December 22, 2024

AKSHARA KRAANTI

AKSHARA KRAANTI




ರಸ್ತೆಯಲ್ಲಿ ಅಡ್ಡಗಟ್ಟಿ ದರೋಡೆ ಪ್ರಕರಣ | 24 ತಾಸಿನಲ್ಲೇ ಭೇದಿಸಿದ ಪೊಲೀಸರು

ರಸ್ತೆಯಲ್ಲಿ ಅಡ್ಡಗಟ್ಟಿ ದರೋಡೆ ಪ್ರಕರಣ | 24 ತಾಸಿನಲ್ಲೇ ಭೇದಿಸಿದ ಪೊಲೀಸರು

17.82 ಲಕ್ಷ ನಗದು, 2 ಕಾರು, 1 ಮೋಟಾರು ಬೈಕ್, ಚಾಕು ವಶಕ್ಕೆ, 6 ಆರೋಪಿತರ ಬಂಧನ ಇನ್ನೊಬ್ಬನಿಗಾಗಿ ಶೋಧ : ಎಸ್.ಪಿ. ಯಶೋಧಾ ವಂಟಗೋಡಿ

ಕೊಪ್ಪಳ,: ಜಿಲ್ಲೆಯ ಕಾರಟಗಿ‌ ಗ್ರಾಮೀಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣವನ್ನು ಪೊಲೀಸರು 24 ಗಂಟೆಯೊಳಗೆ ಭೇದಿಸಿದ್ದಾರೆ.

ಸಿದ್ದಾಪುರ-ಕಾರಟಗಿ ರಸ್ತೆ ಮಧ್ಯೆ ಮೋಟಾರ ಸೈಕಲ್ ಮೇಲೆ ಹೊರಟಿದ್ದ ವ್ಯಕ್ತಿಯೊರ್ವನ ಬಳಿ ಇದ್ದ 20 ಲಕ್ಷ ರೂ ನಗದು ಹಣವನ್ನು ಸುಲಿಗೆ ಮಾಡಿದ ಪ್ರಕರಣವನ್ನು ಒಂದೇ ದಿನದಲ್ಲಿ ಭೇಧಿಸಿರುವರ ಪೋಲೀಸರು 6 ಆರೋಪಿತರನ್ನು ಹಾಗೂ ಅವರಿಂದ 17.83 ಲಕ್ಷ ನಗದು ಹಣ ಸೇರಿ ಕೃತ್ಯಕ್ಕೆ ಬಳಸಿದ್ದ 2 ಕಾರು, 1 ಮೋಟಾರ್ ಸೈಕಲ್, ಚಾಕುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಹೇಳಿದರು.

