ಸತ್ಯ, ಅಹಿಂಸೆ, ಶಿಸ್ತು, ಸರಳ ಜೀವನ, ಸಮಾನತೆ, ಸ್ವಾವಲಂಬನೆಯ ತತ್ವಗಳ ಅಡಿಯಲ್ಲಿ ಅನೇಕರು ಜೀವನ ನಡೆಸುತ್ತಿದ್ದಾರೆ. ಇವು ಕೇವಲ ಒಬ್ಬ ವ್ಯಕ್ತಿ ಅಥವಾ ಕೆಲವೇ ಸಮುದಾಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಇಡೀ ಗ್ರಾಮವೇ ಅವರ ತತ್ವ-ಸಿದ್ಧಾಂತಗಳಲ್ಲಿ ಬಾಳುತ್ತಿರುವ ಅನೇಕ ಗ್ರಾಮಗಳನ್ನು ನಾವು ಕಾಣಬಹುದಾಗಿದೆ.
ಗಾಂಧೀಜಿ ಬಾಪು, ರಾಷ್ಟ್ರಪಿತ, ಮಹಾತ್ಮ ಹೀಗೆ ಎಲ್ಲವೂ ಹೌದು. ಅವರ ತ್ಯಾಗ, ಅಹಿಂಸೆ, ಸರಳ ಜೀವನಗಳನ್ನು ಕಂಡ ಅನೇಕರು ಅವರ ತತ್ವಗಳಡಿಯಲ್ಲೇ ಬದುಕಬೇಕೆಂದು ನಿರ್ಧರಿಸಿದವರಿದ್ದಾರೆ. ಆ ತತ್ವಗಳಡಿಯಲ್ಲಿ ಬದುಕುತ್ತಿರುವ ವ್ಯಕ್ತಿ, ಸಮುದಾಯ, ಸಂಘ-ಸಂಸ್ಥೆ, ಗ್ರಾಮಗಳೂ ಸಹ ಇವೆ. ಗಾಂಧೀಜಿಯ ಈ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕುತ್ತಿರುವ ಕೋಟ್ಯಾನು ಕೋಟಿ ಜನ, ಸಾವಿರಾರು ಗ್ರಾಮಗಳು ನಮ್ಮ ದೇಶದಲ್ಲಷ್ಟೇ ಅಲ್ಲ ಪ್ರಪಂಚದ ಇತರೆ ದೇಶಗಳಲ್ಲಿ ನಮಗೆ ಕಾಣಸಿಗುತ್ತವೆ. ಅದೇ ಮಾದರಿಯಲ್ಲಿ ಅಂದರೆ ಗಾಂಧೀಜಿಯವರ ತತ್ವ-ಸಿದ್ಧಾಂತಗಳಲ್ಲಿ ಕೆಲವನ್ನಾದರೂ ಮಾದರಿಯನ್ನಾಗಿಟ್ಟುಕೊಂಡು ಸಾಗುತ್ತಿರುವ ‘ಕಾಮನೂರು’ ಎಂಬ ಗ್ರಾಮವನ್ನೂ ಆ ಸಾಲಿಗೆ ಸೇರಿಸಬಹುದೇನೋ ಅನಿಸುತ್ತಿದೆ.‘ಕಾಮನೂರು’ ಗ್ರಾಮವು ಕೊಪ್ಪಳ ತಾಲ್ಲೂಕು ಕೇಂದ್ರದಿಂದ ಸುಮಾರು 15 ಕಿ.