December 23, 2024

AKSHARA KRAANTI

AKSHARA KRAANTI




ಭಾಗ್ಯನಗರದಲ್ಲಿ ಪೊಲೀಸ್ ಸ್ಟೇಶನ್ ಪ್ರಾರಂಭಿಸಲು ಮನವಿ

ಭಾಗ್ಯನಗರದಲ್ಲಿ ಪೊಲೀಸ್ ಸ್ಟೇಶನ್ ಪ್ರಾರಂಭಿಸಲು ಮನವಿ

ಅಕ್ಷರಕ್ರಾಂತಿ ನ್ಯೂಸ್
ಕೊಪ್ಪಳ,: ಪಟ್ಟಣ ಪಂಚಾಯತಿಯಾಗಿ ಪರಿವರ್ತನೆಗೊಂಡಿರುವ ಭಾಗ್ಯನಗರದ ಕಾನೂನು ಸುವ್ಯವಸ್ಥೆ ಸುಗಮಗೊಳಿಸಲು ತುರ್ತಾಗಿ ಶಾಶ್ವತ ಪೊಲೀಸ್ ಠಾಣೆಯನ್ನು ಮಂಜೂರು ಮಾಡುವ ಕುರಿತು ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ರಾಮ್ ಎಲ್.ಅರಸಿದ್ದಿ ಅವರಿಗೆ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ ಅವರು ಮನವಿ ಸಲ್ಲಿಸಿದ್ದಾರೆ.

ಭಾಗ್ಯನಗರ ಪಟ್ಟಣವು ಕೊಪ್ಪಳ ನಗರದಿಂದ 1 ಕಿಮೀ ದೂರದಲ್ಲಿದ್ದು, ಅಂದಾಜು 25,000ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹಾಗೂ ಕೊಪ್ಪಳ ನಗರಸಭೆಯ ವ್ಯಾಪ್ತಿಯಷ್ಟೇ ಪ್ರದೇಶವನ್ನು ಹೊಂದಿದೆ. ಗುಡಿ ಕೈಗಾರಿಕೆ, ನೇಕಾರಿಕೆ, ಕೇಶೋದ್ಯಮ ಹಾಗೂ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಧಾನವಾಗಿ ಹೊಂದಿರುವ ಮೂಲ ಭಾಗ್ಯನಗರದ ವ್ಯಾಪ್ತಿಯನ್ನು ಮೀರಿ ಬಡಾವಣೆಗಳು ವಿಶಾಲವಾಗಿ ಹರಡಿಕೊಂಡಿರುವ ಕುರಿತು ಎಸ್ಪಿ ಅವರಿಗೆ ವಿವರಿಸಲಾಯಿತು.

