ಮಕ್ಕಳ ಹಬ್ಬ ಕಾರ್ಯಕ್ರಮ
ಕೊಪ್ಪಳ,: ಜಿಲ್ಲೆಯ ಎಲ್ಲ ಅಂಗನವಾಡಿಯಲ್ಲಿ 6 ವರ್ಷದೊಳಗಿನ ಮಕ್ಕಳಿಗೆ ಶಾಲಾಪೂರ್ವ ಶಿಕ್ಷಣವನ್ನು ನೀಡಲಾಗುತ್ತಿದ್ದು, ಇದು ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ಹೇಳಿದರು.
ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗಳ ಸಹಯೋಗದಲ್ಲಿ ಮಂಗಳವಾರ ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ಪೂರ್ವ ಶಿಕ್ಷಣ ಪದ್ಧತಿಯಲ್ಲಿ 06 ತಿಂಗಳಿನಿಂದ 06 ವರ್ಷದೊಳಗಿನ ಮಗುವನ್ನು ಒಳಪಡಿಸಲಾಗುತ್ತದೆ. ಔಪಚಾರಿಕ ಶಿಕ್ಷಣಕ್ಕಿಂತ ಮೊದಲು ಮಕ್ಕಳಲ್ಲಿ ಶಿಕ್ಷಣ, ಶಾಲೆಯ ಕುರಿತು ಆಸಕ್ತಿ ಬೆಳೆಸಲು ಈ ಪದ್ದತಿ ಸಹಕಾರಿಯಾಗುತ್ತದೆ. ಮಕ್ಕಳಿಗೆ ಬಣ್ಣಗಳು, ಆಕೃತಿಗಳು, ಮರ ಗಿಡಗಳ ಪರಿಚಯ, ಆಟ, ಹಾಡು, ಕಥೆಗಳ ಮೂಲಕ ಮಕ್ಕಳಿಗೆ ಜ್ಞಾನವನ್ನು ನೀಡಲಾಗುತ್ತದೆ. ಇದರಲ್ಲಿ ಪಾಲಕರನ್ನು ಸಹ ಭಾಗಿಯಾಗಿಸುತ್ತಿದ್ದು, ಮಕ್ಕಳ ಸಾಮರ್ಥ್ಯ, ಅವಶ್ಯಕತೆಗಳ ಬಗ್ಗೆ ಪಾಲಕರಿಗೆ ತಿಳುವಳಿಕೆ ನೀಡಲಾಗುತ್ತದೆ. ಔಪಚಾರಿಕ ಶಿಕ್ಷಣಕ್ಕೆ ಮಗು ಕಾಲಿಡುವಾಗ ಯಾವುದೇ ಭಯ, ಆತಂಕವಿಲ್ಲದೆ ಶಾಲೆಗೆ ತೆರಳಲು ಮಾನಸಿಕವಾಗಿ ಮಕ್ಕಳನ್ನು ಅಂಗನವಾಡಿಗಳಲ್ಲೇ ಸಿದ್ದಪಡಿಸಲಾಗುತ್ತದೆ. ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿರುವ ಶಾಲಾ ಪೂರ್ವ ಶಿಕ್ಷಣ ಪದ್ದತಿಯನ್ನು ಅಧ್ಯಯನ ಮಾಡಲು ಬೇರೆ ರಾಜ್ಯ, ಜಿಲ್ಲೆಗಳಿಂದ ಕಾರ್ಯದರ್ಶಿಗಳು, ಅಧಿಕಾರಿಗಳು, ನಿಯೋಗಗಳನ್ನು ರಚಿಸಿಕೊಂಡು ಜಿಲ್ಲೆಗೆ ಆಗಮಿಸಿ, ಅಧ್ಯಯನ ಮಾಡಿ ತಮ್ಮ ಜಿಲ್ಲೆ, ರಾಜ್ಯದಲ್ಲಿಯೂ ಅಳವಡಿಸಲು ಮುಂದಾಗಿವೆ. ಈ ಯೋಜನೆಯು ದೇಶಕ್ಕೆ ಮಾದರಿಯಾಗಿದೆ. ಇಂತಹ ಯೋಜನೆಗಳ ಫಲಾನುಭವಿಗಳಾದ ಅಂಗನವಾಡಿ ಮಕ್ಕಳು ತಮ್ಮ ಕಲೆ, ಪ್ರತಿಭೆಯನ್ನು ಪ್ರದರ್ಶಿಸಲು ಮಕ್ಕಳ ಹಬ್ಬ ಒಂದು ಉತ್ತಮ ವೇದಿಕೆಯಾಗಿದ್ದು, ನಮ್ಮ ಯೋಜನೆ ಸಾರ್ಥಕತೆ ಪಡೆದಿದೆ ಎಂಬ ಹೆಮ್ಮೆ ನಮಗಿದೆ ಎಂದರು.
ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ ಅವರು ಮಾತನಾಡಿ, ಹುಟ್ಟಿದ ಪ್ರತಿ ಮಗುವಿನಲ್ಲಿ ಒಂದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ, ಪ್ರೋತ್ಸಾಹಿಸುವ ಅಗತ್ಯವಿದೆ. ಇದರಲ್ಲಿ ಪೋಷಕರ, ಶಿಕ್ಷಕರ ಪಾತ್ರ ಬಹುಮುಖ್ಯವಾಗುತ್ತದೆ. ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿರುವ ಶಾಲಾ ಪೂರ್ವ ಶಿಕ್ಷಣ ಪದ್ದತಿಯು ಮಗುವಿನಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ವೇದಿಕೆ ಕುರಿತಾಗಿ ಭಯ ಹೋಗಲಾಡಿಸಿ, ತಮ್ಮ ಪ್ರತಿಭೆ ಅನಾವರಣಕ್ಕೆ ಪೂರಕವಾಗಿ ಮಕ್ಕಳ ಅಭಿವೃದ್ಧಿಗೆ ಪ್ರೋತ್ಸಾಹಿಸುತ್ತದೆ. ಇಂದಿನ ಮಕ್ಕಳ ಹಬ್ಬದಲ್ಲಿ ಅಂಗನವಾಡಿಯ ಮಕ್ಕಳು ಪ್ರಸ್ತುತ ಪಡಿಸುವ ನೃತ್ಯ, ನಾಟಕಗಳಲ್ಲಿ ಅವರ ಪ್ರತಿಭೆ ಕಾಣುತ್ತದೆ. ಪೋಷಕರು ಮಕ್ಕಳಿಗೆ ಓದಿನ ಬಗ್ಗೆಯೇ ಹೆಚ್ಚಿನ ಒತ್ತಡ ಹಾಕದೆ ಪಠ್ಯೇತರ ಚಟುವಟಿಕೆಗಳ ಬಗ್ಗೆ ಮಕ್ಕಳಲ್ಲಿರುವ ಆಸಕ್ತಿಯನ್ನು ಗುರುತಿಸಿ ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರಿನ ಸದಸ್ಯರಾದ ಶೇಖರಗೌಡ ಜಿ. ರಾಮತ್ನಾಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ತಿಪ್ಪಣ್ಣ ಸಿರಸಗಿ, ತಹಶೀಲ್ದಾರ ವಿಠ್ಠಲ್ ಚೌಗಲಾ, ತಾಲ್ಲೂಕು ಪಂಚಯತಿ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯಲ್ಲಮ್ಮ, ಜಯಶ್ರೀ, ಬೆಟದಪ್ಪ, ನಿರೂಪಣಾಧಿಕಾರಿ ಗಂಗಪ್ಪ, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಎಲ್ಲ ತಾಲ್ಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸರ್ಕಾರಿ ಬಾಲಕರ ಬಾಲ ಮಂದಿರ, ಬಾಲಕಿಯರ ಬಾಲ ಮಂದಿರ ಮಕ್ಕಳು, ಅಂಗನವಾಡಿ ಕಾರ್ಯಕರ್ತೆಯರು, ಮಕ್ಕಳು ಉಪಸ್ಥಿತರಿದ್ದರು. ಅಂಗನವಾಡಿ ಹಾಗೂ ಶಾಲಾ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು.
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