ಕೊಪ್ಪಳ,: ದೇಶಕ್ಕೆ ಕಾಂಗ್ರೆಸ್ ಪಕ್ಷ ತುರ್ತು ಪರಿಸ್ಥಿತಿ 1975ರಲ್ಲಿ ಹೇರಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಂವಿಧಾನಕ್ಕೆ ಮಾಡಿದ ಅಪಮಾನ, ಇಂದಿರಾ ಗಾಂಧಿ ಪ್ರಜಾಪ್ರಭುತ್ವವನ್ನು ಧಮನ ಮಾಡಿದ್ದಾರೆ ಎಂದು ಖಂಡಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಸಂವಿಧಾನ ದುರ್ಬಳಕೆ ಮಾಡಿಕೊಂಡು 1975ರಲ್ಲಿ ಇಂದಿರಾಗಾಂಧಿ ಅವರು ತುರ್ತುಪರಿಸ್ಥಿತಿ ಹೇರಿದ್ದಕ್ಕೆ ಕಾಂಗ್ರೆಸ್ ನಾಯಕರು ಕ್ಷಮೆ ಕೇಳುವಂತೆ ಆಗ್ರಹಿಸಿ ನಗರದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರನ್ನು ಬಂಧಿಸಿ ಬಿಡುಗಡೆ ಮಾಡಲಾಯಿತು.
ಬಿಜೆಪಿ ಮುಖಂಡರು, ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.
ಇಂದಿರಾ ಗಾಂಧಿ ಅಧಿಕಾರದಲ್ಲಿದ್ದಾಗ ದೇಶಕ್ಕೆ ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ ದೇಶದ ದಿಕ್ಕನ್ನು ತಪ್ಪಿಸಿದ್ದಾರೆ. ಅಲ್ಲದೆ, ಇದು ಸಂವಿಧಾನಕ್ಕೆ ಮಾಡಿದ ಅಪಮಾನ ಆಗಿದೆ. ಇದಲ್ಲದೆ ಇಂದಿರಾಗಾಂಧಿ ಅವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಮನಬಂದಂತೆ ಅಧಿಕಾರ ಚಲಾಯಿಸಿ ಜನರನ್ನು ದಯನೀಯ ಪರಿಸ್ಥಿತಿಗೆ ತಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ ನಗರದ ತಹಶಿಲ್ದಾರರ ಕಚೇರಿಯಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಮೂಲಕ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಾಲಯಕ್ಕೆ ನುಗ್ಗುವ ತಯಾರಿ ಮಾಡಿಕೊಂಡಿದ್ದರು. ಇದರ ಮಾಹಿತಿ ತಿಳಿದ ಪೊಲೀಸರು ತಹಶೀಲ್ದಾರ ಕಚೇರಿಯ ಆವರಣದಿಂದ ತೆರಳುವ ವೇಳೆಯಲ್ಲಿ ಪ್ರತಿಭಟನಾಕಾರರನ್ನು ಬಂಧಿಸಲು ಮುಂದಾದರು. ಇದರಿಂದ ರೊಚ್ಚಿಗೆದ್ದ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ
ಮಾತನಾಡಿ, ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಇಂದಿರಾಗಾಂಧಿ ಸಂವಿಧಾನ ಬಾಹಿರವಾಗಿ ಜನರ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ಸಂವಿಧಾನದ ಆಶಯಕ್ಕೆ ವಿರುದ್ದವಾಗಿ ನಡೆದುಕೊಂಡಿದ್ದಾರೆ. ಅಧಿಕಾರ ತಪ್ಪುತ್ತದೆ ಎಂದು ತುರ್ತು ಪರಿಸ್ಥಿತಿ ಹೇರಿದ್ದು, ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದರು. ಸಂವಿಧಾನದ ಕುರಿತು ಈಗ ದೊಡ್ಡದಾಗಿ ಮಾತನಾಡುವ ಕಾಂಗ್ರೆಸ್ ನಾಯಕರು ತುರ್ತುಪರಿಸ್ಥಿತಿ ಹೇರಿದ್ದಕ್ಕೆ ಕ್ಷಮೆ ಕೇಳುವಂತೆ ಆಗ್ರಹಿಸಿದರು.
ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮುಖಂಡರಾದ ನೀಲಕಂಠಯ್ಯ ಹಿರೇಮಠ, ಸುನೀಲ್ ಹೆಸರೂರು, ರಮೇಶ ನಾಡಗೇರ, ಪ್ರದೀಪ ಹಿಟ್ನಾಳ, ಮಹೇಶ ಹಾದಿಮನಿ, ಪಂಪಯ್ಯ ಹಿರೇಮಠ, ಸೋಮನಗೌಡ ಪಾಟೀಲ, ಗಣೇಶ ಹೊರತಟ್ನಾಳ, ಅಂದಪ್ಪ ಯಲ್ಲಮನವರ್ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.
More Stories
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು
ಬಿಎಸ್ ಪಿ ಸಂಘಟನೆ ಬೆಳೆಸಲು ಶ್ರಮಿಸಿ : ಕೃಷ್ಣಮೂರ್ತಿ
ಪರಿಸರ ಸಮತೋಲನಕ್ಕೆ ವನ್ಯಜೀವಿಗಳ ಪಾತ್ರ ಪ್ರಮುಖವಾಗಿದೆ : ಕೆ.ರಾಜಶೇಖರ ಹಿಟ್ನಾಳ