ಕೊಪ್ಪಳ,: ಬಗರ್ ಹುಕುಂ ಸಾಗುವಳಿ ಸಕ್ರಮೀಕರಣದಲ್ಲಿ ಮಂಜೂರಾತಿಗೆ ಬಾಕಿ ಉಳಿದ ಅರ್ಜಿ ಶೀಘ್ರದಲ್ಲಿ ಇತ್ಯರ್ಥಗೊಳಿಸಲಾಗುವುದು ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.
ನಗರದ ತಹಸೀಲ್ದಾರ್ ಕಚೇರಿಯಲ್ಲಿ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯ ಮೊದಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊಪ್ಪಳ ತಾಲ್ಲೂಕಿನಲ್ಲಿ ಸ್ವೀಕೃತವಾದ ನಮೂನೆ 57ರ ಅರ್ಜಿಗಳನ್ನು ಪರಿಶೀಲಿಸಿ ಮಂಜೂರಾತಿ ನೀಡುವದಕ್ಕೆ ಸಂಬಂಧಿಸಿದಂತೆ ಭೂ ಕಂದಾಯ 108 ಸಿ.ಪಿ.ಸಿ ಅಡಿಯಲ್ಲಿ ಅನಧಿಕೃತ ಸಾಗುವಳಿ ಸಕ್ರಮಗೊಳಿಸಲು ಕೋರಿ ಬಂದ ನಮೂನೆ-57ರಲ್ಲಿ ಸಲ್ಲಿಸಲಾದ ಅರ್ಜಿಗಳನ್ನು ಪರಿಶೀಲಿಸಿ ಕೊಪ್ಪಳ ಹೋಬಳಿಯ ಲಾಚನಕೇರಿಯ 1 ಅರ್ಜಿ ಹಾಗೂ ಹಿಟ್ನಾಳ ಹೋಬಳಿಯ ಮಹ್ಮದ್ ನಗರದ 12 ಅರ್ಜಿಗಳನ್ನು ಮಂಜೂರಾತಿ ಮಾಡಲಾಗಿದೆ. ಬಗರ್ ಹುಕುಂ ಸಾಗುವಳಿ ಸಮಿತಿ ರಚನೆ ಮಾಡಿ ಆದೇಶಿಸಲ್ಪಟ್ಟ ಕಳೆದ ಒಂಬತ್ತು ತಿಂಗಳಿನಿಂದ ಈವರೆಗೆ ಒಟ್ಟು 709 ಅರ್ಜಿಗಳು ಈ ವರೆಗೆ ಸಲ್ಲಿಕೆಯಾಗಿದ್ದು, 365 ಅರ್ಜಿಗಳು ಅನುಮೋದನೆಗಾಗಿ ಈಗ ಸಮಿತಿಯ ಮುಂದಿದ್ದು, ಆ ಪೈಕಿ ಈಗ 13 ಅರ್ಜಿಗಳನ್ನು ಮಂಜೂರಾತಿ ಮಾಡಲಾಗಿದೆ, ಇನ್ನುಳಿದ ಅರ್ಜಿಗಳ ತ್ವರಿತ ವಿಲೇವಾರಿಗಾಗಿ ಭೂಮಾಪನ ಇಲಾಖೆಯ ಅಧಿಕಾರಿಗಳು, ಕಂದಾಯ ನಿರೀಕ್ಷಕರು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದರು, ಬಾಕಿ ಉಳಿದಿರುವ ಅರ್ಜಿಗಳ ಮಂಜೂರಾತಿಗಾಗಿ ಮುಂದಿನ ಸಭೆಗಳಲ್ಲಿ ತಹಶೀಲ್ದಾರರು ಹಾಗೂ ಸಮಿತಿಯ ಸಹಸದಸ್ಯರೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಇತ್ಯರ್ಥಗೊಳಿಸಲಾಗುವುದು ಎಂದರು.
ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರಿನ ತೀವ್ರ ಅಭಾವಕ್ಕೊಳಗಾಗಿರುವ ಟಣಕನಕಲ್, ಹೊಸಹಳ್ಳಿ, ಕವಲೂರು, ಗುಡಿಗೇರಿ ಗ್ರಾಮಗಳಲ್ಲಿ 4 ಲಕ್ಷಕ್ಕೂ ಅಧಿಕ ಮೊತ್ತದ ವೆಚ್ಚದಲ್ಲಿ 5000ಲೀ ಸಾಮರ್ಥ್ಯದ ಟ್ಯಾಂಕರ್ ಗಳ ಮೂಲಕ ಪ್ರತಿದಿನ 34 ಟ್ರಿಪ್ ನಂತೆ ನೀರು ಸರಬರಾಜು ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರು ಯಂಕಪ್ಪ ಹೊಸಳ್ಳಿ, ವಿಶಾಲಾಕ್ಷಿ ವಿಜಯಕುಮಾರ್ ಮಾಲಿಪಾಟೀಲ್, ಸಿದ್ರಾಮಪ್ಪ ಭಟ್, ತಹಶೀಲ್ದಾರ ವಿಠ್ಠಲ ಚೌಗಲೆ, ತಾಪಂ ಇಓ ದುಂಡಪ್ಪ ತುರಾದಿ ಸೇರಿದಂತೆ ಭೂದಾಖಲೆಗಳ ಸಹಾಯಕ ನಿರ್ದೇಶಕರು, ಭೂಮಿ ಶಿರಸ್ತೇದಾರರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