December 23, 2024

AKSHARA KRAANTI

AKSHARA KRAANTI




ದಿ. ಡಾ.ಹನುಮಂತಪ್ಪ ಅಂಡಗಿಗೆ ನುಡಿ ನಮನ

ಏನು ಬರೆಯಲಿ ತಮ್ಮ ನಾನು ಶಬ್ದಗಳೇ ಬರದಂತಾಗಿದೆಯೋ ನೀ ನಿಲ್ಲದ ಸ್ಥಳದಲ್ಲಿಂದು ನಿಶಬ್ದವಾಗಿದೆ ಮನೆಯಲ್ಲೆಲ್ಲಾ

||ಪ ||

ಎರಡು ದಶಕಗಳ ಹಿಂದಿನ ನುಡಿ ನೆನಪ ಮರುಕಳಿಸಿ ಬಂದು ಮನಕಾಗಿದೆ ತಾಪ ಕರುಳ ಬಳ್ಳಿಹಬ್ಬಿದಂತೆ ಸಾಹಿತ್ಯದ ಸಿರಿಸಂಪ ಮರಳಿ ಕಾಣಬಹುದೇ ಆ ನಿನ್ನುಡಿಯ ಕನ್ನಡ ಕಂಪ ||೧||

ಸಾಹಿತ್ಯ ಸಿರಿಯಿಂದ ಅರಳಿದಾ ಚುಟುಕುಗಳು ಹತ್ತಿ ಅಂಡಿಗೆ ತುಂಬಿದಂತೆ ನೀನಿಟ್ಟ ಕೃತಿಗಳು ಉತ್ತಮರ ಸ್ನೇಹವಿತ್ತು ಸ್ನೇಹಕೊಂದು ನುಡಿಗಳು ಮುತ್ತಿನ ಅಕ್ಷರಗಳ ಬಿತ್ತಿ ಕಟ್ಟಿಕೊಟ್ಟಿಹ ಪುಟಗಳು
||೨||

ಕನ್ನಡಕ್ಷರ ಜಾತ್ರೆಯಲ್ಲಿ ನಿನ್ನ ಹರುಷದ ಹೆಜ್ಜೆಯೂ ಹೊನ್ನ ನುಡಿಗಳಿಗಾಗಿ ಶ್ರಮಿಸಿದ ನೀನ್ನುಡಿ ಹಾಲುಜೇನು ನಾಡು ನುಡಿಗೆ ಶಿರಬಾಗಿ ಹೋರಾಡುತ್ತಿದ್ದೆ ಎಲ್ಲೆಡೆ ನೀನು ಹಾಡು ಕುಣಿತ ನಾಟಕದಿಂದ ಎಲ್ಲರ ಮನ ಗೆಲಿದವನು ||೩||

ಸಾಧನೆಗೈದವರ ಕಂಡು ಕಥೆ ಕವನದಲ್ಲವರನ್ನುಳಿಸಿ ಅಭಿನಂದನ ಗ್ರಂಥವನ್ನು ತಂದು ನಾಡಿಗೆ ಅವರನ್ನು ಪರಿಚಯಿಸಿ ಸದಾ ಸರ್ವ ಸಾಹಿತ್ಯಗಳ ಗುಂಪಲ್ಲಿ ಗುನುಗುಣಿಸಿ ಮುದದ ನುಡಿಗಳ ಮನಸ್ಸಿಗೆ ಇಳಿಸುತ್ತಿದ್ದೆ ನಗುತ್ತಾ ನಗಿಸಿ

||೪|

ಕಲೆ ಸಂಸ್ಕೃತಿಗಳ ಆರಾಧಿಸಿದೆ ಹರುಷದ ಮನದಿಂದ ಕವಿ ಕಲಾವಿದರನ್ನು ಗೌರವಿಸಿದೆ ಹಸನಾದ ಗುಣದಿಂದ ಕುಲ ನೆಲೆ ತೊರೆದ ನುಡಿಗಳ ನಾಡುತ ಹಾಡಿದೆನೀ ಹುರುಪಿಂದ ಛಲದಿ ಬಾಳಿ ಬದುಕಿದೆ ಮಡದಿ ಮಕ್ಕಳ ಬಲದಿಂದ ||೫||

ಶಿಕ್ಷ ಕ್ಷೇತ್ರದಿ ಸೇವೆಗೈದು ಸರ್ವಗುರುಗಳಿಗೆ ಬೇಕಾಗಿ ಲಕ್ಷಣವಾಗಿ ಉಡುಗೆಗಳ ಧರಿಸಿ ಉಪದೇಶವ ಮಾಡಿದೆ ನಗು ಮೊಗದಿಂದೆಲ್ಲರ ಕಾಣುತಲಿ ಸಾಗಿದನೀ ಛಲಗಾರ ||೬||

ಕಣ್ಣಿಗೆ ನಿದ್ದೆದೂರವಿಟ್ಟು ಪೆನ್ನುಕಾಗದದೀ ಮನವನ್ನಿಟ್ಟು ಉನ್ನತ ವಿದ್ಯೆಗೆ ಗಮನ ಕೊಟ್ಟು ಓದಲಿ ಮುನ್ನಡೆಗೆ ಪಣತೊಟ್ಟು ಮನದೊಡತಿಯ ಆಸೆ ಈಡೇರಿಸಲು ಪಿಎಚ್ ಡಿ ಯನ್ನು ಮಾಡಿದಿ ಗುಣದ ಹಿರಿಮೆಯ ಸಾಧಿಸಿ ಮಡದಿಗೆ ಪಡೆದ ಪತ್ರ ಅರ್ಪಿಸಿದಿ ||೭||

ನಿನ್ನಯ ನಿತ್ಯದ ಕಾಯಕವು ಕಣ್ಮನಗಳಲ್ಲಿ ತುಂಬಿಹುದು ನಿನ್ನ ನಂಬಿಬದುಕಿದ ಮಕ್ಕಳು ತಬ್ಬಲಿ ಯಾಗಿಹಲುಬುತಿಹವಿಂದು ಸಲ್ಲಿಸುವೆ ಹನುಮಂತ ತಮ್ಮಾ ನೊಂದ ಮನದ ನುಡಿಯನ್ನ ಸ್ಮರಿಸುತ್ತಿರಲಿ ಕಲೆ ಸಾಂಸ್ಕೃತಿಕ ಲೋಕ ಸದಾ ನಿನ್ನ ಸೇವೆಯನ್ನ ||೮||

– ಅನ್ನಪೂರ್ಣ ಮನ್ನಾಪೂರು
ಸಾಹಿತಿ ಹಾಗೂ ಗಾಯಕರು, ಕೊಪ್ಪಳ

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!