26-06-2024 ಬುಧವಾರ ಉಭಯ ಗುರುಗಳ ಮಹಾರಥೋತ್ಸವ
ನಮ್ಮ ಭಾರತ ಭೂಮಿಯ ಗುರು ಪರಂಪರೆಯ ಪವಿತ್ರ ನೆಲೆಯಾದ ಕೃತಪೂರ ಎಂದರೆ ಇಂದಿನ ಗದಗಿನ ಶ್ರೀ ವಿರೇಶ್ವರ ಪುಣ್ಯಾಶ್ರಮ
“ಹೆತ್ತವರು ಹೊತ್ತೊಗೆದ
ಅತ್ತು ಕರೆಯುವ ಅಂಧಃ
ಕಂದಮ್ಮಗಳ ಎತ್ತಿ ತಂದು
ಗಾನ ಜೋಗುಳ ಹಾಡಿ ಬೆಳೆಸಿ
ಬೆಳಕನ್ನು ನೀಡುವ ಮಾತೃ ಮಡಿಲು”
ಧಾರವಾಡ ಜಿಲ್ಲೆಯ ಹಾನಗಲ್ಲ ತಾಲೂಕಿನ ಕಾಡಶೆಟ್ಟಿ ಹಳ್ಳಿಯ ಚರಂತಿಮಠದ ಶ್ರೀ ಗುರುಪಾದಯ್ಯ ಧರ್ಮಪತ್ನಿ ನೀಲಮ್ಮನವರ ಪವಿತ್ರ ಉದರದಲ್ಲಿ ಕ್ರಿ.ಶ. 1892 ರ ಫೆಬ್ರುವರಿ 2 ರಂದು ಪಂಚಾಕ್ಷರಿ ಗವಾಯಿಗಳವರು ಜನ್ಮತಾಳಿದರು. ಶಿಶು ಭೂಮಿಗೆ ಬಂದಾಗ ತಂದೆ ತಾಯಿಗಳನ್ನು ನೋಡದ ಜನ್ಮಾಂಧನಾದ ಬಾಲಕ ಲೋಕದ ಅಜ್ಞಾನ ಅಂಧಕಾರ ಕಳೆಯುವ ಮಹಾಪುರುಷನಾಗುವನೆಂಬುದು ಆ ದಂಪತಿಗಳು ಅರಿಯುವುದಾದರು ಹೇಗೆ ? ಮಗು ಹೇಗಿದ್ದರೇನು ಮುದ್ದಾಗಿ ಪಾಲನೆ ಪೋಷಣೆ ಮಾಡುವುದು ಹೆತ್ತವರ ಕರ್ತವ್ಯ. ಶುಭ ದಿನದಂದು ಮಗುವಿಗೆ ಗದಿಗೆಯ್ಯನೆಂದು ನಾಮಕರಣ ಮಾಡಿದರು. ದಿವ್ಯತ್ವದ ಭವಿಷ್ಯದ ಬೆಳಕಿನಲ್ಲಿ ಉತ್ಸಾಹದಿಂದ ಬೆಳೆಯತೊಡಗಿತು ಬೆಳದಿಂಗಳ ಚಂದ್ರನಂತೆ ಹೊಳೆವ ವದನಕಳೆಯ ಎಳೆತನದಲ್ಲಿ ತನ್ನ ಇಂಪಾದ ಕಂಠಸಿರಿಯಿಂದ ಹತ್ತು ಹಲವಾರು ದೇವರ ಭಜನೆಗಳನ್ನು ಹಾಡುತ್ತಿದ್ದ “ಬೆಳೆಯುವ ಸಿರಿಯನ್ನು ಮೊಳಕೆಯಲ್ಲಿ ಕಾಣು” ಎಂಬ ವಾಣಿಯಂತೆ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳು ಕಾಡಶೆಟ್ಟಿ ಹಳ್ಳಿಗೆ ತಮ್ಮ ದರ್ಶನ ನೀಡಿದಾಗ ಗದಿಗಯ್ಯನ ಮಧುರ ಕಂಠಸಿರಿಯಿಂದ ಹೊರ ಹೊಮ್ಮಿದ ಭಕ್ತಿಗೀತೆಗಳನ್ನು ಕೇಳಿ ಮಹಾದಾನಂದ ಪಟ್ಟರು. ಶ್ರೀ ಕುಮಾರ ಮಹಾಸ್ವಾಮಿಗಳು ತಮ್ಮ ದಿವ್ಯದೃಷ್ಟಿಯಿಂದ ಬಾಲಕನ ಭವ್ಯ ಭವಿಷ್ಯದ ಭರವಸೆಯನ್ನು ಗುರುತಿಸಿ ಕರುಣೆಯಿಂದ ಅಂಧ ಕಂದನನ್ನು ತಮ್ಮ ಜೋಳಿಗೆಗೆ ಹಾಕಿಸಿಕೊಂಡು ಹಾನಗಲ್ಲ ವಿರಕ್ತಮಠಕ್ಕೆ ಕರೆತಂದರು. ಆತನಿಗೆ ಸಂಗೀತ ಶಿಕ್ಷಣದ ಮಾರ್ಗದಶನದ ವ್ಯವಸ್ಥೆಯನ್ನು ಶ್ರೀಗಳು ದೊರಕಿಸಿದರು. ಶಾಸ್ತ್ರೀಯ ಸಂಗೀತ ತರಬೇತಿಗಾಗಿ ಗಾನವಿದ್ಯೆಯನ್ನು ಕಲ್ಪಿಸಿದರು. ನಂತರ ಗದಿಗೆಯ್ಯನವರು ನೀಲಕಂಠ ಗವಾಯಿಗಳಲ್ಲಿ ಹಿಂದೂಸ್ಥಾನಿ ಸಂಗೀತವನ್ನು ಪಡೆದರು. ಅಂದಿನ ಕಾಲದಲ್ಲಿ ಇವರಿಗಾಗಿ ಸಂಗೀತ ವಿದ್ಯೆ ಕಲಿಸಲು ಶ್ರಮಿಸಿದ ಹಾನಗಲ್ಲೇಶನ ಕೃಪಾಕಟಾಕ್ಷೆ ಸ್ಮರಣೀಯ.
ಕ್ರಿ. ಶ. 1908ರಲ್ಲಿ ಬಾಗಲಕೋಟೆಯಲ್ಲಿ ಜರುಗಿದ ಅಖಿಲ ಭಾರತ ವೀರಶೈವ ಮಹಾಸಭೆಯ ನಾಲ್ಕನೇಯ ಅಧಿವೇಶನದಲ್ಲಿ ಪಂಡಿತರಾದ ಗದಿಗಾರ್ಯರ ಪಂಚಮ ಪ್ರಣವನಾದದ ಸಂಗೀತ ಮಾಧುರ್ಯ ಆಲಿಸಿದ ಶ್ರೀಕುಮಾರ ಮಹಾಸ್ವಾಮಿಗಳು ಆನಂದದಿ ಪ್ರಣವ ಪಂಚಾಕ್ಷರಿಯನ್ನು ಪಡೆದುಕೊಂಡವರೆಂಬ ಆತ್ಮಸಂತೋಷದಿಂದ ಪೂಜ್ಯರು ಅಂದಿನಿಂದ ನೀನು ಪಂಚಾಕ್ಷರಿಯೆಂದು ಹೆಸರಾಗಲು ಹರಸಿದರು. ಶ್ರೀಪೂಜ್ಯ ಕುಮಾರ ಮಹಾಸ್ವಾಮಿಗಳು ನೀಡಿದ ಮಾರ್ಗದರ್ಶನ ಆದರ್ಶತೆಗೆ ತಮ್ಮನ್ನು ಮುಡಿಪಾಗಿಟ್ಟು ಆ ಜನ್ಮ ಬ್ರಹ್ಮಚಾರಿಯಾಗಿ ಶ್ರೀಪಂಚಾಕ್ಷರಿ ಶ್ರೀಗಳು ಸಮಾಜಕ್ಕೆ ಸಂಗೀತ ಸೇವೆಯ ಕಾರ್ಯದಲ್ಲಿ ನಿರತರಾಗಿ ಅಡಿ ಇರಿಸಿ.