ಮಂಗಳವಾರ ನಗರದ ಕೊಪ್ಪಳ ಜಿಲ್ಲಾ ಪೋಲೀಸ್ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಫಿರ್ಯಾದಿದಾರ ಸುರೇಶರೆಡ್ಡಿ ಸಾ: ಅಮರಾಪುರ ಇವರು ಫೆ 25 ರಂದು ಮೋಟಾರ್ ಸೈಕಲ್ ನಲ್ಲಿ ಸಿಂಧನೂರ ಕಡೆಗೆ ಹೋಗುತ್ತಿರುವಾಗ ಇವರ ಬಳಿ ಇದ್ದ ಹಣದ ಬ್ಯಾಗನ್ನು ದೋಚಿಕೊಂಡು ದರೋಡೆ ಮಾಡಿ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ 24 ತಾಸಿನಲ್ಲಿ ಈ ಪ್ರಕರಣವನ್ನು ಭೇಧಿಸಿ, ಅಪಾದಿತರನ್ನು ವಶಕ್ಕೆ ಪಡೆದು ಅವರಿಂದ ನಗದು ಹಣ 17.82 ಲಕ್ಷ ಸೇರಿ ಕಾರು, ಬೈಕ್, ಚಾಕುವನ್ನು ವಶಪಡಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸುವ ಪ್ರಕ್ರಿಯೆ ಜಾರಿ ಇರುತ್ತದೆ ಎಂದರು.
ಕಾರ್ಯಪ್ರವೃತ್ತರಾದ ಪೋಲೀಸರು : ಎಸ್.ಪಿ. ಯಶೋಧಾ ವಂಟಗೋಡಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣವನ್ನು ಭೇದಿಸಲು ಅಗತ್ಯ ಮಾರ್ಗದರ್ಶನ ನೀಡಿ, ಗಂಗಾವತಿ ಡಿ.ಎಸ್.ಪಿ ಸಿದ್ದಲಿಂಗನಗೌಡ ಪಾಟೀಲ್ ನೇತೃತ್ವದಲ್ಲಿ ಕೊಪ್ಪಳ ಡಿ.ಎಸ್.ಪಿ. ಮುತ್ತಣ್ಣ, ಕಾರಟಗಿ ಪಿಐ ಪ್ರದೀಪ ಬಿಸೆ, ಕೊಪ್ಪಳ ಸಿಪಿಐ ಸುರೇಶ, ಯಲಬುರ್ಗಾ ಸಿಪಿಐ ಮೌನೇಶ ಮಾಲೀಪಾಟೀಲ್, ಕೊಪ್ಪಳ ಪಿಐ ಜಯಪ್ರಕಾಶ, ಗಂಗಾವತಿ ಪಿಐ ವಾಸುಕುಮಾರ, ಎ.ಎಸ್.ಐ. ಬೋರಣ್ಣವರ, ಅತೀಕ್ ಅಹ್ಮದ್, ಚಿರಂಜೀವಿ ಹೆಚ್.ಸಿ. ಸಿಬ್ಬಂಧಿಗಳಾದ ಮರಿಶಾಂತಗೌಡ, ವಿಶ್ವನಾಥ, ಶಶಿಕಾಂತ ರಾಠೋಡ, ಲಕ್ಕಪ್ಪ, ರಮೇಶ, ಮುತ್ತುರಾಜ, ನಾಗರಾಜ , ನಿರುಪಾದಿ, ಅನಿಲ್, ತಾಜುದ್ದೀನ್, ಖಾಜಾಸಾಬ್ , ದೇವೇಂದ್ರ, ಕೋಟೇಶ, ಹಾಗೂ ಸಿ.ಡಿ.ಆರ್ ಘಟಕದ ರಾಯನಗೌಡ ಎಪಿಸಿ ರವರನ್ನು ಒಳಗೊಂಡ ತಂಡವು ಪ್ರಕರಣವನ್ನು ಪ್ರಕರಣ ದಾಖಲಾದ 24 ತಾಸಿನಲ್ಲೇ ಪತ್ತೆ ಮಾಡಿದ್ದಾರೆ. ಪ್ರಕರಣ ಭೇದಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡಕ್ಕೆ ಪ್ರಶಂಸನೆ ವ್ಯಕ್ತಪಡಿಸಿರುವ ಎಸ್ಪಿ ಅವರು ಸೂಕ್ತ ಬಹುಮಾನ ಘೋಷಣೆ ಮಾಡಿದ್ದಾರೆ.

