December 23, 2024

AKSHARA KRAANTI

AKSHARA KRAANTI




ತಪ್ಪಿದ ಬಿಜೆಪಿ ಟಿಕೆಟ್ | 4 ದಿನ ಬಳಿಕ ಮುಂದಿನ ನಿರ್ಧಾರ : ಸಂಗಣ್ಣ ಕರಡಿ

ಬೆಂಬಲಿಗರ ಹಾಗೂ ಅಭಿಮಾನಿಗಳ ಸ್ವಾಭಿಮಾನಿ ಸಮಾವೇಶ
ಕೊಪ್ಪಳ,: ಕಳೆದ ಹತ್ತು ವರ್ಷಗಳಿಂದ ಸಂಸದನಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಈ ಬಾರಿಯೂ ಟಿಕೆಟ್ ದೊರೆಯುವ ವಿಶ್ವಾಸ ಇತ್ತು. ಆದರೆ, ಟಿಕೆಟ್ ಬೇರೆಯವರಿಗೆ ಆಗಿದೆ. ಟಿಕೆಟ್ ತಪ್ಪಿದ ಬಳಿಕ ರಾಜ್ಯದ ಅನೇಕ ನಾಯಕರು ಫೋನ್ ಕರೆ ಮಾಡಿ ಮಾತನಾಡಿದ್ದಾರೆ. ಟಿಕೆಟ್ ವಿಚಾರದ ಬಗ್ಗೆ ಮರು ಚರ್ಚೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಆದ್ದರಿಂದ ನಾಲ್ಕು ದಿನ ಕಾದು ಬಳಿಕ ಮುಂದಿನ ನಿರ್ಧಾರ ಮಾಡಲಾಗುವುದು ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಗುರುವಾರ ನಗರದ ಶಿವಶಾಂತವೀರ ಮಂಗಲ ಭವನದಲ್ಲಿ ನಡೆದ ಸಂಗಣ್ಣ ಕರಡಿ ಬೆಂಬಲಿಗರ ಹಾಗೂ ಅಭಿಮಾನಿಗಳ ಸ್ವಾಭಿಮಾನಿ ಸಮಾವೇಶದಲ್ಲಿ ಅವರು ಮಾತನಾಡಿದರು. ಎರಡು ಬಾರಿ ಸಂಸದನಾಗಿ ಜನಪರ ಕೆಲಸ ಮಾಡಿದರೂ ಕೆಲವರ ಕುತಂತ್ರದಿಂದ ನನಗೆ ಟಿಕೆಟ್ ತಪ್ಪಿದೆ. ನನಗೆ ಕಾರ್ಯಕರ್ತರು ಹಾಗೂ ಬೆಂಬಲಿಗರೇ ಪ್ರಜೆಗಳು. ಅವರ ನಿರ್ಧಾರದಂತೆ ನಾಲ್ಕು ದಿನಗಳ ಬಳಿಕ ನಿರ್ಧಾರಕ್ಕೆ ಬರುವೆ ಎಂದರು.
ಟಿಕೆಟ್ ತಪ್ಪಿದ ಬಗ್ಗೆ ಬಿಜೆಪಿ ಪಕ್ಷದ ಅನೇಕ ಹಿರಿಯ ನಾಯಕರು, ಹಿತೈಷಿಗಳು ಮಾತನಾಡಿದ್ದಾರೆ. ಬಿಜೆಪಿ ನಾಯಕರಾದ ಬಿ.ಎಸ್. ಯಡಿಯೂರಪ್ಪ, ರಾಮದಾಸ್‌, ಪ್ರಹ್ಲಾದ ಜೋಶಿ, ನಳಿನ್ ಕುಮಾರ್ ಕಟೀಲ್, ಸುನಿಲ್ ಕುಮಾ‌ರ್,
ವಿಜಯೇಂದ್ರ ಸೇರಿದಂತೆ ಪಕ್ಷದ ಅನೇಕರು ಕರೆ ಮಾಡಿ ಮಾತನಾಡಿದ್ದಾರೆ. 2-3 ದಿನಗಳಲ್ಲಿ ಪಕ್ಷದ ವರಿಷ್ಠರು ನನ್ನನ್ನೇ ಕರೆಯಿಸಿಕೊಳ್ಳಬಹುದು ಅಥವಾ ಕೊಪ್ಪಳಕ್ಕೆ ಬರಬಹುದು. ಕಾದು ನೋಡೋಣ, ಏನಾಗುತ್ತದೆಯೋ ಏನೋ ಎಂದ ಅವರು, ಮೂರು-ನಾಲ್ಕು ದಿನಗಳ ನಂತರ ವರಿಷ್ಠರ ಸೂಕ್ತ ತೀರ್ಮಾನ ಕೈಗೊಳ್ಳುವ ಆಶಾಭಾವನೆ ವ್ಯಕ್ತಪಡಿಸಿದರು.