“ಎನ್ನ ಕಾಯುವ ದಂಡಿಗೆಯ ಮಾಡಯ್ಯ
ಎನ್ನ ಶಿರವ ಸೋರೆಯ ಮಾಡಯ್ಯ
ಎನ್ನ ನರವ ತಂತಿಯ ಮಾಡಯ್ಯ
ಎನ್ನ ಬೆರಳ ಕಡ್ಡಿಯ ಮಾಡಯ್ಯ
ಬತ್ತೀಸಿರಾಗವ ಹಾಡಯ್ಯ ಊರದಲೊತ್ತಿ
ಬಾರಿಸು ಕೂಡಲ ಸಂಗಮದೇವ”
ಎಂಬ ಕಾಯಕಯೋಗಿ ಬಸವಣ್ಣನವರ ದಾರ್ಶನಿಕ ನುಡಿಯಂತೆ ಸಂಗೀತ ಪ್ರಪಂಚಕ್ಕೆ ವೀರಶೈವರು ಮಾಡಿದ ಸೇವೆ ಶ್ರದ್ಧೆ ಶ್ರಮ ಅಮೋಘವಾಗಿದ್ದು ಚತುರ್ವೇದದಲ್ಲಿ ನಾಮವೇದವು ಸಂಗೀತಮಯವಾಗಿದೆ ಪರಶಿವನು ನಾದಮಯ ನಾದಲೋಲನೆಸಿಕೊಂಡಿದ್ದಾನೆ. ಲೌಕಿಕ ಸಂಗೀತ ಬರಿ ಮನರಂಜನೆಯ ವಿಲಾಸವೆನಿಸುವುದು ಪೂಜ್ಯರು ತಮ್ಮ ಪಾರಮಾರ್ಥ ಪರಮ ಸಂಗೀತನಾದದಿಂದ ಕಾಯಕ ತಪಸ್ಸಿನಿಂದ ಜಗದ ಜಂಗಮನನ್ನು ಸಾಕ್ಷಾತ್ಕರಿಸಿದರು. ಶಿವಪೂಜೆ ನಿಷ್ಠೆಯಿಂದ 1914ರಲ್ಲಿ ಪ್ರಥಮವಾಗಿ ರೋಣ ತಾಲೂಕು ನಿಡಗುಂದಿಕೊಪ್ಪದ ಶಾಖಾ ಶಿವಯೋಗ ಮಂದಿರದಲ್ಲಿ ಸ್ವತಂತ್ರವಾಗಿ ಶ್ರೀಕುಮಾರೇಶ್ವರ ಸಂಗೀತಪಾಠ ಶಾಲೆ ನೆಲೆಯೂರಿತು. ಆರ್ಥಿಕ ಸಂಕಷ್ಟಕ್ಕೆ ತಲೆಬಾಗದೆ ಸಮಾಜದ ಹಲವಾರು ನಿಂದನೆ ನುಡಿಗೆ ಕಿವಿಗೊಡದೆ ಜಾತಿಭೇದವಿಲ್ಲದೆ ಪರಮ ಸಂಗೀತ ಸುಧೆಯನ್ನು ಸವಿಯುವ ಸೌಭಾಗ್ಯವನ್ನು ಸರ್ವಜನತೆಗೂ ಪೂರೈಸುವಂತೆ ಆಶ್ರಯ ನೀಡಿದ ಉದಾರ ಅಮರ ಜೀವಿಗಳು “ಗುರು ಶಿಕ್ಷಕನಾದರೆ ಜಂಗಮ ಪರಿಕ್ಷಕನು” ಎಂಬ ವೇದೋಕ್ತಿಯಂತೆ ಸಹಸ್ರಾರು ಅಂಧಃ ಮಕ್ಕಳ ಕುರುಡುತನದಿಂದ ಮುದುಡಿದ ಹೃದಯವನ್ನು ಶ್ರೀಗಳು ತಮ್ಮ ಕಾರುಣ್ಯ ದೃಷ್ಟಿಯಿಂದ ಗಾನಗಂಗೆಯನ್ನು ಎರೆದು ಬಳಲಿ ಬಾಡಿದ ಬದುಕನ್ನು ನಂದನವನ್ನಾಗಿಸಿ ಸಮಾಜದಲ್ಲಿ ಸ್ಥಾನಮಾನ ಕರುಣಿಸಿದ್ದಾರೆ.