ಫೆ. 25 ರಂದು ಸುರೇಶರೆಡ್ಡಿ ತಂದೆ ವೆಂಕೋಬ ಸಾ: ಅಮರಾಪುರ ಎಂಬವರು ತಮ್ಮ ಮೋಟರ ಸೈಕಲ್ ಮೇಲೆ ಸಿಂದನೂರು ಕಡೆಗೆ ಹೋಗುತ್ತಿರುವಾಗ ಸಿದ್ದಾಪೂರ ಗ್ರಾಮ ದಾಟಿದ ನಂತರ ಮದ್ಯಾಹ್ನ ಸುಮಾರು 1.45 ಗಂಟೆಯಿಂದ 2 ಗಂಟೆ ಮದ್ಯದ ಅವಧಿಯಲ್ಲಿ ಗಂಗಾವತಿ ಕಡೆಯಿಂದ ಬಿಳಿ ಬಣ್ಣದ ಕಾರನಲ್ಲಿ ಬಂದವರು ಮೋಟಾರ್ ಸೈಕಲ್ ಮುಂದೆ ಹೋಗದಂತೆ ನಿಲ್ಲಿಸಿ, ಕೈಯಲ್ಲಿ ಉದ್ದನೇಯ ಚಾಕುವನ್ನು ಹಿಡಿದು ಎದೆಯ ಮೇಲಿನ ಶರ್ಟ ಹಿಡಿದು ಗದರಿಸಿ, ಜೇಬಿನಲ್ಲಿದ್ದ ಸುರೇಶರೆಡ್ಡಿ ನೋಟ್ 9 ಮೊಬೈಲ್ ಪೋನ್, ಹಾಗೂ 20 ಲಕ್ಷ ಹಣ ಇರುವ ಬ್ಯಾಗನ್ನು ದೋಚಿಕೊಂಡು ಎಲ್ಲಾರು ಸೇರಿ ಕಾರಿನಲ್ಲಿಯೇ ಕುಳಿತುಕೊಂಡು ಕಾರಟಗಿ ಕಡೆಗೆ ಹೋಗಿದ್ದು, ಕಾರಿನಲ್ಲಿ ನಾಲ್ಕು ಜನರಿದ್ದು ಕಾರಿಗೆ ನಂಬರ ಪ್ಲೇಟ ಇರುವುದಿಲ್ಲಾ ಬಿಳಿ ಬಣ್ಣದ್ದು ಇರುತ್ತದೆ. ಘಟನೆ ಕುರಿತು ಫೆ. 25 ರಂದು ಕಾರಟಗಿ ಠಾಣಾ ಗುನ್ನೆ ನಂ 47/2024 ಕಲಂ 392 R/w 34 ಐಪಿಸಿ ನೇದ್ದರ ಮೇಲೆ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಪ್ರಕರಣ ಭೇಧಿಸಿದ ಪೋಲೀಸರು : ಎಸ್.ಪಿ. ಅವರು ರಚಿಸಿದ ತಂಡವು ಮಾಹಿತಿಯನ್ನು ಸಂಗ್ರಹಿಸಿ ಫೆ.26 ರಂದು ಮಧ್ಯಾಹ್ನ 3.30 ಗಂಟೆಯ ಸುಮಾರಿಗೆ ಸದರಿ ತಂಡದೊಂದಿಗೆ ದಾಳಿ ಮಾಡಲಾಗಿ ಗಂಗಾವತಿಯ ರಾಯಚೂರು ರಸ್ತೆಯಲ್ಲಿ ಬರುವ ರಾಣಾ ಪ್ರತಾಪ ಸಿಂಗ್ ಸರ್ಕಲ್ ಹತ್ತಿರ ಬಿಳಿ ಕಾರಿನಲ್ಲಿ ಹುಬ್ಬಳ್ಳಿ ರಸ್ತೆಯ ಕಡೆಗೆ ಹೊರಟಿದ್ದ 3 ಜನರ ಆರೋಪಿತರ ಬಗ್ಗೆ ಸಂಶಯ ಬಂದು ಕಾರನ್ನು ನಿಲ್ಲಿಸಲು ಸೂಚಿಸಿದಾಗ್ಯೂ ಸಹ ಅರೋಪಿತರು ತಮ್ಮ ಕಾರನ್ನು ನಿಲ್ಲಿಸದೇ ಜೋರಾಗಿ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಅರೋಪಿತರ ಕಾರಿಗೆ ಬೆನ್ನುಹತ್ತಿ 1.