December 23, 2024

AKSHARA KRAANTI

AKSHARA KRAANTI




ರಂಗಭೂಮಿಯನ್ನು ಉಳಿಸುವ,ಬೆಳೆಸುವ ಕೆಲಸವಾಗಬೇಕು : ಕಿಲ್ಲೇದಾರ್

ಶೀಲಾ ಹಾಲ್ಕುರಿಕೆ, ಶರಣು ಶೆಟ್ಟರ್ ಹಾಗೂ ಲಕ್ಷ್ಮಣ ಪೀರಗಾರ್‌ರಿಗೆ ಸಿಜಿಕೆ ರಂಗ ಪುರಸ್ಕಾರ ಪ್ರದಾನ

ಕೊಪ್ಪಳ,: ಸಿನಿಮಾಗಳು ನಟರನ್ನು ದೊಡ್ಡದಾಗಿ, ಟಿವಿಗಳು ಚಿಕ್ಕದಾಗಿ ತೋರಿಸಿದರೆ ಪ್ರೇಕ್ಷಕನಿಗೆ ನಿಜವಾದ ಚಿತ್ರಣ ಕೊಡುವುದು ರಂಗಭೂಮಿ ಮಾತ್ರ. ಇವತ್ತಿನ ಮೊಬೈಲ್ ಟಿವಿಗಳ ಹಾವಳಿಯಲ್ಲಿ ರಂಗಭೂಮಿಯ ಅಸ್ತಿತ್ವಕ್ಕೆ ಧಕ್ಕೆ ಬರುತ್ತಿದೆ. ಇದನ್ನು ಉಳಿಸಿ ಬೆಳೆಸಬೇಕಿದೆ ಎಂದು ನಾಟಕ ಅಕಾಡೆಮಿಯ ಸದಸ್ಯ ಚಾಂದಪಾಷಾ ಕಿಲ್ಲೇದಾರ್ ಹೇಳಿದರು.

ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಕರ್ನಾಟಕ ಬೀದಿ ನಾಟಕ ಅಕಾಡೆಮಿ ಬೆಂಗಳೂರು, ಕನ್ನಡನೆಟ್ ಡಾಟ್ ಕಾಮ್, ಕವಿಸಮಯ ಹಾಗೂ ಬಹುತ್ವ ಬಳಗ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಿಜಿಕೆ ರಂಗ ಪುರಸ್ಕಾರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನ ಪೀಠಿಕೆ ಓದುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಆಶಾಲತಾ ನಾಟಕದ ಸಂಭಾಷಣೆ ಹೇಳುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಅವರು, ಸಿಜಿಕೆಯವರು ಬೀದಿ ನಾಟಕಗಳ ಪರಿಕಲ್ಪನೆಯನ್ನು ಹುಟ್ಟು ಹಾಕಿದರು. ಕಲೆಯು ಜನಪರವಾಗಿರಬೇಕು ಎಂಬುದು ಸಿಜಿಕೆಯವರ ಆಶಯವಾಗಿತ್ತು. ಕಲೆಯು ಮನಸ್ಸನ್ನು ಉಲ್ಲಾಸಗೊಳಿಸುತ್ತದೆ ಕಲೆಯನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ರಂಗಕಲೆಗೆ ಸರಕಾರ ಸಹಾಯಧನ ನೀಡುತ್ತದೆ ಎನ್ನು ಎಲ್ಲರೂ ಬಳಸಿಕೊಳ್ಳಬೇಕು ಎಂದರು.

