December 23, 2024

AKSHARA KRAANTI

AKSHARA KRAANTI




ವಿಮಾನ ನಿಲ್ದಾಣಕ್ಕೆ ಮೀಸಲಿಟ್ಟ ಅನುದಾನ ಬೇರೆ ಕಾಮಗಾರಿಗೆ ಬಳಕೆ | ಅನುದಾನ ವರ್ಗಾಯಿಸಿದರೆ ಪ್ರತಿಭಟನೆ

ಜನೆತೆಗೆ ಕೊಟ್ಟ ಮಾತು ತಪ್ಪಿದ ಕಾಂಗ್ರೆಸ್ ಶಾಸಕರು : ನವೀನ್ ಗುಳಗಣ್ಣನವರ್

ಕೊಪ್ಪಳ,: ಉಡಾನ್ ಯೋಜನೆಯಡಿ ವಿಮಾನ ನಿಲ್ದಾಣಕ್ಕೆ ಬಿಜೆಪಿ ಅವಧಿಯಲ್ಲಿ ನೀಡಿದ್ದ ಅನುದಾನ ಬೇರೆ ಕಾಮಗಾರಿಗೆ ಬಳಕೆ ಮಾಡಲು ಕಾಂಗ್ರೆಸ್ ಚಿಂತಿಸಿದೆ. ಇದು ಜಿಲ್ಲೆಯ ಅಭಿವೃದ್ಧಿಗೆ ಮಾರಕ. ಜಿಲ್ಲೆಯ ಕಾಂಗ್ರೆಸ್ ಶಾಸಕರಿಂದಲೇ ಜಿಲ್ಲೆಯ ಜನತೆಗೆ ಮೋಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಜಿಲ್ಲೆಯ ಅಭಿವೃದ್ಧಿ ಹೆಸರಲ್ಲಿ ಮತ ಪಡೆದ ಕಾಂಗ್ರೆಸ್ ಶಾಸಕರು ತಮ್ಮ ಸ್ವಹಿತಾಸಕ್ತಿಗೆ ಮನ್ನಣೆ ನೀಡಿ, ಜಿಲ್ಲೆ ಅಭಿವೃದ್ಧಿ ಕಡೆಗಣಿಸಿರುವುದಕ್ಕೆ ಇದೊಂದು ಉದಾಹರಣೆ ಆಗಿದೆ ಎಂದರು.
ಈ ಹಿಂದೆ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದ ಸಂದರ್ಭದಲ್ಲಿ ಕೊಪ್ಪಳ ಬಳಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಯೋಜನೆಗೆ ಕೆಕೆಆರ್‌ಡಿಬಿಯಲ್ಲಿ 39 ಕೋಟಿಯನ್ನು ಭೂ ಸ್ವಾಧೀನಕ್ಕೆ ನೀಡಿ ಆದೇಶಿಸಿದ್ದರು. ಈ ಅನುದಾನವನ್ನು ಬೇರೆ ಕಾಮಗಾರಿಗಳಿಗೆ ನೀಡಲು ಕೊಪ್ಪಳ ಕಾಂಗ್ರೆಸ್ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಪತ್ರ ಬರೆದಿದ್ದಾರೆ. ಕೊಪ್ಪಳದ ಜನತೆ ವಿಮಾನದಲ್ಲಿ ಹಾರಾಟ ನಡೆಸುವುದು ಕಾಂಗ್ರೆಸ್ ಶಾಸಕರಿಗೆ ಇಷ್ಟ ಇಲ್ಲದಂತಿದೆ. ವಿಮಾನ ನಿಲ್ದಾಣ ನಿರ್ಮಾಣ ಮಾಡಬಾರದು ಎಂಬ ಹುನ್ನಾರ ನಡೆಸಲಾಗಿದೆ ಎಂದು ಆರೋಪಿಸಿದರು.
ಇಷ್ಟಾದರೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಸುಮ್ಮನಿರುವುದು ಏಕೆ? ಈ ಹುನ್ನಾರದಲ್ಲಿ ಇವರ ಪಾಲು ಇದೆಯೇ? ಕೆಕೆಆರ್‌ಡಿಬಿಯಲ್ಲಿ ವಿಮಾನ ನಿಲ್ದಾಣದ ಭೂಸ್ವಾಧೀನಕ್ಕಾಗಿ ಮೀಸಲಿಟ್ಟ ಹಣ ಬೇರೆ ಕಾಮಗಾರಿ ಗೆ ಬಳಸಿದರೆ ಬಿಜೆಪಿ ಜಿಲ್ಲಾ ಘಟಕದಿಂದ ಜಿಲ್ಲಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಕೆಕೆಆರ್‌ಡಿಬಿ ಗೆ ಕಾಂಗ್ರೆಸ್ ಸರ್ಕಾರ 5 ಸಾವಿರ ಕೋಟಿ ರೂ. ಅನುದಾನ ನೀಡಿದೆ. ಇರುವ ಅನುದಾನದಲ್ಲಿ ಶಾಸಕ ಹಿಟ್ನಾಳ್ ವಿವಿಧ ಕಾಮಗಾರಿ ಗೆ ಅನುದಾನ ಪಡೆಯಲಿ. ಅದನ್ನು ಹೊರತುಪಡಿಸಿ ವಿಮಾನ ನಿಲ್ದಾಣಕ್ಕಾಗಿ ಮೀಸಲಿಟ್ಟ ಅನುದಾನದ ಮೇಲೆಕೆ ಕಣ್ಣು ಬಿದ್ದಿದೆ. ಲೋಕಸಭಾ ಚುನಾವಣೆಯ ಪ್ರಚಾರದ ಮೇಲೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕೆ.ರಾಜಶೇಖರ ಹಿಟ್ನಾಳ್ ಅವರು ವಿಮಾನ ನಿಲ್ದಾಣ ಮಾಡಲಾಗುವುದು ಎಂದು ಭರವಸೆ ನೀಡಿ ಮತ ಪಡೆದು ಗೆಲುವು ಸಾಧಿಸಿದ್ದಾರೆ. ಈಗ ಅವರ ಭರವಸೆ ಏನಾಯಿತು? ಈಗಾಗಲೇ ವಿಮಾನ ನಿಲ್ದಾಣ ಕ್ಕಾಗಿ ಜಾಗ ಗುರುತಿಸಲಾಗಿದ್ದು, ಭೂಸ್ವಾಧೀನ ಪಡಿಸಿಕೊಂಡು ವಿಮಾನ ನಿಲ್ದಾಣ ನಿರ್ಮಿಸಬೇಕು. ಭೂ ಸ್ವಾಧೀನಕ್ಕೆ ಮೀಸಲಿಟ್ಟ ಅನುದಾನ ಬೇರೆ ಉದ್ದೇಶಕ್ಕೆ ಬಳಸಿದರೆ, ಕಾಂಗ್ರೆಸ್ ಶಾಸಕ, ಸಂಸದ, ಸಚಿವರ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದ್ದಾರೆ.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!