ಅಸಂಖ್ಯಾತ ಭಕ್ತಿಪರ ವಚನ, ಪ್ರವಚನ, ದಾಸರ ದಾರ್ಶನಿಕ ಗೀತೆಗಳಿಗೆ ಸಂಗೀತ ನೀಡಿ ಜನರನ್ನು ಭಕ್ತಿ ಮಾರ್ಗದಡೆಗೆ ಕೊಂಡೊಯ್ದು ಜನಜೀವನ ಪಾವನಗೊಳಿಸಿದ್ದಾರೆ. ಪೂಜ್ಯ ಪಂ. ಪಂಚಾಕ್ಷರ ಗವಾಯಿಗಳು ಅಂತ್ಯಾವಸ್ಥೆಯಲ್ಲಿ ನಾದಮಯರಾಗಿ ಜೂನ್ 11ರ 1944 ರಲ್ಲಿ ಪ್ರಾಣ ಕುಸುಮವನ್ನು ಜಗದ ಜಂಗಮನ ಚರಣಕ್ಕೆ ಸಲ್ಲಿಸಿ ನಾದಯೋಗಿಗಳು ಅಂದಿನ ಇಂದಿಗೂ ಭಗವಾದ್ಭಾವನೆಯಿಂದ ಪರಮ ಪವಾನವಾದ ಗದುಗಿನ ವೀರೇಶ್ವರ ಪುಣ್ಯಾಶ್ರಮವು ಡಾ|| ಪಂ. ಪುಟ್ಟರಾಜ ಗವಾಯಿಗಳ ದಯಾಶೀಲತೆಯಿಂದ ಅಂಧಮಕ್ಕಳ ರಕ್ಷಣೆಯ ಸತ್ಪ್ರಾತ್ರೆಯಾಗಿದೆ. ಪವಿತ್ರವಾದ ಪರಂಪರೆಯನ್ನು ಪೂಜ್ಯ ಶ್ರೀ ಕಲ್ಲಯ್ಯಜ್ಜನವರು ಭಕ್ತರ ಬೆಂಬಲದಿಂದ ಮುನ್ನೆಡೆಸಿಕೊಂಡು ಹೋಗುತ್ತಿದ್ದಾತೆ. ಸೇವೆಯ ಶಕ್ತಿಯಿಂದ ಬಸರಿಗೀಡದ ವೀರಪ್ಪನವರ ದಾನ ಗದುಗಿನ ಧರೆಯಲ್ಲಿ ಸಾರ್ಥಕವಾಗಿದೆ. ಇದೇ 26-06-2024 ರ ಬುಧವಾರ ಜರುಗುವ ಉಭಯ ಗುರುಗಳು ಜಾತ್ರಾಮಹೋತ್ಸವ ಜರುಗುತ್ತದೆ.
More Stories
ಪತ್ರಕರ್ತ ರಾಜೀವ ಕಿದಿಯೂರುಗೆ ಸಿರಿಗನ್ನಡ ಸಿರಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಮಾಜಿ ಸೈನಿಕರಿಂದ ಪಿಎಸ್ಐ ಲಕ್ಷ್ಮಪ್ಪ ಆರಿಗೆ ಸನ್ಮಾನ