ಶೀಘ್ರ ಕ್ರಮ ಕೈಗೊಳ್ಳುವುದಾಗಿ ಪತ್ರಕರ್ತರ ನಿಯೋಗಕ್ಕೆ ಭರವಸೆ
ಬೆಂಗಳೂರು,: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ(ಕೆಯೂಡಬ್ಲ್ಯೂಜೆ) ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರ ನೇತೃತ್ವದ ನಿಯೋಗವು, ವಾರ್ತಾ ಇಲಾಖೆಯ ಆಯುಕ್ತ ಸೂರಳ್‌ಕರ್ ವಿಕಾಸ್ ಕಿಶೋರ್ ಅವರನ್ನು ಭೇಟಿ ಮಾಡಿ ಪತ್ರಕರ್ತರ ಸಮಸ್ಯೆ ಮತ್ತು ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಿತು.
ನಿವೃತ್ತರಾಗಿರುವ ಹಿರಿಯ ಪತ್ರಕರ್ತರುಗಳಿಗೆ ಸರ್ಕಾರದಿಂದ ಪ್ರತಿ ತಿಂಗಳು ಬರಬೇಕಾಗಿರುವ ಮಾಸಾಶನ ಹಣ 2-3 ತಿಂಗಳಾದರೂ ಬರುತ್ತಿಲ್ಲ. ಇದರಿಂದಾಗಿ ಅನೇಕರಿಗೆ ಜೀವನ ನಿರ್ವಹಣೆ ಮಾಡಲು ಔಷಧಿ ಖರೀದಿಸಲು ಹಣವಿಲ್ಲದೆ ಪರದಾಡುವ ಸ್ಥಿತಿ ಎದುರಾಗಿದೆ. ಆದ್ದರಿಂದ ಕೂಡಲೇ ಈ ಬಗ್ಗೆ ಆಗಿರುವ ಸಮಸ್ಯೆಯನ್ನು ಸರಿಪಡಿಸಿ ಪ್ರತಿ ತಿಂಗಳು ಸರಿಯಾಗಿ ಮಾಸಾಶನವನ್ನು ಅವರ ಅಕೌಂಟ್‌ಗೆ ಜಮೆ ಮಾಡಿಸಬೇಕು ಎಂದು ಆಯುಕ್ತರಿಗೆ ವಾಸ್ತವ ಸಮಸ್ಯೆ ಮನವರಿಕೆ ಮಾಡಿಕೊಡಲಾಯಿತು. ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಂಡು, ಮಾಸಾಶನ ಪ್ರತಿ ತಿಂಗಳು ದೊರೆಯಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ಭರವಸೆ ನೀಡಿದರು.
ಮಾಸಾಶನ ಸಮಿತಿಯಲ್ಲಿ ಅರ್ಹರನ್ನು ಆಯ್ಕೆ ಮಾಡಿ ನಾಲ್ಕೈದು ತಿಂಗಳಾದರೂ, ಅವರಿಗೆ ಇನ್ನೂ ಮಾಸಾಶನ ಮಂಜೂರಾಗಿಲ್ಲ. ಸಣ್ಣ ಪುಟ್ಟ ಕಾರಣಕ್ಕಾಗಿ ತಡೆ ಹಿಡಿದಿರುವ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಿ ಮಾಸಾಶನ ಮಂಜೂರು ಮಾಡಬೇಕು ಮತ್ತು ಸಣ್ಣ ಪುಟ್ಟ ತೊಡಕುಗಳನ್ನು ನಿವಾರಣೆ ಮಾಡಿ ಅರ್ಹರೆಲ್ಲರಿಗೂ ಮಾಸಾಶನ ಸಿಗುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಲಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಬಗ್ಗೆ ಕಡತ ತರಿಸಿ ಪರಿಶೀಲನೆ ಮಾಡಿ ಸೂಕ್ತ ಕ್ರಮ ಜರುಗಿಸಲಾಗುವುದು. ಚುನಾವಣೆ ನೀತಿ ಸಂಹಿತೆ ಮುಗಿದ ಮೇಲೆ ಈ ಬಗ್ಗೆ ಸಭೆಯನ್ನು ಕರೆಯಲಾಗುವುದು ಎಂದರು.ಕೆಯುಡಬ್ಲೂೃಜೆ ಒತ್ತಾಯದ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲು ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಪ್ರಕಟಿಸಿದ್ದು, ಅದನ್ನು ಜಾರಿ ಮಾಡಲು ಕೂಡಲೆ ಕ್ರಮ ತೆಗೆದುಕೊಳ್ಳಬೇಕು. ಮಾಧ್ಯಮ ಮಾನ್ಯತಾ ಕಾರ್ಡ್ ಹೊಂದಿರುವ ಪತ್ರಕರ್ತರು ಪ್ರಯಾಣಿಸುವ ಸಾರಿಗೆ ಸಂಸ್ಥೆಯ ಉಚಿತ ಬಸ್ ಪಾಸ್‌ನ ಅವಧಿ ಮುಗಿದಿದ್ದರೂ, ಇನ್ನೂ ಬಸ್ ಪಾಸ್ ನವೀಕರಣವಾಗದೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ಈ ಸಮಸ್ಯೆಯನ್ನು ಆದ್ಯತೆ ಮೇಲೆ ಬಗೆಹರಿಸಿಕೊಡಬೇಕು ಎಂದು ಸಂಘದ ರಾಜ್ಯಾಧ್ಯಕ್ಷರು ಒತ್ತಾಯಿಸಿದರು.