ಮೀ ದೂರದಲ್ಲಿದೆ. ಈ ಗ್ರಾಮದಲ್ಲಿ ಶಾಸನ, ಪುರಾತನ ದೇವಸ್ಥಾನ ಅಥವಾ ಯಾವುದೇ ಪುರಾತನ ಸ್ಮಾರಕಗಳು ಲಭ್ಯವಿಲ್ಲ. ಆದ್ದರಿಂದ ಈ ಗ್ರಾಮದ ಪ್ರಾಚೀನ ಚರಿತ್ರೆ ತಿಳಿದುಬರುವುದಿಲ್ಲ. ಅಲ್ಲದೇ ಇಂದಿನ ವಾಸದ ಈ ಕಾಮನೂರು ಗ್ರಾಮವು ಪುರಾತನದ್ದಲ್ಲ, ಸ್ಥಳಾಂತರಗೊಂಡ ಗ್ರಾಮವಾಗಿದೆ. ಹೀಗಾಗಿ ಈ ಗ್ರಾಮದಲ್ಲಿ ಯಾವುದೇ ಪುರಾತನ ಸ್ಮಾರಕಗಳು ಇಲ್ಲವೇ ಇನ್ಯಾವುದೋ ಕುರುಹುಗಳು ಕಂಡುಬರುವುದಿಲ್ಲ. ಸುಮಾರು ಎರಡುನೂರು ವರ್ಷಗಳಷ್ಟು ಹಳೆಯದಾದ ಕಲ್ಲೇಶ್ವರ ಅಥವಾ ಕಲ್ಲಿನಾಥ ದೇವಸ್ಥಾನ, ಮತ್ತೊಂದು ದ್ಯಾಮವ್ವ ದೇವಸ್ಥಾನಗಳಿವೆ. ಅವು ಕಳೆದ 60-70 ವರ್ಷಗಳ ಹಿಂದೆ ಜೀರ್ಣೋದ್ಧಾರಗೊಂಡವುಗಳಾಗಿವೆ. ಹೀಗಾಗಿ ಇವುಗಳಿಂದಲೂ ಸಹ ಹೆಚ್ಚಿನ ಮಾಹಿತಿ ಲಭ್ಯವಾಗುವುದಿಲ್ಲ. ಇಷ್ಟನ್ನು ಹೊರತುಪಡಿಸಿ ಈ ಗ್ರಾಮದಲ್ಲಿ ಯಾವುದೇ ಸ್ಮಾರಕಗಳು ಲಭ್ಯವಿಲ್ಲ.

ಮೂಲದ ಕಾಮನೂರು ಗ್ರಾಮವು ಇಂದು ವಾಸವಿರುವ ಪ್ರದೇಶದಿಂದ ಸುಮಾರು 2-3 ಕಿ.ಮೀ ದೂರದಲ್ಲಿದೆ. ಆ ಗ್ರಾಮಕ್ಕೆ ಇಂದು ‘ಚಿಕ್ಕಕಾಮನೂರು’ ಎಂದು ಕರೆಯಲಾಗುತ್ತಿದೆ. ಪ್ರಾಚೀನ ಕಾಲದಲ್ಲಿ ಇಲ್ಲಿಯೇ ಜನವಸತಿ ಇತ್ತೆಂದು ಹೇಳಲಾಗುತ್ತಿದೆ. ಆದರೆ ವಾಸ್ತವದಲ್ಲಿ ಇಂದು ಈ ಗ್ರಾಮದಲ್ಲಿ ಯಾವುದೇ ಜನವಸತಿ ಇರುವುದಿಲ್ಲ. ಎರಡು ಪುರಾತನ ದೇವಸ್ಥಾನಗಳು ಮಾತ್ರ ಉಳಿದಿವೆ. ಒಂದು ಹಾಳೂರು ಹನುಮಪ್ಪ ಅಥವಾ ಚಿಕ್ಕಕಾಮನೂರು ಹನುಮಪ್ಪ ಎಂದು ಕರೆದರೆ, ಮತ್ತೊಂದಕ್ಕೆ ಬಸವಣ್ಣನ ದೇವಸ್ಥಾನ ಎಂದು ಕರೆಯಲಾಗುತ್ತಿದೆ. ಈ ದೇವಾಸ್ಥಾನಗಳು ಸುಮಾರು ಮೂರುನೂರು ವರ್ಷಗಳ ಹಿಂದೆ ನಿರ್ಮಾಣವಾಗಿರಬಹುದೆಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಶಿಥಿಲಾವಸ್ಥೆಯಲ್ಲಿರುವ ಆ ಎರಡೂ ದೇವಸ್ಥಾನಗಳು ಇಂದಿಗೂ ಪೂಜಿಸಲ್ಪಡುತ್ತಿವೆ. ಇಷ್ಟನ್ನು ಹೊರತುಪಡಿಸಿ ಇಲ್ಲಿಯೂ ಸಹ ಯಾವುದೇ ಕುರುಹುಗಳು ದೊರೆಯುವುದಿಲ್ಲ. ಇಂದು ಆ ಬಯಲು ಪ್ರದೇಶವನ್ನು ಗಮನಿಸಿದರೆ ಇಲ್ಲಿ ಒಂದು ಊರು ಇತ್ತೋ ಎಂಬ ಪ್ರಶ್ನೆ ಮೂಡುತ್ತದೆ. ಯಾಕೆಂದರೆ ಅಷ್ಟು ಪ್ರಮಾಣದಲ್ಲಿ ಈ ಪ್ರದೇಶ ಬಯಲಾಗಿದೆ. ಅಲ್ಲದೆ ಆ ಪ್ರದೇಶದಲ್ಲಿ ಇಂದು ಹೊಲ, ಗದ್ದೆ, ತೋಟಗಳನ್ನು ಮಾಡಿಕೊಂಡು ಇದೇ ಗ್ರಾಮದವರು ಕೃಷಿ ಮಾಡುತ್ತಿದ್ದಾರೆ. ಇದರ ಹತ್ತಿರದಲ್ಲೇ ಗುಡ್ಡಗಾಡು, ಅರಣ್ಯ ಪ್ರದೇಶವಿದೆ.ಹಾಗಾದರೆ ಪುರಾತನ ‘ಚಿಕ್ಕಕಾಮನೂರು’ನಿಂದ ಇಂದಿನ ‘ಕಾಮನೂರು’ ಗ್ರಾಮಕ್ಕೆ ಏಕೆ ಸ್ಥಳಾಂತರಗೊಂಡಿತು ಎಂಬ ಬಗ್ಗೆ ನಿಖರ ಮಾಹಿತಿ ದೊರೆಯುವುದಿಲ್ಲ. ಇಲ್ಲಿನ ಕೆಲ ಸ್ಥಳಿಕರು ತಮ್ಮದೇ ಆದ ರೀತಿಯಲ್ಲಿ ಅಭಿಪ್ರಾಯ ಪಡುತ್ತಾರೆ. ಮೂಲದಲ್ಲಿದ್ದ ಕಾಮನೂರು ಗ್ರಾಮದಲ್ಲಿ ರಜಾಕಾರರ ಹಾವಳಿ ಹೆಚ್ಚಾಗಿತ್ತು. ಆಗಾಗ ಆ ಚಿಕ್ಕಕಾಮನೂರು ಗ್ರಾಮಕ್ಕೆ ಬಂದು ತೊಂದರೆ ಕೊಡುತ್ತಿದ್ದರು, ದೌರ್ಜನ್ಯ ಎಸಗುತ್ತಿದ್ದರು. ಅವರ ದಾಳಿಗೆ ತುತ್ತಾಗಿಯೋ ಅಥವಾ ಅವರ ದಬ್ಬಾಳಿಕೆ ಹೆಚ್ಚಾಗಿಯೋ ಅಲ್ಲಿಂದ ಜನ ಈ ಹೊಸ ‘ಕಾಮನೂರು’ ಗ್ರಾಮಕ್ಕೆ ಬಂದು ನೆಲೆಸಿದರು. ಅಥವಾ ಆ ರಜಾಕಾರರೇ ಜನರನ್ನು ಅಲ್ಲಿಂದ ಓಡಿಸಿದರಂತೆ. ಅಲ್ಲಿಂದ ಓಡಿ ಬಂದ ಗ್ರಾಮಸ್ಥರು ಈ ಗ್ರಾಮದಲ್ಲಿ ನೆಲೆಸಿದ್ದೇವೆ ಎಂದು ಹೇಳುತ್ತಾರೆ. ಮೂಲ ಗ್ರಾಮದಲ್ಲಿ ಜನ ಕಡಿಮೆಯಾದಂತೆ ಆ ಗ್ರಾಮ ಚಿಕ್ಕದಾಗಿದ್ದರಿಂದ ‘ಚಿಕ್ಕಕಾಮನೂರು’ ಎಂದಾಯಿತು. ನೂತನ ಈ ಗ್ರಾಮ ‘ಕಾಮನೂರು’ ಎಂದಾಯಿತು ಎಂದು ಹೇಳಲಾಗುತ್ತಿದೆ.

