ಗದಗ,: ಕಾಂಗ್ರೆಸ್ ಪಕ್ಷದ ರಾಜ್ಯ ಸರ್ಕಾರ ರೈತರ ಪ್ರೋತ್ಸಾಹ ಧನ ಬಿಡುಗಡೆ, ಬೆಲೆ ಏರಿಕೆ, ರಾಜ್ಯ ಸರ್ಕಾರದ ಭ್ರಷ್ಟಾಚಾರ ಖಂಡಿಸಿ ರೈತ ಮೋರ್ಚಾ ಗದಗ ಜಿಲ್ಲಾ ವತಿಯಿಂದ ಗದಗ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಶೋಕ ಕರೂರ ಮನವಿ ಸಲ್ಲಿಸಿ ಮಾತನಾಡಿ, ರಾಜ್ಯ ಸರ್ಕಾರ ಕಳೆದ ಬಜೆಟ್‍ನಲ್ಲಿ ಪ್ರೋತ್ಸಾಹ ಧನಕ್ಕೆ ಬಿಡುಗಡೆಯಾಗಿದ್ದ ಹಣವನ್ನು ಪಶುಪಲನಾ ಇಲಾಖೆ ಇತರೆ ಖರ್ಚು ವೆಚ್ಚಗಳಿಗೆ ಬಳಕೆಮಾಡಿಕೊಂಡಿದೆ ಎಂಬ ಆರೋಪ ಕೇಳಿಬಂದಿದ್ದು, ಈ ವಿಷಯದ ಬಗ್ಗೆ ಸರ್ಕಾರ ಸ್ಪಷ್ಟನೆಯನ್ನು ನೀಡಬೇಕು. ಬಾಕಿ ಉಳಿದಿರುವ ಎಂಟು ತಿಂಗಳ ಹಣವನ್ನು ಯಾವಾಗ ಕೊಡುತ್ತಾರೆ ಎಂದು ರೈತರು ಪ್ರಶ್ನಿಸಿದರೆ, ಹಾಲು ಒಕ್ಕೂಟದ ಅಧಿಕಾರಿಗಳು ಸಹಕಾರಿ ಇಲಾಖೆಯತ್ತ ಬೊಟ್ಟು ಮಾಡುತ್ತಾರೆ. ಸಹಕಾರ ಇಲಾಖೆಯವರು ಆರ್ಥಿಕ ಇಲಾಖೆ ಮೇಲೆ ಬೊಟ್ಟು ಮಾಡುತ್ತಾರೆ. ಈ ಗೊಂದಲದ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.
ರೈತ ಮೋರ್ಚಾ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ವಕ್ಕರ ಮಾತನಾಡಿ, ರಾಜ್ಯ ಸರ್ಕಾರ ಹಾಲಿನ ಪ್ರೋತ್ಸಾಹ ಧನವೂ ರೈತರಿಗೆ ನೀಡಿಲ್ಲ ಇಲ್ಲ. ಬರ ಪರಿಹಾರದ ಹಣವೂ ಇಲ್ಲ. ಬಿತ್ತನೆ ಬೀಜಗಳ ಬೆಲೆ ಏರಿಕೆಯಾಗಿದೆ. ಭೂ ಸಿರಿ ಯೋಜನೆಯನ್ನು ನಿಲ್ಲಿಸಲಾಗಿದೆ. ರೈತ ವಿದ್ಯಾನಿಧಿ ಯೋಜನೆಯನ್ನು ನಿಲ್ಲಿಸಲಾಗಿದೆ. ದುಪ್ಪಟ್ಟು ಹಣವನ್ನು ವಿದ್ಯುತ್ ಟ್ರಾನ್ಸ್ ಫಾರ್ಮರ್ ಗಳಿಗೆ ನೀಡುವಂತಾಗಿದೆ, ಪೆಟ್ರೋಲ್, ಡೀಸೆಲ್ ಬೆಲೆಯನ್ನು ಏರಿಕೆಮಾಡಲಾಗಿದೆ, ಮುದ್ರಾಂಕ ದರವನ್ನು ಏರಿಸಿದೆ. ಆಸ್ತಿ ನೋಂದಣಿ ಶೇ.30 ರಷ್ಟು ಹೆಚ್ಚಾಗಿದೆ. ಕ್ಷೀರ ಸಮೃದ್ಧಿ ಬ್ಯಾಂಕ್ ಯಾಕೆ ಪ್ರಾರಂಭಿಸಿಲ್ಲ, 824 ರೈತರ ಆತ್ಮಹತ್ಯೆಗೆ ಕಾರಣಗಳೇನು? ಮತ್ತು ರೈತರಿಗೆ ಅತ್ಯಂತ ನಿಕಟವಾಗಿರುವ ಇಲಾಖೆ ಕಂದಾಯ ಇಲಾಖೆ, ಆ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. 40% ಸರ್ಕಾರ ಎಂದಿದ್ದ ಕಾಂಗ್ರೆಸ್ ಈಗ ಅದೇ ಆರೋಪ ಎದುರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದರು.
