ಜೆ.ಟಿ.ಮಹಾವಿದ್ಯಾಲಯದಲ್ಲಿ ಪಾಲಕರು-ಶಿಕ್ಷಕರ ಸಭೆ
ಗದಗ,: ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಪಾಲಕರು ಮತ್ತು ಶಿಕ್ಷಕರ ಪಾತ್ರ ಬಹು ಮುಖ್ಯವಾದದ್ದು. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಸಾಧನೆ ಮಾಡಲು ಮಾನಸಿಕ ಮತ್ತು ದೈಹಿಕ ಆರೋಗ್ಯ ಉತ್ತಮವಾಗಿರಬೇಕು. ಮಾನಸಿಕ ಮತ್ತು ದೈಹಿಕ ಆರೋಗ್ಯ ಸದೃಢವಾಗಿರಲು ಪಾಲಕರ ಜವಾಬ್ದಾರಿ ನಿರ್ಣಾಯಕವಾದದ್ದು. ವಿದ್ಯಾರ್ಥಿಗಳ ಅಧ್ಯಯನದ ಸಮಯದಲ್ಲಿ ಬರಬಹುದಾದ ಸಮಸ್ಯೆಗಳನ್ನು ಪಾಲಕರು, ಶಿಕ್ಷಕರು ಮತ್ತು ಆಡಳಿತ ಮಂಡಳಿಗಳು ಪರಸ್ಪರ ಕೈಜೋಡಿಸಿ ಪರಿಹರಿಸಬೇಕೆಂದು ಜೆ.ಟಿ.ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ಡಾ.ಆರ್.ಟಿ.ಪವಾಡ ಶೆಟ್ಟರ ಹೇಳಿದರು.
ಅವರು ಜೆ.ಟಿ.ಮಹಾವಿದ್ಯಲಯದಲ್ಲಿ ಆಯೋಜಿಸಿದ್ದ ಪಾಲಕರು-ಶಿಕ್ಷಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಪಿ.ಜಿ.ಪಾಟೀಲ ಅವರು ವಿದ್ಯಾರ್ಥಿ ಜೀವನದಲ್ಲಿ ಕಾಲೇಜು ಶಿಕ್ಷಣ ಬಹಳ ಮಹತ್ವಪೂರ್ಣವಾದ ಕಾಲಾವಧಿ. ಈ ಸಂದರ್ಭದಲ್ಲಿ ಪಾಲಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಕಡೆ ವಿಶೇಷವಾಗಿ ಗಮನಹರಿಸಬೇಕು. ಜಗತ್ತು ತುಂಬಾ ಸ್ಪರ್ಧಾತ್ಮಕವಾಗಿ ರೂಪುಗೊಳ್ಳುತ್ತಿದೆ. ಇಂಥ ಸ್ಪರ್ಧೆಯಲ್ಲಿ ನಮ್ಮ ಮಕ್ಕಳು ಯಶಸ್ಸು ಪಡೆಯಲು ತಮ್ಮ ಮಕ್ಕಳ ಶ್ರೇಯೋಭಿವೃದ್ದಿಗೆ ಪಾಲಕರು ಸಮಯ ಮೀಸಲಿಡಬೇಕು. ವಿದ್ಯಾರ್ಥಿಗಳ ಜೀವನದಲ್ಲಿ ಮೊಬೈಲ್ ಆವರಿಸಿಕೊಂಡು ಅವರ ವಿದ್ಯಾಭ್ಯಾಸ ಕುಂಟಿತಗೊಳ್ಳದಂತೆ ಪಾಲಕರು ಎಚ್ಚರ ವಹಿಸಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿದ್ಯಾರ್ಥಿ ಕ್ಷೇಮಾಭಿವೃದ್ದಿ ಅಧಿಕಾರಿ ಪ್ರೊ.ಎಚ್.ಎಸ್.ಕೌಲಗಿ ಅವರು ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಒದಗಿಸಲಾದ ವ್ಯವಸ್ಥಿತವಾದ ಪ್ರಯೋಗಾಲಯಗಳು, ಗ್ರಂಥಾಲಯ, ಕ್ರೀಡಾಂಗಣ, ವಿದ್ಯಾರ್ಥಿ ವೇತನ, ವಸತಿ ನಿಲಯಗಳು ಸೇರಿದಂತೆ ಇತರೆ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ ಅವುಗಳ ಉಪಯೋಗ ಮಾಡಿಕೊಳ್ಳಲು ತಿಳಿಸಿದರು. ವೇದಿಕೆಯಲ್ಲಿ ಕಾಲೇಜು ಆಂತರಿಕ ಗುಣಮಟ್ಟ ಕೋಶದ ಸಂಚಾಲಕಾರಾದ ಪ್ರೊ.ಪ್ರದೀಪ ಸಂಗಪ್ಪಗೋಳ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪಾಲಕರಲ್ಲಿ ಚಂದ್ರಶೇಖರ ಡಂಬಳ, ಪ್ರಶಾಂತ, ವೈ.ಪಿ.ಮೆಣಸಗಿ ಮತ್ತು ಶಂಕರ ದೇಸಾಯಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಕು.ಸುಸ್ಮಿತಾ ಪೂಜಾರ ಪ್ರಾರ್ಥಿಸಿದರು. ಡಾ.ನಾಗರಾಜ ಓಬಯ್ಯ ವಂದಿಸಿದರು. ಬಿ.ಆರ್.ಚಿನಗುಂಡಿ ಹಾಗೂ ಶ್ರುತಿ ಮ್ಯಾಗೇರಿ ಕಾರ್ಯಕ್ರಮ ನಿರೂಪಿಸಿದರು.
ಪಾಲಕರು-ಶಿಕ್ಷಕರ ಸಭೆಯ ಸಂಯೋಜಕರಾದ ವಿಶ್ವನಾಥ ಜಿ. ಡಾ.ಶಂಕರ ಮಡಿವಾಳೆ, ಪ್ರೊ.ರಾಜಕುಮಾರ ಬಡಿಗೇರ, ಡಾ.ಕರ್ಣಕುಮಾರ್, ಪ್ರೊ.ಗಿರಿಧರ್, ಪ್ರೊ.ಜಗನ್ನಾಥ ಆರ್, ಪ್ರೊ.ಜಗನ್ನಾಥ ಮಲಗೊಂಡ, ಡಾ.ಮಂಜುನಾಥ ಪಟಗಾರ, ಡಾ.ಕೃಷ, ಡಾ.ರಘು, ಡಾ.ರಮೇಶ, ಡಾ.ವಿಜಯಲಕ್ಷ್ಮಿ ಕಿಲ್ಲೇದಾರ್ ಸೇರಿದಂತೆ ಮಹಾವಿದ್ಯಾಲಯದ ಸಮಸ್ತ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