ನಮ್ಮ ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ರಜಾಕಾರರ ಹಾವಳಿ ಇದ್ದದ್ದು ನಿಜ. ಆದರೆ ಇಡೀ ಗ್ರಾಮವೇ ಸ್ಥಳಾಂತರಗೊಳ್ಳುವಷ್ಟು ದೌರ್ಜನ್ಯ-ದಬ್ಬಾಳಿಕೆಗಳು ನಡೆದ ಬಗ್ಗೆ ಉದಾಹರಣೆಗಳು ಚರಿತ್ರೆಯಲ್ಲಿ ಕಂಡುಬರುವುದಿಲ್ಲ. ಈ ಅಭಿಪ್ರಾಯ ಒಪ್ಪುವುದು ಸೂಕ್ತವೆನಿಸದಿದ್ದರೂ ಕಾಮನೂರು ಗ್ರಾಮ ಸ್ಥಳಾಂತರಗೊಂಡದ್ದು ಮಾತ್ರ ಸತ್ಯವಾದ ಸಂಗತಿಯಾಗಿದೆ. ಮತ್ತೊಂದು ಅಭಿಪ್ರಾಯದಂತೆ ಆ ಗ್ರಾಮದ ಪಕ್ಕದಲ್ಲೇ ಗುಡ್ಡಗಾಡು ಮತ್ತು ಅರಣ್ಯ ಪ್ರದೇಶದಿಂದ ಕೂಡಿತ್ತು. ಅಲ್ಲಿ ಸಹಜವಾಗಿಯೇ ಪ್ರಾಣಿಗಳು ವಾಸಿಸುತ್ತವೆ. ಮುಖ್ಯವಾಗಿ ಈ ಪ್ರದೇಶದಲ್ಲಿ ಹೆಚ್ಚಾಗಿ ಕರಡಿಗಳು ವಾಸಿಸುತ್ತವೆ. ಜೊತೆಗೆ ಅಲ್ಲಲ್ಲಿ ಚಿರತೆಗಳೂ ಸಹ ಪ್ರತ್ಯಕ್ಷವಾಗಿವೆ. ಇಂದಿಗೂ ಸಹ ಕರಡಿ, ಚಿರತೆಗಳು ಪ್ರತ್ಯಕ್ಷವಾದ ವರದಿಗಳು ಬಂದಿವೆ. ಹೀಗಾಗಿ ಆ ಕಾಡುಪ್ರಾಣಿಗಳ ಕಾಟದಿಂದ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡಿರಬಹುದೆಂದು ಹೇಳಲಾಗುತ್ತಿದೆ. ಅಥವಾ ಬೇರೆ ಕಾರಣಗಳೂ ಸಹ ಇರಬಹುದು. ಆದರೆ ಸ್ಪಷ್ಟ ಮಾಹಿತಿ ಲಭ್ಯವಾಗುವುದಿಲ್ಲ. ಅಲ್ಲಿಂದ ಸ್ಥಳಾಂತರಗೊಂಡು ಸುಮಾರು 300 ವರ್ಷಗಳಾಗಿರಬಹುದೆಂದು ಸ್ಥಳಿಕರ ಅಭಿಪ್ರಾಯವಾಗಿದೆ. ಅದೇನೇ ಇದ್ದರೂ ಮೂಲದಲ್ಲಿದ್ದ ಕಾಮನೂರು ಸ್ಥಳಾಂತರಗೊಂಡು ಇಂದು ಪ್ರಗತಿಪರ ಗ್ರಾಮವಾಗಿ, ಅಲ್ಲದೇ ಇತರರಿಗೂ ಮಾದರಿ ಗ್ರಾಮವಾಗಿ ಹೊರಹೊಮ್ಮುತ್ತಿದೆ.