ಹಿರಿಯ ರಂಗಕರ್ಮಿ ಸಿಜಿಕೆ ಜನ್ಮದಿನದ ನಿಮಿತ್ಯ ಪ್ರತಿವರ್ಷ ಕಾರ್ಯಕ್ರಮ ಹಮ್ಮಿಕೊಂಡು ಪ್ರಶಸ್ತಿ ನೀಡಲಾಗುತ್ತಿದ್ದು ಕೊಪ್ಪಳ ಜಿಲ್ಲೆಯ ಪ್ರತಿಭಾವಂತ ರಂಗ ಕರ್ಮಿಗಳು ನಟ ನಿರ್ದೇಶಕರಾದ ಶೀಲಾ ಹಾಲ್ಕುರಿಕೆ (೨೦೨೧) , ಶರಣು ಶೆಟ್ಟರ್ (೨೦೨೨) ಲಕ್ಷ್ಮಣ ಪೀರಗಾರ (೨೦೨೩) ಇವರಿಗೆ ಸಿಜಿಕೆ ರಂಗಪುರಸ್ಕಾರ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಮುಖ್ಯ ಅತಿಥಿಗಳಾಗಿ ಪ್ರಗತಿಪರ ಚಿಂತಕಿ ಶೈಲಜಾ ಹಿರೇಮಠ ಮಾತನಾಡಿ, ಬೀದಿ ನಾಟಕಗಳು ಕೇವಲ ಮನೋರಂಜನೆಗಾಗಿ ಹುಟ್ಟಿಕೊಂಡಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಜನರನ್ನು ಜಾಗೃತಿ ಮೂಡಿಸಲು ಹುಟ್ಟಿಕೊಂಡಿದ್ದವು. ಬೀದಿ ನಾಟಕಗಳನ್ನು ಸರಕಾರದ ಅರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಸಾಮಾಜಿಕ ಸಮಸ್ಯೆಗಳಾದ ಬಾಲಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ ಪದ್ಧತಿ, ಎಡ್ಸ್ ಮುಂತಾದವುಗಳ ಕುರಿತು ಬೀದಿ ನಾಟಕಗಳ ಮೂಲಕ ಜಾಗ್ರತಿ ಮೂಡಿಸುತ್ತಿವೆ. ಎಲ್ಲರು ಗಾಂಧೀಜಿ, ಕುವೆಂಪು, ಬೇಂದ್ರೆ, ಅಂಬೇಡ್ಕರ್, ಬುದ್ಧ ಮತ್ತು ಬಸವಣ್ಣ ನವರ ಪುಸ್ತಕಗಳನ್ನು ಓದಬೇಕು. ಕಥೆ, ಕವನ, ಕಾವ್ಯ, ಸಣ್ಣ ಸಣ್ಣ ಪುಸ್ತಕಗಳು ಓದಬೇಕು. ಇಂದು ಲಿಂಗ, ಜಾತಿ ಮತ್ತು ಧರ್ಮ ತಾರತಮ್ಯ ಹೆಚ್ಚಾಗುತ್ತಿದೆ. ಎಲ್ಲರೂ ಪ್ರಗತಿ ಪರ ವಿಚಾರಗಳನ್ನು ತಿಳಿದುಕೊಳ್ಳಬೇಕು. ನಿಮ್ಮ ಬದಕನ್ನು ಸೂಕ್ತ ರೀತಿಯಲ್ಲಿ ಕಟ್ಟಿಕೊಳ್ಳಿ ಎಂದರು.

ರಾಜ್ಯ ಲಾರಿ ಮಾಲೀಕರ ಸಂಘದ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಗೌಸ್ ಮುಲ್ಲಾ ಮಾತನಾಡಿ, ಕಲೆ ಎಂದರೆ ಇನ್ನೊಬ್ಬರಿಗೆ ಮನಮುಟ್ಟುವಂತೆ ಹೇಳುವುದು. ರಂಗ ಕಲೆ ಸಾಮಾಜಿಕ ಸಮಸ್ಯೆಗಳ ಕುರಿತು ನಾಟಕಗಳು ಮಾಡಬೇಕು ಎಂದರು.

ತಾಲೂಕ ಕಲಾವಿದರ ಸಂಘದ ಅಧ್ಯಕ್ಷ ಕೊಟ್ರಯ್ಯಸ್ವಾಮಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಪ್ರಾಂಶುಪಾಲರಾದ ಡಾ. ಗಣಪತಿ ಲಮಾಣಿಯವರು ಮಾತನಾಡಿದರು.

ಪದವಿ ಶಿಕ್ಷಣದಲ್ಲಿ ರಂಗಶಿಕ್ಷಣವನ್ನು ಆರಂಭಿಸುವಂತಾಬೇಕು ಇದಕ್ಕಾಗಿ ಸರಕಾರ ಮಟ್ಟದಲ್ಲಿ ಒತ್ತಡ ತರಬೇಕು ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು. ಪ್ರಾಸ್ತಾವಿಕವಾಗಿ ಸಂಘಟಕ ಸಿರಾಜ್ ಬಿಸರಳ್ಳಿ ಮಾತನಾಡಿದರು.

ಪ್ರಶಸ್ತಿ ಪುರಸ್ಕೃತರ ಪರಿಚಯವನ್ನು ಅಖಿಲ್ ಹುಡೇವು, ಹನುಮಂತ, ಸಲ್ಮಾ ಜಹಾನ್ ನೆರವೇರಿಸಿದರು. ಇದೇ ಸಂದರ್ಭದಲ್ಲಿ ನಾಟಕ ಅಕಾಡೆಮಿಯ ಸದಸ್ಯರಾಗಿ ಆಯ್ಕೆಯಾಗಿರುವ ಚಾಂದಪಾಷಾ ಕಿಲ್ಲೇದಾರರಿಗೆ ಆತ್ಮಿಯವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮುಖಂಡರಾದ ಕಾಟನ್ ಪಾಷಾ, ಸಂಘಟಕ ಎಚ್.ವಿ. ರಾಜಾಬಕ್ಷಿ, ಎಂ.ಡಿ. ಖಲೀಲ್ ಹುಡೇವು, ಆನಂದ್, ಮಾರುತಿ, ನಿಂಗು ಬೆಣಕಲ್, ಡಾ.ಪಾಷಾ, ಪ್ರದೀಪ್, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

 

 

 

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!