ಹುಸೇನಬಾಷ, ಸಲಿಂ ತಂದೆ ಇಮಾಮಸಾಬ ಸುಳಕಲ್, ಸಾ: ಹಿರೇ ಜಂತಗಲ್, 2. ಶಿವಮೂರ್ತಿ ಮೂರ್ತಿ, ಸಾ: ಹೆಚ್.ಅರ್.ಎಸ್. ಕಾಲೋನಿ ಗಂಗಾವತಿ. 3.ಉದಯ ಸಿಂಗ್ ತಂದೆ ಮೋಹನಸಿಂಗ್ ಸಾ: ಕಟರಾಂಪೂರ, ತಾ: ಹೊಸಪೇಟೆ, ಹವಾ ಗಂಗಾವತಿ. ಇವರನ್ನು ವಶಕ್ಕೆ ಪಡೆದುಕೊಂಡಿದ್ದು, ಫೆ. 27 ರಂದು ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಕೊಪ್ಪಳದ ಗಿಣಿಗೇರಾ ಹೈವೇ ಬೈಪಾಸ್ ಹತ್ತಿರ ಆಪಾದಿತರಾದ 4.ಹನುಮೇಶ ತಂದೆ ಕರಿಯಪ್ಪ ಅಂಗಜಾಲ, ಸಾ: ಡಾಣಾಪೂರು, ತಾ: ಗಂಗಾವತಿ, 5. ಹುಸೇನಬಾಷ ತಂದೆ ಅಬ್ದುಲ್ ಕರೀಂಸಾಬ, ನಾ: ಹಿರೇ ಜಂತಗಲ್, 6. ಫ್ರದ್ವೀರಾಜ ತಂದೆ ಶಂಕ್ರಯ್ಯ ಹಿರೇಮಠ, ಸಾ: ವಿರುಪಾಪೂರು, ತಾ: ಗಂಗಾವತಿ. ಇವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅಪಾದಿತರಿಂದ ನಗದು ಹಣ, ಕಾರು, ಬೈಕ್, ಚಾಕು ವಶಕ್ಕೆ ಪಡೆದಿದ್ದು, ಪರಾರಿ ಆಗಿರುವ ಇನ್ನೊಬ್ಬ ಅಪಾದಿತ ಪತ್ತೆ ನಡೆದಿದ್ದು ಸಿಕ್ಕಿಬಿದ್ದಂತಹ ಆಪಾದಿತರಿಂದ ಒಟ್ಟು ನಗದು 17.82 ಲಕ್ಷ ರೂಪಾಯಿಗಳು ಮತ್ತು ಕೃತ್ಯಕ್ಕೆ ಬಳಸಿದ 2 ಕಾರು ಅಂ.ಕಿ-10 ಲಕ್ಷ ರೂ, 1 ಮೋಟಾರ ಸೈಕಲ್ ಅಂ.ಕಿ-20,000/-ರೂ, 1 ದೊಡ್ಡ ಚಾಕು, ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಿಗೋಡಿ ಅವರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಗಂಗಾವತಿ ಡಿ.ಎಸ್.ಪಿ ಸಿದ್ದಲಿಂಗನಗೌಡ ಪಾಟೀಲ್, ಕೊಪ್ಪಳ ಡಿ.ಎಸ್.ಪಿ. ಮುತ್ತಣ್ಣ, ಕಾರಟಗಿ ಪಿಐ ಪ್ರದೀಪ ಬಿಸೆ, ಕೊಪ್ಪಳ ಸಿಪಿಐ ಸುರೇಶ, ಕೊಪ್ಪಳ ಪಿಐ ಜಯಪ್ರಕಾಶ, ಗಂಗಾವತಿ ಪಿಐ ವಾಸುಕುಮಾರ, ಸೇರಿ ಪ್ರಕರಣ ಭೇಧಿಸಿದ ಪೋಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!