December 23, 2024

AKSHARA KRAANTI

AKSHARA KRAANTI




ರಸ್ತೆ ದುರಸ್ತಿಗೆ ಮಹಿಳಾ ಒಕ್ಕೂಟದಿಂದ ಪ್ರತಿಭಟನೆ

ರಸ್ತೆ ದುರಸ್ತಿಗೆ ಮಹಿಳಾ ಒಕ್ಕೂಟದಿಂದ ಪ್ರತಿಭಟನೆ

ಅಕ್ಷರಕ್ರಾಂತಿ ನ್ಯೂಸ್
ಕೊಪ್ಪಳ,: ತಾಲೂಕಿನ ಕವಲೂರು ಗ್ರಾಮದಿಂದ ವಿವಿಧ ಮಾರ್ಗಗಳಿಗೆ ಸಂಪರ್ಕಿಸುವ ರಸ್ತೆಗಳು ಸುಮಾರು ವರ್ಷಗಳಿಂದ ದುರಸ್ತಿ ಕಾಣದೇ ಇರುವದನ್ನು ಖಂಡಿಸಿ ಮಂಗಳವಾರ ಕವಲೂರು ಗ್ರಾಮವನ್ನು ಬಂದ್ ಮಾಡಿ ಪ್ರತಿಭಟನೆ ಮಾಡಲಾಯಿತು.

ಮಂಗಳವಾರ ಬೆಳಗ್ಗೆ ಆರಂಭವಾದ ಪ್ರತಿಭಟನೆಯು ಗ್ರಾಮದ ಪಂಚಲಿಂಗೇಶ್ವರ ದೇವಸ್ಥಾನದಿಂದ ಹೊಸ ಬಸ್ ನಿಲ್ದಾಣದವರೆಗೆ ಪಾದಯಾತ್ರೆ ಮಾಡಿ ಸಭೆ ಸೇರಿ ಪ್ರತಿಭಟನೆ ನಡೆಸಲಾಯಿತು.
ಶ್ರೀ ಕಲ್ಪವೃಕ್ಷ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಮಹಿಳಾ ಒಕ್ಕೂಟದ ಅಧ್ಯಕ್ಷೆ ಗಂಗಮ್ಮ ಮಾತನಾಡಿ, ಅಸುರಕ್ಷಿತ ರಸ್ತೆಯಲ್ಲಿ ಸಂಚರಿಸುತ್ತ ಸಾವು ನೋವು ಅನುಭವಿಸುತ್ತಾ ಪ್ರತಿ ನಿತ್ಯ ಬದುಕುತ್ತಿದ್ದೆವೆ. ತಗ್ಗು-ಗುಂಡೆಯಿಂದ ಕೂಡಿದ ರಸ್ತೆಯಲ್ಲಿ ತುರ್ತು ಸಂದರ್ಭದಲ್ಲಿ ಗರ್ಭಿಣಿ ಮಹಿಳೆಯರು, ವಯಸ್ಕರು, ಚಿಕ್ಕ ಮಕ್ಕಳು ಸರಿಯಾದ ಸಮಯಕ್ಕೆ ಪಕ್ಕದ ಪಟ್ಟಣಕ್ಕೆ ತಲುಪದೆ ಸಾವುಗಳಾಗಿರುವದು ಇದೆ. ರಸ್ತೆ ಅಪಘಾತಗಳು ಸಂಭವಿಸಿ ತೀರ್ವತರ ಗಾಯಗಳು ಆಗಿದ್ದು ಇದೆ. ಈ ಭಾಗದ ರಸ್ತೆಗಳು ಹಾಳಾಗಿದ್ದ ಕಾರಣ ಬಸ್ ಸಂಚಾರ ನಿಂತು ನಮ್ಮ ಗ್ರಾಮದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದು ಇದೆ. ರಸ್ತೆ ಸುಧಾರಿಸುವಂತೆ ಹಲವು ಬಾರಿ ಹೋರಾಟ ಮಾಡಿದರೂ ಸಂಭಂದಿಸಿದವರು ಇತ್ತ ಗಮನ ಹರಿಸಿಲ್ಲ ಎಂದರು.ಶ್ರೀ ಕಲ್ಪವೃಕ್ಷ ಸಂಜೀವಿನಿ ಮಹಿಳಾ ಒಕ್ಕೂಟದ ಕಾರ್ಯದರ್ಶಿ ಶೋಭಾ ಮಾತನಾಡಿ, ಸುಮಾರು ವರ್ಷಗಳಿಂದ ನಮ್ಮ ಗ್ರಾಮದಿಂದ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಳಾಗಿದ್ದು, ಈ ಕುರಿತು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಜನ ಪ್ರತಿನಿಧಿಗಳ ಗಮನಕ್ಕೆ ತಂದರು ಪ್ರಯೋಜವಾಗಿಲ್ಲಾ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ವಿದ್ಯಾರ್ಥಿನಿ ರೇಣುಕಾ ಮಾತನಾಡಿ, ಪ್ರತಿ ದಿನ ನಮ್ಮ ಗ್ರಾಮದಿಂದ ನೂರಾರು ವಿದ್ಯಾರ್ಥಿಗಳು ಪಕ್ಕದ ಗ್ರಾಮಗಳಾದ ಅಳವಂಡಿ, ಮುಂಡರಗಿ, ಕೊಪ್ಪಳ, ಗದಗ ಇನ್ನೀತರ ಕಡೆಗಳಲ್ಲಿ ವ್ಯಾಸಾಂಗಕ್ಕೆ ತೆರಳುತಿದ್ದು ಪ್ರತಿ ನಿತ್ಯ ನರಕ ಯಾತನೆ ಅನುಭವಿಸುತ್ತಿದ್ದೆವೆ ಎಂದರು

