December 23, 2024

AKSHARA KRAANTI

AKSHARA KRAANTI




ಮಕ್ಕಳ ಭವಿಷ್ಯ ರೂಪಿಸುವ ಶಕ್ತಿ ಶಿಕ್ಷಕರಿಗಿದೆ: ಕೆ.ರಾಘವೇಂದ್ರ ಹಿಟ್ನಾಳ್

ಕೊಪ್ಪಳ,: ಇಂದಿನ ಮಕ್ಕಳೇ ನಾಡಿನ ಭವ್ಯ ಪ್ರಜೆಗಳಾಗಿದ್ದು, ಮಕ್ಕಳ ಭವಿಷ್ಯ ರೂಪಿಸುವ ಶಕ್ತಿ ಶಿಕ್ಷಕರಿಗಿದೆ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಹೇಳಿದರು.

ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ, ಬೆಂಗಳೂರು ಹಾಗೂ ಶಾಲಾ ಶಿಕ್ಷಣ ಇಲಾಖೆ, ಇವರ ಸಹಯೋಗದಲ್ಲಿ ಸೆಪ್ಟೆಂಬರ್ 05ರಂದು ಹಮ್ಮಿಕೊಳ್ಳಾಗಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಶಿಕ್ಷಕರು ದೇಶದ ನಿರ್ಮಾಪಕರಾಗಿದ್ದಾರೆ. ಡಾ.ಸರ್ವಪಲ್ಲಿ ರಾಧಕೃಷ್ಣನ್ ಅವರು ದೇಶದ ರಾಷ್ಟಪತಿಗಳು, ಉಪರಾಷ್ಟಪತಿಗಳಾಗಿ ಅಪಾರ ಕೊಡುಗೆ ನೀಡಿದ್ದಾರೆ. ಶಿಕ್ಷಕರೊಬ್ಬರು ತಮ್ಮ ಪರಿಶ್ರಮದ ಫಲವಾಗಿ ರಾಷ್ಟ್ರದ ಅತ್ಯುನ್ನತ ಸ್ಥಾನಕ್ಕೆ ಏರಿದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ 371(ಜೆ) ವಿಶೇಷ ಸ್ಥಾನ ಸಿಕ್ಕಿದ್ದು, ಇದರಿಂದ ಈ ಭಾಗದ ಜನರಿಗೆ ಸರ್ಕಾರಗಳ ಯೋಜನೆಗಳು, ಶಿಕ್ಷಣಕ್ಕಾಗಿ ವಿಶೇಷ ಸೌಲಭ್ಯಗಳು, ಇನ್ನಿತರ ಅವಕಾಶಗಳು ಸಿಗಲಿವೆ. ಇದಕ್ಕಾಗಿ ಹಲವಾರು ನಾಯಕರ ಪರಿಶ್ರಮ ಅಡಗಿದೆ. ಅವುಗಳ ಸದ್ಬಳಕೆ ಆಗಬೇಕು. ಈ ಬಾರಿಯ ಜಿಲ್ಲೆಯ ಎಸ್.ಎಸ್.ಎಲ್.ಸಿ ಫಲಿತಾಂಶ ಕಡಿಮೆಯಾಗಿದ್ದು, ಫಲಿತಾಂಶ ಸುಧಾರಣೆಗಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು. ಶಿಕ್ಷಕರು ಪ್ರಾಮಾಣಿಕ ಪ್ರಯತ್ನ, ಚಿಂತನೆಗಳಿಂದ ಮಕ್ಕಳ ಉತ್ತಮ ಭವಿಷ್ಯವನ್ನು ರೂಪಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ಶಿಕ್ಷಕರು ನಮ್ಮ ಜಿಲ್ಲೆಯ ಮಕ್ಕಳ ಉತ್ತಮ ಶಿಕ್ಷಣಕ್ಕೆ ಶ್ರಮಿಸಿ ಜಿಲ್ಲೆಯನ್ನು ಎತ್ತರ ಸ್ಥಾನಕ್ಕೆ ತರುವಂತೆ ಮಾಡಬೇಕು ಎಂದರು.

ವೇತನ ಪರಿಷ್ಕರಣೆಗಾಗಿ ಸರ್ಕಾರಿ ನೌಕರರ ಬೇಡಿಯನ್ನು ಪರಿಗಣಿಸಿದ ರಾಜ್ಯ ಸರ್ಕಾರವು 7ನೇ ವೇತನವನ್ನು ಜಾರಿಗೊಳಿಸಿದೆ. ಜಿಲ್ಲೆಯಲ್ಲಿ ಗುರುಭವನ ನಿರ್ಮಾಣ ಕಾಮಗಾರಿಗೆ ವೇಗ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಕಸಪಾ ಅಧ್ಯಕ್ಷರಾದ ಶರಣೆಗೌಡ ಪೊಲೀಸ್ ಪಾಟೀಲ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಎಸ್.ಎಸ್ ಬಿರಾದಾರ, ಜಿಲ್ಲಾ ಸರ್ಕಾರಿ ನೌಕರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶಿವಪ್ಪ ಜೋಗಿ, ವಿಕಲಚೇತನರ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ, ಶಿಕ್ಷಣಾಧಿಕಾರಿಗಳ ಸಂಘದ ಜಿಲ್ಲಾ ಅಧ್ಯಕ್ಷರಾದ ಬಾಬುಸಾಬ ಲೈನ್‌ದಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶರಣಬಸನಗೌಡ ಪಾಟೀಲ, ಕೊಪ್ಪಳ ಭೋದಕೇತರ ನೌಕರರ ಸಂಘದ ಅಧ್ಯಕ್ಷರಾದ ಶಿವಶಂಕ್ರಪ್ಪ ಮರಡಿ, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಮಾರುತಿ ಮ್ಯಾಗಳಮನಿ, ಬಿಇಓ ಶಂಕ್ರಯ್ಯ ಟಿ.ಎಸ್., ಜಿ.ಅ.ದಾ ಕಾರ್ಯಕ್ರಮ ಶಿಕ್ಷಣಾಧಿಕಾರಿಗಳಾದ ಅನಿತಾ ಎಸ್.ಆರ್. ಸೇರಿದಂತೆ ಶಿಕ್ಷಕರ ಮತ್ತು ಪದವಿ ಪೂರ್ವ ಉಪನ್ಯಾಸಕರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ಕೊಪ್ಪಳ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!