ಈ ಗ್ರಾಮಕ್ಕೆ ‘ಕಾಮನೂರು’ ಎಂಬ ಹೆಸರು ಬರಲು ಕಾರಣವೇನು? ಈ ರೀತಿಯ ಹೆಸರುಗಳಿಂದ ಕರೆಯುವುದು ಅಥವಾ ಗುರುತಿಸಿಕೊಳ್ಳುವುದು ಬಹಳ-ಬಹಳನೇ ಅಪರೂಪ. ಯಾಕೆಂದರೆ ‘ಕಾಮ’ ಎನ್ನುವ ಅರ್ಥ ಬೇರೆ ರೀತಿಯಲ್ಲಿ ಅರ್ಥೈಸಲಾಗುತ್ತಿದೆ. ಹೀಗಾಗಿ ಇಂತಹ ಹೆಸರಿನಿಂದ ವ್ಯಕ್ತಿ, ಗ್ರಾಮ, ಪ್ರದೇಶಗಳನ್ನು ಕರೆಯುವುದಾಗಲಿ ಇಲ್ಲವೇ ಗುರುತಿಸುವುದಾಗಲಿ ಬಹಳ ಅಪರೂಪ ಮತ್ತು ಆ ಹೆಸರು ಅವಮಾನ ಎಂಬಂತೆ ಭಾವಿಸಲಾಗುತ್ತಿದೆ. ಆದರೂ ಈ ಗ್ರಾಮಕ್ಕೆ ಇಂತಹ ಹೆಸರಿನಿಂದ ಕರೆಸಿಕೊಂಡಿರುವುದು ಅಪರೂಪವೇ ಸರಿ ಮತ್ತು ಇಂತಹ ಹೆಸರಿನಿಂದ ಕರೆಸಿಕೊಳ್ಳುತ್ತಿರುವ ರಾಜ್ಯದ ಬೇರೆ ಗ್ರಾಮಗಳು ಇದುವರೆಗೂ ನನ್ನ ಗಮನಕ್ಕೆ ಬಂದಿರುವುದಿಲ್ಲ. ಆದರೆ ಕಾಮಣ್ಣ, ಕಾಮಪ್ಪ, ಕೋಮಣ್ಣ ಎಂಬಿತ್ಯಾದಿ ಹೆಸರುಗಳಿಂದ ವ್ಯಕ್ತಿಗಳ ಹೆಸರು ಇಟ್ಟಿರುವುದು ಅಥವಾ ಅವರ ವ್ಯಕ್ತಿತ್ವದ ನಡೆಯ ಮೇಲೆ ಕರೆಯುತ್ತಿರುವುದು ನಮಗೆ ಕಂಡುಬರುತ್ತಿವೆ.
ಈ ಗ್ರಾಮಕ್ಕೆ ಇಂತಹ ಹೆಸರು ಬರಲು ಕಾರಣ ಇಲ್ಲಿ ‘ಕಾಮದಹನ’ ಮಾಡುತ್ತಿರುವುದರಿಂದ ಬಂದಿರಬಹುದೆಂದು ಕೆಲವರ ಅಭಿಪ್ರಾಯವಾಗಿದೆ. ಆದರೆ ಉಳಿದ ಗ್ರಾಮಗಳಿಗಿಂತಲೂ ಇಲ್ಲೇನೂ ಅತಿ ವಿಜೃಂಭಣೆಯಿಂದ ಕಾಮದಹನ ಆಚರಣೆ ಮಾಡುವುದಿಲ್ಲ. ಸರಳ ಪದ್ಧತಿಯಂತೆ ಕಾಮದಹನ ಮಾಡಿ, ಅದರ ಬೂದಿಯನ್ನು ಮನೆ-ಮನೆಗಳಿಗೆ ಹೋಗಿ ಉಗ್ಗಲಾಗುತ್ತದೆ. ಮತ್ತು ವಿಶೇಷವಾಗಿ ಆ ಬೂದಿಯನ್ನು ಹೊಲ-ಗದ್ದೆಗಳಿಗೆ ತೆಗೆದುಕೊಂಡೋಗಿ ಚೆಲ್ಲಲಾಗುತ್ತದೆ. ಇದರಿಂದ ಉತ್ತಮ ಫಲ ಬರುತ್ತದೆ ಎಂದು ನಂಬಲಾಗಿದೆ. ಇಷ್ಟು ಮಾತ್ರ ಕಾಮನೂರಿನ ಕಾಮದಹನದ ಆಚರಣೆಯಾಗಿದೆ.
