December 23, 2024

AKSHARA KRAANTI

AKSHARA KRAANTI




ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧ ಬೃಹತ್ ಕಾಲ್ನಡಿಗೆ ಜಾಥಾ

ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧ ಬೃಹತ್ ಕಾಲ್ನಡಿಗೆ ಜಾಥಾ |ಸಮಾನ ಬದುಕಿನತ್ತ ಅರಿವಿನ ಜಾಥಾಕೆ ಜೊತೆಯಾದ ಸಾವಿರಾರು ಹೆಜ್ಜೆಗಳು

ಕೊಪ್ಪಳ,: ಜಿಲ್ಲೆಯಲ್ಲಿ ನಡೆಯುತ್ತಿರುವ ನಿರಂತರ ದಲಿತರ ವಿರುದ್ಧದ ದೌರ್ಜನ್ಯಗಳನ್ನು ವಿರೋಧಿಸಿ ದಲಿತ ಪರ ಸಂಘಟನೆಗಳು ಹಾಗೂ ಕೊಪ್ಪಳದ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಆರಂಭಗೊಂಡಿರುವ ಕಾಲ್ನಡಿಗೆ ಜಾಥಾಕೆ ಸಾವಿರಾರು ಹೆಜ್ಜೆಗಳು ಜೊತೆ ಯಾದವು.

ಕೊಪ್ಪಳದ ಜಿಲ್ಲಾಧಿಕಾರಿಗಳ ಕಚೇರಿಯ ಎದುರುಗಡೆಯಿಂದ ಆರಂಭಗೊಂಡ ಸಂಗನಾಳ ಚಲೋ ಜಾಥಾಕ್ಕೆ ಹೋರಾಟಗಾರರು ಸಾಮೂಹಿಕವಾಗಿ ಚಾಲನೆ ನೀಡಿದರು.ಹೋರಾಟಗಾರ ಅಂಬಣ್ಣ ಆರೋಲಿಕರ್ ಮಾತನಾಡಿ, ಈ ಹಿಂದೆ ಸಹ ಇಡೀ ರಾಜ್ಯದ್ಯಂತ ವಿವಿಧ ಕಡೆ ದಲಿತರ ಮೇಲೆ ದೌರ್ಜನಗಳು ನಡೆಯುತ್ತಿದ್ದವು. ಆ ಸಂದರ್ಭದಲ್ಲಿ ಪೋಲಿಸ್ ಅಧಿಕಾರಿಗಳು ಆಯಾ ಗ್ರಾಮಕ್ಕೆ ಭೇಟಿ ನೀಡಿ ಇದರ ವಿರುದ್ಧ ಕಟ್ಟುನಿಟ್ಟಾದ ಕ್ರಮವನ್ನು ಕೈಗೊಳ್ಳುತ್ತಿದ್ದರು. ಘಟನೆಗಳಿಗೆ ಕಾರಣಿ ಕರ್ತರಾದವರ ವಿರುದ್ಧ ಸಾಕಷ್ಟು ಕಾನೂನು ಕ್ರಮ ಜರುಗಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ರೀತಿ ಕಟ್ಟುನಿಟ್ಟಾಗಿ ಕಾನೂನು ಕ್ರಮ ಜರಗಿಸುವ ಮತ್ತು ಕಾನೂನಿನ ಕುರಿತು ಭಯ ಇರುವಂತೆ ನೋಡಿಕೊಳ್ಳುವ ಅಧಿಕಾರಿಗಳ ಸಂಖ್ಯೆ ಕಡಿಮೆಯಾಗಿದೆ. ಈ ಕಾರಣಕ್ಕಾಗಿಯೇ ಈಗಲೂ ಸಹ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ ಎಂದರು.

