December 23, 2024

AKSHARA KRAANTI

AKSHARA KRAANTI




ಜನರ ಶ್ರೇಯೋಭಿವೃದ್ಧಿಗಾಗಿ ಗ್ಯಾರಂಟಿ ಯೋಜನೆಗಳು ಜಾರಿ : ಕೆ.ರಾಜಶೇಖರ ಹಿಟ್ನಾಳ್

ಗ್ಯಾರಂಟಿ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ

ಕೊಪ್ಪಳ,: ರಾಜ್ಯ ಸರ್ಕಾರದ  5 ಗ್ಯಾರಂಟಿ ಯೋಜನೆಗಳಿಂದ ಜನಜೀವನ ಆರ್ಥಿಕವಾಗಿ ಅಭಿವೃದ್ಧಿಯಾಗಿದೆ. ಆಯಾ ಯೋಜನೆಗಳಿಗೆ ಸಂಬಂಧಿಸಿದ ಇಲಾಖೆಗಳ ಅನುಷ್ಠಾನ ಅಧಿಕಾರಿಗಳು ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು
ಕೆ.ರಾಜಶೇಖರ ಹಿಟ್ನಾಳ್ ಹೇಳಿದರು.

ಶುಕ್ರವಾರ ತಾಲೂಕಿನ ಅಳವಂಡಿ ಗ್ರಾಮದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ ವತಿಯಿಂದ ನಡೆದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ, ಶಕ್ತಿ ಹಾಗೂ ಅನ್ನಭಾಗ್ಯ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ‌ ನಡೆಸಿ, ಆಯಾ ಯೋಜನೆಗಳ ಫಲಾನುಭವಿಗಳಿಗೆ ಸರ್ಕಾರದ ಸಹಾಯಧನ ಮತ್ತು ಇನ್ನೀತರ ಸೌಕರ್ಯಗಳು ಸಮರ್ಪಕವಾಗಿ ತಲುಪುತ್ತಿರುವುದರ ಬಗ್ಗೆ ಖಚಿತಪಡಿಸಿಕೊಂಡರು.ಸರ್ಕಾರವು ಜನರ ಶ್ರೇಯೋಭಿವೃದ್ಧಿಗಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಸರ್ಕಾರದ ಈ ಸದುದ್ದೇಶ ಈಡೇರಿದೆಯೇ ಇಲ್ಲವೇ, ಜನರ ನಿರೀಕ್ಷೆ ಏನು ಎಂಬುದರ ಬಗ್ಗೆ ಫಲಾನುಭವಿಗಳಿಂದಲೇ ಅಭಿಪ್ರಾಯ ಪಡೆಯಲು ಹಾಗೂ ಗ್ಯಾರಂಟಿ ಯೋಜನೆಗಳಿಂದ ವಂಚಿತರಾದ ಫಲಾನುಭವಿಗಳಿಗೆ ಯೋಜನೆಗಳ ಮಾಹಿತಿ ತಲುಪಿಸುವುದಕ್ಕಾಗಿ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅರ್ಹ ಫಲಾನುಭವಿಗಳು‌ ಯೋಜನೆಗಳಿಂದ ವಂಚಿತರಾಗಿದ್ದರೆ‌ ಅಂತಹ ಫಲಾನುಭವಿಗಳು ತಾಲ್ಲೂಕಿನ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಿಗೆ ಹಾಗೂ ಸದಸ್ಯರನ್ನು ಕಂಡು ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು. ಅರ್ಹ ಫಲಾನುಭವಿಗಳು‌ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳಿಂದ ‌ವಂಚಿತರಾಗಬಾರದು ಎಂದರು.

ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ರೆಡ್ಡಿ ಶ್ರೀನಿವಾಸ ಮಾತನಾಡಿ, ಗ್ಯಾರಂಟಿ  ಯೋಜನೆಗಳು ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯಾಗಿರುವ ಸಾಮಾಜಿಕ ಕಾರ್ಯಕ್ರಮವಾಗಿವೆ. ಅರ್ಹರೆಲ್ಲರೂ ಗ್ಯಾರಂಟಿ ಯೋಜನೆಗಳ ವ್ಯಾಪ್ತಿಗೆ ಒಳಪಡಬೇಕು ಎಂಬುದು ಸರ್ಕಾರದ ಉದ್ದೇಶವಾಗಿದ್ದು, ಯಾವುದೇ ಅರ್ಹ ಫಲಾನುಭವಿಗಳು ಈ ಯೋಜನೆಯಿಂದ ಹೊರಗುಳಿಯಬಾರದು. ಈ ಹಿನ್ನೆಲೆಯಲ್ಲಿ ಪ್ರಮಾಣಿಕವಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವಂತಹ ಕೆಲಸವನ್ನು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಮಾಡಬೇಕು ಎಂದರು.ಈ ಸಂದರ್ಭದಲ್ಲಿ ಕೊಪ್ಪಳ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಬಾಲಚಂದ್ರ ಎನ್, ಸದಸ್ಯರಾದ ಅನ್ವರ್ ಹುಸೇನ್ ಎಂ ಗಡಾದ್, ಜ್ಯೋತಿ ಗೊಂಡಬಾಳ, ಮಾನ್ವಿ ಭಾಷ, ಅನ್ನದಾನಸ್ವಾಮಿ ಸಾಲಿಮಠ, ಅಳವಂಡಿ ಗ್ರಾ.ಪಂ ಅಧ್ಯಕ್ಷರಾದ ಶಂಕ್ರಮ್ಮ ಜೋಗಿನ, ಉಪಾಧ್ಯಕ್ಷರಾದ ಶಾರದಮ್ಮ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಕೊಟ್ರಪ್ಪ ಸೇರಿದಂತೆ ಗ್ರಾಮಸ್ಥರು ಇದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!