ಹಾಗಾದರೆ ಮತ್ತೇಕೆ ಈ ಗ್ರಾಮಕ್ಕೆ ‘ಕಾಮನೂರು’ ಎಂಬ ಹೆಸರು ಬಂತು ಎನ್ನುವ ಪ್ರಶ್ನೆ ಮೂಡುತ್ತದೆ. ಕೆಲವರ ಅಭಿಪ್ರಾಯದಂತೆ ಇದು ‘ಕಾಮನೂರು’ ಅಲ್ಲ ‘ಕಾಮಧೇನೂರು’ ಎಂದು ಹೇಳುತ್ತಾರೆ. ಇಲ್ಲಿ ಬರಗಾಲವೇ ಬಂದಿಲ್ಲ. ಈ ಗ್ರಾಮ ಶ್ರೀಮಂತಿಕೆಯಿಂದ ಇಲ್ಲದಿದ್ದರೂ ಸಮೃದ್ಧಿಯಿಂದ ಇದೆ. ಜನರು ಉದ್ಯೋಗ ಅರಸಿ ಇಲ್ಲಿಂದ ಗುಳೆ ಹೋಗಿಲ್ಲ, ಈ ಗ್ರಾಮದಲ್ಲಿ ಬಡತನದ ಕಾಡುವಿಕೆಯಾಗಿಲ್ಲ. ಹೀಗಾಗಿ ಇದು ‘ಕಾಮನೂರು’ ಅಲ್ಲ ‘ಕಾಮಧೇನು ಊರು’ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಬಹುಶಃ ಇಲ್ಲಿನ ಪರಿಸರವನ್ನು ಗಮನಿಸಿದರೆ ನಿಜವಿರಬಹುದುದೆಂದು ಅನಿಸುತ್ತಿದೆ. ಇಲ್ಲಿನ ಕೃಷಿಪದ್ಧತಿ, ಜಾನುವಾರು ಸಾಕಾಣಿಕೆ ಮುಂತಾದ ಕೃಷಿ ಚಟುವಟಿಕೆಗಳನ್ನು ಗಮನಿಸಿದರೆ ಆ ಮಾತು ನಿಜವೆನಿಸುತ್ತದೆ.
ಈ ಗ್ರಾಮದಲ್ಲಿ ವಿಶೇಷವಾಗಿ ಸಾವಯವ ಕೃಷಿ ಪದ್ಧತಿಯಲ್ಲೇ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಕೆಲ ಕೃಷಿಕರು ಸಾವಯವ ಕೃಷಿಯನ್ನು ಮಾಡುತ್ತಿದ್ದಾರೆ. ಬೆಳೆಗಳಿಗೆ ವಿಷಕಾರಕ ಗೊಬ್ಬರ, ಔಷಧಿಗಳನ್ನು ಸಿಂಪಡಿಸುವುದಿಲ್ಲ. ಸಹಜವಾಗಿ ಸಿಗುವ ದನದ ಸೆಗಣಿ, ಮೂತ್ರ, ಸಹಜ ಮತ್ತು ನೈಸರ್ಗಿಕವಾಗಿ ಸಿಗುವ ಎಲೆಗಳಿಂದ ತಯಾರಿಸಲಾಗುವ ಗೊಬ್ಬರ ಬಳಸಿ ಕೃಷಿ ಮಾಡುತ್ತಾರೆ. ಕೆಲ ರೈತರಂತೂ ಅಂಗಡಿಯಿಂದ ಏನನ್ನೂ ಖರೀದಿಸುವುದಿಲ್ಲ. ತಮ್ಮ ಕುಟುಂಬಕ್ಕೆ ಬೇಕಾದ ಆಹಾರದ ಧಾನ್ಯ, ಕಾಯಿಪಲ್ಲೆ ಮತ್ತು ಇತರೆ ಬೆಳೆಗಳನ್ನು ತಮ್ಮ-ತಮ್ಮ ಹೊಲಗಳಲ್ಲೇ ಬೆಳೆದುಕೊಳ್ಳುತ್ತಾರೆ. ಇದು ಈ ಕಾಮನೂರು ಗ್ರಾಮದ ವಿಶೇಷವಾಗಿದೆ. ಈ ಗ್ರಾಮದಲ್ಲಿ ಇನ್ನೂ ಅನೇಕ ಕೃಷಿ ಕುಟುಂಬಗಳಿವೆ, ಆದರೆ ಅಷ್ಟಾಗಿ ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸದಿದ್ದರೂ ಉತ್ತಮ ಕುಟುಂಬ ನಿರ್ವಾಹಣೆ ಮಾಡುತ್ತಿರುವುದನ್ನು ಕಾಣಬಹುದಾಗಿದೆ.
ವಿಶೇಷವಾಗಿ ಇಂದಿನ ಕಾಮನೂರು ಗ್ರಾಮವು ಗಾಂಧೀಜಿಯ ತತ್ವ-ಸಿದ್ಧಾಂತಗಳ ಅಡಿಯಲ್ಲಿ ಬದುಕುತ್ತಿರುವುದನ್ನು ಕಾಣಬಹುದಾಗಿದೆ. ಈ ಗ್ರಾಮದಲ್ಲಿ ಚಹಾದ ಹೋಟೆಲುಗಳಿಲ್ಲ, ಬೀಡಿ-ಸಿಗರೇಟು, ಗುಟ್ಕಾ ಮತ್ತು ತಂಬಾಕಿನ ಯಾವುದೇ ಉತ್ಪನ್ನಗಳನ್ನು ಮಾರಾಟ ಮಾಡುವುದಿಲ್ಲ. ಅಷ್ಟೇ ಅಲ್ಲದೇ ಈ ಗ್ರಾಮದಲ್ಲಿ ಮದ್ಯ ಮಾರಟವಂತೂ ಇಲ್ಲವೇ ಇಲ್ಲ. ಇದು ಈ ಗ್ರಾಮದವರು ಕಡ್ಡಾಯವಾಗಿ ಇಂದಿಗೂ ಪಾಲಿಸಿಕೊಂಡು ಬಂದಿರುವ ನಿಯಮವಾಗಿದೆ. ಹೀಗಾಗಿ ಈ ಗ್ರಾಮ ಗಾಂಧೀಜಿಯ ಕನಸಿನ ರಾಮರಾಜ್ಯದ ತತ್ವಕ್ಕೆ ತೀರಾ ಹತ್ತಿರವಿದ್ದಂತೆ ಕಾಣುತ್ತಿದೆ.

ಕಳೆದ ಸುಮಾರು 30 ವರ್ಷಗಳ ಹಿಂದೆ ಈ ಕಾಮನೂರು ಗ್ರಾಮದಲ್ಲಿ ಇತರೆ ಗ್ರಾಮಗಳಂತೆ ಇಲ್ಲಿಯೂ ಮದ್ಯ ಮಾರಾಟ ಮಾಡಲಾಗುತ್ತಿತ್ತು. ಚಹ ಹೋಟೇಲುಗಳಿದ್ದವು. ಅವುಗಳಲ್ಲಿ ಮತ್ತಿನ ಗುಟ್ಕಾ, ಪಾನ್, ಪಾನ್‍ಪರಾಗ, ತಂಬಾಕು, ಬೀಡಿ-ಸಿಗರೇಟು ಮಾರಲಾಗುತ್ತಿತ್ತು. ಇದರಿಂದ ಇಲ್ಲಿನ ಜನ ರೋಸಿ ಹೋಗಿದ್ದರು. ಗ್ರಾಮದಲ್ಲಿ ಕುಡುಕರ ಸಂಖ್ಯೆ ಹೆಚ್ಚಾಯಿತು. ಯುವಕರು ಕೆಲಸಕ್ಕೆ ಹೋಗದೆಯೇ ಹೋಟೇಲುಗಳಲ್ಲಿ ಹರಟೆಹೊಡೆಯುತ್ತಾ ಕಾಲಕಳೆಯಹತ್ತಿದರು. ಇದು ಗ್ರಾಮದ ಜನರಿಗೆ ತಲೆನೋವಾಯಿತು. ಹೇಗಾದರೂ ಮಾಡಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕೆಂಬ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟರು. ಅದಕ್ಕಾಗಿ ಅವರು ಒಮ್ಮೆ ಗ್ರಾಮಸಭೆ ಸೇರಿ ಈ ‘ಕಾಮನೂರು’ ಗ್ರಾಮದಲ್ಲಿ ಮದ್ಯ ಮಾರಾಟ ಮಾಡುವಂತಿಲ್ಲಾ, ಗುಟ್ಕಾ, ಬೀಡಿ-ಸಿಗರೇಟು ಮಾರುವಂತಿಲ್ಲಾ ಎಂದು ತೀರ್ಮಾನಿಸಿದರು. ಇದಕ್ಕೆ ಊರಿನ ಜನ ಒಪ್ಪಿದರು. ಹಿರಿಯರು, ಮಹಿಳೆಯರು, ವಿಶೇಷವಾಗಿ ಯುವಕರೂ ಸಹ ಇದಕ್ಕೆ ಸಮ್ಮತಿಸಿದರು. ಊರಿನ ಅಭಿವೃದ್ಧಿ, ಜನರ ಆರೋಗ್ಯ ಎಲ್ಲವನ್ನೂ ಗಮನಿಸಿ ಈ ನಿರ್ಧಾರ ತೆಗೆದುಕೊಂಡರು. ತಪ್ಪಿದರೆ ಒಂದು ಸಾವಿರ ರೂಪಾಯಿ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದರು. ಆರಂಭದಲ್ಲಿ ಇದಕ್ಕೆ ಹಿನ್ನೆಡೆಯೆನಿಸಿದರೂ ಬರು-ಬರುತ್ತಾ ಜನ ಅದಕ್ಕೆ ಬದ್ಧರಾರು. ಮುಂದೆ ಇದು ಯಶಸ್ವಿಯಾಗುತ್ತಾ ನಡೆಯಿತು. ಸುಮಾರು ಮೂವತ್ತು-ಮೂವತೈದು ವರ್ಷಗಳಾಗಿರಬಹುದು ನಮ್ಮ ಊರಿನಲ್ಲಿ ದುಶ್ಚಟಗಳಿಗೆ ಅವಕಾಶವಿಲ್ಲ ಎಂದು ಹೆಮ್ಮೆ ಪಟ್ಟುಕೊಳ್ಳುತ್ತಿದ್ದಾರೆ. ನಮ್ಮ ಊರಿನಲ್ಲಿ ಗುಟ್ಕಾ, ಬೀಡಿ-ಸಿಗರೇಟು ಮಾರುವುದಿಲ್ಲ ಎಂದು ಅಭಿಮಾನಪಟ್ಟುಕೊಳ್ಳುತ್ತಾರೆ. ಇದೇ ಅಲ್ಲವೇ ಗಾಂಧೀಜಿಯ ಕನಸಿನ ಭಾರತ. ಗಾಂಧೀಜಿಯ ಮೂಲ ಆಶಯವೇ ಮದ್ಯಪಾನ ಮುಕ್ತ ದೇಶವನ್ನಾಗಿಸುವುದು. “ನಾನು ಪ್ರಧಾನಿಯಾದರೆ ಒಂದೇ ದಿನದಲ್ಲಿ ಮದ್ಯಮುಕ್ತ ಮಾಡುತ್ತೇನೆ” ಎಂದು ಹೇಳುತ್ತಿದ್ದರು. ಸರಳ ಜೀವನ ನಡೆಸುವುದು ಅವರ ಧ್ಯೇಯವಾಗಿತ್ತು. ಅದಕ್ಕಾಗಿಯೇ ಗಾಂಧೀಜಿಯನ್ನು ಫಕೀರನೆಂದು ಕರೆಯುತ್ತಿದ್ದರು. ನೈಸರ್ಗಿಕ ಕೃಷಿಪದ್ಧತಿಯನ್ನು ಇಷ್ಟಪಡುತ್ತಿದ್ದರು. ಮಹಾತ್ಮ ಗಾಂಧೀಜಿಯ ಆ ಎಲ್ಲಾ ತತ್ವಗಳನ್ನು ಈ ಕಾಮನೂರು ಗ್ರಾಮದಲ್ಲಿ ಅನುಸರಿಸಲಾಗುತ್ತಿದೆ. ತಮ್ಮ ಊರಲ್ಲಿ ಅನುಸರಿಸುತ್ತಿರುವುದು ಗಾಂಧೀಜಿಯ ತತ್ವಗಳು ಎಂಬುದು ಆ ಗ್ರಾಮದ ಜನತೆಗೆ ಅರಿವಿದೆಯೋ ಇಲ್ಲವೋ ಗೊತ್ತಿಲ್ಲ. ಒಟ್ಟಿನಲ್ಲಿ ಅಲ್ಲಿನ ಜನರಿಗೆ ತಮ್ಮ ಗ್ರಾಮದ ಹಿತವೇ ಮುಖ್ಯವಾಗಿದೆ. ಆದರೆ ಇದು ಗಾಂಧೀಜಿಯ ತತ್ವಕ್ಕೆ ತೀರಾ ಹತ್ತಿರ ಎನ್ನುವುದು ಮಾತ್ರ ಸುಳ್ಳಲ್ಲ. ಇಂತಹ ಗ್ರಾಮಗಳು ಹೆಚ್ಚಾಗಬೇಕು, ಗಾಂಧೀಜಿಯ ಕನಸಿನ ಭಾರತ, ರಾಮರಾಜ್ಯದ ಕನಸು ನನಸು ಮಾಡಬೇಕಿದೆ.

– ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್
ಕನ್ನಡ ಉಪನ್ಯಾಸಕರು, ಕೊಪ್ಪಳ.
ಮೊ: 9448570340

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!