December 23, 2024

AKSHARA KRAANTI

AKSHARA KRAANTI




ಹನಿ ನೀರಾವರಿ ಪದ್ಧತಿಯಲ್ಲಿ ಬೆಳೆದ ಮೆಕ್ಸಿಕನ್ ಬೀನ್ಸ್ ಬೆಳೆಯ ಕ್ಷೇತ್ರೋತ್ಸವ

ಗದಗ, : ಕರ್ನಾಟಕ ನೀರಾವರಿ ನಿಗಮ ಗದಗ ಸಿಂಗಟಾಲೂರ ಏತ ಹನಿ ನೀರಾವರಿ ಯೋಜನೆ ಪ್ಯಾಕೇಜ್ -3 ರ ಫಲಾನುಭವಿ ರೈತರ ಹೊಲದಲ್ಲಿ ನೆಟಾಫೀಮ ಇರಿಗೇಷನ್ ಇಂಡಿಯಾ ಪ್ರೈ ಲಿ. ಇವರು ಹನಿ ನೀರಾವರಿ ಮೂಲಕ ಮೆಕ್ಸಿಕನ್ ಬೀನ್ಸ್ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಜಾಲಣ್ಣವರ, ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ಬಸವರಾಜ ಕಡೇಮನಿ ಸಹಾಯಕ ಅಭಿಯಂತರರು, ನೆಟಾಫಿಮ್ ಎಮ್.ಇ.ಐ.ಎಲ್ ಅಧಿಕಾರಿಗಳು ಮತ್ತು ಯೋಜನಾ ಫಲಾನುಭವಿ ರೈತರು ಭಾಗವಹಿಸಿದ್ದರು.

ಲಕ್ಕುಂಡಿ ಗ್ರಾಮದ ಹೇಮಣ್ಣ ಗೋವಿಂದಪ್ಪ ನೂಕಾಪೂರ ಅವರು ಪಸ್ತುತ ಮುಂಗಾರು ಹಂಗಾಮಿನಲ್ಲಿ ಮೆಕ್ಸಿಕನ್ ಬ್ಲ್ಯಾಕ್ ಬೀನ್ಸ (ಕಪ್ಪು ಹುರಳಿ) ಬೆಳೆಯನ್ನು ಹನಿ ನೀರಾವರಿ ಪದ್ಧತಿಯ ಮೂಲಕ ಬೆಳೆದು ಗ್ರಾಮಕ್ಕೆ ಮಾದರಿ ರೈತರಾಗಿದ್ದಾರೆ. ರವಿರಾಜಗೌಡ ಪಾಟೀಲ, ಪ್ರೊಜೆಕ್ಟ್ ಮ್ಯಾನೇಜರ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ರೈತರು ಹನಿ ನೀರಾವರಿ ಉಪಕರಣಗಳನ್ನು ಹಾಳು ಮಾಡದೆ ಅವುಗಳನ್ನು ಸರಿಯಾದ ಕ್ರಮವನ್ನು ಬಳಸಿಕೊಂಡು ಯೋಜನೆಯ ಲಾಭ ಪಡೆಯಬೇಕೆಂದು ಮನವಿ ಮಾಡಿಕೊಂಡರು ಮತ್ತು ಹನಿ ನೀರಾವರಿ ಯೋಜನೆಯ ಮಹತ್ವ ಮತ್ತು ಅದರ ಉಪಯೋಗಗಳ ಬಗ್ಗೆ ವಿವರಿಸಿದರು.

ಈ ಬೆಳೆಯು ಕಡಿಮೆ ಅವಧಿಯಲ್ಲಿ (80-90 ದಿನಗಳು) ಬೆಳೆಯುವ ದ್ವಿದಳ ಧಾನ್ಯವಾಗಿದೆ. ಇದನ್ನು ಮಿಶ್ರಿತ ಕಪ್ಪು ಮತ್ತು ಕೆಂಪು ಮಣ್ಣಿನಲ್ಲಿ ಬೆಳೆಯಬಹುದು. ಕಡಿಮೆ ಪ್ರಮಾಣದ ನೀರು ಮತ್ತು ಪೋಶಕಾಂಶಗಳನ್ನು ಉಪಯೋಗಿಸಿಕೊಂಡು ಹೆಚ್ಚಿನ ಇಳುವರಿ ಪಡೆಯಬಹುದು. ಈ ಬೆಳೆಯನ್ನು ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಬೆಳೆಯಬಹುದು. ಜೂನ್ ಮೊದಲ ವಾರ ಬಿತ್ತನೆಗೆ ಸೂಕ್ತವಾಗಿದೆ ಎಂದು ಆನಂದ ಆಲೂರ (ಬೇಸಾಯ ತಜ್ಞರು) ತಿಳಿಸಿದರು.
ಹನಿ ನೀರಾವರಿ ಉಪಯೋಗಿಸಿಕೊಂಡು ಕೃಷಿಯಲ್ಲಿ ಲಾಭವಾಗುವ ಹೊಸ ಬೆಳೆಗಳನ್ನು ಬೆಳೆಯಲು ಮಲ್ಲಿಕಾರ್ಜುನ ಜಾಲಣ್ಣವರ ಇವರು ರೈತರನ್ನೂ ಪ್ರೋತ್ಸಾಹಿಸಿದರು.
ವ್ಯವಸಾಯದಲ್ಲಿ ಅಧಿಕ ಇಳುವರಿ ಪಡೆಯಲು ರೈತರು ತಮ್ಮ ಹೊಲಗಳಲ್ಲಿ ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು ರೈತರು ಹನಿ ನೀರಾವರಿಯನ್ನು ಬಳಸಿ ಅಧಿಕ ಇಳುವರಿ ಮತ್ತು ಮಾರುಕಟ್ಟೆಗೆ ಸೂಕ್ತವಾದ ಬೆಳೆಯನ್ನು ಬೆಳೆದು ಈ ಯೋಜನೆಯ ಉಪಯೋಗ ಪಡೆಯಬೇಕೆಂದು ಬಸವರಾಜ ಕಡೇಮನಿ ತಿಳಿಸಿದರು.
ಈ ಬೆಳೆ ಬೆಳೆದು ಖುಷಿಯಾಗಿದೆ ಈ ಬೆಳೆಯನ್ನು ಕಡಿಮೆ ಅವಧಿಯಲ್ಲಿ ಬೆಳೆಯಬಹುದು ಮತ್ತು ಬೇಸಾಯ ಕ್ರಮಗಳು ಸುಲಭವಾಗಿವೆ ಈ ವರ್ಷ ಅಧಿಕ ಇಳುವರಿ ಪಡೆಯುವ ನಿರೀಕ್ಷೆಯಲ್ಲಿದ್ದೇನೆಂದು ಹೇಮಣ್ಣ ನೂಕಾಪುರ ತಿಳಿಸಿದರು.ಈ ಕಾರ್ಯಕ್ರಮದಲ್ಲಿ ಸುರೇಶ ರ್ಯಾವಣಕಿ ಬೇಸಾಯತಜ್ಞರು, ಸಂತೋಷ ವೀರಾಪೂರ ತಾಂತ್ರಿಕ ಅಭಿಯಂತರರು, ಸುರೇಶ ಅಬ್ಬಿಗೇರಿ ಪ್ರಗತಿಪರ ರೈತರು ಮತ್ತು ಫಲಾನುಭವಿ ರೈತರು ಭಾಗವಹಿಸಿದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!