ನ್ಯಾಯಮೂರ್ತಿ ನಾಗಮೋಹನ್‍ದಾಸ್ ಆಯೋಗ ಕಳೆದ ಒಂದು ವರ್ಷದಿಂದ ಸಮರ್ಪಕವಾಗಿ ತನಿಖೆ ನಡೆಸುತ್ತಿಲ್ಲ ಎಂದು ನ್ಯಾಯಾಲಯ ಛೀಮಾರಿ ಹಾಕಿದೆ. ಬೆಲೆ ಏರಿಕೆಯನ್ನು ಬಳುವಳಿಯಾಗಿ ಕೊಟ್ಟ ಕಾಂಗ್ರೆಸ್ ಸರ್ಕಾರ ವಿದ್ಯುತ್ ದರ, ಪಶು ಆಹಾರಕ್ಕೆ ಪ್ರತಿ ಮೆಟ್ರಿಕ್ ಟನ್ ಗೆ ರೂ. 500 ಹೆಚ್ಚಿಸಿದೆ. ಹಾಲಿನ ದರವನ್ನು ರೂ.4ರಷ್ಟನ್ನು ಏರಿಸಿ ಆ ಹಣವನ್ನು ರೈತರಿಗೆ ತಲುಪಿಸಲಾಗುವುದು ಎಂದು ಹೇಳಿಕೆ ಕೊಟ್ಟು, ಏಕೆ ರೈತರಿಗೆ ತಲುಪಿಸಿಲ್ಲ. ಮತ್ತೆ ಈಗ ಅದೇ ಕಾರಣವನ್ನು ನೀಡಿ 2 ರೂ ಹೆಚ್ಚಿಸಲಾಗಿದೆ. ಒಟ್ಟು ಈ 6 ರೂಗಳನ್ನು ಯಾವಾಗ ರೈತರಿಗೆ ನೀಡುತ್ತೀರ? ಇಷ್ಟೆಲ್ಲಾ ರಾಜ್ಯದ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಧೋರಣೆಗಳಿದ್ದು ಇಂತಹ ಸರ್ಕಾರ ಅಧಿಕಾರದಲ್ಲಿರಬಾರದು ಎಂದು ರಾಜ್ಯಪಾಲರು ಈ ಮನವಿ ಪತ್ರ ಮುಟ್ಟಿದ ತಕ್ಷಣ ಕೂಡಲೇ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವನ್ನು ವಜಾಗೊಳಿಸಿ ರಾಜ್ಯದ ರೈತರನ್ನು ಕಾಪಾಡಲು ಈ ಮೂಲಕ ಬಿಜೆಪಿ ಗದಗ ಜಿಲ್ಲಾ ರೈತ ಮೋರ್ಚಾದಿಂದ ಆಗ್ರಹಿಸಿ ಮನವಿಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ರಾಜಣ್ಣ ಕುರಡಗಿ, ಬಿಜೆಪಿ ಮುಖಂಡರಾದ ಶ್ರೀಪತಿ ಉಡುಪಿ, ಬಸವಣ್ಣೆಪ್ಪ ಚಿಂಚಲಿ, ಅಶೋಕ ಸಂಕಣ್ಣವರ, ಸಿದ್ದಪ್ಪ ಈರಗಾರ, ಶಂಕರ ಕರಿಬಿಷ್ಠಿ, ಶಿವಪ್ಪ ಮುಳ್ಳಾಳ, ಪ್ರಭು ಕಲಬಂಡಿ, ಗುರುಶಾಂತಗೌಡ ಮರಿಗೌಡ್ರ, ಸಂತೋಷ ಅಕ್ಕಿ, ಮಹೇಶ ಸೊರಟೂರ, ಸುಧೀರ ಕಾಟಿಕರ, ಸುರೇಶ ಮುಳ್ಳಪ್ಪನವರ, ಸುರೇಶ ಚಿತ್ತರಗಿ, ಸಿದ್ದರಾಮೇಶ ಹಿರೇಮಠ, ಮುತ್ತಣ್ಣ ಮೂಲಿಮನಿ, ವಿಜಯ ಕುರ್ತಕೋಟಿ, ಫಕ್ಕೀರೇಶ ರಟ್ಟಿಹಳ್ಳಿ, ಶಾಂತಯ್ಯ ಮುತ್ತಿನಪೆಂಡಿಮಠ, ಇರ್ಷಾದ ಮಾನ್ವಿ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