ಮುನಿರಾಬಾದ್ ರೈಲು ನಿಲ್ದಾಣದ ಪುನರಾಭಿವೃದ್ಧಿ, ಹುಲಿಗಿ ಮೇಲ್ಸೇತುವೆ ನಿರ್ಮಾಣಕ್ಕೆ ಪ್ರಧಾನಮಂತ್ರಿಗಳಿಂದ ಶಂಕುಸ್ಥಾಪನೆ
ಕೊಪ್ಪಳ,: ಶ್ರೀಹುಲಿಗೆಮ್ಮ ದೇವಿ ದೇವಸ್ಥಾನ ಸುಕ್ಷೇತ್ರದ ವ್ಯಾಪ್ತಿಯಲ್ಲಿನ ರೈಲ್ವೆ ಗೇಟ್ ಮೇಲ್ಸೇತುವೆ ನಿರ್ಮಾಣಕ್ಕೆ ಭೂಮಿ ಪೂಜೆ ಹಾಗೂ ಅಮೃತ ಭಾರತ ಸ್ಟೇಷನ್ ಯೋಜನೆಯಡಿ ಮುನಿರಾಬಾದ್ ರೈಲು ನಿಲ್ದಾಣದ ಪುನರಾಭಿವೃದ್ಧಿಗೆ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು.
ಮುನಿರಾಬಾದ್ ರೈಲು ನಿಲ್ದಾಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಮಾರಂಭವನ್ನು ಕೊಪ್ಪಳ ಸಂಸದರಾದ ಕರಡಿ ಸಂಗಣ್ಣ ಅವರು ಉದ್ಘಾಟಿಸಿ ಮಾತನಾಡಿ, ದೇಶದಲ್ಲಿಂದು ಪ್ರಧಾನ ಮಂತ್ರಿಗಳ ನೇತೃತ್ವದಲ್ಲಿ ಅಮೃತ ಭಾರತ ಸ್ಟೇಷನ್ ಯೋಜನೆಯಡಿ 554 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ, ಉದ್ಘಾಟನೆ ಜೊತೆಗೆ 1500 ರೈಲ್ವೆ ಬ್ರಿಡ್ಜ್ ನಿರ್ಮಾಣಕ್ಕೆ ಭೂಮಿ ಪೂಜೆ ಮತ್ತು ಲೋಕಾಪಣೆ ನಡೆದಿದೆ. ಯಾವ ರಾಷ್ಟವು ರೈಲ್ವೆ, ವಾಯು ವಲಯ, ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಜಲ ಮಾರ್ಗಗಳನ್ನು ಹೆಚ್ಚು-ಹೆಚ್ಚು ಅಭಿವೃದ್ಧಿ ಪಡೆಸುತ್ತದೆಯೋ ಅಂತಹ ದೇಶವು ಜಗತ್ತಿನ ಮುಂದುವರೆದ ರಾಷ್ಟ್ರಗಳ ಪಟ್ಟಿಯಲ್ಲಿ ಬರುತ್ತದೆ. ಈ ಹಿನ್ನೆಲೆಯಲ್ಲಿ ಪಿಎಂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರೈಲ್ವೆ, ವಾಯು ವಲಯ, ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಜಲ ಮಾರ್ಗಗಳ ಅಭಿವೃದ್ಧಿಗಾಗಿ ಹೆಚ್ಚು ಒತ್ತು ನೀಡಿದೆ ಎಂದರು.
ಕೇಂದ್ರ ಸರ್ಕಾರವು ನೀಡಿರುವ ಉಜ್ವಲ ಯೋಜನೆ ಸುಮಾರು 10 ಕೋಟೆ ಮಹಿಳೆಯರಿಗೆ ಅನುಕೂಲವಾಗಿದೆ. ಇತ್ತೀಚೆಗೆ ಜಾರಿಗೆಯಾದ ಪಿಎಂ ವಿಶ್ವಕರ್ಮ ಯೋಜನೆಯು ಅತ್ಯಂತ ಮಹತ್ವದ ಕಾರ್ಯಕ್ರಮವಾಗಿದ್ದು, ಇದರಲ್ಲಿ ತರಬೇತಿ, ಟೂಲ್ಸ್ ಕಿಟ್ ಜೊತೆಗೆ ಸಾಲ ಸೌಲಭ್ಯ ಸಿಗಲಿದೆ. ಪಿಎಂ ಸ್ವನಿಧಿ ಯೋಜನೆ ಮೂಲಕ ಬೀದಿ ಬದಿ ವ್ಯಾಪಾರಸ್ಥರಿಗೆ ಬದುಕು ಕಟ್ಟಿಕೊಳ್ಳಲು ಅನುಕೂಲವಾಗಿದೆ. ಇದರ ಜೊತೆಗೆ ಕೇಂದ್ರ ಸರ್ಕಾರವು ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.
ದಾಖಲೆಯ ರೈಲ್ವೆ ರಸ್ತೆ ಸೇತುವೆಗಳು: ಕೊಪ್ಪಳ ಜಿಲ್ಲೆಯ ಮುನಿರಾಬಾದ್-ಬನ್ನಿಕೊಪ್ಪವರೆಗೆ ದಾಖಲೆಯ 9 ರೈಲ್ವೆ ರಸ್ತೆ ಕೆಳ ಮತ್ತು ಮೇಲ್ಸೇತುವೆಗಳು ನಿರ್ಮಾಣವಾಗುತ್ತಿವೆ. ಬನ್ನಿಕೊಪ್ಪ ಮತ್ತು ಅಗಳಕೇರಾ ರೈಲ್ವೆ ಗೇಟ್ನಲ್ಲಿ ರೈಲ್ವೆ ರಸ್ತೆ ಸೇತುವೆ ನಿರ್ಮಾಣಕ್ಕಾಗಿ ಪ್ರಸ್ತಾವನೆಯು ರೈಲ್ವೆ ಮಂಡಳಿಗೆ ಹೋಗಿದೆ. ಈ ಎರಡು ಪ್ರದೇಶಗಳಲ್ಲಿಯೂ ರೈಲ್ವೆ ಬಿಡ್ಜ್ ನಿರ್ಮಾಣವಾದರೆ ಮುನಿರಾಬಾದ್-ಬನ್ನಿಕೊಪ್ಪವರೆಗಿನ ಎಲ್ಲಾ 11 ಸ್ಥಳಗಳಲ್ಲಿ ರೈಲ್ವೆ ಬ್ರಿಡ್ಜ್ ನಿರ್ಮಾಣಗೊಂಡು ಇತಿಹಾಸದ ದಾಖಲೆಯಾಗಲಿದೆ ಎಂದರು.
ಮುನಿರಾಬಾದ್ ರೈಲೆ ನಿಲ್ದಾಣದ ಉನ್ನತಾಭಿವೃದ್ಧಿಗೆ ಕ್ರಮ: ಕೊಪ್ಪಳ ಜಿಲ್ಲೆಯ ಶ್ರೀಕ್ಷೇತ್ರ ಹುಲಿಗಿಗೆ ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಇಲ್ಲಿಗೆ ಬರುವ ಜನರಿಗೆ ಸುಗಮ ಸಂಚಾರಕ್ಕಾಗಿ ರೈಲ್ವೆ ಮೇಲ್ಸೇತುವೆ ಅತ್ಯಗತ್ಯವಾಗಿತ್ತು. ಈ ನಿಟ್ಟಿನಲ್ಲಿ ಹುಲಿಗಿ ರೈಲ್ವೆ ಮೇಲ್ಸೇತುವೆಗಾಗಿ ಶಂಕುಸ್ಥಾಪನೆ ನೆರವೇರಿಸಲಾಗಿದೆ. ವಿಶೇಷ ದಿನಗಳಂದು ಆಂದ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟç ಸೇರಿದಂತೆ ವಿವಿಧ ರಾಜ್ಯಗಳಿಂದ ಭಕ್ತಾಧಿಕಗಳು ಹುಲಿಗಿಗೆ ಆಗಮಿಸುತ್ತಾರೆ. ಮೊನ್ನೆಯ ಹುಣ್ಣಿಮೆಯ ದಿನದಂದು ಸುಮಾರು 4ಲಕ್ಷ ಜನರು ಭಾಗವಹಿಸಿದ್ದರು ಎನ್ನಲಾಗುತ್ತಿದೆ. ಪ್ರಸ್ತುತ ಅಮೃತ ಭಾರತ ಸ್ಟೇಷನ್ ಯೋಜನೆಯಡಿ ಸುಮಾರು ರೂ. 21 ಕೋಟಿ ವೆಚ್ಚದಲ್ಲಿ ಮುನಿರಾಬಾದ್ ರೈಲು ನಿಲ್ದಾಣದ ಪುನರಾಭಿವೃದ್ಧಿಯಾಗಲಿದ್ದು, ಮುಂದಿನ ದಿನಮಾನಗಳಲ್ಲಿ ನಂ-3ರಲ್ಲಿ ಮುನಿರಾಬಾದ್ ರೈಲೆ ನಿಲ್ದಾಣದ ಉನ್ನತಾಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಹುಲಿಗಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನೀಲಮ್ಮ ಸಿದ್ದಪ್ಪ ಗುಂಗಾಡಿ, ಉಪಾಧ್ಯಕ್ಷರಾದ ನ್ಯಾಮತ್ ಅಲಿ, ಹುಲಿಗೆಮ್ಮ ದೇವಸ್ಥಾನ ಸಮಿತಿಯ ಅಧ್ಯಕ್ಷ ವಿರೇಶ, ಹೊಸಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾರುತಿ ಬಗನಾಳ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ್, ಗಣ್ಯರಾದ ಪಾಲಕ್ಷಪ್ಪ ಗುಂಗಾಡಿ, ಗೋಪಾಲ, ನಾಗರತ್ನ ಪೂಜಾರ, ಪ್ರಭು ಪಾಟೀಲ್, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ರೈಲ್ವೆ ಇಲಾಖೆ ಅಧಿಕಾರಿಗಳಾದ ವಿಜಯಕುಮಾರ, ಎಸ್.ಕೆ.ವರ್ಮಾ, ಸಂತೋಷ ಹೆಗಡೆ, ಗಿರೀಶ್ ಕಲಗೊಂಡು, ದೇವಯಾನಿ, ಪುಟ್ಟಮಲ್ಲಪ್ಪ, ಶ್ರೀನಿವಾಸ ಮೆಟ್ಲಾ ಸೇರಿದಂತೆ ರೈಲ್ವೆ ಇಲಾಖೆ ಸಿಬ್ಬಂದಿ ಇದ್ದರು.
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