ಭಾಗ್ಯನಗರ ಹಾಗೂ ಕೊಪ್ಪಳ ನಗರವನ್ನು ವಿಭಜಿಸುತ್ತಿದ್ದ ರೈಲ್ವೆ ಹಳಿಗೆ ಹಲವಾರು ಸೇತುವೆಗಳು ಬಂದಿರುವುದರಿಂದ ಪಟ್ಟಣವು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಕೈಗಾರಿಕಾ ಹಾಗೂ ನಿರ್ಮಾಣ ಚಟುವಟಿಕೆಗಳೂ ದೊಡ್ಡ ಪ್ರಮಾಣದಲ್ಲಿ ಚಾಲ್ತಿಯಲ್ಲಿವೆ. ಇದರಿಂದಾಗಿ ಭಾಗ್ಯನಗರದ ಭದ್ರತೆ ಇತ್ತೀಚಿನ ದಿನಗಳಲ್ಲಿ ಸವಾಲಾಗಿ ಪರಿಣಮಿಸುತ್ತಿದೆ. ಪಟ್ಟಣದಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚುತ್ತಿವೆ. ಸರ ಅಪಹರಣ, ಮನೆಕಳ್ಳತನ, ವಾಹನ ಕಳ್ಳತನ, ಮೊಬೈಲ್ ಕಳ್ಳತನಗಳು ನಿತ್ಯ ನಡೆಯುತ್ತಿವೆ. ಕುಡಿದು ಜಗಳವಾಡುವ ಪ್ರಸಂಗಗಳು ಸಹ ಅಧಿಕವಾಗಿವೆ. ಪೊಲೀಸರ ನಿರಂತರ ಉಪಸ್ಥಿತಿ ಇಲ್ಲದಿರುವುದರಿಂದ, ಕೆಲವೊಮ್ಮೆ ಜಗಳಗಳು ವಿಕೋಪಕ್ಕೆ ಹೋಗಿರುವ ಸಾಕಷ್ಟು ಘಟನೆಗಳು ನಡೆದಿರುವುದನ್ನು ಎಸ್ಪಿ ಅವರ ಗಮನಕ್ಕೆ ತರಲಾಯಿತು.
ಈ ಹಿಂದೆ ಹಲವಾರು ಸಂದರ್ಭಗಳಲ್ಲಿ, ಸಾಕಷ್ಟು ಪೊಲೀಸ್ ಭದ್ರತೆ ಇಲ್ಲದ್ದರಿಂದ, ಭಾಗ್ಯನಗರದ ನಿವಾಸಿಗಳೇ ರಾತ್ರಿ ಕಾವಲು ಕಾಯಬೇಕಾದ ಪ್ರಸಂಗಗಳು ಉದ್ಭವಿಸಿದ್ದವು. ಈ ಕುರಿತು ಮಾಧ್ಯಮಗಳಲ್ಲಿಯೂ ವ್ಯಾಪಕವಾಗಿ ವರದಿಗಳು ಪ್ರಸಾರವಾಗಿದ್ದವು, ಪ್ರಕಟವಾಗಿದ್ದವು. ಇತ್ತೀಚಿನ ದಿನಗಳಲ್ಲಿ ಭಾಗ್ಯನಗರದಲ್ಲಿ ಕಳ್ಳತನದ ಪ್ರಕರಣಗಳು ಮತ್ತೆ ಹೆಚ್ಚತೊಡಗಿವೆ. ವಿಶಾಲವಾದ ಬಡಾವಣೆಗಳಲ್ಲಿಯ ನಿವಾಸಿಗಳು ಸರಗಳ್ಳತನಕ್ಕೆ ಮತ್ತು ಮೊಬೈಲ್ ಕಳ್ಳತನಕ್ಕೆ ಒಳಗಾಗುತ್ತಿದ್ದಾರೆ. ಅಭಿವೃದ್ಧಿ ಹೊಂದುತ್ತಿರುವ ಹಾಗೂ ಖಾಲಿ ಬಡಾವಣೆಗಳ ನಿವೇಶನಗಳಲ್ಲಿ ರಾತ್ರಿ ಸಮಯದಲ್ಲಿ ಮದ್ಯಪಾನ, ಪಾರ್ಟಿ ಮತ್ತು ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಪಟ್ಟಣದ ಹೃದಯಭಾಗದಲ್ಲಿರುವ ಹಲವಾರು ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ಗಳೂ ಇದರಿಂದ ಹೊರತಾಗಿಲ್ಲ ಎಂಬ ವಿಷಯಗಳ ಕುರಿತು ಎಸ್ಪಿ ಅವರ ಗಮನ ಸೆಳೆಯಲಾಗಿದೆ.
ಸಾಕಷ್ಟು ಪೊಲೀಸ್ ಭದ್ರತೆ ಇಲ್ಲದಿರುವುದೇ ಈ ಎಲ್ಲ ಅಕ್ರಮ ಚಟುವಟಿಕೆಗಳು ಹೆಚ್ಚಲು ಕಾರಣವಾಗಿದೆ. ಆದ್ದರಿಂದ ಭಾಗ್ಯನಗರಕ್ಕೆ ತುರ್ತಾಗಿ ಶಾಶ್ವತ ಪೊಲೀಸ್ ಠಾಣೆಯನ್ನು ಮಂಜೂರು ಮಾಡಿ, ಸೂಕ್ತ ಪ್ರಮಾಣದಲ್ಲಿ ಮೂಲಸೌಕರ್ಯ ಹಾಗೂ ಸಿಬ್ಬಂದಿಯನ್ನು ನಿಯೋಜಿಸಬೇಕು. ಅಲ್ಲಿಯವರೆಗೆ, ಸಾಕಷ್ಟು ಸಿಬ್ಬಂದಿ ಹಾಗೂ ಸೌಲಭ್ಯಗಳ ಸಹಿತ ಔಟ್ ಪೋಸ್ಟ್ ನ್ನು ಶೀಘ್ರದಲ್ಲಿ ಪ್ರಾರಂಭಿಸುವಂತೆ ಕೃಷ್ಣ ಇಟ್ಟಂಗಿ ಕೋರಿದರು.

ಭಾಗ್ಯನಗರಕ್ಕೆ ಪ್ರತ್ಯೇಕ ಪೊಲೀಸ್ ಠಾಣೆ ಸ್ಥಾಪಿಸುವ ಪ್ರಸ್ತಾಪವನ್ನು ಈ ಹಿಂದೆಯೂ ಸ್ವೀಕರಿಸಲಾಗಿದೆ ಎಂಬುದನ್ನು ವಿವರಿಸಿದ ಎಸ್ಪಿ ಡಾ. ರಾಮ್ ಎಲ್.ಅರಸಿದ್ದಿ ಅವರು, ಠಾಣೆಯ ಪ್ರಾರಂಭಕ್ಕೆ ಅವಶ್ಯವಾಗಿರುವ ಮಾನದಂಡಗಳು ಲಭ್ಯವಿರುವುದನ್ನು ಪರಿಶೀಲಿಸಿ, ಸದರಿ ಮನವಿಯನ್ನು ಮುಂದಿನ ಕ್ರಮಕ್ಕೆ ಕಳಿಸಿಕೊಡುವುದಾಗಿ ಭರವಸೆ ನೀಡಿದರು.

 

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!