ನನ್ನ ಇಡೀ ರಾಜಕೀಯ ಜೀವನದಲ್ಲಿ ಸೋಲಿಗಿಂತ ಗೆಲುವನ್ನೇ ಕಂಡಿದ್ದೇನೆ, ಅದಕ್ಕಿಂತ ಹೆಚ್ಚಾಗಿ ಅಭಿವೃದ್ಧಿ ಕೆಲಸ ಮಾಡಿ ನಿಮ್ಮೆಲ್ಲರ ಪ್ರೀತಿಗೆ ಪಾತ್ರರಾಗಿರುವೆ. ಇಂದಿನ ಸಭೆಗೆ ನನ್ನ ಕುಟುಂಬದ ಎಲ್ಲ ಸದಸ್ಯರನ್ನು ಬರಲು ಹೇಳಿದ್ದೇನೆ. ನನ್ನ ರಾಜಕೀಯ ಜೀವನ ಮುಂದೆ ಏನಾಗುತ್ತದೋ ಗೊತ್ತಿಲ್ಲ, 7 ಕೋಟಿ ರೂ. ಸಾಲ ಮಾಡಿಕೊಂಡಿದ್ದೇನೆ, ಅದರ ಚಿಂತೆ ನನಗಿರಲಿ ನೀವು ನಿಮ್ಮ ದುಡಿಮೆಯ ಕಡೆಗೆ ಗಮನ ಹರಿಸಿ ಎಂದು ಸಭೆಗೆ ಬಂದಿದ್ದ ತಮ್ಮ ಕುಟುಂಬದ ಸದಸ್ಯರಿಗೆ ಸಂಗಣ್ಣ ಕರಡಿ ಅವರು ಭಾವುಕವಾಗಿ ಹೇಳಿದರು.
ಇನ್ನೂ ತಮಗೆ ಟಿಕೆಟ್ ತಪ್ಪುವಲ್ಲಿ ಹಲವು ಮಾಜಿ, ಹಾಲಿ ಶಾಸಕರು ಕಾರಣರಾಗಿದ್ದಾರೆ ಎಂದು ಅವರ ವಿರುದ್ದ ಸಂಗಣ್ಣ ಕರಡಿ ಅವರು ಅಸಮಾಧಾನ ಹೊರಹಾಕಿದರು.
ಬೆಂಬಲಿಗರ ಸಮಾವೇಶದಲ್ಲಿ ಪಾಲ್ಗೊಂಡವರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಸ್ಥಳೀಯ ಬಿಜೆಪಿ ನಾಯಕರು ಎಚ್ಚರಿಕೆ ನೀಡಿದ್ದಾರೆ. ಆ ರೀತಿ ಶಿಸ್ತು ಕ್ರಮ ಕೈಗೊಂಡರೆ ಬಿಜೆಪಿಯಲ್ಲಿ ಎಲ್ಲರೂ ಖಾಲಿಯಾಗುತ್ತಾರೆ ಎಂದು ಸ್ಥಳೀಯ ಮುಖಂಡರ ವಿರುದ್ಧವೂ ಅವರು ಹರಿಹಾಯ್ದರು. ಕೊಪ್ಪಳ ಕ್ಷೇತ್ರದ ಸಾಕಷ್ಟು ಬೆಂಬಲಿಗರು ಬಿಜೆಪಿ ಟಿಕೆಟ್‌ ಕುರಿತು ಮರು ಪರಿಶೀಲಿಸಬೇಕು ಇಲ್ಲವಾದರೆ ಸ್ವತಂತ್ರವಾಗಿ ಸ್ಪರ್ಧೆ ಮಾಡಬೇಕು ಎಂದು ಘೋಷಣೆ ಕೂಗಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಗಣ್ಣ ಕರಡಿ 4 ದಿನಗಳ ಬಳಿಕ ಮುಂದಿನ ನಿರ್ಧಾರ ಮಾಡೋಣ. ಅಲ್ಲಿಯ ತನಕ ಶಾಂತ ರೀತಿಯಿಂದ ಇರಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಕೊಪ್ಪಳ ಲೋಕಸಭೆಯ 8 ವಿಧಾನಸಭಾ ಕ್ಷೇತ್ರದಿಂದ ಅಪಾರ ಸಂಖ್ಯೆಯ ಅಭಿಮಾನಿಗಳು, ಬೆಂಬಲಿಗರು, ಕಾರ್ಯಕರ್ತರು ಭಾಗವಹಿಸಿದ್ದರು. ಸಂಗಣ್ಣ ಕರಡಿ ಅವರಿಗೆ ನೈತಿಕ ಬೆಂಬಲ, ಆತ್ಮಸ್ಥೈರ್ಯ ತುಂಬಿದ್ದಾರೆ.
ಒಟ್ಟಿನಲ್ಲಿ 3-4 ದಿನದ ಮಟ್ಟಿಗೆ ಕಾದು ನೋಡುವ ತಂತ್ರಕ್ಕೆ ಸಂಗಣ್ಣ ಕರಡಿ ಅವರು ಮೊರೆ ಹೋಗಿದ್ದು ಮುಂದಿನ ತೀರ್ಮಾನ ಬಿಜೆಪಿ ಪಕ್ಷದ ವರಿಷ್ಠರು ಕೈಗೊಳ್ಳುವ ಮೇಲೆ ಸಂಗಣ್ಣ ಕರಡಿ ಅವರ ಭವಿಷ್ಯ ನಿಂತಿದೆ ಎನ್ನಬಹುದು.

 

 

 

 

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!