December 23, 2024

AKSHARA KRAANTI

AKSHARA KRAANTI




ತಪ್ಪಿದ ಬಿಜೆಪಿ ಎಂಪಿ ಟಿಕೆಟ್ | ಶಕ್ತಿ ಪ್ರದರ್ಶನಕ್ಕೆ ಸಜ್ಜಾದ ಸಂಗಣ್ಣ ಕರಡಿ

ಮಾರ್ಚ್ 21 ಗುರುವಾರ ಬೆಂಬಲಿಗರ ಸಭೆ

ಕೊಪ್ಪಳ,: ಬಿಜೆಪಿ ಟಿಕೆಟ್ ತಪ್ಪಿರುವ ಹಿನ್ನೆಲೆ ಸಂಗಣ್ಣ ಕರಡಿ ಅವರ ಬೆಂಬಲಿಗರ ಸಭೆ ಮಾರ್ಚ್ 21 ಗುರುವಾರ ನಗರದ ಶಿವಶಾಂತವೀರ ಮಂಗಲ ಭವನದಲ್ಲಿ ಜರುಗಲಿದ್ದು, ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರದ ಬೆಂಬಲಿಗರು ಭಾಗವಹಿಸಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ತಮಗೆ ಟಿಕೆಟ್ ಕೈತಪ್ಪಿರುವುದರಿಂದ ಅಸಮಾಧಾನಗೊಂಡಿರುವ ಸಂಸದ ಸಂಗಣ್ಣ ಕರಡಿ ಗುರುವಾರ ಬೆಂಬಲಿಗರ ಸಭೆ ನಡೆಸಿ ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಮಂಗಳವಾರ ನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಕಳೆದ ಹತ್ತು ವರ್ಷಗಳಿಂದ ಸಂಸದನಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಈ ಬಾರಿಯೂ ಟಿಕೆಟ್ ದೊರೆಯುವ ವಿಶ್ವಾಸ ಇತ್ತು. ಆದರೆ, ಹೈಕಮಾಂಡ್ ಡಾ.ಬಸವರಾಜ ಕ್ಯಾವಟರ್‌ಗೆ ನೀಡಿದೆ. ಟಿಕೆಟ್ ಪಡೆದುಕೊಂಡಿರುವ ಡಾ. ಬಸವರಾಜ ಕ್ಯಾವಟರ್‌ ಅವರನ್ನು ಅಭಿನಂದಿಸುತ್ತೇನೆ. ಆದರೆ, ನನಗೆ ಟಿಕೆಟ್ ತಪ್ಪಿಸಿರುವುದಕ್ಕೆ ಬಿಜೆಪಿ ರಾಜ್ಯ ನಾಯಕರ ಬಗ್ಗೆ ಅಸಮಾಧಾನವಿದೆ. ಮಾಜಿ ಸಿಎಂ ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಅಥವಾ ಪಕ್ಷದ ಹಿರಿಯ ನಾಯಕರು ನನ್ನೊಂದಿಗೆ ಈ ಕುರಿತು ಚರ್ಚಿಸದೇ ಈ ನಿರ್ಧಾರ ಕೈಗೊಂಡಿರುವುದು ನನಗೆ ಬೇಸರ ಮೂಡಿಸಿದೆ. ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗುತ್ತಿದ್ದಂತೆ ಅವರನ್ನು ಮೊದಲು ನಾನು ಅಭಿನಂದಿಸಿದ್ದೆ. ಮಾಜಿ ಸಿಎಂ ಯಡಿಯೂರಪ್ಪ ಅವರ ಬಗ್ಗೆಯೂ ನನಗೆ ಅಪಾರ ಗೌರವವಿದೆ. ಆದರೆ, ಅವರು ಸೌಜನ್ಯಕ್ಕಾದರೂ ನನ್ನೊಂದಿಗೆ ಮಾತನಾಡಿ ಟಿಕೆಟ್ ಬದಲಾವಣೆ ಕುರಿತು ಸಾಂತ್ವನ ಹೇಳುವ ಕೆಲಸ ಮಾಡಿಲ್ಲ. ಟಿಕೆಟ್ ಘೋಷಣೆಯಾಗುತ್ತಿದ್ದಂತೆ ನನಗೆ ಶಾಕ್ ಆಗಿತ್ತು. ಆದರೆ, ಸಿಂಧನೂರು ರೈಲ್ವೆ ಸಂಚಾರ ಪ್ರಾರಂಭ ಮತ್ತು ಕೆಲವು ಸರಕಾರಿ ಕಾರ್ಯಕ್ರಮದ ಕಾರ್ಯದಲ್ಲಿ ಇದ್ದೆ. ಹೀಗಾಗಿ ಮಾಧ್ಯಮಗಳೊಂದಿಗೆ ಕುಳಿತು ಮಾತನಾಡಲು ಆಗಿಲ್ಲ. ನನಗೆ ಟಿಕೆಟ್ ಕೈತಪ್ಪಿರುವುದರಿಂದ ಕ್ಷೇತ್ರದ ನನ್ನ ಬೆಂಬಲಿಗರು, ಕಾರ್ಯಕರ್ತರು ಮತ್ತು ಹಲವು ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ. ಬಿಜೆಪಿದಿಂದ ನನಗೆ ಸಾಕಷ್ಟು ಸಹಕಾರ ಸಿಕ್ಕಿದೆ. ಏಕಾ ಏಕಿ ಟಿಕೆಟ್ ತಪ್ಪಿಸುವ ಔದಾರ್ಯ ಎನಿತ್ತು. ಈ ಕುರಿತು ಹೈಕಮಾಂಡ್ ನಾಯಕರಿಗೆ ಮೂರು ಪ್ರಶ್ನೆಗಳನ್ನು ಮುಂದಿಟ್ಟಿದ್ದೇನೆ. ಇದಕ್ಕೆ ಅವರು ಇದುವರೆಗೂ ಉತ್ತರಿಸಿಲ್ಲ. ನನಗೆ ಅಸಮಾಧಾನವಾಗಿರುವುದು ಸಹಜ. ರಾಜಕೀಯ ಗಟ್ಟಿ ನಿರ್ಧಾರ ತೆಗೆದುಕೊಳ್ಳುವಂತೆ ನನಗೆ ಕಾರ್ಯಕರ್ತರು, ಅಭಿಮಾನಿಗಳು ಒತ್ತಡ ಹಾಕುತ್ತಿದ್ದಾರೆ. ಹೀಗಾಗಿ ಗುರುವಾರ ಮಾ. 21 ರಂದು ನಗರದ ಶಿವಶಾಂತವೀರ ಮಂಗಲ ಭವನದಲ್ಲಿ ಸಭೆ ನಡೆಸುತ್ತಿದ್ದೇನೆ. ಅಲ್ಲಿ ಎಲ್ಲರ ಅಭಿಪ್ರಾಯ ಕೇಳಿ ಮುಂದಿನ ನಿರ್ಧಾರ ಪ್ರಕಟಿಸುತ್ತೇನೆ. ಕಾಂಗ್ರೆಸ್ ಪಕ್ಷದ ನಾಯಕರು ಕೂಡಾ ನನಗೆ ಈಗಾಗಲೇ ಮಾತನಾಡುತ್ತಿದ್ದಾರೆ. ಅವರಿಗೆ ನಾನು ಯಾವುದೇ ಭರವಸೆ ನೀಡಿಲ್ಲ. ಜಿಲ್ಲೆಯ ಕೆಲವು ನಾಯಕರು ನನಗೆ ಟಿಕೆಟ್ ತಪ್ಪುವಲ್ಲಿ ಪ್ರಮುಖ ಪಾತ್ರವಹಿಸಿರುವುದು ನನಗೆ ಬೇಸರವಿದೆ. ಯಾರು ಟಿಕೆಟ್ ತಪ್ಪಿಸಿದ್ದಾರೋ ಅವರು ಚುನಾವಣೆ ನೇತೃತ್ವವಹಿಸಲಿ. ಈ ಲೋಕಸಭಾ ಚುನಾವಣೆಯಲ್ಲಿ ನಾನು ಪ್ರಮುಖ ನಾಯಕತ್ವವಹಿಸುದಿಲ್ಲ. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಇರುತ್ತೇನೆ ಎಂದರು.
ಗುರುವಾರ ಕೊಪ್ಪಳ ನಗರದಲ್ಲಿ ನಡೆಯುವ ಅಭಿಮಾನಿಗಳು, ಕಾರ್ಯಕರ್ತರ ಸಭೆ ನಂತರ ಸಂಗಣ್ಣ ಕರಡಿ ಅವರ ಮುಂದಿನ ರಾಜಕೀಯ ಭವಿಷ್ಯದ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ.

ಸುದ್ದಿಗೋಷ್ಠಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹಾಂತೇಶ ಪಾಟೀಲ್, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಮಂಜುನಾಥ, ಪಾಲಕ್ಷಪ್ಪ ಗುಂಗಾಡಿ, ಮಂಜುಳಾ ಕರಡಿ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಹಾಗೂ ಬೆಂಬಲಿಗರು ಇದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!