ಅನುದಾನ ಬಿಡುಗಡೆಗೊಳಿಸುವಲ್ಲಿ ಯಶ್ ಕಂಡ ಶಾಸಕ ಕೆ. ರಾಘವೇಂದ್ರ ಹಿಟ್ನಾಳ
ಮಧ್ಯ ಪ್ರದೇಶ ಮಾದರಿ ನೀರಾವರಿ ಯೋಜನೆಗೆ 554 ಕೋಟಿ ಅನುದಾನ ಮೀಸಲು
ಪ್ರಸಕ್ತ ವರ್ಷ ವಿವಿಧ ಕಾಮಗಾರಿಗಳಿಗೆ 138 ಕೋಟಿ ಅನುದಾನ ಬಿಡುಗಡೆ
ಕೊಪ್ಪಳ,: ಮಹತ್ವಾಕಾಂಕ್ಷೆಯ ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಮತ್ತೇ ಮರುಜೀವ ಬಂದಿದ್ದು, ಶಾಸಕ ಕೆ. ರಾಘವೇಂದ್ರ ಹಿಟ್ನಾಳರ ನಿರಂತರ ಪರಿಶ್ರಮದಿಂದ ಪ್ರಸಕ್ತ ವರ್ಷ ವಿವಿಧ ಕಾಮಗಾರಿಗಳಿಗೆ 138.35 ಕೋಟಿ ಅನುದಾನ ಬಿಡುಗಡೆಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ. ಬೆಂಗಳೂರಿನ ವಿಧಾನಸೌದದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕರ್ನಾಟಕ ನೀರಾವರಿ ನಿಗಮದ ಸಭೆಯಲ್ಲಿ ಮಾತನಾಡಿದ ಶಾಸಕರು, ಸಿಂಗಟಾಲೂರು ಏತ ನೀರಾವರಿ ಯೋಜನೆಯಿಂದ ಕೊಪ್ಪಳ ಭಾಗದ ಸಾವಿರಾರು ಹೆಕ್ಟೇರ್ ಭೂಮಿ ನೀರಾವರಿಯಾಗಿ ಪರಿವರ್ತನೆಗೊಳ್ಳಲಿದೆ. ಇದರಿಂದ ಈ ಭಾಗದ ರೈತರ ರಟ್ಟೆಗೆ ಶಕ್ತಿ ತುಂಬುವ ಕೆಲಸವಾಗಲಿದೆ. ಈ ನಿಟ್ಟಿನಲ್ಲಿ ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಸುಮಾರು 554 ಕೋಟಿ ಅನುದಾನದ ಅವಶ್ಯವಿದ್ದು, ಯೋಜನೆ ಪೂರ್ಣಗೊಳಿಸಲು ಅನುದಾನ ನೀಡುವಂತೆ ಸಚಿವರಿಗೆ ಮನವಿ ಮಾಡಿದ್ದು, ಸಚಿವರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಹಂತ ಹಂತವಾಗಿ ಏತ ನೀರಾವರಿ ಯೋಜನೆಗೆ ಅನುದಾನ ನೀಡುತ್ತೇನೆ ಎಂದಿದ್ದಾರೆ. ಸಧ್ಯ ಪ್ರಸಕ್ತ ವರ್ಷದಲ್ಲಿ ವಿವಿಧ ಕಾಮಗಾರಿಗಳಿಗೆ 138.35 ಕೋಟಿ ಅನುದಾನ ಬಿಡುಗಡೆಗೆ ಒಪ್ಪಿಗೆ ಸೂಚಿಸಿದ್ದಾರೆ. 2024-25ನೇ ಸಾಲಿನಲ್ಲಿ ಪ್ಯಾಕೇಜ್ ನಂ-6ರಡಿ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಮುಂಡರಗಿ ಶಾಖಾ ಕಾಲುವೆಯಿಂದ ಕೊಪ್ಪಳ ತಾಲೂಕಿನ ಬ್ಲಾಕ್ 9ರಿಂದ 12 ರವರೆಗಿನ 8582 ಹೆಕ್ಟೇರ್ ಭೂಪ್ರದೇಶಕ್ಕೆ ಮಧ್ಯಪ್ರದೇಶ ಮಾದರಿಯಲ್ಲಿ ನೀರಾವರಿ ಸೌಲಭ್ಯ ಕಲ್ಪಿಸುವ ಕಾಮಗಾರಿಯ 301 ಕೋಟಿ ಮೊತ್ತದಲ್ಲಿ ಪ್ರಸಕ್ತ ವರ್ಷ ಯೋಜನೆಗೆ 75.31 ಕೋಟಿ ಅನುದಾನ ಬಿಡುಗಡೆ ಹಾಗೂ ಪ್ಯಾಕೇಜ್ ನಂ-7ರಲ್ಲಿ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಮುಂಡರಗಿ ಶಾಖಾ ಕಾಲುವೆಯಿಂದ ಕೊಪ್ಪಳ ತಾಲೂಕಿನ ಬ್ಲಾಕ್ 13 ರಿಂದ 16ರ ವರೆಗಿನ 7941 ಹೆಕ್ಟೇರ್ ಭೂ ಪ್ರದೇಶಕ್ಕೂ ಸಹ ಮಧ್ಯಪ್ರದೇಶ ಮಾದರಿಯ ನೀರಾವರಿ ಕಲ್ಪಿಸುವ ಕಾಮಗಾರಿಯ 252 ಕೋಟಿ ಮೊತ್ತದಲ್ಲಿ ಅವಶ್ಯವಿರುವ
63.04 ಕೋಟಿ ಅನುದಾನ ಮಂಜೂರು ಆಗಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಮುಗಿಸಿ ಕಾಮಗಾರಿಯ ಅಡಿಗಲ್ಲು ನೆರವೇರಿಸುವುದರ ಮುಖಾಂತರ ಕಾಮಗಾರಿ ಪ್ರಾರಂಭ ಮಾಡಲಾಗುವುದು.ಅಲ್ಲದೇ ಅಳವಂಡಿ-ಬೆಟಗೇರಿ, ಬಹದ್ದೂರ್ ಬಂಡಿ- ನವಲಕಲ್ ಏತ ನೀರಾವರಿ ಯೋಜನೆಗೂ ಅನುದಾನ ನೀಡುವಂತೆ ಸಚಿವರಿಗೆ ಮನವಿ ಮಾಡಿದ್ದು, ಬರುವ ದಿನದಲ್ಲಿ ಎರಡು ಯೋಜನೆಗೂ ಅನುದಾನ ನೀಡುತ್ತೇವೆ ಎಂದಿದ್ದಾರೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