December 23, 2024

AKSHARA KRAANTI

AKSHARA KRAANTI




ಏಪ್ರಿಲ್ 12 ರಿಂದ 19 ರವರೆಗೆ ನಾಮಪತ್ರ ಸಲ್ಲಿಕೆ

ಕೊಪ್ಪಳ ಲೋಕಸಭಾ ಚುನಾವಣೆ-2024

ಅಕ್ಷರಕ್ರಾಂತಿ ನ್ಯೂಸ್

ಕೊಪ್ಪಳ,: ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ರ ಹಿನ್ನೆಲೆಯಲ್ಲಿ 8-ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಮೇ. 7 ರಂದು ಚುನಾವಣೆ ನಡೆಯಲಿದ್ದು, ಏಪ್ರಿಲ್ 12 ರಿಂದ ಏ.19 ರವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ನಲಿನ್ ಅತುಲ್ ಅವರು ತಿಳಿಸಿದ್ದಾರೆ.

ಭಾರತ ಚುನಾವಣಾ ಆಯೋಗವು ಈಗಾಗಲೇ 2024ರ ಲೋಕಸಭಾ ಚುನಾವಣಾ ವೇಳಾಪಟ್ಟಿಯನ್ನು ನಿಗದಿಪಡಿಸಿದ್ದು, ಅದರಂತೆ ಮಾ.16 ರಿಂದ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಅಧಿಸೂಚನೆ ಹೊರಡಿಸಿದ ಏ.12 ರಿಂದ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಲಿದೆ. ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾಧಿಕಾರಿಗಳಿಂದ ನಾಮಪತ್ರ ಸ್ವೀಕರಿಸಲಾಗುವುದು. ನಾಮಪತ್ರ ಸಲ್ಲಿಸಲು ಇಚ್ಛಿಸುವವರು ಸಾರ್ವತ್ರಿಕ ರಜಾ ದಿನಗಳನ್ನು ಹೊರತುಪಡಿಸಿ ಏ.12 ರಿಂದ ಏ.19 ರವರೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಬಹುದು.
ಏ.20 ರಂದು ಬೆಳಿಗ್ಗೆ 11 ಗಂಟೆಗೆ ನಾಮಪತ್ರಗಳನ್ನು ಪರಿಶೀಲನೆಗೆ ತೆಗೆದುಕೊಳ್ಳಲಾಗುವುದು. ಏ.22 ರ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರವನ್ನು ವಾಪಸ್ ಪಡೆದುಕೊಳ್ಳಲು ಅವಕಾಶವಿದ್ದು, ನಂತರ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳಿಗೆ ಚುನಾವಣಾ ಚಿಹ್ನೆಯ ಹಂಚಿಕೆ ಕಾರ್ಯವನ್ನು ಕೈಗೊಳ್ಳಲಾಗುವುದು. ಮೇ 7 ರಂದು ಮತದಾನ ಹಾಗೂ ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.
ನಾಮಪತ್ರ ಸಲ್ಲಿಸಲು ಚುನಾವಣಾಧಿಕಾರಿಗಳ ಕೊಠಡಿಗೆ ಅಭ್ಯರ್ಥಿ ಸೇರಿದಂತೆ ಗರಿಷ್ಠ 5 ಜನರಿಗೆ ಮಾತ್ರ ಪ್ರವೇಶಿಸಲು ಅವಕಾಶವಿರುತ್ತದೆ. ಚುನಾವಣಾಧಿಕಾರಿಗಳ ಕಛೇರಿಯ 100 ಮೀಟರ್ ವ್ಯಾಪ್ತಿಯ ಮುಖ್ಯದ್ವಾರದವರೆಗೆ ಉಮೇದುವಾರಿಕೆಯನ್ನು ಸಲ್ಲಿಸುವ ಅಭ್ಯರ್ಥಿಗೆ ಗರಿಷ್ಠ 3 ವಾಹನಗಳನ್ನು ಬಳಕೆ ಮಾಡಲು ಅವಕಾಶವಿರುತ್ತದೆ.
ಚುನಾವಣಾಧಿಕಾರಿಗಳ ಕಛೇರಿಯ ಆವರಣದಲ್ಲಿ ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯ ಮೇರೆಗೆ ಅಭ್ಯರ್ಥಿಗಳ ವಾಹನ ಹಾಗೂ ಅಭ್ಯರ್ಥಿಗಳ ಪ್ರವೇಶಾತಿಯನ್ನು ನಿಯಂತ್ರಿಸಲು ಹಾಗೂ ಜಿಲ್ಲಾಡಳಿತ ಭವನದ ನೌಕರರು/ ಅಧಿಕಾರಿಗಳ ಪ್ರವೇಶಕ್ಕೆ ಮತ್ತು ದೈನಂದಿನ ಕಛೇರಿ ಕೆಲಸಕ್ಕೆ ಆಗಮಿಸುವ ಸಾರ್ವಜನಿಕರಿಗೆ ಕಛೇರಿ ಪ್ರವೇಶಿಸಲು ಪ್ರತ್ಯೇಕವಾದ ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ.
ಚುನಾವಣಾಧಿಕಾರಿಗಳ ಕಛೇರಿಯ ಆವರಣದಲ್ಲಿ ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯ ಮೇರೆಗೆ ಅಭ್ಯರ್ಥಿಗಳ ವಾಹನ ಹಾಗೂ ಅಭ್ಯರ್ಥಿಗಳ ಪ್ರವೇಶಾತಿಯನ್ನು ನಿಗಾವಹಿಸಲು ಉಪ ಪೊಲೀಸ್ ಅಧೀಕ್ಷಕರು, ಕೊಪ್ಪಳ ಇವರ ನೇತೃತ್ವದಲ್ಲಿ 2 ವೃತ್ತ ನಿರೀಕ್ಷಕರು, 3 ಸಬ್ ಇನ್ಸ್ಪೆಕ್ಟರ್‌ಗಳು, 5 ಸಹಾಯಕ ಸಬ್ ಇನ್ಸ್ಪೆಕ್ಟರ್‌ಗಳು, ಮಹಿಳಾ ಪೊಲೀಸ್ ಹಾಗೂ ಇನ್ನಿತರೆ ಪೊಲೀಸ್ ಕಾನ್‌ಸ್ಟೇಬಲ್‌ಗಳು, ಗೃಹ ರಕ್ಷದ ದಳದ ಸಿಬ್ಬಂದಿಗಳ ಸೇರಿದಂತೆ ಸುಮಾರು 70 ಜನ ಪೊಲೀಸ್ ಅಧಿಕಾರಿ/ ಸಿಬ್ಬಂದಿಗಳನ್ನು ಕಾರ್ಯಕ್ಕೆ ನಿಯೋಜನೆ ಮಾಡಲಾಗಿರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!