ಸಾವಿರಾರು ಭಕ್ತಾಧಿಗಳ ಜಯ ಘೋಷದೊಂದಿಗೆ ಅದ್ದೂರಿಯಾಗಿ ಜರುಗಿದ ಮಹಾಮಾಯ ದೇವಿ ಜಾತ್ರಾ ಮಹೋತ್ಸವ
ಅಕ್ಷರಕ್ರಾಂತಿ ನ್ಯೂಸ್
ಕುಕನೂರ,: ಪಟ್ಟಣದ ಐತಿಹಾಸಿಕ ಸುಪ್ರಸಿದ್ದ ಮಹಾಮಾಯ ದೇವಿಯ ಜಾತ್ರಾ ಮಹೋತ್ಸವವು ಶುಕ್ರವಾರ ಸಂಜೆ 4 ಗಂಟೆಗೆ ನೆರೆದ ಸಾವಿರಾರು ಭಕ್ತಾಧಿಗಳ ಜಯಘೋಷದೊಂದಿಗೆ ಅದ್ದೂರಿಯಾಗಿ ನೆರವೇರಿತು.
ಈ ಜಾತ್ರಾ ಮಹೋತ್ಸಕ್ಕೆ ಗದಗ, ಹುಬ್ಬಳ್ಳಿ, ಧಾರವಾಡ, ಹಾವೇರಿ, ಶಿಗ್ಗಾಂವಿ, ಹೂವಿನಹಡಗಲಿ, ದಾವಣಗೆರೆ, ಬೆಂಗಳೂರು, ರಾಯಚೂರ, ಬಳ್ಳಾರಿ, ಬಿಜಾಪೂರ, ಸವದತ್ತಿ, ಹಳ್ಯಾಳ ಇನ್ನೂ ಹಲವಾರು ಭಾಗಗಳಿಂದ ಸಾವಿರಾರು ಭಕ್ತಾಧಿಗಳು ಒಂದು ದಿನ ಮೊದಲೇ ಪೂಜೆ ಹಾಗೂ ಜಾತ್ರೆಗೆ ಆಗಮಿಸಿದ್ದರು.
ನೆರೆದ ಸಾವಿರಾರು ಭಕ್ತಾಧಿಗಳ ಮಧ್ಯೆ ಸಾಗಿದ ರಥೋತ್ಸವಕ್ಕೆ ಭಕ್ತಾಧಿಗಳು ಉತ್ತತ್ತಿ, ಬಾಳೆಹಣ್ಣು ಸಮರ್ಪಿಸಿ, ಜಯಘೋಷ ಹಾಕಿ ಭಕ್ತಿ ಮೆರೆದರು.
ದೇವಸ್ಥಾನದಲ್ಲಿ ಮಹಾನವಮಿ ಪ್ರಯುಕ್ತ ಶರನ್ನವರಾತ್ರಿ ಉತ್ಸವಗಳು ಒಂಬತ್ತು ದಿನಗಳ ಕಾಲ ಅತ್ಯಂತ ಸಡಗರ, ಸಂಭ್ರಮ, ಭಕ್ತಿಗಳಿಂದ ನಡೆದವು.ರಥೋತ್ಸವದ ನಿಮಿತ್ಯ ಶುಕ್ರವಾರ ಬೆಳಗಿನ ಜಾವದಿಂದ ಮಹಾಮಾಯ ದೇವಸ್ಥಾನದಲ್ಲಿ ಶ್ರೀದೇವಿಗೆ ವಿಷೇಶ ಅಭಿಷೇಕ, ಕುಂಕಮಾರ್ಚನೆ ಹಾಗೂ ವಿವಿಧ ಪೂಜಾ ವಿಧಾನಗಳು ನೆರವೇರಿದವು.
ಈ ಬಾರಿಯ ರಥೋತ್ಸದಲ್ಲಿ ಸುಮಾರು ರೂ.17ಲಕ್ಷದಲ್ಲಿ ನಿರ್ಮಿಸಿದ ನೂತನ ಬೆಳ್ಳಿ ಪಲ್ಲಕ್ಕಿಯಲ್ಲಿ ಮಹಾಮಾಯ ದೇವಿಯ ಮೂರ್ತಿ ಮೆರವಣಿಗೆ ಉತ್ಸವಗಳು ಜರುಗಿದವು. ಶನಿವಾರದಂದು ವಿಜಯದಶಮಿ ಅಂಗವಾಗಿ ಸಾಯಂಕಾಲ ಶ್ರೀಲಕ್ಷ್ಮೀ ವೆಂಕಟೇಶ್ವರ ಮಹಾರಥೋತ್ಸವ ಹಾಗೂ ಮಹಾಮಾಯ ದೇವಿ ಸಿಮೋಲ್ಲಂಘನೆ, ಬನ್ನಿ ಮುಡಿಯುವುದು.
ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತಾಧಿಗಳಿಗೆ ಮೂಲ ಸೌಲಭ್ಯಗಳನ್ನು ಹಾಗೂ ಪ್ರಸಾದ ವ್ಯವಸ್ಥೆಯನ್ನು ದೇವಸ್ಥಾನ ಮಂಡಳಿಯವರು ಆಯೋಜಿಸಿದ್ದರು.
ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳನ್ನು ಪುರೋಹಿತರು, ಜೋಯಿಸರು, ಆಶ್ರೀತರು, ಗಾಣಪತ್ಯ, ಅರ್ಚಕರು, ದೇವಸ್ಥಾನ ಆಡಳಿತ ಮಂಡಳಿಯವರು, ಧರ್ಮಾಧಿಕಾರಿಗಳು ನೆರವೇರಿಸಿದರು.
ಜಾತ್ರಾ ಮಹೋತ್ಸವದಲ್ಲಿ ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ಪಟ್ಟಣ ಪಂಚಾಯತಿ ಪೋಲಿಸ್ ಇಲಾಖೆಯವರು, ಅಧಿಕಾರಿಗಳು, ಸದಸ್ಯರು ಸೇರಿದಂತೆ ಎಲ್ಲಾ ಇಲಾಖೆಯ ಸಿಬ್ಬಂದಿಯವರು, ಗ್ರಾಮಸ್ಥರು, ಪ್ರಮುಖರು ಇದ್ದರು.
ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಕುಕನೂರು ಠಾಣಾ ಪಿಐ ಟಿ.ಗುರುರಾಜ ಸೂಕ್ತ ಬಿಗಿ ಪೋಲಿಸ್ ಬಂದೋಬಸ್ತ ನಿಯೋಜನೆ ಮಾಡಿದ್ದರು.
More Stories
ದೌರ್ಬಲ್ಯ ತೊರೆದು ಆದಿಕವಿಯಾದ ವಾಲ್ಮೀಕಿ : ಕುಲಪತಿ ಪ್ರೊ.ಬಿ.ಕೆ ರವಿ
ಸ್ಕ್ಯಾನ್ ಮಾಡಿ ನರೇಗಾ ಕಾಮಗಾರಿ ಬೇಡಿಕೆ ಸಲ್ಲಿಸಿ : ವೈಜನಾಥ ಸಾರಂಗಮಠ
ದಸರಾ ನಿಮಿತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