ಬಸ್ ಪಾಸ್ ವಿಳಂಬವಾಗುತ್ತಿರುವ ಬಗ್ಗೆ ಮತ್ತು ಪಾಸ್ ನವೀಕರಣ ಮಾಡುವಂತೆ ಈಗಾಗಲೇ ಕೆಎಸ್‌ಆರ್‌ಟಿಸಿಗೆ ಪತ್ರವನ್ನು ಬರೆಯಲಾಗಿದೆ. ಈ ಬಗ್ಗೆ ಮತ್ತೊಮ್ಮೆ ಗಮನಹರಿಸುವುದಾಗಿ ಆಯುಕ್ತರು ತಿಳಿಸಿದರು.
ಡಿವಿಜಿ ಸಂಸ್ಮರಣಾ ಕಾರ್ಯಕ್ರಮ :
ಮಂಕುತಿಮ್ಮನ ಕಗ್ಗದ ಖ್ಯಾತಿಯ ಸಾಹಿತಿ ಮತ್ತು ಪತ್ರಕರ್ತ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಂಸ್ಥಾಪಕ ಅಧ್ಯಕ್ಷ ಡಿ.ವಿ.ಗುಂಡಪ್ಪ (ಡಿವಿಜಿ) ಅವರ ಹೆಸರಿನಲ್ಲಿ ರಾಜ್ಯದಾದ್ಯಂತ ವಾರ್ತಾ ಇಲಾಖೆ ಸಹಯೋಗದಲ್ಲಿ ಕಾರ್ಯಕ್ರಮ ಮಾಡಲು ಇತ್ತೀಚೆಗೆ ನಡೆದ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಣಯಿಸಲಾಗಿದೆ ಎನ್ನುವುದನ್ನು ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರ ಗಮನಕ್ಕೆ ತಂದರು. ಈ ಬಗ್ಗೆ ವಿವರವಾದ ಪ್ರಸ್ತಾವನೆಯನ್ನು ವಾರ್ತಾ ಇಲಾಖೆಗೆ ಸಲ್ಲಿಸುವಂತೆ ಆಯುಕ್ತರು ಸೂಚಿಸಿದರು.
ಸಂಘದ ರಾಜ್ಯ ಖಜಾಂಚಿ ವಾಸುದೇವ ಹೊಳ್ಳ, ಬೆಂಗಳೂರು ನಗರ ಘಟಕದ ಪ್ರದಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್, ಕಾಸರಗೋಡು ಪತ್ರಕರ್ತರ ಸಂಘದ ಕಾರ್ಯದರ್ಶಿ ಪುರುಷೋತ್ತಮ ಪೆರ್ಲ ಮುಂತಾದವರು ನಿಯೋಗದಲ್ಲಿದ್ದರು.
More Stories
ಮೊದಲ ಹಂತದ 100 ನೂತನ ಬಿಎಂಟಿಸಿ ಬಸ್ ಗಳ ಲೋಕಾರ್ಪಣೆ
ಜಾತಿ ವ್ಯವಸ್ಥೆ ಕಾರಣದಿಂದ ಬಹು ಜನರು ಶಿಕ್ಷಣದಿಂದ ವಂಚಿತರಾದರು. ಈ ಕಾರಣಕ್ಕೆ ಅಸಮಾನತೆ ಹೆಚ್ಚಾಗುತ್ತಿದೆ : ಸಿ.ಎಂ. ಸಿದ್ದರಾಮಯ್ಯ
ಸರ್ಕಾರಿ ನೌಕರರ ಹಿತಾಸಕ್ತಿ ಕಾಯಲು ನಾನು ಸದಾ ಸಿದ್ದ : ಸಿಎಂ ಸಿದ್ದರಾಮಯ್ಯ