ನಂತರ ಗ್ರಾಮದ ಮುಖಂಡರಾದ ಪ್ರದೀಪ್ ಗೌಡ್ರ ಮಾತನಾಡಿ, ಈ ರೀತಿಯಾಗಿ ದುರಸ್ತಿ ಕಾಣದ ರಸ್ತೆಗಳು ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದರು ಯಾವೊಬ್ಬ
ಜನಪ್ರತಿನಿಧಿಗಳಾಗಲಿ ರಸ್ತೆಗಳನ್ನು
ದುರಸ್ತಿಗೊಳಿಸುವ ಗೋಜಿಗೆ ಹೋಗದಿರುವುದು ವಿಪರ್ಯಾಸವಾಗಿದೆ.
ಗ್ರಾಮದ ಸುತ್ತ ಮುತ್ತಲಿನ ಗ್ರಾಮಗಳಿಗೆ ಸಂಚಾರ ಮಾಡುವ ವೇಳೆ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ಧು ಹಲವಾರು ರಸ್ತೆ ಅಪಘಾತಗಳಾದ ನಿದರ್ಶನಗಳಿವೆ.
ಮುಂಡರಗಿಯಿಂದ ಕವಲೂರು ಗ್ರಾಮಕ್ಕೆ ಹಾಗೂ ಗ್ರಾಮದಿಂದ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸಬೇಕು ಎಂದರೇ ಜೀವವೇ ಹೋದಂತಾಗುತ್ತದೆ ಎಂದರು.
ಇಂತಹ ದುರಸ್ತಿ ಕಾಣದ ಹದಗೆಟ್ಟ ರಸ್ತೆಗಳಿರುವದರಿಂದ ವಾಹನ ಮಾಲಕರು ಈ ರಸ್ತೆಗಳಿಗೆ ವಾಹನ ಬಿಡದೇ ಇರುವದರಿಂದ ಗ್ರಾಮಸ್ಥರು ಪ್ರತಿ ನಿತ್ಯ ಗೋಳಾಡುವಂತಾಗುತ್ತದೆ. ಇದಲ್ಲದೇ ಸಾರಿಗೆ ವಾಹನಗಳು ಆಗಾಗ ಬಂದ್ ಮಾಡಲಾಗುತ್ತಿದ್ದು ಸಾರ್ವಜನಿಕರು ಫಜೀತಿಗೆ ಸಿಲುಕುವಂತಾಗುತ್ತಿದೆ. ಗ್ರಾಮದಲ್ಲಿ ಆಸ್ಪತ್ರೆ ಇದ್ದರೂ ಹೆಚ್ಚಿನ ಚಿಕಿತ್ಸೆಗಾಗಿ, ತುರ್ತು ಚಿಕಿತ್ಸೆಗಾಗಿ ಪಕ್ಕದ ನಗರಗಳಿಗೆ ತೆರಳಬೇಕೆಂದರೇ ಅರ್ಧ ಗಂಟೆ ಸಾಕು, ಆದರೆ ಇಂತಹ ಕೆಟ್ಟ ರಸ್ತೆಗಳಿರುವದರಿಂದ ಸಾವು ಬದುಕಿನ ನಡುವೆ ಜೀವನ ನಡೆಸುವುದು ಅನಿವಾರ್ಯವಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ರಸ್ತೆ ದುರಸ್ತಿ ಮಾಡಿಸಿಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದರು.ಪ್ರತಿಭಟನಾ ಸ್ಥಳಕ್ಕೆ ಪಿಡಬ್ಲ್ಯೂಡಿ ಇಲಾಖೆ ಮುಖ್ಯ ಇಂಜನೀಯರ ವೆಂಕಟೇಶ ಆಗಮಿಸಿ ಮಾತನಾಡಿ, ಕೂಡಲೇ ಎಲ್ಲಾ ರಸ್ತೆಗಳ ಗುಂಡಿಗಳನ್ನು ಮುಚ್ಚಿಸಿ ಸುಗಮ ಸಂಚಾರಕ್ಕೆ ಆನುಕೂಲ ಕಲ್ಪಿಸಿಕೊಡುತ್ತೇವೆ. ರಸ್ತೆಗಳ ದುರಸ್ತಿಗಾಗಿ ಕಲ್ಯಾಣ ಕರ್ನಾಟಕ ಅಭಿವೃದ್ದಿ ನಿಗಮಕ್ಕೆ ಅನುದಾನಕ್ಕೆ ಬೇಡಿಕೆ ಮನವಿ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಕಾಮಗಾರಿಗಳನ್ನು ಕೈಗೊಂಡು ಉತ್ತಮ ರಸ್ತೆಗಳನ್ನು ಮಾಡಿಕೊಡಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಗಂಗಮ್ಮ, ಕಾರ್ಯದರ್ಶಿ ಶೋಭಾ ವಿದ್ಯಾರ್ಥಿಗಳಾದ ರೇಣುಕಾ, ಉಮಾ, ಸಾವಿತ್ರಿ, ಕಾರ್ಮಿಕ ಸಂಘದ ಮುಖಂಡರಾದ ರಾಜಾಸಾಬ ಪ್ರಮುಖರಾದ ಪ್ರಭುಗೌಡ್ರ ಮಾಲಿಪಾಟೀಲ್, ಗ್ರಾಮದ ಮುಖಂಡರು ಹಿರಿಯರು,ಯುವಕರು, ಸಂಘದ ಎಲ್ಲಾ ಮಹಿಳೆಯರು ಇದ್ದರು.

ಬೇಡಿಕೆಗಳು : ಕವಲೂರು ಗ್ರಾಮದಿಂದ ಮುಂಡರಗಿ ರಸ್ತೆ, ಅಳವಂಡಿ, ಬನ್ನಿಕೊಪ್ಪ, ಹಂದ್ರಾಳ, ಗುಡಿಗೇರಿ ರಸ್ತೆಗಳನ್ನು ಸರಿ ಪಡಿಸಿ ವಾಹನ ಸಂಚಾರಕ್ಕೆ ಸುಗಮ ಮಾರ್ಗಗಳನ್ನು ನಿರ್ಮಿಸಿಕೊಡಬೇಕು ಎನ್ನುವದು ಆಗ್ರಹವಾಗಿದೆ.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!