December 23, 2024

AKSHARA KRAANTI

AKSHARA KRAANTI




ಕಾರ್ಗಿಲ್ ವಿಜಯ ದಿವಸಕ್ಕೆ 25 ವರ್ಷ

ಕಾರ್ಗಿಲ್ ಯುದ್ಧ- ಭಾರತದ ವಿಜಯವನ್ನು ಸ್ಮರಿಸುವ ದಿನ

ಈ ಜುಲೈ ತಿಂಗಳು ಬಂತೆಂದರೆ ಸಾಕು ಸುರಿಯುವ ಮುಂಗಾರು ಮಳೆಯ ಜೊತೆಗೆ ಯುದ್ಧವೂ ನೆನಪಿಗೆ ಬರುತ್ತದೆ.. ಆ ನೆನಪುಗಳು ಇನ್ನೂ ಹೆಚ್ಚಾಗಿ ಮನಸ್ಸಿನಲ್ಲಿ ರೋಷ – ಕಿಚ್ಚು- ನಮ್ಮ ಸೈನಿಕರ ಬಗ್ಗೆ ಹೆಮ್ಮೆ- ಮಡಿದವರ ಬಗ್ಗೆ ಗೌರವ – ಅವರ ಕುಟುಂಬದ ಮೇಲೆ ಅನುಕಂಪ- ಈ ವಿಜಯ ದಿವಸದ ಸಂತಸ ಎಲ್ಲವೂ ಒಟ್ಟಿಗೆ ಮೂಡುತ್ತದೆ. ತಮ್ಮದೆಲ್ಲವನ್ನೂ ನಮಗೋಸ್ಕರ ತ್ಯಾಗ ಮಾಡಿ ದೇಶಕ್ಕಾಗಿ ಜೀವಿಸುವ ನಮ್ಮ ಸೈನಿಕರ ಅಪ್ರತಿಮ ಸಾಹಸವನ್ನು ತೋರಿಸಿಕೊಟ್ಟ ಯುದ್ಧ ಕಾರ್ಗಿಲ್. ಈ ಯುದ್ಧ ನಮ್ಮ ಕಾಲಘಟ್ಟದಲ್ಲಿ ಸಂಭವಿಸಿದ – ನಾವೆಲ್ಲರೂ ಹತ್ತಿರದಿಂದ ಗಮನಿಸಿದ ಯುದ್ಧವಿದು. ಈ ಯುದ್ಧದಲ್ಲಿ ಪ್ರಾಣತ್ಯಾಗ ಮಾಡಿದವರು ಒಬ್ಬರಲ್ಲ – ಇಬ್ಬರಲ್ಲ, ಭರ್ತಿ ಐನೂರ ಇಪ್ಪತ್ತೇಳು ಮಂದಿ, ಅದರಲ್ಲಿ ಹೆಚ್ಚು ಕಡಿಮೆ ನಾನೂರು ಮಂದಿ ಮೂವತ್ತೈದು ವಯಸ್ಸಿನ ಒಳಗಿನವರು ಪ್ರಾಣತ್ಯಾಗ ಮಾಡಿದರು. ಅನ್ನದಾನ – ನೇತ್ರದಾನ – ರಕ್ತದಾನ ಮತ್ತು ಸತ್ತ ಬಳಿಕ ಮಾಡುವ ದೇಹದಾನ, ಇವುಗಳೆಲ್ಲಾ ದಾನಗಳಲ್ಲಿ ಅತ್ಯಂತ ಶ್ರೇಷ್ಟವಾದುದು ಎಂದು ಪರಿಗಣಿತವಾದ ದಾನ ಇದು. ಅಂದರೆ ಜೀವಂತವಾಗಿದ್ದುಕೊಂಡೇ ಪರರಿಗಾಗಿ ಪ್ರಾಣದಾನ ಮಾಡುವುದಕ್ಕಿಂತ ಮಿಗಿಲಾದ ದಾನ ಯಾವುದಿದೆ ಹೇಳಿ. ನಾವು ಯಾರು ಅವರನ್ನೆಲ್ಲಾ ಮರೆತಿಲ್ಲ ಅವರ ತ್ಯಾಗಕ್ಕಾಗಿ ಅವರಿಗೆಲ್ಲಾ ಮರಣೋತ್ತರವಾಗಿ ಪರಮವೀರ ಚಕ್ರ ಪ್ರಶಸ್ತಿ, ಶೌರ್ಯ ಪ್ರಶಸ್ತಿಗಳನ್ನು ನೀಡಿ ಪುರಸ್ಕರಿಸಿದ್ದೇವೆ. ಆದರೆ ಅದೆಲ್ಲಾ ಅವರ ಶೌರ್ಯ ಸಾಧನೆಗೆ, ಪ್ರಾಣತ್ಯಾಗಕ್ಕೆ ಸಮವಾಗುವ ನೈಜ ಪುರಸ್ಕಾರಗಳೇ.. ಯಾಕೆಂದರೆ ಕಳೆದುಕೊಂಡಿರುವ ಪ್ರಾಣವನ್ನು ಮರಳಿ ಕೊಡಲು ನಮಗ್ಯಾರಿಗೂ ಸಾಧ್ಯವಿಲ್ಲ. ಆದರೂ ಅವರನ್ನೆಲ್ಲಾ ಒಂದು ಕ್ಷಣ ಸ್ಮರಿಸುವಾಗ ನಮ್ಮ ಕಣ್ಣಿಂದ ಒಂದೆರಡು ಹನಿ ಕಣ್ಣೀರು ಜಿನುಗಿದರೂ ಸಾಕು.. ಅದುವೇ ನಾವು ಅವರಿಗೆ ಸಲ್ಲಿಸಬಹುದಾದ ಗೌರವ. ಅವರು ನಮ್ಮೆಲ್ಲರ ನಾಳೆಗಾಗಿ ತಮ್ಮ ಭವಿಷ್ಯವನ್ನೇ ಬಲಿಕೊಟ್ಟು ಅಮರರಾಗಿ ಹೋಗಿರುವ ಪ್ರತಿಯೊಬ್ಬರಿಗೂ ಇವತ್ತಿನ ವಿಜಯ ದಿವಸಕ್ಕಾಗಿ ಭಾರತ ಮಾತೆಗೆ ತಮ್ಮನ್ನು ತಾವು ಅರ್ಪಿಸಿಕೊಂಡವರಿಗೆಲ್ಲಾ ಒಂದು ಸಲಾಂ.ಭಾರತದ ಇತಿಹಾಸದಲ್ಲಿ ಕಾರ್ಗಿಲ್ ವಿಜಯ ಹೆಮ್ಮೆಯ ವಿಷಯ. 1999ರ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯವನ್ನು ಸ್ಮರಿಸುವ ದಿನ. ಕಾರ್ಗಿಲ್, ಲಡಾಖ್‌ನಲ್ಲಿ ಈ ಹಿಂದೆ ಪಾಕಿಸ್ತಾನಿ ಪಡೆಗಳಿಂದ ವಶಪಡಿಸಿಕೊಂಡಿದ್ದ ಆಯಕಟ್ಟಿನ ಪ್ರಮುಖ ಪ್ರದೇಶವನ್ನು ಭಾರತೀಯ ಸೇನೆಯು ಪುನಃ ಪಡೆದುಕೊಂಡ ದಿನ. ಈ ದಿನವು ದೇಶದ ಸಾರ್ವಭೌಮತ್ವವನ್ನು ಶೌರ್ಯದಿಂದ ರಕ್ಷಿಸಿದ ಭಾರತೀಯ ಸೈನಿಕರ ಧೈರ್ಯ ಮತ್ತು ತ್ಯಾಗವನ್ನು, ಅವರ ಬಲಿದಾನವನ್ನು ಕೊಂಡಾಡುವ, ಭಾರತೀಯರೆಲ್ಲರೂ ಹೆಮ್ಮೆಯಿಂದ ಸ್ಮರಿಸುವ ದಿನ‌ ಈ ಜುಲೈ 26.

ಜೈ ಹಿಂದ್

✍ ಶಿವಕುಮಾರ್ ಹಿರೇಮಠ |
ಪತ್ರಕರ್ತರು | ಕೊಪ್ಪಳ

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!