ಶ್ರೀಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮ
ಕೊಪ್ಪಳ,: ಶರಣರಾದ ಮಡಿವಾಳ ಮಾಚಿದೇವರು ತಮ್ಮ ಕಾಯಕ ನಿಷ್ಠೆ, ನೇರ ನಡೆ ನುಡಿಗೆ ಹೆಸರಾದವರು. ಅವರ ಕಾಯಕ ನಿಷ್ಠೆಯನ್ನು ನಮ್ಮ ದಿನನಿತ್ಯದ ಕಾರ್ಯಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕೊಪ್ಪಳ ತಹಶೀಲ್ದಾರರಾದ ವಿಠ್ಠಲ್ ಚೌಗಲಾ ಅವರು ಹೇಳಿದರು.
ಸೋಮವಾರ ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ಶ್ರೀಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಯಕನಿಷ್ಠೆ ಮತ್ತು ವೃತ್ತಿ ಪರತೆ ಎಲ್ಲರಿಗೂ ಇರಬೇಕಾದ ಮೂಲಭೂತ ಲಕ್ಷಣಗಳು. ನಮ್ಮ ಉದ್ಯೋಗ, ವೃತ್ತಿಯಲ್ಲಿ ಯಶಸ್ಸು ಸಾಧಿಸಬೇಕಾದರೆ ಇವೆರಡೂ ಪ್ರಮುಖ ಅಂಶಗಳಾಗಿರುತ್ತವೆ. ಮಾಚಿದೇವರು ತಮ್ಮ ವ್ಯಕ್ತಿತ್ವವನ್ನೇ ತಮ್ಮ ವಚನಗಳಲ್ಲಿ ಪದಗಳ ಮೂಲಕ ಪರಿಚಯಿಸಿದಂತೆ ಅವರ ಜೀವನವಿತ್ತು. ನಾವೆಲ್ಲರೂ ಅವರ ಜೀವನವನ್ನು ಆದರ್ಶವಾಗಿಟ್ಟುಕೊಂಡು, ನಮ್ಮ ನಿತ್ಯದ ಬದುಕಲ್ಲಿ ಅಳವಡಿಸಿಕೊಳ್ಳೋಣ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ್ದ ಹೊಸಪೇಟೆಯ ವಿಜಯನಗರ ಕಾಲೇಜಿನ ಇತಿಹಾಸ ಪ್ರಾಧ್ಯಾಪಕರು ಹಾಗೂ ಆಕಾಶವಾಣಿಯ ಟಿ.ಜಿ.ಎಂ. ನಾಗರತ್ನ ಅವರು ಮಾತನಾಡಿ, ಮಡಿವಾಳ ಮಾಚಿದೇವರು ವೀರಭದ್ರ ದೇವರ ವಂಶಸ್ಥರಾಗಿದ್ದು, 11ನೇ ಶತಮಾನದಲ್ಲಿ ವಿಜಯಪುರದ ಸಿಂದಗಿ ತಾಲ್ಲೂಕಿನ ದೇವರ ಹಿಪ್ಪರಗಿಯಲ್ಲಿ ಜನಿಸಿದರು. ನೇರ, ನಿಷ್ಠುರ ನಡೆ ನುಡಿ, ನಿಷ್ಠುರ ವಚನಗಳ ಮೂಲಕ 11ನೇ ಶತಮಾನದ ಶರಣರಲ್ಲಿ ಪ್ರಸಿದ್ಧರಾಗಿದ್ದರು. ಬಸವಣ್ಣನವರ ಕಡು ಅನುಯಾಯಿಯಾಗಿದ್ದ ಮಾಚಿದೇವರು, ಸಂದರ್ಭೋಚಿತವಾಗಿ ತಮಗೆ ಸರಿ ಎನಿಸಿದ ವಿಷಯಗಳ ಕುರಿತು ನೇರವಾಗಿ ಬಸವಣ್ಣನವರ ಜೊತೆ ವಾದಿಸುತ್ತಿದ್ದರು. ಅದರಂತೆ ತಮ್ಮ ಬದುಕಿಡೀ ತಮ್ಮ ನೇರ ವ್ಯಕ್ತಿತ್ವದ ಮೂಲಕ ಮಾರಿಯಾಗಿದ್ದರು. ಕಾಯಕನಿಷ್ಠೆಗೆ ಹೆಸರಾಗಿದ್ದರು ಎಂದು ಮಡಿವಾಳ ಮಾಚಿದೇವರು ಮತ್ತು ಅವರ ವಚನಗಳ ಕುರಿತು ವಿವರವಾಗಿ ಮಾತನಾಡಿದರು.
ಸದಾಶಿವ ಪಾಟೀಲ್ ಹಾಗೂ ಸಂಗಡಿಗರು ನಾಡಗೀತೆ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ನಿವೃತ್ತ ಪ್ರಾಚಾರ್ಯರಾದ ಸಿ.ವಿ.ಜಡಿಯವರ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಉತ್ತರ ಕರ್ನಾಟಕ ಮಡಿವಾಳರ ಸಂಘದ ಅಧ್ಯಕ್ಷ ಎಂ.ಕೆ.ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ರಾಮಣ್ಣ ಮಡಿವಾಳರ, ಧಾರವಾಡ ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ಬಾಬಣ್ಣ ಮಡಿವಾಳರ, ಯಲಬುರ್ಗಾದ ನಿವೃತ್ತ ಪ್ರಾಚಾರ್ಯ ಸಂಗಮೇಶ ನರೇಗಲ್, ಉತ್ತರ ಕರ್ನಾಟಕ ಮಡಿವಾಳರ ಸಂಘದ ಉಪಾಧ್ಯಕ್ಷರು, ಕೊಪ್ಪಳ ಜಿಲ್ಲಾ ಸಂಘದ ಅಧ್ಯಕ್ಷ ದುರುಗೇಶ ಮಡಿವಾಳರ, ಸಮಾಜದ ಮುಖಂಡರಾದ ಗವಿಸಿದ್ದಪ್ಪ ಮಡಿವಾಳರ, ಮಲ್ಲಿಕಾರ್ಜುನ ಪಿ.ಮಡಿವಾಳರ, ಈರಣ್ಣ ಮಡಿವಾಳರ, ಸೇರಿದಂತೆ ಸಮಾಜದವರು ಇದ್ದರು.
ಮೆರವಣಿಗೆ:
ಶ್ರೀ ಮಡಿವಾಳ ಮಾಚಿದೇವರ ಜಯಂತಿ ಅಂಗವಾಗಿ ಇಂದು ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಶ್ರೀ ಅಕ್ಕಮಹಾದೇವಿ ದೇವಸ್ಥಾನದಿಂದ ಸಾಹಿತ್ಯ ಭವನದವರೆಗೆ ಕುಂಭ ಮೆರವಣಿಗೆ ಹಾಗೂ ಮಾಚಿದೇವರ ಭಾವಚಿತ್ರದ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಸಮಾಜದ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸಿದ್ದರು.
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