December 23, 2024

AKSHARA KRAANTI

AKSHARA KRAANTI




ಗಾಲಿ ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆ

ದೇಶದ ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿ ಸೇರಿದ್ದೇನೆ

ಬೆಂಗಳೂರು,: ಕಳೆದ ಒಂದು ವರ್ಷದ ಹಿಂದೆ
ಗಂಗಾವತಿ ವಿಧಾನಸಭಾ ಚುನಾವಣೆಯಲ್ಲಿ ‘ಫುಟ್‌ಬಾಲ್’ ಚಿಹ್ನೆಯೊಂದಿಗೆ ಸ್ಪರ್ಧಿಸಿ ಗಂಗಾವತಿ ಕ್ಷೇತ್ರದಲ್ಲಿ ಗೆಲುವು ಪಡೆದಿದ್ದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ, ಈಗ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಪಕ್ಷದ ಜೊತೆ ವಿಲೀನವಾಗಲು ಮುಂದಾಗಿದೆ. ಇದರಿಂದಾಗಿ ಕೆಆರ್ ಪಿಪಿ ಪಕ್ಷದ ಫುಟ್‌ಬಾಲ್ ಪಂದ್ಯ ಅಂತ್ಯಗೊಂಡಿದೆ. ಪಕ್ಷದ ಸಂಸ್ಥಾಪಕ ಮತ್ತು ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಈಚೆಗಷ್ಟೇ ನವದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ನಂತರ ಅವರು ಬಿಜೆಪಿ ಪಕ್ಷ ಸೇರುವ ಬಗ್ಗೆ ಬೆಂಗಳೂರಿನಲ್ಲಿ ವ್ಯಕ್ತಪಡಿಸಿದ್ದರು.
ಅದರಂತೆ ಮಾ.25 ಸೋಮವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿಯ ರಾಜ್ಯಾಧ್ಯಕ್ಷರಾದ ವಿಜಯೇಂದ್ರ, ಲೋಕಸಭಾ ಚುನಾವಣಾ ರಾಜ್ಯ ಸಹ ಉಸ್ತುವಾರಿಗಳಾದ ಪೊಂಗುಲೇಟಿ ಸುಧಾಕರ ರೆಡ್ಡಿ ಅವರ ಸಮ್ಮುಖದಲ್ಲಿ ಬೆಂಗಳೂರಿನ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಧರ್ಮಪತ್ನಿ ಲಕ್ಷ್ಮಿ ಅರುಣ ಹಾಗೂ ಮುಖಂಡರು, ಕಾರ್ಯಕರ್ತರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಬಿಜೆಪಿ ಪಕ್ಷದೊಂದಿಗೆ ವಿಲೀನಗೊಳಿಸಿ ಮರಳಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

ನಂತರ ಗಾಲಿ ಜನಾರ್ದನ ರೆಡ್ಡಿ ಅವರು ಮಾತನಾಡಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ವಿಲೀನ ಮಾಡಿದ್ದೇವೆ. ಪಕ್ಷದ ಎಲ್ಲ ಕಾರ್ಯಕರ್ತರು, ಬೆಂಬಲಿಗರು ಬಿ.ಎಸ್. ಯಡಿಯೂರಪ್ಪ, ವಿಜಯೇಂದ್ರರ ನೇತೃತ್ವದಲ್ಲಿ ಬಿಜೆಪಿ ಸೇರಿದ್ದೇವೆ ಎಂದರು.
ದೇಶದ ಸರ್ವತೋಮುಖ ಅಭಿವೃದ್ಧಿಗೆ, ವಿಶ್ವಗುರುವಾಗಿ ಭಾರತವನ್ನು ತರುವ ನಿಟ್ಟಿನಲ್ಲಿ ಕೆಲಸ ಮಾಡಿದ ನರೇಂದ್ರ ಮೋದಿ ಅವರ ಕೈಯನ್ನು ಬಲಪಡಿಸಲು ಬಿಜೆಪಿ ಸೇರಿದ್ದೇನೆ. ಅಮಿತ್ ಶಾ ಅವರು ನನ್ನನ್ನು ದೆಹಲಿಗೆ ಆಹ್ವಾನಿಸಿದ್ದರು ಹಾಗೂ ಬಿಜೆಪಿಗೆ ಸೇರಲು ತಿಳಿಸಿದ್ದಾರೆ. ಅದರಂತೆ ಬಿಜೆಪಿ ಸೇರಿದ್ದೇನೆ ಎಂದರು.
ಬಿ.ಎಸ್. ಯಡಿಯೂರಪ್ಪ ಅವರು ನನಗೆ ಸಚಿವನಾಗಲು ಅತಿ ಚಿಕ್ಕ ವಯಸ್ಸಿನಲ್ಲೇ ಅವಕಾಶ ಕೊಟ್ಟಿದ್ದರು. ಬಿಜೆಪಿ ಕಟ್ಟುವ ಅನುಭವ ನನಗಾಯಿತು. ಈಗ ಯಡಿಯೂರಪ್ಪ ಅವರ ಪುತ್ರ ರಾಜ್ಯಾಧ್ಯಕ್ಷನಾಗಿರುವ ಸಂದರ್ಭದಲ್ಲಿ ಪಕ್ಷ ಸೇರಿ ಮತ್ತೆ ಕೆಲಸ ಮಾಡುವ ಅವಕಾಶ ಸಿಗುತ್ತಿದೆ. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ದುಡಿಯುವೆ. ಯಾವುದೇ ಫಲಾಪೇಕ್ಷೆ ಇಲ್ಲದೇ ಬಿಜೆಪಿ ಸೇರುತ್ತಿದ್ದೇನೆ. ಪಕ್ಷ ಕೊಡುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುವೆ. ಮನೆಗೆ ಮತ್ತೆ ಬಂದಂತೆ ಭಾಸವಾಗುತ್ತಿದೆ. ನನ್ನ ರಕ್ತದ ಕಣಕಣದಲ್ಲೂ ಬಿಜೆಪಿ ಇತ್ತು. ಪಕ್ಷವೆಂಬ ತಾಯಿಯ ಮಡಿಲಿಗೆ ಕ್ಷೇಮವಾಗಿ ಸೇರಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಬಿ. ಶ್ರೀರಾಮುಲು, ಸಿ.ಟಿ. ರವಿ, ಅಶ್ವಥ್ ನಾರಾಯಣ್, ಆನಂದ್‌ ಸಿಂಗ್‌, ಲೋಕಸಭಾ ಚುನಾವಣಾ ರಾಜ್ಯ ಸಹ ಉಸ್ತುವಾರಿಗಳಾದ ಸುಧಾಕರ್‌ ರೆಡ್ಡಿ, ಸಂಸದರಾದ ಪಿ. ಸಿ.ಮೋಹನ್‌, ದೇವೇಂದ್ರಪ್ಪ, ಎನ್ ರವಿ ಕುಮಾರ್, ನವೀನ್, ಎಸ್ ಕೆ ಬೆಳ್ಳುಬ್ಬಿ, ಡಾ. ಥಾಮಸ್, ಬಂಗಾರು ಹನುಮಂತ ಸೇರಿದಂತೆ ಅನೇಕರು ಇದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!