ದಲಿತರ ಮೇಲೆ ದೌರ್ಜನ್ಯಗಳು ಈ ಹಿಂದಿಗಿಂತ ಈ ಕಾಲದಲ್ಲಿ ಹೆಚ್ಚಾಗಿವೆ, ಇದನ್ನು ಕಾನೂನಿನ ಮೂಲಕವೇ ಕಟ್ಟುನಿಟ್ಟಾಗಿ ತಡೆಗಟ್ಟಬೇಕಿದೆ ಕಾನೂನನ್ನು ಸಮರ್ಪಕವಾಗಿ ಜಾರಿಗೊಳಿಸುವ ಕಟ್ಟುನಿಟ್ಟಾದ ಅಧಿಕಾರಿಗಳ ಅವಶ್ಯಕತೆ ಇದೆ. ಯಾವುದೇ ರೀತಿಯ ಒತ್ತಡಗಳಿಗೆ ಮಣಿಯದೆ ಕಾನೂನು ಕ್ರಮ ಕೈಗೊಂಡರೆ ಖಂಡಿತವಾಗಿಯೂ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.

ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಈ ರೀತಿಯ ಘಟನೆಗಳು ಸಂಭವಿಸಿದಾಗ ಜಿಲ್ಲಾಮಟ್ಟದ ಅಧಿಕಾರಿಗಳು ಆ ಗ್ರಾಮಕ್ಕೆ ತೆರಳಿ ಕೂಲಂಕುಶವಾಗಿ ಪರಿಶೀಲನೆ ನಡೆಸಬೇಕು ಹಾಗೂ ಅದಕ್ಕೆ ಕಾರಣರಾದವರ ವಿರುದ್ಧ ಕಟ್ಟುನಿಟ್ಟಾದ ಕ್ರಮವನ್ನು ಜರುಗಿಸಬೇಕು. ಮತ್ತೊಮ್ಮೆ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಈಗ ಆದಾಗ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗುತ್ತವೆ ಇಲ್ಲವಾದಲ್ಲಿ ಇದು ನಿರಂತರವಾಗಿ ನಡೆಯುತ್ತಲೇ ಇರುತ್ತವೆ ಎಂದರು.ಮೊದಲ ದಿನದ ಕಾಲನಡಿಗೆ ಜಾಥವು ಜಿಲ್ಲಾಧಿಕಾರಿಗಳ ಕಚೇರಿಯಿಂದ ತೆರಳಿ ಭಾನಾಪುರವನ್ನು ತಲುಪಿತು. ಬೆಳಿಗ್ಗೆಯಿಂದ ಸಂಗನಾಳ್ ಅವರಿಗೆ ಕಾಲ್ನಡಿಗೆ ಜಾಥಾ ನಡೆಯಲಿದೆ. ಜಾಥಾದಲ್ಲಿ ಕೊಪ್ಪಳದ ವಿವಿಧ ಪ್ರಗತಿಪರ ಸಂಘಟನೆಗಳು ಭಾಗಿಯಾಗಿವೆ.

ಈ ಸಂದರ್ಭದಲ್ಲಿ ಹೋರಾಟಗಾರರಾದ ಟಿ.ರತ್ನಾಕರ್, ಶುಕ್ರಜ ತಾಲ್ಕೇರಿ, ಸಂಘಟಕರಾದ ಬಸವರಾಜ ಸೂಳಿಭಾವಿ, ಮುತ್ತು ಬಿಳಿಯಲಿ, ಶ್ರೀಪಾದ ಭಟ್, ಶಶಿಕಲಾ ಮಠ, ಸಲೀಮಾ ಜಾನ, ಜನಾರ್ದನ, ಎಂಆರ್ ಬೇರಿ, ಗೌರಿ ಗೋನಾಳ, ಮರಿಯಮ್ಮ, ಆನಂದ ಶಿಂಗಾಡಿ, ಖಾಸೀಮ್ ಸರ್ದಾರ, ಡಿಎಂ
ಬಡಿಗೇರ್, ಡಿಹೆಚ್ ಪೂಜಾರ್, ನಜೀರ್ ಮೂಲಿಮನಿ, ಮುತ್ತು ಹಾಲಕೇರಿ, ರಘು ಚಾಕ್ರಿ ಸೇರಿದಂತೆ ಇತರರು ಇದ್ದರು.
ಸಾವಿರಾರು ಕಾರ್ಯಕರ್ತರು ಜಾಥಾದಲ್ಲಿ ಪಾಲ್ಗೊಂಡಿದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!