ವನ್ಯಜೀವಿ ಸಂರಕ್ಷಣೆಗಾಗಿ ಜಾಗೃತಿ ನಡಿಗೆ
ಅಕ್ಷರಕ್ರಾಂತಿ ನ್ಯೂಸ್
ಕೊಪ್ಪಳ,: ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ ಎಂದು ಕೊಪ್ಪಳ ಸಂಸದರಾದ ಕೆ.ರಾಜಶೇಖರ ಹಿಟ್ನಾಳ ಹೇಳಿದರು.
ಮಂಗಳವಾರ ನಗರದ ಗವಿಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಅರಣ್ಯ ಇಲಾಖೆಯ 70ನೇ ವನ್ಯಜೀವಿ ಸಪ್ತಾಹ-2024ರ ಅಂಗವಾಗಿ ಕೊಪ್ಪಳ ಪ್ರಾದೇಶಿಕ ಅರಣ್ಯ ವಿಭಾಗದ ವತಿಯಿಂದ ವನ್ಯಜೀವಿ ಸಂರಕ್ಷಣೆಗಾಗಿ ನಡಿಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವನ್ಯಜೀವಿ ದೇವರ ಅದ್ಭುತ ಸೃಷ್ಟಿ. ದೇವರು ವಿಶ್ವವನ್ನು ಮನುಷ್ಯರಿಗಾಗಿ ಮಾತ್ರ ಸೃಷ್ಟಿಸಿಲ್ಲ. ಮನುಕುಲಕ್ಕೆ ಪ್ರಕೃತಿಯ ಕೊಡುಗೆಯಾದ ವನ್ಯಜೀವಿಗಳು ಭೂಮಿಯ ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ನಿರಂತರವಾಗಿ ಸಹಾಯ ಮಾಡುತ್ತಿವೆ. ಎಲ್ಲಾ ಜೀವಿಗಳ ನಡುವೆ ಆರೋಗ್ಯಕರ ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳಲು ವನ್ಯಜೀವಿ ಸಂರಕ್ಷಣೆ ಮುಖ್ಯವಾಗಿದೆ. ಈ ಭೂಮಿಯಲ್ಲಿರುವ ಪ್ರತಿಯೊಂದು ಜೀವಿಯು ಆಹಾರ ಸರಪಳಿಯಲ್ಲಿ ವಿಶಿಷ್ಟ ಸ್ಥಾನವನ್ನು ಹೊಂದಿದೆ ಮತ್ತು ಅವು ತಮ್ಮದೇ ಆದ ವಿಶೇಷ ರೀತಿಯಲ್ಲಿ ಪರಿಸರ ವ್ಯವಸ್ಥೆಗೆ ಕೊಡುಗೆ ನೀಡುತ್ತವೆ. ಈ ಹಿನ್ನೆಲೆಯಲ್ಲಿ ವನ್ಯಜೀವಿಗಳ ರಕ್ಷಣೆಯಾಗಬೇಕು. ಇಂದಿನ ಮಕ್ಕಳು ಈ ದೇಶದ ಭವ್ಯ ಪ್ರಜೆಗಳಾಗಿದ್ದು, ಮಕ್ಕಳು ವನ್ಯಜೀವಿಗಳ ಬಗ್ಗೆ ವಿಶೇಷ ಕಾಳಜಿಹೊಂದಬೇಕು ಹಾಗೂ ಪರಿಸರ ರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು ಎಂದರು.ಜಿಲ್ಲಾಧಿಕಾರಿ ನಲಿನ್ ಅತುಲ್ ಮಾತನಾಡಿ, ವನ್ಯಜೀವಿ ಸಂರಕ್ಷಣೆಯ ಪ್ರಾಮುಖ್ಯತೆಯ ಬಗ್ಗೆ ಹೆಚ್ಚು ವಿವರಿಸುವ ಅಗತ್ಯವಿಲ್ಲ. ವನ್ಯಜೀವಿ ಅಥವಾ ವನ್ಯಜೀವಿಗಳ ಒಂದು ಭಾಗವು ಈ ಭೂಮಿಯಿಂದ ಕಣ್ಮರೆಯಾಗಲು ನಾವು ಬಿಡಬಾರದು. ಪ್ರಕೃತಿಯು ತನ್ನದೇ ಆದ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ. ಜಿಲ್ಲೆಯಲ್ಲಿ ಕರಡಿದಾಮ ಹಾಗೂ ತೋಳದಾಮಗಳು ಇವೆ. ಅಲ್ಲದೇ ವಿವಿಧ ಬಗೆಯ ಪಕ್ಷಿಗಳನ್ನು ನಾವು ಇಲ್ಲಿ ಕಾಣಬಹುದಾಗಿದೆ. ಇವುಗಳ ಬಗ್ಗೆ ಜನರಿಗೆ ತಿಳಿಸಬೇಕು. ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸಲು ಅರಣ್ಯ ಇಲಾಖೆಯು ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಕೊಪ್ಪಳ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾವ್ಯ ಚತುರ್ವೇದಿ ಮಾತನಾಡಿ, ಇಂದಿನ ಪರಿಸ್ಥಿತಿಯಲ್ಲಿ ಕಾಡು, ವನ್ಯಜೀವಿಗಳ ನಾಶ, ಅರಣ್ಯ ಪ್ರದೇಶ ಒತ್ತುವರಿ, ವನ್ಯಜೀವಿ ಸಂಘರ್ಷ ಮುಂತಾದ ಕಾರಣಗಳಿಂದ ಒತ್ತಡದಲ್ಲಿದ್ದು, ಅರಣ್ಯ ಇಲಾಖೆಯು ಅರಣ್ಯ ಸಂರಕ್ಷಣೆ ಜೊತೆಗೆ ವನ್ಯಜೀವಿಗಳ ಉಳಿವಿಗಾಗಿ ಶ್ರಮಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಲು ವನ್ಯಜೀವಿ ಸಪ್ತಾಹ ಕಾರ್ಯಕ್ರಮನ್ನು ಆಯೋಜಿಸಲಾಗಿದೆ ಎಂದರು.ವನ್ಯಜೀವಿ ಸಂರಕ್ಷಣೆಗಾಗಿ ಜಾಗೃತಿ ನಡಿಗೆಯು ಗವಿಮಠದಿಂದ ಆರಂಭಗೊಂಡು ಬಸವೇಶ್ವರ ವೃತ್ತ, ಅಶೋಕ ಸರ್ಕಲ್, ಬಸ್‌ನಿಲ್ದಾಣದ ಮಾರ್ಗವಾಗಿ ಜಿಲ್ಲಾ ಕ್ರೀಡಾಂಗಣದವರೆಗೆ ನಡೆಯಿತು. ಈ ನಡೆಗೆಯಲ್ಲಿ ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಪಾಲ್ಗೊಂಡು ವನ್ಯಜೀವಿ ಸಂರಕ್ಷಣೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್ ಅರಸಿದ್ದಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಹೆಚ್.ಮುಲ್ಲಾ, ಕೊಪ್ಪಳ ವಲಯ ಅರಣ್ಯಾಧಿಕಾರಿ ಸ್ವಾತಿ, ಗಂಗಾವತಿ ವಲಯ ಅರಣ್ಯಾಧಿಕಾರಿ ಸುಭಾಸಚಂದ್ರ ನಾಯಕ, ಕುಷ್ಟಗಿ ವಲಯ ಅರಣ್ಯಾಧಿಕಾರಿ ಶಿವರಾಜ ಮೇಟಿ, ಸಾಮಾಜಿ ವಲಯ ಅರಣ್ಯ ಅಧಿಕಾರಿಗಳಾದ ಗುರನಗೌಡ ಪಾಟೀಲ, ಸತೀಶ ಹಾಗೂ ರಾಘವೇಂದ್ರ ಬಳ್ಳಾರಿ ಸೇರಿದಂತೆ ಇತರೆ ಕೊಪ್ಪಳ ಜಿಲ್ಲೆಯ ಅರಣ್ಯ ಸಿಬ್ಬಂದಿಗಳು, ಶ್ರೀಗವಿಸಿದ್ದೇಶ್ವರ ವಸತಿ ನಿಲಯ ಹಾಗೂ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಇದ್ದರು.
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಅ. 24 ರಂದು ಒಳ ಮೀಸಲಾತಿ ಜಾರಿ ಮಾಡಿ : ವೈ.ಜಯರಾಜ್