December 23, 2024

AKSHARA KRAANTI

AKSHARA KRAANTI




ಕೊಪ್ಪಳ ಜಿಲ್ಲೆಯ ಮೊದಲ ಜಿಲ್ಲಾಧಿಕಾರಿ ಕೆ.ಶಿವರಾಮ ನಿಧನ : ಸಂತಾಪ ಸಭೆ

ಕೊಪ್ಪಳ,: ಕನ್ನಡದ ಖ್ಯಾತ ಚಲನಚಿತ್ರ ನಟ ಹಾಗೂ ಕೊಪ್ಪಳಕ್ಕೆ ಮೊದಲ ಜಿಲ್ಲಾಧಿಕಾರಿಯಾಗಿ ಆಡಳಿತ ನಡೆಸಿದ ಕೆ.ಶಿವರಾಮ ಅವರ ನಿಧನ ಕರ್ನಾಟಕ ರಾಜ್ಯಕ್ಕೆ ತುಂಬಲಾರದ ನಷ್ಟ ಎಂದು ಕೊಪ್ಪಳದ ಹಿರಿಯ ಸಾಹಿತಿ ಮಹಾಂತೇಶ ಮಲ್ಲನಗೌಡರು ಹೇಳಿದರು.

ಅವರು ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಸಂತಾಪ ಸಭೆ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಕೆ.ಶಿವರಾಮ ಅವರು ಕೊಪ್ಪಳದ ಜನರ ಜತೆ ಅವಿನಾಭಾವ ಸಂಬಂಧ ಹೊಂದಿದ್ದರು. ಅವರೊಂದಿಗೆ ಸಿನಿಮಾ ಮಾಡಿದ ನೆನಪುಗಳನ್ನು ಸ್ಮರಿಸಿಕೊಂಡರು.

ಡಾ.ಬಿ.ಜ್ಞಾನಸುಂದರ ಮಾತನಾಡಿ, ದೇಶದಲ್ಲಿ ಪ್ರಥಮ ಬಾರಿಗೆ ಕನ್ನಡದಲ್ಲಿ ಕೆಎಎಸ್ ಪಾಸಾದ ಕೀರ್ತಿ ಇವರಿಗೆ ಸಲ್ಲುತ್ತದೆ. ಶಿವರಾಮ ಅವರ ಮತ್ತು ನಮ್ಮ ನಡುವೆ ಒಳ್ಳೆಯ ಗೆಳೆತನವಿತ್ತು. ಆಗ ಅವರು ಆಡಳಿತದಲ್ಲಿ ದಲಿತರಗಾಗಿ ಹಲವಾರು ಒಳ್ಳೆಯ ಕೆಲಸಗಳನ್ನು ಮಾಡುವುದರ ಜೊತೆಗೆ ಇಡೀ ಜಿಲ್ಲೆಗೆ ಹೆಸರುವಾಸಿಯಾಗಿದ್ದರು ಎಂದರು.

ಹಿರಿಯ ಮುಖಂಡರಾದ ರಾಮಣ್ಣ ಕಂದಾರಿ ಅವರು ಮಾತನಾಡಿ, ಶಿವರಾಮ ಅವರು ಚಲನಚಿತ್ರದ ಜೊತೆಗೆ ಆಡಳಿತದಲ್ಲಿ ಚುರುಕಾಗಿದ್ದರು. ಅವರ ಒಂದು ಆಡಳಿತ ಅವಧಿಯಲ್ಲಿ ಕರ್ನಾಟಕ ರಾಜ್ಯೋತ್ಸವ ನಿಮಿತ್ಯ ಇಡೀ ನವೆಂಬರ್ ತಿಂಗಳ ಪೂರ್ತಿ ಕೊಪ್ಪಳದ ತಾಲೂಕ ಕ್ರೀಡಾಂಗಣದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳ ಮಾಡುವುದರ ಮೂಲಕ ಕನ್ನಡದ ಹಿರಿಮೆಯನ್ನು ಹೆಚ್ಚಿಸಿದರು.

ಕರ್ನಾಟಕ ಪಂಚಾಯತ್ ರಾಜ ನೌಕರರ ಸಂಘ, ಕೊಪ್ಪಳದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ ಹಲಗೇರಿ ಮಾತನಾಡಿ, ಶಿವರಾಮ ಕುರಿತು ಭಾವುಕರಾಗಿ ಮಾತನಾಡಿ, ಸಂತಾಪ ಸಲ್ಲಿಸಿದರು.

ಈ ವೇಳೆ ಚಲನಚಿತ್ರ ನಟ ಬಸವರಾಜ ಕೊಪ್ಪಳ, ಕಲಾವಿದ ವಿರೇಶ ಬಡಗೇರಿ, ಕಾಶಪ್ಪ ಅಳ್ಳಳ್ಳಿ, ಶಿವಣ್ಣ, ರಮೇಶ ಸೇರಿದಂತೆ ಅನೇಕರು ಸೇರಿ ಸಂತಾಪ ಸೂಚಿಸಿದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!